Uncategorized
ಅಡಮಾನ ಸಾಲಕ್ಕೆ ಫ್ರುಟ್ಸ್ ಆಪ್ – ತಾಂತ್ರಿಕ ಸಮಸ್ಯೆಯಿಂದ ಕಳೆದೆರಡು ತಿಂಗಳಿನಿಂದ ರೈತರಿಗೆ ಸಿಗುತ್ತಿಲ್ಲ ಸಾಲ | ಪೊಳ್ಳಾದ ಸದನದಲ್ಲಿ ಸಚಿವ ಮಾಧುಸ್ವಾಮಿ ನೀಡಿದ ಭರವಸೆ
ಪುತ್ತೂರು: ಭ್ರಷ್ಟಚಾರಕ್ಕೆ ಕಡಿವಾಣ ಹಾಕಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ತಂದಿರುವ ಫ್ರುಟ್ಸ್(ಫಾರ್ಮರ್ಸ್ ರಿಜಿಸ್ಪ್ರೇಶನ್ ಆ್ಯಂಡ್ ಯುನಿಫೈಡ್ ಬೆನೆಫಿಶಿಯರಿ ಇನ್ಫಾರ್ಮೇಶನ್ ಸಿಸ್ಟಮ್) ಆಪ್(App) ಸದ್ಯ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಸಹಕಾರಿ ಬ್ಯಾಂಕ್ ಗಳ ಮೂಲಕ ರೈತರಿಗೆ ಸಿಗುವ ಅಡಮಾನ ಸಾಲ ಪಡೆಯುವ ಪ್ರಕ್ರಿಯೆಗೆ ಸರಕಾರವು ಈ ಆಪ್ ಅನ್ನು ಜೋಡಿಸಿದೆ.ಈ ಆಪ್ ನಲ್ಲಿರುವ ತಾಂತ್ರಿಕ ಸಮಸ್ಯೆ ಹಾಗೂ ಕಂದಾಯ ಇಲಾಖೆಯ ನೋಂದಣಿ ಕಛೇರಿಯಲ್ಲಿ ಬಳಸಲಾಗುವ ತಂತ್ರಾಶ ಹಾಗೂ ಈ ಆಪ್ ಮಧ್ಯೆ ಉಂಟಾಗಿರುವ ಸಮನ್ವಯದ ಸಮಸ್ಯೆ ರೈತರಿಗೆ ಕಂಟಕವಾಗಿದೆ. ಈ ಸಮಸ್ಯೆಯಿಂದಾಗಿ ಕಳೆದೆರಡು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರಿಗೆ 3% ಬಡ್ಡಿಯಲ್ಲಿ ಸಿಗುವ ಅಡಮಾನ ಸಾಲಗಳು ಬ್ಯಾಂಕಿನಿಂದ ಮಂಜೂರುಗೊಂಡರು ರೈತರ ಕೈ ಸೇರಿಲ್ಲ.
ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ , ಭೂ ಅಭಿವೃದ್ದಿ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳಲ್ಲಿ ರೈತರಿಗೆ ಶೇ. 3ರ ಬಡ್ಡಿ ದರದಲ್ಲಿ ಅಡಮಾನ ಸಾಲ ನೀಡಲಾಗುತ್ತಿದೆ. ಬ್ಯಾಂಕಿನಿಂದ ಸಾಲ ಮಂಜೂರಾದ ರೈತರು ತಮ್ಮ ವ್ಯಾಪ್ತಿಯ ಸಬ್ ರಿಜಿಸ್ಟ್ರಾರ್ ಕಛೇರಿಗೆ ತೆರಳಿ ಸಾಲಕ್ಕೆ ಒತ್ತೆಯಿಡುವ ಜಮೀನನ್ನು ಅಲ್ಲಿ ಅಡಮಾನ ಮಾಡಬೇಕಾಗುತ್ತದೆ. ಕಳೆದ ವರ್ಷದ ಆಕ್ಟೋಬರ್ ತಿಂಗಳ ಅಂತ್ಯದವರೆಗೆ ಈ ಪ್ರಕ್ರಿಯೆ ರೈತರು ಸಬ್ ರಿಜಿಸ್ಟ್ರಾರ್ ಕಛೇರಿಗೆ ಭೌತಿಕವಾಗಿ ತೆರಳಿ ಮಾಡಿಸಿಕೊಳ್ಳಬೇಕಾಗಿತ್ತು.
ಅಲ್ಲಿ ಸಾಲಗಾರ ಬೆರಳಚ್ಚು ನೀಡಿ ಮತ್ತು ಭಾವಚಿತ್ರ ತೆಗೆಸಿ ಜಮೀನು ಅಡಮಾನ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು. ಈ ಬಳಿಕ ಸಾಲದ ಮೊತ್ತ ರೈತನ ಕೈ ಸೇರುತಿತ್ತು. ಆದರೇ ಕಳೆದ ವರ್ಷದ ನವೆಂಬರ್ ತಿಂಗಳ ಆರಂಭದಿಂದ ಈ ಭೂ ಅಡಮಾನ ಪ್ರಕ್ರಿಯೆಯನ್ನು ಫ್ರುಟ್ಸ್ ಆಪ್ ಮೂಲಕ ಅನ್ ಲೈನಿನಲ್ಲಿ ಮಾಡಲು ಸರಕಾರ ಆದೇಶಿಸಿದೆ. ಅದರ ಪ್ರಕಾರ ರೈತರ ವೈಯುಕ್ತಿಕ ಮಾಹಿತಿ ಹಾಗೂ ಒತ್ತೆಯಿಡುವ ಜಮೀನಿನ ಮಾಹಿತಿಯನ್ನು ಈ ಅಪ್ ಮುಖಾಂತರ ಸಾಲ ನೀಡುವ ಸಹಕಾರಿ ಬ್ಯಾಂಕ್ ನಲ್ಲಿ ತುಂಬಲಾಗುತ್ತದೆ.
ಆ ಬಳಿಕ ಈ ಆಪ್ ನಲ್ಲಿ ದಾಖಲಾದ ದತ್ತಾಂಶಗಳು ಕಾವೇರಿ ತಂತ್ರಾಂಶದ ಮೂಲಕ ಸಬ್ ರಿಜಿಸ್ಟ್ರಾರ್ ಕಛೇರಿಗೆ ತಲುಪುತ್ತದೆ. ನಂತರ ಎಂದಿನಂತೆ ಸಾಲಗಾರ ಬೆರಳಚ್ಚು ನೀಡಿ ಹಾಗೂ ಭಾವಚಿತ್ರ ತೆಗೆಸಿ ಜಮೀನು ಅಡಮಾನ ಮಾಡಿಸಿಕೊಳ್ಳಬೇಕಾಗಿದೆ.ಆದರೇ ಫ್ರುಟ್ಸ್ ಆಪ್ ಹಾಗೂ ಕಾವೇರಿ ತಂತ್ರಾಂಶದಲ್ಲಿ ಕಂಡು ಬರುತ್ತಿರುವ ತೊಂದರೆಗಳಿಂದ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಮಂಜೂರಾಗಿ ಬಂದರೂ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅಡಮಾನ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ .
ಜಮೀನು ಅಡಮಾನವಾಗದೇ ಬ್ಯಾಂಕ್ ಗಳು ಸಾಲ ನೀಡುತ್ತಿಲ್ಲ . ಇದರಿಂದ ಸಕಾಲದಲ್ಲಿ ಸಾಲ ಸಿಗದೆ ಅಗತ್ಯ ಕೃಷಿ ಕಾರ್ಯ ಮಾಡಲಾಗದೆ ಪರಿತಪಿಸುವಂತೆ ಆಗಿದೆ. ಈ ಮೂಲಕ ಜನರಿಗೆ ಸುಲಭವಾಗಲು ತಂದ ಯೋಜನೆಯೊಂದು ಜನರಿಗೆ ಅನಾನುಕೂಲವಾಗಿ ಪರಿಣಮಿಸುತ್ತಿರುವುದು ವಿಪರ್ಯಾಸವೇ ಸರಿ ಕಳೆದ ನವೆಂಬರ್ ತಿಂಗಳ ಮಧ್ಯ ಭಾಗದವರೆಗೆ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಕಾರ್ಯಗಳು ಭಾದಿತವಾಗಿತ್ತು.
ಈ ಭಾಗದಲ್ಲಿ ಬಹುತೇಕ ಅಡಿಕೆ ತೋಟಗಳಿದ್ದು ಅದಕ್ಕೆ ಗೊಬ್ಬರ ಹಾಕುವ ಕಾರ್ಯ ಮಳೆ ನಿಂತ ಬಳಿಕವೇ ನಡೆಸಲಾಗುತ್ತದೆ . ಅದರೆ ಅದೇ ಸಮಯದಲ್ಲಿ ಸಾಲ ಸಿಗದೆ, ಗೊಬ್ಬರಕ್ಕೆ ಬೇಕಾದ ಹಣ ಹೊಂದಿಸಲು ಸಣ್ಣ ರೈತನಿಗೆ ಸಾಧ್ಯವಾಗದೆ ಕೃಷಿ ಚಟುವಟಿಕೆಯನ್ನು ನಿಲ್ಲಿಸುವಂತಾಗಿದೆ. ಇದು ಫಸಲಿನ ಮೇಲೆ ಪರಿಣಾಮ ಭೀರಿ ರೈತ ನಷ್ಟ ಅನುಭವಿಸುವಂತೆ ಮಾಡಲಿದೆ. ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಡಿ.21ರಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ರೈತರು ಎದುರಿಸುತ್ತಿರುವ ಈ ಸಮಸ್ಯೆಯ ಬಗ್ಗೆ ಸರಕಾರದ ಗಮನ ಸೆಳೆದಿದ್ದರು.
“ರಾಜ್ಯ ಸರಕಾರ ಅಭಿವೃದ್ದಿಪಡಿಸಿರುವ ಆಪ್ ನಲ್ಲಿ ರೈತರ ಆಧಾರ್ ಸಂಖ್ಯೆ, ಪಹಣಿ, ಹಾಗೂ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ರೈತರು ಸಾಲ ಪಡೆಯಲು ಕಷ್ಟಪಡುವಂತಾಗಿದೆ” ಎಂದು ಮಠಂದೂರು ಸದನದಲ್ಲಿ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಹಾಗೂ ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿಯವರು “ಆಪ್ ನಲ್ಲಿ ತಾಂತ್ರಿಕ ತೊಂದರೆಯಾಗಿದ್ದರೆ ಸರಿಪಡಿಸುವ ಕಾರ್ಯ ಮಾಡಲಾಗುವುದು. ಅಲ್ಲಿಯವರೆಗೂ ರೈತರು ನೇರವಾಗಿ ಅರ್ಜಿ ಸಲ್ಲಿಸಿ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗುವುದು” ಎಂದು ಭರವಸೆ ನೀಡಿದ್ದರು.
ಆದರೇ ಅದರ ಬಳಿಕ ಡಿ.29 ರಂದು ಸರಕಾರದ ಪ್ರಧಾನ ಕಾರ್ಯದರ್ಶಿಗಳು ನೋಂದಾಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಿಗೆ ಪತ್ರ ಬರೆದಿದ್ದು ಅದರಲ್ಲಿ “ಪ್ರಾಥಮಿಕ ಕೃಷಿಪತ್ತಿನ ಬ್ಯಾಂಕ್ ಗಳು, ಪೀ ಕಾರ್ಡ್ ಬ್ಯಾಂಕ್ ಗಳು, ಮತ್ತು ಡಿಸಿಸಿ ಬ್ಯಾಂಕ್ ಶಾಖೆಗಳಿಂದ ಡಿಕ್ಲೆರೇಷನ್ / ಫಾರ್ಮ್ -3 ಭೌತಿಕವಾಗಿ ಸಲ್ಲಿಸಲು ಮಾರ್ಚ್ 31 2022ರವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ” ಎಂದು ತಿಳಿಸಿದ್ದಾರೆ. ಆದರೆ ಆ ಪತ್ರದಲ್ಲಿ ಉಲ್ಲೇಖಿಸಿರುವ ಡಿಕ್ಲೆರೇಷನ್ / ಫಾರ್ಮ್ -3 ಕೇವಲ ಆಧಾರ ತಿರುವಳಿ ಪತ್ರ (Reconyence deed) ಪತ್ರ ಪಡೆಯಲು ಬಳಕೆಯಾಗುತ್ತದೆ. ಅಡಮಾನ ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ತಿಳುವಳಿಕೆಯೂ ಈ ಪತ್ರದಲ್ಲಿ ಅಡಕವಾಗಿಲ್ಲ. ಹೀಗಾಗಿ ಅಡಮಾನ ಸಾಲ ಪ್ರಕ್ರಿಯೆ ತಾಂತ್ರಿಕ ತೊಂದರೆಯಿಂದ ಅರ್ಧದಲ್ಲೇ ಬಾಕಿಯಾಗಿದೆ.
“ಮಾರ್ಚ್ 31ರವರೆಗೆ ಸರಕಾರ ನಿಯಮದಲ್ಲಿ ಒಂದಷ್ಟು ಸಡಿಲತೆಯನ್ನು ನೀಡಿದೆ. ಈ ಅವಧಿಯಲ್ಲಿ ಭೌತಿಕವಾಗಿಯೂ ಅಡಮಾನ ಪ್ರಕ್ರಿಯೆಯನ್ನು ರೈತರು ಮಾಡಬಹುದಾಗಿದೆ. ಹೊಸ ತಂತ್ರಾಂಶಗಳು ಬಂದಾಗ ಒಂದಷ್ಟು ನ್ಯೂನ್ಯತೆಗಳು ಬರುವುದು ಸ್ವಾಭಾವಿಕ. ಅದನ್ನು ಸರಿಪಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆಪ್ ಬಳಕೆ ಹಾಗೂ ಕಾವೇರಿ ತಂತ್ರಾಂಶದಲ್ಲಿ ದತ್ತಾಂಶಗಳನ್ನು ಜೋಡಿಸುವ ಪ್ರಕ್ರಿಯೆಯು ಹೊಸತಾಗಿರುವುದರಿಂದ ಸಿಬಂದಿಗಳಿಗೆ ಒಂದಷ್ಟು ಕಷ್ಟ ಎನಿಸುತ್ತದೆ. ಆದರೇ ಈ ಆಪ್ ಬಳಕೆ ಸಮರ್ಪಕವಾದ ಬಳಿಕ ರೈತರಿಗೆ ಬಹಳ ಉಪಯುಕ್ತವಾಗಲಿದೆ. ಪ್ರಸ್ತುತ ಆಪ್ ಸಮಸ್ಯೆಯಿಂದಾಗಿ ಸಾಲ ಸಿಗುತ್ತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ” – ಪ್ರವೀಣ್ ನಾಯಕ್ ಡಿ.ಅರ್ ಮಂಗಳೂರು
ಕಳೆದೆರಡು ತಿಂಗಳಿನಿಂದ ನಾನು ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ಅನ್ ಲೈನ್ ಪ್ರಕ್ರಿಯೆ ಒಳ್ಳೆಯದು ನಿಜ. ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಶ್ರಮ ಮತ್ತು ಸಮಯ ಎರಡು ಉಳಿಯಲಿದೆ. ಆದರೇ ಅದು ಸಮರ್ಪಕವಾಗಿ ಕಾರ್ಯ ನಿರ್ವಹಿಸುವವರೆಗೆ ಹಳೇ ಪದ್ದತಿಯನ್ನು ಮುಂದುವರಿಸಿಕೊಂಡು ಹೋಗಬೇಕಿತ್ತು. ಈ ಸಾಲವನ್ನೇ ನಂಬಿ ಕೃಷಿ ಕಾರ್ಯ ಮಾಡಲು ಉದ್ದೇಶಿಸಿದೆ . ಈಗ ತೀವ್ರ ಆರ್ಥಿಕ ಸಮಸ್ಯೆಯನ್ನು ನಾನು ಎದುರಿಸುತ್ತಿದ್ದೇನೆ – ದೇವಪ್ಪ, ರೈತ ಕಡಬ
ಬ್ಯಾಂಕ್ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯ ಸಿಬಂದಿಗಳು ಫ್ರುಟ್ಸ್ ಆಪ್ ನ ಕಾರ್ಯಶೈಲಿಗೆ ಪಳಗುವ ಮೊದಲೇ ಸರಕಾರ ಹಳೇ ಮ್ಯಾನ್ಯುವಲ್ ಪದ್ದತಿಯನ್ನು ತರಾತುರಿಯಲ್ಲಿ ನಿಲ್ಲಿಸಿದ್ದು ಇಷ್ಟೆಲ್ಲಾ ಸಮಸ್ಯೆಗಳಿಗೆ ಪ್ರಮುಖ ಕಾರಣ. ಕಳೆದೆರಡು ತಿಂಗಳಿನಿಂದ ಅಡಮಾನ ಸಾಲಗಾರರಿಗೆ ತೀವ್ರ ಸಮಸ್ಯೆಯಾಗಿದೆ. ಇನ್ನು ಸರಕಾರ ಸಿದ್ದಪಡಿಸಿರುವ ನೂತನ ತಂತ್ರಾಂಶವು ಕರಾವಳಿ ಭಾಗದ ಎಕ್ರೆ ಸೆಂಟ್ಸ್ ಮಾದರಿಯ ಭೂ ಮಾಪಕಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ. ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಗುಂಟೆ ಪದ್ದತಿಯನ್ನು ಉಪಯೋಗಿಸಲಾಗಿದೆ. ಇದು ಈ ಆಪ್ ನ ಬಲು ದೊಡ್ಡ ನ್ಯೂನ್ಯತೆ. ಇದರಿಂದಾಗಿ ಇಲ್ಲಿಯ RTC ಯಲ್ಲಿ ಉಲ್ಲೇಖವಾಗಿರುವ ಜಮೀನಿಗೂ ತಂತ್ರಾಂಶದಲ್ಲಿ ದಾಖಲಾಗುವ ದತ್ತಾಂಶಕ್ಕೂ ವ್ಯತ್ಯಾಸ ಬರುತ್ತಿದೆ. ಈ ವ್ಯತ್ಯಾಸದಿಂದಾಗಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಸಾಲ ಅಡಮಾನ ಪ್ರಕ್ರಿಯೆ ನಡೆಯುತ್ತಿಲ್ಲ . ಸರಕಾರ ಕೂಡಲೇ ಸ್ಪಂದಿಸಿ ಕೃಷಿಕರ ನೆರವಿಗೆ ಬರಬೇಕಿದೆ – ಮಹಮ್ಮದ್ ಆಲಿ , ಅಧ್ಯಕ್ಷರು ಅರ್ಯಾಪು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್
ಅಪರಾಧ
ಪುತ್ತೂರು ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ

ಪುತ್ತೂರು: ನಗರದ ಲಾಡ್ಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮೂವರು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
ಅ. 17ರಂದು ರಾತ್ರಿ ರಿಫಾಯಿ ಅವರು ಪುತ್ತೂರಿನ ಲಾಡ್ಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಫಾರೂಕ್, ಸೋನು ಹಾಗೂ ಇಷಾನ್ ಎಂಬವರು ಅಲ್ಲಿಗೆ ಬಂದು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ರಿಫಾಯಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023ರ ಕಲಂ 126(2), 352, 351(2) ಹಾಗೂ 115(2)ರಂತೆ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
Uncategorized
HYDGEN Innovation Day-HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮ; ಮಂಗಳೂರಿನಲ್ಲಿ 20 ಮೆಗಾವ್ಯಾಟ್ (MW) ಸಾಮರ್ಥ್ಯದ ಎಲೆಕ್ಟ್ರೋಲೈಸರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ HYDGEN; 250 ಕಿಲೋವ್ಯಾಟ್ (kW) ಸಾಮರ್ಥ್ಯದ AEM ಮತ್ತು PEM ಎಲೆಕ್ಟ್ರೋಲೈಸರ್ಗಳ ಅನಾವರಣ
ಗಂಜಿಮಠದಲ್ಲಿರುವ HYDGEN ಕಂಪನಿಯ ತಯಾರಿಕಾ ಘಟಕದಲ್ಲಿ ಆಯೋಜಿಸಲಾಗಿದ್ದ ‘HYDGEN ಇನ್ನೋವೇಶನ್ ಡೇ 2026’ ಕಾರ್ಯಕ್ರಮದಲ್ಲಿ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಈ ಘಟಕವನ್ನು ಉದ್ಘಾಟಿಸಿದರು ಹಾಗೂ ಹೊಸ ಎಲೆಕ್ಟ್ರೋಲೈಸರ್ಗಳನ್ನು ಅನಾವರಣಗೊಳಿಸಿದರು.
ಮಂಗಳೂರು, ಅ.15: ಮಂಗಳೂರಿನ ಗಂಜಿಮಠದಲ್ಲಿ ವಾರ್ಷಿಕ 20 ಮೆಗಾವ್ಯಾಟ್ (MW) ಉತ್ಪಾದನಾ ಸಾಮರ್ಥ್ಯದ ಹೊಸ ಎಲೆಕ್ಟ್ರೋಲೈಸರ್ ತಯಾರಿಕಾ ಘಟಕವನ್ನು ಉದ್ಘಾಟಿಸುವ ಮೂಲಕ, ‘HYDGEN’ ಸಂಸ್ಥೆಯು ಭಾರತದ ಹಸಿರು ಹೈಡ್ರೋಜನ್ (Green Hydrogen) ವಲಯದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಹೈಡ್ರೋಜನ್ ಉತ್ಪಾದನೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ, ಮಂಗಳೂರಿನಲ್ಲೇ ವಿನ್ಯಾಸಗೊಳಿಸಿ, ಜೋಡಿಸಿ ಮತ್ತು ಪರೀಕ್ಷಿಸಲಾದ 250 ಕಿಲೋವ್ಯಾಟ್ (kW) ಸಾಮರ್ಥ್ಯದ ‘ಆನಿಯನ್ ಎಕ್ಸ್ಚೇಂಜ್ ಮೆಂಬರೇನ್’ (AEM) ಮತ್ತು ‘ಪ್ರೋಟಾನ್ ಎಕ್ಸ್ಚೇಂಜ್ ಮೆಂಬರೇನ್’ (PEM) ಎಲೆಕ್ಟ್ರೋಲೈಸರ್ಗಳನ್ನು ಸಹ ಕಂಪನಿಯು ಇದೇ ವೇಳೆ ಅನಾವರಣಗೊಳಿಸಿತು.
ಗಂಜಿಮಠದಲ್ಲಿರುವ HYDGEN ಕಂಪನಿಯ ತಯಾರಿಕಾ ಘಟಕದಲ್ಲಿ ಆಯೋಜಿಸಲಾಗಿದ್ದ ‘HYDGEN ಇನ್ನೋವೇಶನ್ ಡೇ 2026’ ಕಾರ್ಯಕ್ರಮದಲ್ಲಿ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಈ ಘಟಕವನ್ನು ಉದ್ಘಾಟಿಸಿದರು ಹಾಗೂ ಹೊಸ ಎಲೆಕ್ಟ್ರೋಲೈಸರ್ಗಳನ್ನು ಅನಾವರಣಗೊಳಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ HYDGEN ನ ಸಹ-ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಮೈಕೆಲ್ ಗ್ರೈಸೀಲ್ಸ್; Transition VC ಯ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಪಾರ್ಟ್ನರ್ ಮೊಹಮ್ಮದ್ ಶೋಯೆಬ್ ಅಲಿ; AAGM ನ ಸಂಸ್ಥಾಪಕ ಮತ್ತು ಸಿಇಒ ಡಾ. ಅವಿಶೇಕ್ ಕುಮಾರ್; HYDGEN ನ ಸಹ-ಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಗೌತಮ್ ಕುಮಾರ್ ದಲಪತಿ; HYDGEN ನ ಸಹ-ಸ್ಥಾಪಕ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಾ. ಕೃಷ್ಣ ಕುಮಾರ್; ಹಾಗೂ HYDGEN ನ ಕಾರ್ಪೊರೇಟ್ ನಿರ್ದೇಶಕಿ ಶ್ರೀಮತಿ ರಮ್ಯಶ್ರೀ ಡಿ.ಎಸ್. ಅವರು ಉಪಸ್ಥಿತರಿದ್ದರು. ಇವರೊಂದಿಗೆ HYDGEN ತಂಡದ ಇತರ ಸದಸ್ಯರು, ಉದ್ಯಮ ಪ್ರತಿನಿಧಿಗಳು ಮತ್ತು ಆಹ್ವಾನಿತ ಅತಿಥಿಗಳು ಕೂಡ ಭಾಗವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ವೃತ್ತಿಪರರು ಮತ್ತು ಉದ್ಯಮಿಗಳನ್ನು ತಮ್ಮ ತವರು ಊರುಗಳಿಗೆ ಮರಳಿ ಬರುವಂತೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸುವ “ಬ್ಯಾಕ್ ಟು ಊರು” (Back to Ooru) ಉಪಕ್ರಮದ ಮಹತ್ವವನ್ನು ಎತ್ತಿ ತೋರಿಸಿದರು. ಮಂಗಳೂರಿನಲ್ಲಿ ತಮ್ಮ ಉದ್ಯಮವನ್ನು ಸ್ಥಾಪಿಸಿ, ವಿಸ್ತರಿಸುತ್ತಿರುವ HYDGEN ನ ಪ್ರವರ್ತಕರು, ನಿರ್ದೇಶಕರು ಮತ್ತು ಸಂಪೂರ್ಣ ತಂಡವನ್ನು ಅವರು ಸ್ವಾಗತಿಸಿ, ಅಭಿನಂದಿಸಿದರು. ಕಂಪನಿಯ ಬೆಳವಣಿಗೆಯು ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ತಮ್ಮ ಆರಂಭಿಕ ಭಾಷಣದಲ್ಲಿ, ಡಾ. ಮೈಕೆಲ್ ಗ್ರೈಸೀಲ್ಸ್ ಅವರು HYDGEN ತಂಡದ ಸಮರ್ಪಣಾ ಭಾವ ಮತ್ತು ಕಂಪನಿಯ ಪ್ರಗತಿಗೆ ಅವರು ನೀಡಿದ ಕೊಡುಗೆಗಾಗಿ ಧನ್ಯವಾದ ಅರ್ಪಿಸಿದರು. ‘ಇನ್ನೋವೇಶನ್ ಡೇ’ (Innovation Day) ನಲ್ಲಿ ಪ್ರಸ್ತುತಪಡಿಸಲಾದ ಸಾಧನೆಗಳು ತಂಡದ ನಿರಂತರ ಪ್ರಯತ್ನಗಳ ಫಲವಾಗಿದ್ದು, ಇವುಗಳಲ್ಲಿ ಹೆಚ್ಚಿನವು ತೆರೆಮರೆಯಲ್ಲಿ ನಡೆದಿವೆ ಎಂದು ಅವರು ಒತ್ತಿ ಹೇಳಿದರು.

ಈ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದ ಡಾ. ಗ್ರೈಸೀಲ್ಸ್, ‘HYDGEN ಇನ್ನೋವೇಶನ್ ಡೇ’ಯು ಮುಕ್ತ ಚರ್ಚೆಗಳು, ಪ್ರಾಯೋಗಿಕ ಕಲಿಕೆ ಮತ್ತು ಹೊಸ ಪಾಲುದಾರಿಕೆಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. ಭಾಗವಹಿಸುವವರು ಪ್ರಶ್ನೆಗಳನ್ನು ಕೇಳಲು, ಅಸ್ತಿತ್ವದಲ್ಲಿರುವ ಊಹೆಗಳನ್ನು ಪ್ರಶ್ನಿಸಲು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವರು ಪ್ರೋತ್ಸಾಹಿಸಿದರು. ಇಂತಹ ಪ್ರತಿಕ್ರಿಯೆಗಳು ಕಂಪನಿಯು ಉತ್ತಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚು ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.
ಡಾ. ವೈ. ಭರತ್ ಶೆಟ್ಟಿ ಅವರು, ತಮ್ಮ ಕ್ಷೇತ್ರವಾದ ಮಂಗಳೂರು ನಗರ ಉತ್ತರ ವ್ಯಾಪ್ತಿಯ ಗಂಜಿಮಠದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿರುವುದಕ್ಕಾಗಿ HYDGEN ತಂಡವನ್ನು ಅಭಿನಂದಿಸಿದರು. ಈ ಪ್ರದೇಶದಲ್ಲಿ ಕಂಪನಿಯು ಮಾಡಿರುವ ಹೂಡಿಕೆಯನ್ನು ಸ್ವಾಗತಿಸಿದ ಅವರು, ತಂಡದ ಮುಂದಿನ ಪ್ರಯತ್ನಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು. ಟಿ. ಖಾದರ್ ಅವರು ಸಂದೇಶವೊಂದರ ಮೂಲಕ HYDGEN ತಂಡಕ್ಕೆ ಶುಭ ಹಾರೈಸಿದರು ಹಾಗೂ ಕಂಪನಿಯ ಈ ಉಪಕ್ರಮಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸಿದರು.
‘ಟ್ರಾನ್ಸಿಷನ್ ವಿಸಿ’ (Transition VC) ಸಂಸ್ಥೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರಾದ ಮೊಹಮ್ಮದ್ ಶೋಯೆಬ್ ಅಲಿ ಅವರು, HYDGEN ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ತಂಡವು ತೋರಿದ ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಹೈಡ್ರೋಜನ್ ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ಹಾಗೂ ಮಂಗಳೂರಿನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ಸ್ಥಾಪಿಸುವಲ್ಲಿ ತಂಡವು ಕೈಗೊಂಡ ಪ್ರಯತ್ನಗಳನ್ನು ಅವರು ಮೆಚ್ಚಿಕೊಂಡರು. ಅಲ್ಲದೆ, HYDGEN ಸಂಸ್ಥೆಯು ತನ್ನ ಮುಂದಿನ ಪ್ರಯತ್ನಗಳಲ್ಲಿ ನಿರಂತರ ಯಶಸ್ಸು ಮತ್ತು ಬೆಳವಣಿಗೆಯನ್ನು ಕಾಣಲಿ ಎಂದು ಹಾರೈಸಿದರು.
AAGM ನ ಸಂಸ್ಥಾಪಕ ಮತ್ತು CEO ಡಾ. ಅವಿಶೇಕ್ ಕುಮಾರ್, ಮಂಗಳೂರಿನ ಗಂಜಿಮಠದಲ್ಲಿರುವ HYDGEN ನ ಹೊಸ ಎಲೆಕ್ಟ್ರೋಲೈಸರ್ ಉತ್ಪಾದನಾ ಸೌಲಭ್ಯದ ಮಹತ್ವದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಹೈಡ್ರೋಜನ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಬಲಪಡಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಈ ಮಹತ್ವದ ಮೈಲಿಗಲ್ಲುಗಾಗಿ ಅವರು HYDGEN ತಂಡವನ್ನು ಅಭಿನಂದಿಸಿದರು ಮತ್ತು ಇಡೀ ತಂಡವು ಅದರ ಭವಿಷ್ಯದ ಪ್ರಯತ್ನಗಳಲ್ಲಿ ಯಶಸ್ಸು, ಬೆಳವಣಿಗೆ ಮತ್ತು ಶ್ರೇಷ್ಠತೆಯನ್ನು ಮುಂದುವರಿಸಲಿ ಎಂದು ಹಾರೈಸಿದರು.
ಉದ್ಯಮವು ಈಗಾಗಲೇ ಆ ಬದಲಾವಣೆಯನ್ನು ಮಾಡುತ್ತಿದೆ. ಕಳೆದ 12 ತಿಂಗಳುಗಳಲ್ಲಿ, HYDGEN ಭಾರತ, ಸಿಂಗಾಪುರ ಮತ್ತು ಥೈಲ್ಯಾಂಡ್ನಾದ್ಯಂತ 20+ ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಮತ್ತು 1 ಮಿಲಿಯನ್ USD ಗಿಂತ ಹೆಚ್ಚಿನ ಮಾರಾಟವನ್ನು ದಾಖಲಿಸಿದೆ. ಗಂಜಿಮಠ ಸೌಲಭ್ಯವನ್ನು ಆ ಬೇಡಿಕೆಯ ಮುಂದಿನ ಹಂತಕ್ಕಾಗಿ ನಿರ್ಮಿಸಲಾಗಿದೆ: ದೊಡ್ಡ ವ್ಯವಸ್ಥೆಗಳು, ಹೆಚ್ಚಿನ ಗ್ರಾಹಕರು ಮತ್ತು ಮಂಗಳೂರಿನಲ್ಲಿ ಸ್ಥಳೀಯ ಘಟಕ ಪೂರೈಕೆದಾರರ ನೆಲೆ, ಭಾರತ ಮತ್ತು ವಿದೇಶಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.
ದಿನವು ಕಾರ್ಯಾಗಾರದೊಂದಿಗೆ ಪ್ರಾರಂಭವಾಗುತ್ತದೆ, ಅಲ್ಲಿ ಅತಿಥಿಗಳು ಸ್ಟ್ಯಾಕ್ ಅಸೆಂಬ್ಲಿ, ಸಿಸ್ಟಮ್ ಏಕೀಕರಣ, ಪರೀಕ್ಷೆ ಮತ್ತು ಹೈಡ್ರೋಜನ್ ಗುಣಮಟ್ಟದ ಪರಿಶೀಲನೆಗಳ ಮೂಲಕ ಒಂದೇ ಸ್ಥಳದಲ್ಲಿ ನಡೆಯುತ್ತಾರೆ. ಪುಣೆಯ ಸಿಎಸ್ಐಆರ್-ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ನಿರ್ದೇಶಕ ಡಾ. ಆಶಿಶ್ ಲೆಲೆ, ಭಾರತದಲ್ಲಿ ಹೈಡ್ರೋಜನ್ ತಂತ್ರಜ್ಞಾನಗಳು ಪ್ರಯೋಗಾಲಯದಿಂದ ವಾಣಿಜ್ಯ ಬಳಕೆಗೆ ಹೇಗೆ ಚಲಿಸುತ್ತವೆ ಎಂಬುದರ ಕುರಿತು ಮುಖ್ಯ ಭಾಷಣ ಮಾಡುತ್ತಾರೆ. ಆನ್-ಸೈಟ್ ಹೈಡ್ರೋಜನ್ ಈಗಾಗಲೇ ಉದ್ಯಮಕ್ಕೆ ಲಾಭದಾಯಕವಾಗುತ್ತಿರುವ ಪೈಲಟ್ ಘಟಕಗಳಿಂದ ಬಹು-ಮೆಗಾವ್ಯಾಟ್ ಸ್ಥಾವರಗಳಿಗೆ ಮೆಂಬರೇನ್ ಎಲೆಕ್ಟ್ರೋಲೈಸರ್ಗಳನ್ನು ಕೊಂಡೊಯ್ಯುವುದು ಮತ್ತು ಕಡಿಮೆ ಹೈಡ್ರೋಜನ್ ವೆಚ್ಚಗಳಿಗೆ ಹಣಕಾಸು ಒದಗಿಸುವುದು ಹೇಗೆ ಎಂಬುದರ ಕುರಿತು ತಜ್ಞರ ಮಾತುಕತೆಗಳು ಮತ್ತು ಫಲಕ ಚರ್ಚೆಗಳು ನಡೆಯುತ್ತವೆ.
ಭಾರತದಾದ್ಯಂತ ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಹೂಡಿಕೆದಾರರು ಮತ್ತು ಉದ್ಯಮಿಗಳು ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿದರು.
HYDGEN ಕಂಪನಿ ಬಗ್ಗೆ
HYDGEN ಮಾಡ್ಯುಲರ್ PEM ಮತ್ತು AEM ಎಲೆಕ್ಟ್ರೋಲೈಸರ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ, ಇದು ಕೈಗಾರಿಕಾ ಬಳಕೆದಾರರಿಗೆ ಸ್ಥಳದಲ್ಲೇ ಮತ್ತು ಬೇಡಿಕೆಯ ಮೇರೆಗೆ ಹೈಡ್ರೋಜನ್ ಅನ್ನು ಉತ್ಪಾದಿಸುತ್ತದೆ. ಕಂಪನಿಯ ಪ್ರಧಾನ ಕಚೇರಿಯು ಮಂಗಳೂರಿನ ಗಂಜಿಮಠದಲ್ಲಿರುವ ಅದರ ಉತ್ಪಾದನಾ ಘಟಕದಲ್ಲಿದೆ, ಅಲ್ಲಿ ಸಂಪೂರ್ಣ ಸರಪಳಿ ಒಂದೇ ಸೂರಿನಡಿ ಇರುತ್ತದೆ: R&D, ಮೆಂಬರೇನ್ ಮತ್ತು ವೇಗವರ್ಧಕ ಅಭಿವೃದ್ಧಿ, ಸ್ಟ್ಯಾಕ್ ತಯಾರಿಕೆ, ಸಿಸ್ಟಮ್ ಜೋಡಣೆ, ಪರೀಕ್ಷೆ ಮತ್ತು ಗುಣಮಟ್ಟದ ಪರಿಶೀಲನೆಗಳನ್ನು ಭಾರತದಲ್ಲಿ ಮಾಡಲಾಗುತ್ತದೆ. ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳು, ವಿಶೇಷ ರಾಸಾಯನಿಕಗಳು, ಔಷಧಗಳು ಮತ್ತು ಅರೆವಾಹಕಗಳಲ್ಲಿ ಹೆಚ್ಚಿನ ಶುದ್ಧತೆಯ ಹೈಡ್ರೋಜನ್ ಅಗತ್ಯವಿರುವ ತಯಾರಕರಿಗೆ, ಅವರು ಅವಲಂಬಿಸಬಹುದಾದ ವೆಚ್ಚದಲ್ಲಿ HYDGEN ನಿರ್ಮಿಸುತ್ತದೆ. ಭಾರತ, ಸಿಂಗಾಪುರ ಮತ್ತು ಥೈಲ್ಯಾಂಡ್ನಾದ್ಯಂತ ವಿತರಿಸಲಾದ ಯೋಜನೆಗಳೊಂದಿಗೆ, HYDGEN ದೇಶೀಯ ಮತ್ತು ವಿದೇಶಗಳ ಗ್ರಾಹಕರಿಗಾಗಿ ಭಾರತದಲ್ಲಿ ತಯಾರಿಸಿದ ಆನ್-ಸೈಟ್ ಕೈಗಾರಿಕಾ ಹೈಡ್ರೋಜನ್ಗಾಗಿ ಭಾರತದ ನೆಲೆಯನ್ನು ನಿರ್ಮಿಸುತ್ತಿದೆ.
HYDGEN ನ ಎಲೆಕ್ಟ್ರೋಲೈಸರ್ ಘಟಕಗಳಲ್ಲಿ ಗಮನಾರ್ಹ ಪಾಲನ್ನು ಭಾರತದ ವಜ್ರ ಉದ್ಯಮದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಗುಜರಾತ್ನ ಸೂರತ್ನಲ್ಲಿರುವ ವಜ್ರ ಉತ್ಪಾದನಾ ಕಂಪನಿಗಳಿಗೆ ಸರಬರಾಜು ಮಾಡಲಾಗಿದೆ. ಈ ಸ್ಥಾಪನೆಗಳು ಪ್ರಯೋಗಾಲಯದಲ್ಲಿ ಬೆಳೆದ ವಜ್ರ ವಲಯದಲ್ಲಿ ಆನ್-ಸೈಟ್ ಹೈಡ್ರೋಜನ್ ಉತ್ಪಾದನಾ ಪರಿಹಾರಗಳ ಹೆಚ್ಚುತ್ತಿರುವ ಅಳವಡಿಕೆಯನ್ನು ಎತ್ತಿ ತೋರಿಸುತ್ತವೆ, ಅಲ್ಲಿ ಉತ್ಪಾದನಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಶುದ್ಧತೆಯ ಹೈಡ್ರೋಜನ್ನ ವಿಶ್ವಾಸಾರ್ಹ ಪೂರೈಕೆ ಅತ್ಯಗತ್ಯ. ಈ ಮಾರುಕಟ್ಟೆಯಲ್ಲಿ ಹೈಡ್ಜೆನ್ನ ಬೆಳೆಯುತ್ತಿರುವ ಉಪಸ್ಥಿತಿಯು ಭಾರತದಾದ್ಯಂತ ಕೈಗಾರಿಕಾ ಗ್ರಾಹಕರ ವಿಶೇಷ ಅವಶ್ಯಕತೆಗಳನ್ನು ಪೂರೈಸುವಲ್ಲಿ ಅದರ ಸ್ಥಳೀಯ ಎಲೆಕ್ಟ್ರೋಲೈಸರ್ ತಂತ್ರಜ್ಞಾನದ ಪ್ರಸ್ತುತತೆಯನ್ನು ಪ್ರತಿಬಿಂಬಿಸುತ್ತದೆ.
Uncategorized
Philomena-ವಿಶ್ವವಿದ್ಯಾನಿಲಯ ಮಟ್ಟದ ಯೂತ್ ರೆಡ್ಕ್ರಾಸ್ ಪ್ರೇರಣಾ ಶಿಬಿರ-2026: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗರಿ
ಪುತ್ತೂರು, ಅ. 8: ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ಕ್ರಾಸ್ ಘಟಕ, ಭಾರತೀಯ ರೆಡ್ಕ್ರಾಸ್ ಸಂಸ್ಥೆ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಖೆ) ಹಾಗೂ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ಸಹಯೋಗದಲ್ಲಿ, ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಅಕ್ಟೋಬರ್ 8ರಿಂದ 10ರವರೆಗೆ ನಡೆದ ಮೂರು ದಿನಗಳ ಪ್ರೇರಣಾ ಶಿಬಿರದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿ ಅಹಮ್ಮದ್ ಜೌಹರ್ ಹಾಗೂ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿನಿ ಮನೋನ್ಮಯಿ ಭಾಗವಹಿಸಿ ಆಶುಭಾಷಣ ಸ್ಪರ್ಧೆಯಲ್ಲಿ ಅಹಮ್ಮದ್ ಜೌಹರ್ ದ್ವಿತೀಯ ಬಹುಮಾನ ಗಳಿಸಿ, ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಇವರು ಪ್ರತಿನಿಧಿಸಿದ್ದ ತಂಡವು ಸ್ಪರ್ಧೆಯಲ್ಲಿ ‘ಅತ್ಯುತ್ತಮ ತಂಡ’ (Best Team Award) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರು ಶುಭ ಹಾರೈಸಿದ್ದಾರೆ


















