ವಿದೇಶ
Ship crashes-ಅಮೇರಿಕ ಖ್ಯಾತ ಬ್ರಿಡ್ಜ್ ಗೆ ಹಡಗು ಡಿಕ್ಕಿ : 6 ಮಂದಿ ದುರ್ಮರಣ – ಹಡಗಿನಲ್ಲಿದ್ದ ಎಲ್ಲಾ 22 ಭಾರತೀಯ ಸಿಬ್ಬಂದಿ ಸುರಕ್ಷಿತ
ವಾಷಿಂಗ್ಟನ್: ಅಮೆರಿಕದ ಬಾಲ್ಟಿಮೋರ್‌ನಲ್ಲಿ ಮಂಗಳವಾರ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ಗೆ ಹಡಗು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅವಘಡದಲ್ಲಿ ಆರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹಡಗು ಡಿಕ್ಕಿ ಹೊಡೆದ ರಭಸಕ್ಕೆ ಸೇತುವೆ ಕುಸಿದು ನೀರುಪಾಲಾಗಿದೆ. ಕಾಣೆಯಾದ ಜನರು ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ತೀರ್ಮಾನಿಸಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.
ಕಂಟೇನರ್ ಹಡಗು ಡಾಲಿಯನ್ನು ಸಂಪೂರ್ಣವಾಗಿ ಭಾರತದ ಸಿಬ್ಬಂದಿ ನಿರ್ವಹಣೆ ಮಾಡುತ್ತಿದ್ದರು. ಹಡಗಿನ ಮೇಲೆ ನಿಯಂತ್ರಣ ತಪ್ಪಿದ್ದರಿಂದ ಅದು ಸೇತುವೆಗೆ ಅಪ್ಪಳಿಸಿದೆ. ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿ ಯಾವುದೇ ಹಾನಿಯಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದ ಆರು ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಅವರು ಮಧ್ಯರಾತ್ರಿ ನಿರತರಾಗಿದ್ದರು. ಆಗ ಈ ಅಪಘಾತ ಸಂಭವಿಸಿದೆ.
“ನಾವು ಶೋಧ ಕಾರ್ಯ ನಡೆಸಿದ ಸಮಯ, ನಾವು ಮಾಡಿದ ನಿರಂತರ ಹುಡುಕಾಟ ಪ್ರಯತ್ನ, ನೀರಿನ ತಾಪಮಾನದ ಆಧಾರದಲ್ಲಿ, ಈ ಯಾವ ವ್ಯಕ್ತಿಗಳನ್ನು ಈಗಲೂ ನಾವು ಜೀವಂತವಾಗಿ ಪತ್ತೆ ಮಾಡಬಹುದು ಎಂಬ ನಂಬಿಕೆ ನಮ್ಮಲ್ಲಿ ಉಳಿದಿಲ್ಲ” ಎಂದು ಅಮೆರಿಕ ಕರಾವಳಿ ಕಾವಲು ಪಡೆಯ ರಿಯರ್ ಅಡ್ಮಿರಲ್ ಶಾನೋನ್ ಗಿಲ್ರೀತ್ ತಿಳಿಸಿದ್ದಾರೆ.
ಪ್ರಸ್ತುತ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸುತ್ತಿರುವುದಾಗಿ ತಿಳಿಸಿರುವ ಪೊಲೀಸರು, ತಾಪಮಾನ ಹಾಗೂ ನೀರಿನ ತರಂಗಗಳ ರಭಸದ ಕಾರಣದಿಂದ ಮುಳುಗುತಜ್ಞರು ನೀರಿನ ಅಡಿಯಲ್ಲಿ ಹೆಚ್ಚು ಸಮಯ ಇರುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ನೆರವಾದ ಮೇ ಡೇ ಕರೆ
ಮಂಗಳವಾರ ಮಧ್ಯರಾತ್ರಿ ವೇಳೆ ಭಾರತದ ಸಿಬ್ಬಂದಿ ನಿರ್ವಹಿಸುತ್ತಿದ್ದ ಹಡಗು, 1977ರಲ್ಲಿ ನಿರ್ಮಾಣವಾಗಿದ್ದ ಸೇತುವೆ ಬಳಿ ಬಂದಾಗ ನಿಯಂತ್ರಣ ಕಳೆದುಕೊಂಡಿತ್ತು. ಇದರಿಂದ ಅದರ ದಿಕ್ಕನ್ನು ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ. ಅವಘಡಕ್ಕೂ ಮುನ್ನ ಹಡಗು ಮೇ ಡೇ ಸಿಗ್ನಲ್ (ಅವಘಡದ ಎಚ್ಚರಿಕೆ) ಮೊಳಗಿಸಿತ್ತು. ಹಡಗು ಮುಂದೆ ಸಾಗದಂತೆ ತಡೆಯುವ ಕೊನೆಯ ಪ್ರಯತ್ನವಾಗಿ ಲಂಗರುಗಳನ್ನು ಕೆಳಕ್ಕೆ ಹಾಕಲಾಗಿತ್ತು.
ಸಿಬ್ಬಂದಿ ಹೊರಡಿಸಿದ ಎಚ್ಚರಿಕೆ ಕರೆಯು ಬಹಳ ನಿರ್ಣಾಯಕವಾಗಿತ್ತು. ಇದರಿಂದಾಗಿ ಸೇತುವೆ ಮೇಲೆ ವಾಹನಗಳು ಚಲಿಸದಂತೆ ತಡೆಯಲು ಸೇತುವೆ ಅಧಿಕಾರಿಗಳಿಗೆ ನೆರವಾಗಿತ್ತು. ಹಡಗು ಸೇತುವೆಯ ಸ್ತಂಭಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಲವು ವಾಹನಗಳು ಹಾಗೂ 20 ಜನರು ಪಟಾಪ್‌ಸ್ಕೋ ನದಿಗೆ ಬಿದ್ದಿದ್ದರು.
“ಮೇ ಡೇ ಹಾಗೂ ಸೇತುವೆ ಉರುಳಿದ ನಡುವೆ ವಾಹನ ಸಂಚಾರವನ್ನು ತಡೆಯುವುದು ನಮ್ಮ ಅಧಿಕಾರಿಗಳಿಗೆ ಸಾಧ್ಯವಾಗಿತ್ತು. ಈ ಜನರು ಹೀರೋಗಳು. ಅವರು ಕಳೆದ ರಾತ್ರಿ ಅನೇಕ ಜೀವಗಳನ್ನು ಉಳಿಸಿದ್ದಾರೆ” ಎಂದು ಮೇರಿಲ್ಯಾಂಡ್ ಗವರ್ನರ್ ವೆಸ್ ಮೂರೆ ಅವರು ಭಾರತೀಯ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
ಮೂರನೇ ಮಹಾಯುದ್ಧ ಎಂಬ ವದಂತಿ
ಈ ಅಪಘಾತವು ಅಮೆರಿಕದ ಮೇಲಿನ ಸೈಬರ್ ದಾಳಿ ಮತ್ತು ಮೂರನೇ ವಿಶ್ವ ಯುದ್ಧದ ಆರಂಭ ಎಂಬಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿಸಲಾಗಿತ್ತು. ಆದರೆ ಈ ಅಪಘಾತದ ಹಿಂದೆ ಯಾವುದೇ ಭಯೋತ್ಪಾದನಾ ಸಂಚು ಇರುವ ಸಾಧ್ಯತೆಯನ್ನು ಎಫ್‌ಬಿಐ ಹಾಗೂ ಅಮೆರಿಕದ ಇತರೆ ಸಂಸ್ಥೆಗಳು ನಿರಾಕರಿಸಿವೆ.
ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಆದರೆ ದೋಣಿಗಳ ಮೂಲಕ ಗಸ್ತು ತಿರುಗುವುದು ಮುಂದುವರಿಯಲಿದೆ. ಮುಂದಿನ ಸೂಚನೆಯವರೆಗೂ ಬಂದರನ್ನು ಮುಚ್ಚಲಾಗಿದೆ. ಈ ಸೇತುವೆಯು ಮೇರಿಲ್ಯಾಂಡ್‌ಗೆ ಕೈಗಾರಿಕಾ ಪ್ರದೇಶಕ್ಕೆ ಬಹಳ ಮುಖ್ಯವಾಗಿ ಸಂಪರ್ಕ ಭಾಗವಾಗಿತ್ತು. ಇದರ ಕುಸಿತದಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹಾಗೆಯೇ ಸೇತುವೆ ಅವಶೇಷಗಳಿಂದಾಗಿ ಇತರೆ ಹಡಗುಗಳು ಸಹ ಸಂಚರಿಸುವುದು ಕಷ್ಟವಾಗಲಿದೆ. ಮೇರಿಲ್ಯಾಂಡ್ ಗವರ್ನರ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಹಡಗಿನಿಂದ ಇಂಧನ ಸೋರಿಕೆಯಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಬಿಗ್ ನ್ಯೂಸ್
Green card-ಇನ್ಫೋಸಿಸ್, ಟಿಸಿಎಸ್ ಸೇರಿ 8 ಐಟಿ ಕಂಪನಿಗಳಿಗೆ ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ
ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಎಚ್‌ಸಿಎಲ್ ಸೇರಿದಂತೆ ಎಂಟು ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಅಮೆರಿಕ ಅಮಾನತುಗೊಳಿಸಿದೆ ಎಂಬ ವರದಿ ಹೊರಬಿದ್ದಿದೆ.
ವಾಷಿಂಗ್ಟನ್: ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಎಚ್‌ಸಿಎಲ್ ಸೇರಿದಂತೆ ಎಂಟು ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಅಮೆರಿಕ ಅಮಾನತುಗೊಳಿಸಿದೆ ಎಂಬ ವರದಿ ಹೊರಬಿದ್ದಿದೆ. ಈ ಕ್ರಮವು ಸಂಬಂಧಿತ ಕಂಪನಿಗಳ ಮೂಲಕ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ ವಿದೇಶಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದಾಗಿದೆ.
ಅಮೆರಿಕದ ಕಾರ್ಮಿಕ ಸಚಿವ ಕೀತ್ ಸೋಂಡರ್ಲಿಂಗ್ ಹಾಗೂ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಈ ಕುರಿತು ಘೋಷಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್, ಕ್ಯಾಪ್‌ಜೆಮಿನಿ, ಮೈಕ್ರೋಸಾಫ್ಟ್ ಮತ್ತು ಅಡೋಬ್ ಕಂಪನಿಗಳಿಗೆ ಸಂಬಂಧಿಸಿದ ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಈ ಕಂಪನಿಗಳಿಗೆ ಸಂಬಂಧಿಸಿದ ಹೊಸ ಅರ್ಜಿಗಳು ಹಾಗೂ ಬಾಕಿ ಉಳಿದಿರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಅಥವಾ ಪ್ರಕ್ರಿಯೆಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಸೋಂಡರ್ಲಿಂಗ್ ಅವರ ಹೇಳಿಕೆಯ ಪ್ರಕಾರ, 2009ರಿಂದ ಈ ಕಂಪನಿಗಳು ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗಾಗಿ ಮನವಿ ಸಲ್ಲಿಸಿವೆ. ಈ ಪೈಕಿ 2.3 ಲಕ್ಷಕ್ಕೂ ಹೆಚ್ಚು ಎಚ್-1ಬಿ ವೀಸಾ ಅನುಮೋದನೆಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳನ್ನು ಪಡೆದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬಿಗ್ ನ್ಯೂಸ್
Nepal-40 ದಿನಗಳ ಬಳಿಕ ನೇಪಾಳ ಪ್ರವಾಹದ ಶೋಧ ಕಾರ್ಯಾಚರಣೆ ಸ್ಥಗಿತ: 189 ಭಾರತೀಯರು ಸೇರಿ 5200 ಮಂದಿ ಇನ್ನೂ ನಾಪತ್ತೆ..!
ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.
ಕಠ್ಮಂಡು: ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ್ದ ಭೋಟೆಕೋಶಿ–ತ್ರಿಶೂಲಿ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು 40 ದಿನಗಳ ಬಳಿಕ ಸೋಮವಾರ ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹದಲ್ಲಿ 1,455 ಮಂದಿ ಮೃತಪಟ್ಟಿದ್ದು, ಇನ್ನೂ 5,285 ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ನೇಪಾಳ ಸರ್ಕಾರವು ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳತ್ತ ಗಮನ ಹರಿಸಲು ಮುಂದಾಗಿದೆ.
ನಾಪತ್ತೆಯಾಗಿರುವವರಲ್ಲಿ 189 ಮಂದಿ ಭಾರತೀಯರಾಗಿದ್ದಾರೆ. ಅಲ್ಲದೆ, ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ಮೂಲದ ನೂರಾರು ಮಂದಿ ಕೂಡ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ.
ಪ್ರಧಾನಿ ಬಾಲೇಂದ್ರ ಶಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿ ಸಭೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳು, ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಂಡಗಳ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ, ಮರುನಿರ್ಮಾಣ ಮತ್ತು ಪುನರ್ವಸತಿ ಕಾರ್ಯಕ್ರಮಗಳಿಗಾಗಿ 559 ಕೋಟಿ ನೇಪಾಳಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಮಂಡಳಿ ಶಿಫಾರಸು ಮಾಡಿದೆ. ಇನ್ನೂ ಮೌಲ್ಯಮಾಪನ ಪೂರ್ಣಗೊಳ್ಳದ ಯೋಜನೆಗಳಿಗೆ ಅಗತ್ಯವಿರುವ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.
ನೇಪಾಳ ಪ್ರವಾಸೋದ್ಯಮ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 36 ದೇಶಗಳ 606 ವಿದೇಶಿ ಪ್ರವಾಸಿಗರು ಇನ್ನೂ ನಾಪತ್ತೆಯಾಗಿದ್ದಾರೆ. ಇವರಲ್ಲಿ 189 ಭಾರತೀಯರು, 65 ಅಮೆರಿಕನ್ನರು, 55 ಮಲೇಷಿಯನ್ನರು, 54 ಉಕ್ರೇನಿಯನ್ನರು, 37 ಚೀನೀಯರು, ಆಸ್ಟ್ರೇಲಿಯಾ ಮತ್ತು ಲಾಟ್ವಿಯಾದ ತಲಾ 33 ಮಂದಿ, 32 ಬ್ರಿಟಿಷರು ಹಾಗೂ 30 ಕೆನಡಾ ಪ್ರಜೆಗಳು ಸೇರಿದ್ದಾರೆ.
ಇದರ ಜೊತೆಗೆ 188 ಮಂದಿ ನೇಪಾಳಿ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ತಿಳಿಸಿದೆ.
ಬಿಗ್ ನ್ಯೂಸ್
Singapore-ಜನನ ಪ್ರಮಾಣ ಹೆಚ್ಚಿಸಲು ಸಿಂಗಾಪುರ ಸರ್ಕಾರದ ವಿನೂತನ ಯೋಜನೆ; ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಆ್ಯಪ್
ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಎಂಬ ಡೇಟಿಂಗ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.
ಸಿಂಗಾಪುರ: ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸಿಂಗಾಪುರ ಸರ್ಕಾರ ವಿನೂತನ ಯೋಜನೆಗೆ ಮುಂದಾಗಿದೆ. ಸರ್ಕಾರಿ ನೌಕರರಿಗಾಗಿ ‘ಫಸ್ಟ್‌ಡೇಟ್’ ಎಂಬ ಡೇಟಿಂಗ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ.
ಈ ಆ್ಯಪ್‌ನಲ್ಲಿ 21ರಿಂದ 35 ವರ್ಷದೊಳಗಿನ ಸರ್ಕಾರಿ ನೌಕರರು ಪರಸ್ಪರ ಪರಿಚಯವಾಗಿ, ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಯುವಜನರು ಸಂಬಂಧ ಬೆಳೆಸಿಕೊಂಡು ಕುಟುಂಬ ಆರಂಭಿಸಲು ಹಾಗೂ ಮಕ್ಕಳನ್ನು ಹೊಂದಲು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ.
ಸಿಂಗಾಪುರದ ಸರ್ಕಾರಿ ತಂತ್ರಜ್ಞಾನ ಸಂಸ್ಥೆ ಗವ್‌ಟೆಕ್ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಆ್ಯಪ್ ಬಳಸುವವರು ತಮ್ಮ ಆಸಕ್ತಿಗಳು, ಅಭ್ಯಾಸಗಳು ಹಾಗೂ ವೈಯಕ್ತಿಕ ಆದ್ಯತೆಗಳಿಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕು. ಅದರ ಆಧಾರದ ಮೇಲೆ ಬಳಕೆದಾರರಿಗೆ ಸೂಕ್ತ ಸಂಗಾತಿಯನ್ನು ಆ್ಯಪ್ ಸೂಚಿಸುತ್ತದೆ.
ಸೂಚಿಸಲಾದ ವ್ಯಕ್ತಿಯೊಂದಿಗೆ ಸಂಪರ್ಕ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇಬ್ಬರೂ ಪರಸ್ಪರ ಒಪ್ಪಿಕೊಂಡ ಬಳಿಕವಷ್ಟೇ ಸಂಪರ್ಕ ವಿವರಗಳನ್ನು ಪಡೆಯಲು ಅವಕಾಶವಿರುತ್ತದೆ. ಹೊಂದಾಣಿಕೆ ಆಗದಿದ್ದರೆ ಮತ್ತೊಬ್ಬ ವ್ಯಕ್ತಿಯನ್ನು ಆ್ಯಪ್ ಸೂಚಿಸುತ್ತದೆ.


















