ದಕ್ಷಿಣ ಕನ್ನಡ
Muda Scam: ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಕ್ರಮ ಪ್ರಾಮಾಣಿಕವಾಗಿಲ್ಲ – ಕಾಂಗ್ರೆಸ್ ಪಕ್ಷದ ಮುಖಂಡರನ್ನು ಹೇಗಾದರೂ ಮಾಡಿ ಹಣಿದು ಜೈಲಿಗೆಟ್ಟಬೇಕೆಂಬ ಉದ್ದೇಶದಿಂದ ಪ್ರಾಸಿಕ್ಯೂಷನ್ ಗೆ ಅನುಮತಿ : ಅಮಳ ರಾಮಚಂದ್ರ

ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ಜನಪ್ರಿಯತೆಯ ಉತ್ತುಂಗದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮತ್ತು ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಹೇಗಾದರೂ ಮಾಡಿ ಹಣಿದು ಜೈಲಿಗೆಟ್ಟಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ
ಶುಕ್ರವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಪ್ರಕರಣದಲ್ಲಿ ಪ್ರಾಸ್ಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇ ಹೌದಾಗಿದ್ದರೆ 2023ರಲ್ಲಿ ರಾಜ್ಯದ ಲೋಕಾಯುಕ್ತ ಎಸ್ಐಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮತ್ತು ಬಳ್ಳಾರಿ ಅಕ್ರಮ ಗಣಿ ದೊರೆ ಬಿಜೆಪಿಯ ಗಾಲಿ ಜನಾರ್ಧನ ರೆಡ್ಡಿಯವರ ಮೇಲೆ ಪ್ರಕರಣ ಹೂಡುವುದಕ್ಕಾಗಿ ಇದೇ ರಾಜ್ಯಪಾಲರ ಅನುಮತಿ ಕೋರಿದ ತಕ್ಷಣ ಈ ಪ್ರಕರಣದಲ್ಲಿ ಮಾಡಿದಂತೆಆ ಪ್ರಕರಣದಲ್ಲೂ ಅನುಮತಿ ನೀಡಬೇಕಾಗಿತ್ತು.
ರಾಜ್ಯಪಾಲರಿಗೆ ಈ ಪ್ರಕರಣದಲ್ಲಿ ಇರುವುದು ಪ್ರಾಮಾಣಿಕವಾದ ಆಸಕ್ತಿಯೇ ಹೌದಾಗಿದ್ದರೆ ಅವರು ಕಳೆದ ಫೆಬ್ರವರಿಯಲ್ಲಿ ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಸಲ್ಲಿಸಿದ ಅನುಮತಿ ಕೋರಿಕೆ ಪತ್ರಕ್ಕೆ ಅನುಮತಿಯನ್ನು ನೀಡಿರುತ್ತಿದ್ದರು. ಮೊಟ್ಟೆ ಹಗರಣದಲ್ಲಿ ತನಿಖೆ ನಡೆಸಲು 2021ರಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆಯವರ ವಿರುದ್ಧದ ಪ್ರಾಶಿಕೂಷನ್‌ಗೆ ಅನುಮತಿ ಕೋರಿಕೆ ಪತ್ರಕ್ಕೆ ಅನುಮತಿ ನೀಡಿರುತ್ತಿದ್ದರು. ಆದರೆ ಇದು ಯಾವುದನ್ನೂ ಮಾಡದೆ ಕೇವಲ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ನಡೆದ ಪ್ರಕರಣಕ್ಕೆ ಇಷ್ಟು ವೇಗವಾಗಿ ಅನುಮತಿ ನೀಡಿರುವುದು ರಾಜ್ಯಪಾಲರ ಕ್ರಮ ಪ್ರಾಮಾಣಿಕವಾಗಿಲ್ಲ ಎಂದು ಸಾರಿ ಹೇಳುತ್ತದೆ, ಬದಲಿಗೆ ಇದು ಕೇಂದ್ರ ಸರಕಾರದ ಅಣತಿಯಂತೆ , ಸಿದ್ಧರಾಮಯ್ಯನವರನ್ನು ಮತ್ತು ರಾಜ್ಯ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವುದಕ್ಕಾಗಿಯೇ ಸೃಷ್ಠಿಸಿದ ವ್ಯೂಹವಾಗಿದೆ ಎಂಬುದೂ ಇದರಿಂದ ಸ್ಪಷ್ಟವಾಗುತ್ತದೆ.
ಭ್ರಷ್ಟಾಚಾರದ ಚಾಂಪಿಯನ್‌ಗಳಿಂದ ಚಳುವಳಿ:
70000 ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪ ಇರುವ ಮಹಾರಾಷ್ಟ್ರದ ಅಜಿತ್ ಪವಾರ್ ಅವರ ಜೊತೆ ಸೇರಿ ಸರಕಾರ ರಚಿಸಿದ ಬಿಜೆಪಿಯವರು, 5000 ಕೋಟಿ ರೂಪಾಯಿಗಳ ಶಾರದಾ ಚಿಟ್ ಹಗರಣದ ಆರೋಪಿ ಹೇಮಂತ್ ವಿಶ್ವಾಸ ಶರ್ಮಾರನ್ನು ಮುಖ್ಯಮಂತ್ರಿ ಯನ್ನಾಗಿ ಮಾಡಿದರು. ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ 1500 ಕೋಟಿ ರೂಪಾಯಿ ನುಂಗಿದ ಆರೋಪಿ ಅಶೋಕ್ ಚವಾಣ್ ಜೊತೆ ಅಧಿಕಾರ ಹಂಚಿಕೊಂಡವರು, ಗಂಗೇನಹಳ್ಳಿ ಡಿನೋಟಿಫಿಕೇಷನ್ ಹಗರಣದ ಆರೋಪಿ ಎಚ್.ಡಿ.ಕುಮಾರಸ್ವಾಮಿಯವರ ಜೊತೆ ಹೊಂದಾಣಿಕೆ ಮಾಡಿ ಅವರನ್ನು ಕೇಂದ್ರ ಸಚಿವರನ್ನಾಗಿಸಿದರು.
ಈಡಿಯಿಂದ ನೋಟೀಸ್ ಬಂದೊಡನೆ ಮಹರಾಷ್ಟ್ರದ ನಾರಾಯಣ ರಾಣೆಯವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕೇಂದ್ರ ಸಚಿವರನ್ನಾಗಿಸಿದ ಬಿಜೆಪಿಯವರು, ಕುಸಿದು ಹೋದ ವಿಮಾನ ನಿಲ್ದಾಣ ಅಯೋದ್ಯೆಯ ರಾಮ ಪಥ, ಸೋರುವ ಮಂದಿರ ನಿರ್ಮಿಸಿದ ಬಿಜೆಪಿಯವರು, ಅಂಬಾನಿ-ಅದಾನಿಗಳಿಗೆ ದೇಶವನ್ನು ಒತ್ತೆ ಇಟ್ಟಿದ್ದಾರೆ. ಚುನಾವಣಾ ಬಾಂಡ್ ಹಗರಣದಲ್ಲಿ 8000 ಕೋಟಿಗೂ ಅಧಿಕ ಹಣವನ್ನು ಕೊಳ್ಳೆ ಹೊಡೆದ ಬಿಜೆಪಿಯ ರಾಷ್ಟ್ರೀಯ ನಾಯಕರು, ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಬಗ್ಗೆ ಕ್ರಮ ಕೈಗೊಳ್ಳದ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿಯವರಾದರೆ ಈಡಿಯೂ ಇಲ್ಲ, ಸಿಬಿಐಯೂ ಇಲ್ಲ, ಐಟಿಯೂ ಇಲ್ಲ, ಭ್ರಷ್ಟಾಚಾರವೂ ಇಲ್ಲ, ಕೇಸೂ ಇಲ್ಲ, ರಾಜೀನಾಮೆಯೂ ಇಲ್ಲ ಎಂಬುದೇ ಇವರ ನೀತಿಯಾಗಿದೆ.
ರಾಚೇನಹಳ್ಳಿ ಅಕ್ರಮ ಡಿನೋಟಿಫಿಕೇಶನ್ ಹಗರಣದಲ್ಲಿ ರಾಜ್ಯಪಾಲರು ಅನುಮತಿ ನೀಡಿ ಚಾರ್ಜ್‌ಶೀಟ್ ಸಲ್ಲಿಕೆಯಾದರೂ ರಾಜೀನಾಮೆ ನೀಡದೆ ಗಣಿ ಹಗರಣದಲ್ಲಿ ಬಂಧನಕ್ಕೊಳಗಾಗುವ ಸ್ಥಿತಿ ಬಂದಾಗ ಅನಿವಾರ್ಯವಾಗಿ ರಾಜೀನಾಮೆ ನೀಡಿದ ಯಡಿಯೂರಪ್ಪನವರು ಈಗ ಸಿದ್ಧರಾಮಯ್ಯನವರ ರಾಜೀನಾಮೆ ಕೇಳುತ್ತಿರುವುದು, 40℅ಭ್ರಷ್ಟಾಚಾರದ ಚಾಂಪಿಯನ್‌ಗಳಾದ ಬಿಜೆಪಿ ನಾಯಕರು, ಪಿ.ಎಸ್.ಐ. ಹಗರಣದ ರೂವಾರಿಗಳಾದ ಅರಗ ಜ್ಞಾನೇಂದ್ರ, ಕೋವಿಡ್ ಖರೀದಿ ಹಗರಣದ ಸುದಾಕರ್, ಬಿಡಿಎ ಅಪಾರ್ಟ್ಮೆಂಟ್ ಅಕ್ರಮ ಟೆಂಡರ್ ಕೇಸ್ ನಲ್ಲಿ ಎಂಟು ಕೋಟಿ ಅವ್ಯವಹಾರದ ಆರೋಪ ಹೊತ್ತ ವಿಜಯೇಂದ್ರ ಸಿದ್ಧರಾಮಯ್ಯನವರಿಗೆ ನೈತಿಕತೆಯ ಪಾಠ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ.
ನೈತಿಕತೆಯ ಪ್ರಶ್ನೆ: ಪ್ರಕರಣದ ನೈತಿಕ ಹೊಣೆಯನ್ನು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಇಂದು ಅಗ್ರಹಿಸುತ್ತದೆ. ಒಂದು ವೇಳೆ ಈ ಪ್ರಕರಣದಲ್ಲಿ ಹುರುಳಿರುತ್ತಿದ್ದರೆ ಅಥವಾ ಈ ಆರೋಪದ ಹಿಂದೆ ಯಾವುದೇ ಷಢ್ಯಂತ್ರಗಳು ಇಲ್ಲದೆ ಇರುತ್ತಿದ್ದರೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಲು ಹಿಂದು ಮುಂದು ಯೋಚಿಸುತ್ತಿರಲಿಲ್ಲ. ಆದರೆ ಈ ಆರೋಪವೇ ಒಂದು ಅನೈತಿಕ ಷಡ್ಯಂತ್ರ. ಬಿಜೆಪಿಯ ರಾಜ್ಯದ ಮತ್ತು ರಾಷ್ಟ್ರೀಯ ನಾಯಕರೆಲ್ಲರೂ ಸೇರಿಕೊಂಡು ಈ ಷಡ್ಯಂತ್ರವನ್ನು ರೂಪಿಸಿದ್ದಾರೆ. ಇಡೀ ದೇಶದಲ್ಲಿ ವಿರೋಧ ಪಕ್ಷದ ಆಡಳಿತವಿರುವ ಸರಕಾರಗಳನ್ನು ಅಸ್ಥಿರಗೊಳಿಸಬೇಕೆನ್ನುವ ಬಿಜೆಪಿಯ “ಕಾಂಗ್ರೆಸ್ ಮುಕ್ತ ಭಾರತ” ಎಂಬ ಚಿಂತನೆಯ ಫಲವಾಗಿಯೇ ಈ ಷಡ್ಯಂತ್ರ ರೂಪಿಸಲಾಗಿದೆ.
ಮೊದಲಿಗೆ ಆಪರೇಷನ್ ಕಮಲದ ಮೂಲಕ ರಾಜ್ಯ ಸರ್ಕಾರಗಳನ್ನು ಉರುಳಿಸಿದರು. ಈಗ ಆಪರೇಷನ್‌ಗೆ ಬಗ್ಗದ ರಾಜ್ಯ ಸರಕಾರಗಳನ್ನು ಈಡಿ, ಸಿಬಿಐ, ಐಟಿ ಮತ್ತು ರಾಜ್ಯಪಾಲರ ಮುಖಾಂತರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ದೆಹಲಿಯಲ್ಲಿ ಲಿಕ್ಕರ್ ಹಗರಣವನ್ನು ಸೃಷ್ಠಿಸಿ ಆಪ್ ಪಕ್ಷದ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್‌ರವರನ್ನು ಜೈಲಿಗಟ್ಟಲಾಯಿತು. ಜೂನ್ 26ರಂದು ಅವರಿಗೆ ಇ.ಡಿ. ಕೇಸಿನಿಂದ ಜಾಮೀನು ದೊರೆತ ತಕ್ಷಣ ಸಿ.ಬಿ.ಐ.ಯಿಂದ ಮತ್ತೆ ಬಂಧಿಸಲಾಯಿತು. ಮನೀಷ್ ಸಿಸೋಡಿಯಾರನ್ನು 17 ತಿಂಗಳು ಜೈಲಿನಲ್ಲಿ ಕೊಳೆಸಲಾಯಿತು. ಕಟ್ಟಕಡೆಗೆ ಕೇಜ್ರೀವಾಲರಿಗೆ ಜಾಮೀನು ನೀಡಿದ ಸು.ಕೋರ್ಟ್ ಇ.ಡಿ. ಮತ್ತು ಸಿ.ಬಿ.ಐ.ಗಳನ್ನು ಪಂಜರದ ಗಿಣಿಗಳೆಂದು ಕರೆದದ್ದು ಇಡೀ ಪ್ರಕರಣ ಹೇಗೆ ರಾಜಕೀಯ ಪ್ರೇರಿತವಾಗಿದೆ ಎಂಬುದಕ್ಕೆ ಸು.ಕೋರ್ಟ್ ಹಿಡಿದ ಕೈಗನ್ನಡಿಯಾಗಿದೆ.
ಜಾರ್ಖಂಡ್ ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ರನ್ನು ರಾಂಚಿ ನಗರದ ತುಂಡು ಭೂಮಿಯ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಯಿತು, ತಮಿಳುನಾಡಿನ ಸಚಿವ ಸೆಂತಿಲ್ ಬಾಲಾಜಿಯವರನ್ನು ಜೈಲಿಗೆ ಹಾಕಲಾಯಿತು, ಕೇರಳದ ರಾಜ್ಯಪಾಲರು ಅಲ್ಲಿನ ಕಮ್ಯುನಿಸ್ಟ್ ಸರಕಾರಕ್ಕೆ , ಮಹರಾಷ್ಟ್ರದ ಮಹಾ ಅಗಾಡಿ ಸರ್ಕಾರವನ್ನು ಆಪರೇಷನ್ ಮಾಡಿ ಮುಗಿಸಿತು. ಬಿಹಾರದಲ್ಲಿ ನಿತೀಶ್‌ಕುಮಾರ್‌ರವರನ್ನೇ ನುಂಗಲಾಯಿತು, ಪ.ಬಂಗಾಳದ ರಾಜ್ಯಪಾಲರು ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಪ್ರತಿದಿನ ಕಿರುಕುಳ ಕೊಟ್ಟು ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಹೀಗೆ ಎಲ್ಲೆಲ್ಲಾ ವಿಪಕ್ಷಗಳ ಸರಕಾರಗಳಿವೆಯೋ ಅಲ್ಲಿನ ಸರಕಾರಗಳನ್ನು ಅಸ್ಥಿರಗೊಳಿಸುವುದು ಕೇಂದ್ರದ ನರೇಂದ್ರ ಮೋದಿ ಸರಕಾರದ ಪ್ರಥಮ ಆದ್ಯತೆಯಾಗಿದೆ. ದೇಶದ ಎಲ್ಲಾ ಕಡೆಯಲ್ಲೂ ವಿಪಕ್ಷಗಳ ಸರಕಾರಗಳನ್ನು ಅಸ್ಥಿರಗೊಳಿಸಿದ ನಂತರ ಇದೀಗ ಕೇಂದ್ರದ ಮೋದಿ ನೇತೃತ್ವದ ಸರಕಾರ ಇದೀಗ ಕರ್ನಾಟಕದ ಸಿದ್ಧರಾಮಯ್ಯನವರನ್ನು ಹಗರಣವೇ ಅಲ್ಲದ ಕ್ಷುಲ್ಲಕ ಮುಡಾ ಹಗರಣದಲ್ಲಿ ಸಿಲುಕಿಸಲು ವಿಫಲ ಯತ್ನ ನಡೆಸುತ್ತಿದೆ.
6 ತಿಂಗಳಲ್ಲಿ ಸರ್ಕಾರ ಪತನ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿ ಅಧಿಕಾರದ ದಾಹದಿಂದ ಕೊತಕೊತ ಕುದಿಯುತ್ತಿದೆ. ಆಪರೇಷನ್ ಕಮಲಕ್ಕೂ ವಿಫಲ ಪ್ರಯತ್ನ ನಡೆಸಲಾಯಿತು. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮುಂದಿನ 6 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಬಿಜೆಪಿ ನಾಯಕರು ಘಂಟಾಘೋಷವಾಗಿ ಹೇಳುತ್ತಿದ್ದರು. ಅಂದಿನಿಂದಲೇ ಸಿದ್ಧರಾಮಯ್ಯನವರ ಪತನಕ್ಕಾಗಿ ಷಢ್ಯಂತ್ರ ರೂಪಿಸಿದ್ದಾರೆ. ಈಗ ಒಂದೊಂದೇ ನಾಟಕ ಮಾಡುತ್ತಿದ್ದಾರೆ.
ಕರ್ನಾಟಕದ ಈ ವಿದ್ಯಾಮಾನ ದೇಶದ ಇತರ ರಾಜ್ಯಗಳ ವಿದ್ಯಾಮಾನಕ್ಕಿಂತ ಭಿನ್ನವೇನಲ್ಲ, ವಿಪಕ್ಷಗಳ ಸರಕಾರಗಳನ್ನು ಮುಗಿಸಿ ಪ್ರಜಾಸತ್ತೆಯನ್ನು ಕುಸಿಯುವಂತೆ ಮಾಡುವುದೇ ಮೋದಿ -ಶಾ ಜೋಡಿಯ ಉದ್ದೇಶ. ದೇಶದ ಎಲ್ಲ ಕಡೆ ಮಾಡಿದಂತೆ ಇಲ್ಲೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿ ಜನ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯನವರನ್ನು ಅಧಿಕಾರದಿಂದ ಇಳಿಸುವುದೇ ಈ ಷಢ್ಯಂತ್ರದ ಉದ್ದೇಶವಾದುದರಿಂದ , ಬಿಜೆಪಿಯ ಈ ಕುತಂತ್ರವನ್ನು ವಿಫಲಗೊಳಿಸಲೇಬೇಕಾಗಿರುವುದು ರಾಜ್ಯದ, ದೇಶದ ಮತ್ತು ಪ್ರಜಾಪ್ರಭುತ್ವದ ಹಿತದೃಷ್ಠಿಯಿಂದ ಅನಿವಾರ್ಯವಾದುದರಿಂದ ಮುಡಾ ಹಗರಣದ ತನಿಖೆ ಹೆದರುವ ಪ್ರಶ್ನೆಯೂ ಇಲ್ಲ, ಮುಖ್ಯಮಂತ್ರಿಗಳು ರಾಜಿನಾಮೆ ನೀಡುವ ಪ್ರಶ್ನೆಯೂ ಇಲ್ಲ.
ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜಿನಾಮೆಗೆ ನಕಾರ: ಶತಾಯ ಗತಾಯ ರಾಜ್ಯದ ಜನಮೆಚ್ಚಿದ ಮುಖ್ಯಮಂತ್ರಿಗಳ ಮುಖಕ್ಕೆ ಮಸಿ ಬಳಿದು, ಅವರನ್ನು ಅಧಿಕಾರದಿಂದ ಇಳಿಸಿ, ಗ್ಯಾರಂಟಿ ಯೋಜನೆಗಳು ನಿಲ್ಲುವಂತೆ ಮಾಡಿ, ಸಿದ್ಧರಾಮಯ್ಯನವರನ್ನು ಜೈಲಿಗಟ್ಟಿ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಏಕ ಮಾತ್ರ ಉದ್ದೇಶದಿಂದಲೇ ಈ ಪ್ರಕರಣ ಸೃಷ್ಠಿಸಲಾಗಿದೆ. ಇದೇ ಉದ್ದೇಶಕ್ಕಾಗಿ ಪೂರ್ವಭಾವಿ ರಂಗ ನಿರ್ಮಾಣಕ್ಕಾಗಿ ಬಿಜೆಪಿ ಪಾದಯಾತ್ರೆ ನಡೆಸಿ, ತರಾತುರಿಯಲ್ಲಿ ರಾಜ್ಯಪಾಲರಿಂದ ಅನುಮತಿ ಕೊಡಿಸಿ ಈಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ರಾಜೀನಾಮೆ ಕೊಡಿ, ಪ್ರಕರಣ ಸಿಬಿಐಗೆ ಒಪ್ಪಿಸಿ ಎಂದು ಬೀದಿ ರಂಪ ಮಾಡುತ್ತಿದ್ದಾರೆ. ಪ್ರಕರಣ ಸಿಬಿಐಗೆ ಹೋದರೆ ಕೇಜ್ರೀವಾಲ್‌ರನ್ನು ಜೈಲಿಗಟ್ಟಿದಂತೆ ಸಿದ್ಧರಾಮಯ್ಯನವರನ್ನೂ ಜೈಲಿಗಟ್ಟಬಹುದೆಂಬ ದುರಾಲೋಚನೆಯಿಂದ ಇದನ್ನು ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಪ್ರಕರಣದಲ್ಲಿ ತನಿಖೆಗೆ ಹೆದರುವ ಪ್ರಶ್ನೆಯೂ ಇಲ್ಲ, ರಾಜಿನಾಮೆ ನೀಡುವ ಅಗತ್ಯವೂ ಇಲ್ಲ. ದೇಶದ ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗಿದ್ದರೆ ಬಿಜೆಪಿಯ ಈ ಷಢ್ಯಂತ್ರಕ್ಕೆ ಸೆಡ್ಡು ಹೊಡೆದು , ರಾಜೀನಾಮೆ ನೀಡದೆ, ಸಿದ್ಧರಾಮಯ್ಯ ಅಧಿಕಾರದಲ್ಲಿ ಉಳಿಯಬೇಕಾಗಿರುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ ಎಂದರು
ಕಾಂಗ್ರೆಸ್ ಮುಖಂಡರಾದ ಮೌನೀಸ್ ಮಸ್ಕರೇನಿಯಸ್, ಹರೀಶ್ ಕೊಟ್ಯಾನ್ ಮಹಾಲಿಂಗ ನಾಯ್ಕ ಮತ್ತು ರಿಯಾಝ್ ಪರ್ಲಡ್ಕ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು
Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ನ್ಯೂಸ್
Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.
-
Uncategorized12 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized9 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized11 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized13 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized12 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized11 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್ಫುಲ್ |


















