ಪುತ್ತೂರು
Sooryagayathri | ಅಂಬಿಕಾ ಅಂಗಳದಲ್ಲಿ ‘ಸೂರ್ಯಗಾಯತ್ರಿ’ ತಂಡದಿಂದ ಸಂಗೀತ ವೈಭವ – ಜನ ಮನಸೂರೆಗೊಂಡ ಹಾಡುಗಳು, ರಸಾಸ್ವಾದನೆಯಲ್ಲಿ ಮಿಂದೆದ್ದ ವೀಕ್ಷಕರು : ಹನುಮಾನ್ ಚಾಲೀಸಾ ಹಾಡಿಗೆ ಧ್ವನಿಗೂಡಿಸಿದ ಇಡಿಯ ಸಭೆ : ತಾಳ್ಮೆಯಿಂದ ಎಲ್ಲರೊಂದಿಗೂ ಸೆಲ್ಫಿಗೆ ನಿಂತ ಗಾಯಕಿ : ವ್ಯವಸ್ಥೆ ಬಗ್ಗೆ ಕೊಂಡಾಡಿದ ಸೂರ್ಯಗಾಯತ್ರಿ
ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಕೇರಳದ ಖ್ಯಾತ ಯುವಗಾಯಕಿ ಸೂರ್ಯಗಾಯತ್ರಿ (Sooryagayathri) ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸಂಗೀತಾಸಕ್ತರು ಭಾಗಿಯಾಗಿ ರಸಾನುಭೂತಿಯನ್ನು ಆಸ್ವಾದಿಸಿದರು.
ಪುತ್ತೂರಿಗೆ ಮೊಟ್ಟಮೊದಲ ಬಾರಿಗೆ ಆಗಮಿಸಿದ್ದ ಸೂರ್ಯಗಾಯತ್ರಿ ಅಂಬಿಕಾ ಸಂಸ್ಥೆಯಲ್ಲಿ ತನ್ನ ಹಾಡನ್ನು ಆರಂಭಿಸುವಾಗ ತನ್ನ ತಾಯಿ ರಚಿಸಿದ ಗಣಪತಿ ಸ್ತುತಿ ‘ಅಂಬಿಕಾ ಹೃದಯಾನಂದ ಮಾತೃಭಿ ಪರಿಪೂಜಿತಂ’ ಹಾಡಿನೊಂದಿಗೆ ಆರಂಭಿಸಿ ನೆರೆದವರ ಮನಸೂರೆಗೈದರು.
ಸೂರ್ಯಗಾಯತ್ರಿಗೆ ಎಳೆಯ ವಯಸ್ಸಿನಲ್ಲಿಯೇ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದ ಹನುಮಾನ್ ಚಾಲೀಸಾ ಹಾಡನ್ನು ಹಾಡಿ ಇಡಿಯ ಸಭೆ ತನ್ನೊಂದಿಗೆ ಹಾಡುವಂತೆ ಪ್ರೇರೇಪಿಸಿದರು. ‘ಜಯ ಹನುಮಾನ್ ಜ್ಞಾನಗುಣ ಸಾಗರ’ ಸಾಲುಗಳು ಸೂರ್ಯಗಾಯತ್ರಿ ಕಂಠದಿಂದ ಹೊರಹೊಮ್ಮುತ್ತಿದ್ದಂತೆ ಇಡಿಯ ಸಭೆ ಕರತಾಡನದ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂರ್ಯಗಾಯತ್ರಿಯವರ ‘ರಾಮಚಂದ್ರ ಕೃಪಾಳು’ ಹಾಡಿನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಆ ಹಾಡನ್ನು ಅಂಬಿಕಾದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಪ್ರಸ್ತುತಪಡಿಸಿ ಕಾರ್ಯಕ್ರಮಕ್ಕೆ ಮೆರುಗನ್ನಿತ್ತರು. ಅಂತೆಯೇ ಜಗದೋದ್ಧಾರನ ಆಡಿಸಿದಳು ಯಶೋದೆ, ನೀಲಮೇಘ ಸುಂದರ ನಾರಾಯಣ ಗೋವಿಂದ, ಇವನೇ ರಾಮದಾಸ ಮೊದಲಾದ ಹಾಡುಗಳು ಅಪಾರ ಜನಮನ್ನಣೆಗೆ ಪಾತ್ರವಾದವು.

ಈ ಮಧ್ಯೆ ಜಾನಪದ ಗೀತೆ ‘ಸೋಜುಗಾರ ಸೂಜಿಮಲ್ಲಿಗೆ ಮಾದೇವ ನಿನ್ನಾ’ ಹಾಡಂತೂ ಇಡಿಯ ಸಭಾಂಗಣವನ್ನು ಆವರಿಸಿ ಸರ್ವರ ಖುಷಿಗೆ ಕಾರಣವಾಯಿತು. ಕೊನೆಯಲ್ಲಿ ‘ಭಾಗ್ಯದಾ ಲಕ್ಷ್ಮೀ ಬಾರಮ್ಮಾ’ ಹಾಡನ್ನು ಹಾಡಿ ತಮ್ಮ ಎರಡೂವರೆ ಗಂಟೆಗಳ ನಿರಂತರ ಹಾಡಿಗೆ ಮುಕ್ತಾಯ ನೀಡಿದರು.

ರಾಮತಾರಕ ಜಪಮಹಾಯಜ್ಞದ ಸಮಾರೋಪ ಹಾಡು:ಅಯೋಧ್ಯೆ ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ನವೆಂಬರ್ 2, 2023ರಿಂದ ತೊಡಗಿದಂತೆ ರಾಮತಾರಕ ಜಪಮಹಾಯಜ್ಞವನ್ನು ಆರಂಭಿಸಲಾಗಿತ್ತು. ಆ ಪ್ರಕಾರ ವಿದ್ಯಾರ್ಥಿಗಳೆಲ್ಲ ಸೇರಿ ಇದುವರೆಗೆ ಸುಮಾರು ಎಪ್ಪತ್ತೊಂದು ಲಕ್ಷದಷ್ಟು ರಾಮಜಪವನ್ನು ಜಪಿಸಿದ್ದರು. ಅದರ ಸಮಾರೋಪದ ಧ್ವನಿಯಾಗಿ ಸೂರ್ಯಗಾಯತ್ರಿಯವರು ‘ಶ್ರೀ ರಾಮ ಜಯರಾಮ ಜಯಜಯ ರಾಮ’ ಸ್ತುತಿಯನ್ನು ಕಾರ್ಯಕ್ರಮದ ಮಧ್ಯೆ ಹಾಡಿ ಜನಸಾಗರ ಭಕ್ತಿಭಾವದಲ್ಲಿ ತೇಲುವಂತೆ ಮಾಡಿದ್ದು ಎಲ್ಲರ ಅಭಿನಂದನೆಗೆ ಪಾತ್ರವಾಯಿತು.

ಕನ್ನಡ ಹಾಡುಗಳು:ತನಗೆ ಕನ್ನಡ ಬರದಿದ್ದರೂ ಕನ್ನಡ ಹಾಡುಗಳನ್ನೇ ಹಾಡಿದ್ದು ಎಲ್ಲರಿಗೂ ಸಂತಸ ತಂದಿತು. ಎಲ್ಲೂ ತನಗೆ ಕನ್ನಡ ಬರುವುದಿಲ್ಲ ಎಂಬುದನ್ನು ತೋರ್ಪಡಿಸದೆ ಅಚ್ಚ ಕನ್ನಡತಿಯಂತೆ ಸೂರ್ಯಗಾಯತ್ರಿ ಹಾಡುಗಳನ್ನು ಪ್ರಸ್ತುತಪಡಿಸಿದರು.
ಸೂರ್ಯಗಾಯತ್ರಿಯವರ ಜತೆ ವಯಲಿನ್ನಲ್ಲಿ ಗಣರಾಜ್ ಕಾರ್ಲೆ, ಮೃದಂಗದಲ್ಲಿ ಸೂರ್ಯಗಾಯತ್ರಿ ತಂದೆ ಪಿ.ವಿ.ಅನಿಲ್ ಕುಮಾರ್, ತಬಲದಲ್ಲಿ ಪ್ರಶಾಂತ್ ಶಂಕರ್ ಹಾಗೂ ರಿದಂಪ್ಯಾಡ್ನಲ್ಲಿ ಶೈಲೇಶ್ ಮರಾರ್ ಅತ್ಯುತ್ಕೃಷ್ಟ ರೀತಿಯಲ್ಲಿ ಸಹಕರಿಸಿದರು.
ಸನ್ಮಾನ:ಎಳೆಯ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆಗೈದ ಸೂರ್ಯಗಾಯತ್ರಿಯವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂಗೀತ ವಿದ್ವಾಂಸ ವಿದ್ವಾನ್ ಕಾಂಚನ ಈಶ್ವರ ಭಟ್ಟರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಅಂತೆಯೇ ಸೂರ್ಯಗಾಯತ್ರಿ ತಾಯಿ ಪಿ.ಕೆ.ದಿವ್ಯಾ ಅವರನ್ನು ಹಾಗೂ ಎಲ್ಲ ಸಹಕಲಾವಿದರನ್ನು ಗೌರವಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮ: ಸೂರ್ಯಗಾಯತ್ರಿ ಅವರ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ ಸಂಸ್ಕೃತಿ, ಸಂಸ್ಕಾರಗಳ ಸಹಿತವಾದ ಶಿಕ್ಷಣಕ್ಕೆ ನಮ್ಮ ಆದ್ಯತೆ. ಸೂರ್ಯಗಾಯತ್ರಿಯವರು ಎಳೆಯ ವಯಸ್ಸಿನಲ್ಲಿಯೇ ಪ್ರಪಂಚದಾದ್ಯಂತ ಭಾರತೀಯ ಸಂಗೀತ ಕಲೆಯನ್ನು ಪಸರಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಭಾರತೀಯತೆಯನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಸೂರ್ಯಗಾಯತ್ರಿಯವರಿಂದ ಪ್ರೇರಣೆ ಪಡೆದುಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಆಡಳಿತ ಮಂಡಳಿ ಸದಸ್ಯರಾದ ಪುರಂದರ ಭಟ್, ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಬಿಂದು ಫ್ಯಾಕ್ಟರಿ ಮಾಲಕ ಸತ್ಯಶಂಕರ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕ ಬಲರಾಮ ಆಚಾರ್ಯ, ನಗರಸಭಾ ಸದಸ್ಯ ಜಗನ್ನಿವಾಸ ರಾವ್, ವಿಶ್ರಾಂತ ಪ್ರಾಚಾರ್ಯ ವಿ.ಬಿ.ಅರ್ತಿಕಜೆ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸತೀಶ್ ಇರ್ದೆ ಹಾಗೂ ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು. ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಮಹೇಶ್ ಕಜೆ ವಂದಿಸಿದರು. ಸೂರ್ಯಗಾಯತ್ರಿ ಅವರಿಂದ ಸುಂದರ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕಾಗಿ ದಶಾಂಬಿಕೋತ್ಸವ ಸಮಿತಿ ವತಿಯಿಂದ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ಎಸ್ ನಟ್ಟೋಜ ದಂಪತಿಯನ್ನು ಗೌರವಿಸಲಾಯಿತು.
ಸೆಲ್ಫಿಗೆ ಮುಗಿಬಿದ್ದ ಜನ: ಸೂರ್ಯಗಾಯತ್ರಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅನೇಕ ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು ಅವರೊಂದಿಗಿನ ಭಾವಚಿತ್ರಕ್ಕಾಗಿ ಮುಗಿಬಿದ್ದರು. ಪ್ರತಿಯೊಬ್ಬರೂ ಫೋಟೋ ತೆಗೆಸಿಕೊಂಡದ್ದಲ್ಲದೆ ಸೆಲ್ಫಿಯನ್ನೂ ಪಡೆದುಕೊಂಡರು. ಎಷ್ಟೇ ತಡವಾದರೂ ಪ್ರತಿಯೊಬ್ಬರ ಜತೆಗೂ ಫೋಟೋಕ್ಕಾಗಿ ನಿಂತ ಸೂರ್ಯಗಾಯತ್ರಿಯವರ ಸರಳ ನಡೆ ಶ್ಲಾಘನೆಗೆ ಪಾತ್ರವಾಯಿತು.
ಅಚ್ಚುಕಟ್ಟಾದ ವ್ಯವಸ್ಥೆ: ಸೂರ್ಯಗಾಯತ್ರಿ ಕಾರ್ಯಕ್ರಮಕ್ಕಾಗಿ ಅಂಬಿಕಾ ಕ್ಯಾಂಪಸ್ ನಲ್ಲಿ ಅತ್ಯಂತ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು. ಪಾರ್ಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ, ಪಾನೀಯ ವ್ಯವಸ್ಥೆ, ಸೂಕ್ತ ಬೆಳಕು ಹಾಗೂ ಧ್ವನಿವರ್ಧಕದ ವ್ಯವಸ್ಥೆ, ಎಲ್ಇಡಿ ವ್ಯವಸ್ಥೆ ಕಾರ್ಯಕ್ರಮವನ್ನು ಹೆಚ್ಚು ಆಪ್ತವಾಗುವಂತೆ ಮಾಡಿತು. ಭಾಷಣಕ್ಕೆ ಆದ್ಯತೆ ಕೊಡದೆ ಸಂಗೀತ ಕಾರ್ಯಕ್ರಮಕ್ಕೆ ಬಹುತೇಕ ಎಲ್ಲ ಸಮಯವನ್ನೂ ಮೀಸಲಿರಿಸಿದ್ದು ಪ್ರೇಕ್ಷಕರ ಮನ್ನಣೆಗೆ ಪಾತ್ರವಾಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಹಾಗೆಯೇ ಎಲ್ಲೂ ಬೊಬ್ಬೆ, ಕಿರುಚಾಟ ನಡೆಸದೆ ಕರತಾಡನದ ಮುಖಾಂತರವಷ್ಟೇ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದ ಅಂಬಿಕಾ ವಿದ್ಯಾರ್ಥಿಗಳ ಶಿಸ್ತು ಕೂಡ ಗಮನ ಸೆಳೆಯಿತು.
ಫೇಸ್ಬುಕ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಸೂರ್ಯಗಾಯತ್ರಿ: ಕಾರ್ಯಕ್ರಮದ ಮರುದಿನ ಗಾಯಕಿ ಸೂರ್ಯಗಾಯತ್ರಿ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಚ್ಚುಕಟ್ಟಾದ ವ್ಯವಸ್ಥೆ ಹಾಗೂ ಶಾಲೆಯ ಬಗ್ಗೆ ತನ್ನ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್ ನ್ಯೂಸ್
Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.
ಅಪರಾಧ
Puttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
ಪಿಕಪ್ ವಾಹನದಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಅಗತ್ಯ ಪರವಾನಿಗೆ ಇಲ್ಲದೆ ಕೇರಳದ ಕಡೆಗೆ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸ್ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಆರ್ಯಾಪು ನಿವಾಸಿ ಶಿವಪ್ರಸಾದ್ಗೆ ಸೇರಿದ ದೇವಸ್ಯದಲ್ಲಿರುವ ಮನೆಯನ್ನು ಪೊಲೀಸರು ಮಹಜರು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು: ಪಿಕಪ್ ವಾಹನದಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಅಗತ್ಯ ಪರವಾನಿಗೆ ಇಲ್ಲದೆ ಕೇರಳದ ಕಡೆಗೆ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸ್ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಆರ್ಯಾಪು ನಿವಾಸಿ ಶಿವಪ್ರಸಾದ್ಗೆ ಸೇರಿದ ದೇವಸ್ಯದಲ್ಲಿರುವ ಮನೆಯನ್ನು ಪೊಲೀಸರು ಮಹಜರು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ ಪೊಲೀಸ್ ಇಲಾಖೆ ಅದನ್ನು ಖಚಿತ ಪಡಿಸಿಲ್ಲ.
ಬಲ್ನಾಡಿನಲ್ಲಿ 11 ಜಾನುವಾರುಗಳ ರಕ್ಷಣೆ
ಕೇರಳದ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಷ್ಮಾ ಭಂಡಾರಿ ಅವರು ಸಿಬ್ಬಂದಿಯೊಂದಿಗೆ ಬಲ್ನಾಡು ಗ್ರಾಮದ ಬೆಳೆಯೂರುಕಟ್ಟೆ ಬಳಿ ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನದೊಳಗೆ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಪತ್ತೆಯಾಗಿತ್ತು. ಪೊಲೀಸರು ವಾಹನವನ್ನು ತಡೆದ ಸಂದರ್ಭದಲ್ಲಿ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದರು.
ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೆ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದ ಕಡೆಗೆ ಸಾಗಿಸಲಾಗುತ್ತಿತ್ತು ಎಂಬ ಆರೋಪದ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪರಾರಿಯಾಗಿದ್ದ ಇಬ್ಬರು ವಶಕ್ಕೆ
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಅಗತ್ಯ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಆರ್ಯಾಪು ನಿವಾಸಿ ಶಿವಪ್ರಸಾದ್ನನ್ನು ಬಂಧಿಸಿದ್ದರು. ಬಳಿಕ ಪರಾರಿಯಾಗಿದ್ದ ಪಿಕಪ್ ಚಾಲಕ ಹಾಗೂ ಮತ್ತೋರ್ವ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದರು.
ಇದೀಗ ಸರೋಳಿ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಹಸ್ಪರ್ ಅಲಿಯಾಸ್ ಅಮ್ಮಿ ಹಾಗೂ ಕದಿಲ ಗ್ರಾಮದ ಸತ್ತಿಕಲು ನಿವಾಸಿ ಅಬ್ಬಾಸ್ ಅವರ ಪುತ್ರ ಇಬ್ರಾಹಿಂ ಮಾಡಲಾ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಶಿವಪ್ರಸಾದ್ಗೆ ಸೇರಿದ ಆರ್ಯಾಪು ಗ್ರಾಮದ ದೇವಸ್ಯದಲ್ಲಿರುವ ಮನೆಯನ್ನು ಪೊಲೀಸರು ಮಹಜರು ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು ಸೀಜ್ ಮಾಡುವ ಅಧಿಕೃತ ಪ್ರಕ್ರಿಯೆ ಸಹಾಯಕ ಆಯುಕ್ತರ ಆದೇಶದ ಬಳಿಕ ನಡೆಯಲಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಶಿಕ್ಷಣ
Vivekananda-ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣ ದಲ್ಲಿ ನಡೆಯಿತು. ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಧನುಷ್ ಎಸ್, ಯಶಸ್ ಎಚ್ . ಸಿ ದ್ವಿತೀಯ ಪಿಯುಸಿ ಗಗನ್ ಕೆ.ಎನ್, ತೇಜಸ್ ಟಿ. ಆರ್, ಜಶ್ವಂತ್ ಗೌಡ, ಧನುಷ್ ಕೆ . ಎಚ್, ಆಕಾಶ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
-
ಮಂಗಳೂರು12 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಅಪರಾಧ15 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಸ್ಥಳೀಯ17 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಬಿಗ್ ನ್ಯೂಸ್17 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಬಿಗ್ ನ್ಯೂಸ್10 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಅಪರಾಧ10 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಮಂಗಳೂರು10 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ12 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!


















