ಸ್ಥಳೀಯ
Dharmasthala-ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ; ಹೆಗ್ಗಡೆಯವರ ಸೇವೆ-ಸಾಧನೆ ವಿಶ್ವಮಾನ್ಯವಾಗಿದೆ-ರಾಘವೇಂದ್ರ ಶ್ರೀನಿವಾಸ ಭಟ್
ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಮಾತನಾಡಿದರು.
ಉಜಿರೆ: ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗನುಗುಣವಾಗಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಸಾತ್ವಿಕತ್ಯಾಗದೊಂದಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವಾಕಾರ್ಯ ಹಾಗೂ ಸಾಧನೆ ಆದರ್ಶ ಹಾಗೂ ಅನುಕರಣೀಯವಾಗಿದ್ದು ವಿಶ್ವಮಾನ್ಯವಾಗಿದೆ ಎಂದು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇವರ್ಧಂತ್ಯುತ್ಸವ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.
ಸಮಾಜಮುಖಿ ಚಿಂತನೆಯೊಂದಿಗೆ, ಧರ್ಮದ ತಳಹದಿಯಲ್ಲಿ ಮಾನವೀಯಮೌಲ್ಯಗಳೊಂದಿಗೆ ವಿಶೇಷವಾಗಿ ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಅಸಹಾಯಕರಿಗೆ ಅಭಯದಾನದೊಂದಿಗೆ ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಸೇವಾಕಾರ್ಗಯಳು ಅಪೂರ್ವವಾಗಿದ್ದು ಅವರಿಗೆ “ರಾಜರ್ಷಿ” ಬಿರುದು ಅನ್ವರ್ಥಕವೂ, ಅರ್ಥಪೂರ್ಣವು ಆಗಿದೆ ಎಂದರು.
ಧರ್ಮಸ್ಥಳಕ್ಕೂ ಕರ್ಣಾಟಕ ಬ್ಯಾಂಕ್‌ಗೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಅವರು ಹೆಗ್ಗಡೆಯವರು ಹಾಗೂ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ನಿರ್ದೇಶಕರಾಗಿ ಬ್ಯಾಂಕ್‌ನ ಪ್ರಗತಿಗೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.
ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿ ರಾಜಯೋಗಿಯಾಗಿಯೂ, ಕರ್ಮಯೋಗಿಯಾಗಿಯೂ ಸಮಾಜಕ್ಕಾಗಿ ಹೆಗ್ಗಡೆಯವರು ಮಾಡುತ್ತಿರುವ ಸೇವೆಯನ್ನು ಕೃತಜ್ಞತೆಯೊಂದಿಗೆ ಉಪಕಾರಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಂಸೆ ಹೊಸನೆಲ ಎಸ್ಟೇಟ್‌ನ ಪ್ರಬಂಧಕ ಶ್ರೀವರ್ಮ ಸೇರಿದಂತೆ ೨೬ ಮಂದಿ ಹಿರಿಯ ನೌಕರರÀನ್ನು ಹೆಗ್ಗಡೆಯವರು ಸನ್ಮಾನಿಸಿದರು.
ಡಾ. ಪವನ್ ಬರೆದ “ಮುಹೂರ್ತ ಪದವೀ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಹೆಗ್ಗಡೆಯವರ ಹೊಸ ಯೋಜನೆಗಳು:
ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿ ನಿಲಯ ನಿರ್ಮಾಣ, ಉಜಿರೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕ್ರೀಡಾವಸತಿ ನಿಲಯ, ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜು ಪ್ರಾರಂಭ, ಶಿಕ್ಷಣ ಸಂಸ್ಥೆಗಳ ಹಳೇಕಟ್ಟಡಗಳ ನವೀಕರಣ, ಉಜಿರೆಯಲ್ಲಿ ಸಿಂಥೆಟಿಕ್ ಟ್ರಾಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಅನುಕೂಲಕ್ಕಾಗಿ ಎ.ಟಿ.ಎಂ. ಬಳಕೆ, ಉಜಿರೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ, ಕೆರೆಗಳ ಪುನಶ್ಚೇತನ, ಎಸ್.ಡಿ.ಎಂ. ಆಸ್ಪತ್ರೆ, ಉಜಿರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಸೌಲಭ್ಯ ಆರಂಭ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು ₹.11.00 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ (Cath Lab) ಸೌಲಭ್ಯವನ್ನು ಪ್ರಾರಂಭಿಸಲಾಗುತ್ತದೆ. ಈ ಸೌಲಭ್ಯದ ಮೂಲಕ ಹೃದಯ ಸಂಬAಧಿ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಆಂಜಿಯೋಗ್ರಾಮ್ (Angiogram) ಮತ್ತು ಆಂಜಿಯೋಪ್ಲಾಸ್ಟಿ (Angioplasty) ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿದ್ದು ಯೋಜನೆಗಳನ್ನು ಸದ್ಯದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಅಲ್ಲದೆ ಭಾನುವಾರ/ಸೋಮವಾರಗಳಲ್ಲಿ ಧರ್ಮಸ್ಥಳಕ್ಕೆ ಬಂದು ಚಿಕಿತ್ಸೆಗಾಗಿ ನೆರವು ಕೋರಿದವರಿಗೆ ಸೂಕ್ತ ಸಹಾಯ ನೀಡಲಾಗುತ್ತದೆ.
ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆ ಹಾಗೂ ಧರ್ಮಸ್ಥಳ, ಪರೀಕ ಮತ್ತು ಬೆಂಗಳೂರಿನಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಪಾರಂಪರಿಕ ಚಿಕಿತ್ಸಾ ಪದ್ಧತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್ ಮತ್ತು ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡಬಿದ್ರೆ ಇದ್ದರು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು.
ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮ ನಿರ್ವಹಿಸಿದರು.
ದಕ್ಷಿಣ ಕನ್ನಡ
kukke Temple Contravercy: ಭಕ್ತರ ವಿರೋಧಕ್ಕೆ ಮಣಿದ ಕುಕ್ಕೆ ದೇಗುಲ ಆಡಳಿತ: ಅ.28ರಿಂದಲೇ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭ | ಮಾಜಿ ಟ್ರಸ್ಟಿ ಪ್ರಸನ್ನ ದರ್ಭೆ ಹೋರಾಟಕ್ಕೆ ಜಯ

ಕುಕ್ಕೆ ಸುಬ್ರಹ್ಮಣ್ಯ, ಅ.27: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ವೇಳೆ ವೈಯಕ್ತಿಕ ಸಂಕಲ್ಪದ ಬದಲು ಸಾಮೂಹಿಕ ಸಂಕಲ್ಪ ಪದ್ಧತಿ ಜಾರಿಗೆ ತಂದಿದ್ದಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಹಿಂದಿನ ಪದ್ಧತಿಯನ್ನೇ ಮುಂದುವರಿಸಲು ದೇವಸ್ಥಾನದ ವ್ಯವಸ್ಥಾಪನ ಮಂಡಳಿ ನಿರ್ಧರಿಸಿದೆ. ಅದರಂತೆ ಅಕ್ಟೋಬರ್ 28ರಿಂದ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕಾರಣಿಕ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರದಲ್ಲಿ ಉದ್ಭವಿಸುವ ವಿವಾದವೊಂಥು ಸುಖಾಂತ್ಯಗೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲವು ದಿನಗಳ ಹಿಂದೆ ಆಡಳಿತ ಮಂಡಳಿಯು ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದ ವೈಯಕ್ತಿಕ ಸಂಕಲ್ಪ ಸೇವೆಯನ್ನು ಸ್ಥಗಿತಗೊಳಿಸಿ, ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ನಿರ್ಧಾರಕ್ಕೆ ಭಕ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ತಮ್ಮ ಹರಕೆಗಳನ್ನು ಸಲ್ಲಿಸುವುದು ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ವಿಚಾರದಲ್ಲಿ ಭಕ್ತರಲ್ಲಿ ಗೊಂದಲವೂ ಉಂಟಾಗಿತ್ತು.
ಪರಂಪರೆಗೆ ಧಕ್ಕೆ ಆರೋಪ, ಪ್ರತಿಭಟನೆಯ ಎಚ್ಚರಿಕೆ
ದೇವಸ್ಥಾನದ ಮಾಜಿ ಸದಸ್ಯ ಪ್ರಸನ್ನ ದರ್ಬೆ ಅವರು ಈ ನಿರ್ಧಾರವನ್ನು ವಿರೋಧಿಸಿ, ಸಂಕಲ್ಪ ಸೇವೆಯ ಧಾರ್ಮಿಕ ಮಹತ್ವ ಹಾಗೂ ಕ್ಷೇತ್ರದ ಪಾರಂಪರಿಕ ಪೂಜಾ ಪದ್ಧತಿಯನ್ನು ಎತ್ತಿಹಿಡಿದಿದ್ದರು. ಹಿಂದಿನಿಂದ ನಡೆದುಕೊಂಡು ಬಂದಿರುವ ಕ್ಷೇತ್ರದ ದಿಟ್ಟಂಗೆ ವಿರುದ್ಧವಾಗಿ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳೊಂದಿಗೆ ಸಭೆ ನಡೆಸಿ ಪ್ರತಿಭಟನೆ ಕುರಿತು ಚರ್ಚಿಸುವ ಸಿದ್ಧತೆಯೂ ನಡೆದಿತ್ತು.
ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ?
ಭಕ್ತರ ನಿರಂತರ ಆಗ್ರಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿಯಿಂದಲೂ ಈ ವಿಚಾರದ ಕುರಿತು ಮಾಹಿತಿ ಪಡೆದು, ಹಿಂದಿನ ಪದ್ಧತಿಯಂತೆ ಪೂಜಾ ಸೇವೆಗಳನ್ನು ಮುಂದುವರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೀಗ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಹಿಂಪಡೆದು, ಅಕ್ಟೋಬರ್ 28ರಿಂದ ಹಿಂದಿನಂತೆಯೇ ಪ್ರತ್ಯೇಕ ಸಂಕಲ್ಪ ಸೇವೆ ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎನ್ನಲಾಗಿದೆ. ಈ ಮೂಲಕ ಆಶ್ಲೇಷ ಬಲಿ ಪೂಜೆಯ ಸಂಕಲ್ಪ ಪದ್ಧತಿ ವಿಚಾರವಾಗಿ ಭಕ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ.
ಮಂಗಳೂರು
C.T. Ravi-ಮೈಸೂರು ರಾಜಮನೆತನದ ಗೌರವ ಉಳಿಸಬೇಕು, ರಾಜಮಾತೆಯ ಅಹವಾಲು ಆಲಿಸಿ: ಸಿ.ಟಿ. ರವಿ
ಮೈಸೂರು ದಸರಾ ಆಚರಣೆಗಳ ಸಂದರ್ಭದಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹಲವು ಸಂಪ್ರದಾಯಗಳಿಗೆ ಅಡೆತಡೆ ಉಂಟಾಗುತ್ತಿರುವ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮೈಸೂರು ರಾಜಮನೆತನದ ಪರವಾಗಿ ಮಾತನಾಡಿದ್ದಾರೆ. ರಾಜಮನೆತನಕ್ಕೆ ಇರುವ ವಿಶೇಷ ಗೌರವವನ್ನು ಸರ್ಕಾರ ಅರ್ಥಮಾಡಿಕೊಂಡು, ಅವರ ಅಹವಾಲುಗಳನ್ನು ಸಹಾನುಭೂತಿಯಿಂದ ಆಲಿಸಬೇಕು ಎಂದು ಅವರು ಹೇಳಿದ್ದಾರೆ.
ಮಂಗಳೂರು: ಮೈಸೂರು ದಸರಾ ಆಚರಣೆಗಳ ಸಂದರ್ಭದಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹಲವು ಸಂಪ್ರದಾಯಗಳಿಗೆ ಅಡೆತಡೆ ಉಂಟಾಗುತ್ತಿರುವ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮೈಸೂರು ರಾಜಮನೆತನದ ಪರವಾಗಿ ಮಾತನಾಡಿದ್ದಾರೆ. ರಾಜಮನೆತನಕ್ಕೆ ಇರುವ ವಿಶೇಷ ಗೌರವವನ್ನು ಸರ್ಕಾರ ಅರ್ಥಮಾಡಿಕೊಂಡು, ಅವರ ಅಹವಾಲುಗಳನ್ನು ಸಹಾನುಭೂತಿಯಿಂದ ಆಲಿಸಬೇಕು ಎಂದು ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಮೈಸೂರು ರಾಜಮನೆತನದ ಬಗ್ಗೆ ತಮಗೆ ವಿಶೇಷ ಗೌರವವಿದೆ ಎಂದು ತಿಳಿಸಿದರು. ಮೈಸೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಬ್ರ್ಯಾಂಡ್ ಆಗಿ ರೂಪಿಸುವಲ್ಲಿ ರಾಜಮನೆತನದ ಕೊಡುಗೆ ಮಹತ್ವದ್ದಾಗಿದೆ. ಕನ್ನಂಬಾಡಿ ಅಣೆಕಟ್ಟಿನ ನಿರ್ಮಾಣ ಪೂರ್ಣಗೊಳಿಸಲು ಮಹಾರಾಣಿ ತಮ್ಮ ಒಡವೆಗಳನ್ನು ನೀಡಿದ್ದರು ಎಂಬುದನ್ನು ಸ್ಮರಿಸಬೇಕು ಎಂದು ಹೇಳಿದರು.
ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದ ಸಂದರ್ಭದಲ್ಲಿ ರಾಜಮನೆತನಗಳೊಂದಿಗೆ ಒಪ್ಪಂದಗಳು ನಡೆದಿದ್ದವು. ರಾಜಮನೆತನಗಳಿಗೆ ಗೌರವ ನೀಡುವುದೂ ಆ ವ್ಯವಸ್ಥೆಯ ಭಾಗವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
“ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ಆದರೆ, ನಾವ್ಯಾರೂ ರಾಜರಲ್ಲ. ರಾಜಮನೆತನಗಳಿಗೆ ಸಲ್ಲಬೇಕಾದ ಗೌರವವನ್ನು ನಾವು ಉಳಿಸಿಕೊಂಡಿಲ್ಲ. ಅಂದು ರಾಜಪ್ರಭುತ್ವವಿದ್ದಾಗಲೂ ಅವರು ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿ ನಡೆದುಕೊಂಡಿದ್ದರು. ಆದರೆ, ಇಂದು ಪ್ರಜಾಪ್ರಭುತ್ವದಲ್ಲಿರುವ ಕೆಲವರು ರಾಜರಂತೆ ಮೆರೆಯುತ್ತಿದ್ದಾರೆ” ಎಂದು ಸಿ.ಟಿ. ರವಿ ಟೀಕಿಸಿದರು.
ಸರ್ಕಾರದ ವತಿಯಿಂದ ಆಯೋಜಿಸುವ ದಸರಾ ಕಾರ್ಯಕ್ರಮಗಳಿಗೆ ತಾವು ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜಮನೆತನದ ಸಂಪ್ರದಾಯಗಳು ಹಾಗೂ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಮೈಸೂರು ಮಹಾರಾಜರು ತಮ್ಮ ಖಾಸಗಿ ವಿಮಾನವನ್ನು ದೇಶದ ಗೃಹ ಸಚಿವರ ಬಳಕೆಗೆ ನೀಡಿದ್ದರು ಎಂಬುದನ್ನು ಉಲ್ಲೇಖಿಸಿದ ಸಿ.ಟಿ. ರವಿ, ಮೈಸೂರು ರಾಜಮನೆತನವು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಗೌರವದಿಂದ ಸ್ಮರಿಸಬೇಕು. ರಾಜಮನೆತನಕ್ಕೆ ಇರುವ ವಿಶೇಷ ಗೌರವವನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಬಿಗ್ ನ್ಯೂಸ್
Puttur-ಪುತ್ತೂರು: ಕಾರು-ಆಕ್ಟಿವಾ ಡಿಕ್ಕಿ- ಸವಾರನಿಗೆ ಗಾಯ
ಪುತ್ತೂರು-ಸುಳ್ಯ ರಸ್ತೆಯ ಕಾವು ಸಮೀಪ ಅ.27ರಂದು ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿ, ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ನಡೆದಿದೆ. ಡಿಕ್ಕಿಯ ಪರಿಣಾಮ ಆಕ್ಟಿವಾ ಸವಾರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರು: ಪುತ್ತೂರು-ಸುಳ್ಯ ರಸ್ತೆಯ ಕಾವು ಸಮೀಪ ಅ.27ರಂದು ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿ, ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ನಡೆದಿದೆ.
ಪುತ್ತೂರು ಕಡೆಯಿಂದ ಸುಳ್ಯಕ್ಕೆ ತೆರಳುತ್ತಿದ್ದ ಕಾರು ಹಾಗೂ ಆಕ್ಟಿವಾ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಆಕ್ಟಿವಾ ಸವಾರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
-
ಸ್ಥಳೀಯ12 hours agoKumbale-ಕುಂಬಳೆ: ಚೆಂಡು ಹೆಕ್ಕಲು ಪೊದೆಯೊಳಗೆ ಕೈ ಹಾಕಿದ ವಿದ್ಯಾರ್ಥಿಗೆ ಹಾವು ಕಡಿತ
-
ಸ್ಥಳೀಯ10 hours agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಒತ್ತಡ..! ‘ಇದೊಂದು ಕಟ್ಟುಕತೆ’ ಆರೋಪ ತಳ್ಳಿಹಾಕಿದ ಗಿರೀಶ್ ಮಟ್ಟಣ್ಣವರ್
-
ಸ್ಥಳೀಯ10 hours agoSIT notice-ಸೌಜನ್ಯ ಪ್ರಕರಣದ ತನಿಖೆ ಚುರುಕು: ಹಿಂದಿನ ತನಿಖೆಯ ಭಾಗವಾಗಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ಐಟಿ ನೋಟಿಸ್
-
ಅಪರಾಧ14 hours agoVitla-ವಿಟ್ಲ: ಬಸ್ಸಿನಲ್ಲಿ ಮಹಿಳೆಯ ಬ್ಯಾಗಿನಿಂದ 64 ಗ್ರಾಂ ಚಿನ್ನಾಭರಣ, ನಗದು ಕಳವು
-
ನಿಧನ ವಾರ್ತೆ5 hours agoVitla-ವಿಟ್ಲ: ಒಕ್ಕೆತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ನಿಧನ
-
ಮಂಗಳೂರು8 hours agoBlack pepper-ಕಾಳುಮೆಣಸಿಗೆ ಭರ್ಜರಿ ಬೇಡಿಕೆ: ಕೆ.ಜಿ.ಗೆ ₹760ರ ಗಡಿ ದಾಟಿದ ಧಾರಣೆ; ₹800ರ ನಿರೀಕ್ಷೆ! ಬಳ್ಳಿ ಮಾರಾಟದ ದಂಧೆಯ ಬಗ್ಗೆ ರೈತರು ಎಚ್ಚರ ವಹಿಸುವ ಅಗತ್ಯ
-
ಬಿಗ್ ನ್ಯೂಸ್13 hours agoSupraja Rao-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಪುತ್ತೂರಿನ ಸುಪ್ರಜಾ ರಾವ್ ಆಯ್ಕೆ
-
ಮೈಸೂರು11 hours agoMysuru-ಮೈಸೂರು ದಸರಾ ವಿವಾದ: ಪ್ರಮೋದಾದೇವಿ ಒಡೆಯರ್ಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು


















