Uncategorized
ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ – ಶಿಸ್ತು, ನಾಯಕತ್ವ ಗುಣ ಬೆಳೆಸಿಕೊಳ್ಳುವುದಕ್ಕೆ NSS ಸಹಕಾರಿ: ಸತ್ಯಜಿತ್ ಉಪಾಧ್ಯಾಯ
ಪುತ್ತೂರು: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆ ಮಾಡಲು ಕಾಲೇಜು ಹಂತದಲ್ಲಿ ವಿವಿಧ ಜನೆಗಳಿರುವುದನ್ನು ಗಮನಿಸಬಹುದು. ಅಂತಹ ಆಲೋಚನೆಯೊಂದಿಗೆ ರೂಪುಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಲ್ಲಿ ಶಿಸ್ತು, ಸ್ವಚ್ಛತೆ, ನಾಯಕತ್ವ ಗುಣ, ಸಮಯಪಾಲನೆ ಹಾಗೂ ಸಾಮಾಜಿಕ ಕಳಕಳಿಯನ್ನು ತುಂಬುವ ಕಾರ್ಯವನ್ನು ಮಾಡುತ್ತದೆ. ಶ್ರಮದಾನ, ವಿಶೇಷ ಶಿಬಿರಗಳಲ್ಲಿ ನಡೆಸುವ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ. ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ೨೦೨೨-೨೩ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯವೇ ನನಗಲ್ಲ, ನಿನಗೆ ಎಂಬುದಾಗಿದೆ. ಅಂದರೆ ಸಮಾಜಕ್ಕಾಗಿ ವಿದ್ಯಾರ್ಥಿಗಳು ನೀಡುವ ಕೊಡುಗೆಯಾಗಿದೆ. ಸೇವೆಯೊಂದಿಗೆ ಸ್ವ- ಬೆಳವಣಿಗೆ ಹೊಂದುವುದು ಇದರ ಉದ್ದೇಶವಾಗಿದೆ. ಶಿಬಿರ ಜ್ಯೋತಿಯಂತಹಾ ಕಾರ್ಯಕ್ರಮಗಳು ರಾಷ್ಟçಕ್ಕೆ ವ್ಯಕ್ತಿ ನೀಡಬೇಕಾದ ಕೊಡುಗೆಯ ಮಹತ್ವವನ್ನು ಸಾರುತ್ತದೆ ಎಂದರು.
ಪಠ್ಯೇತರ ವಿಚಾರಗಳಲ್ಲಿ ನಾವು ಜ್ಞಾನ ಪಡೆಯುವಲ್ಲಿ ಎನ್.ಎಸ್.ಎಸ್. ಸಹಕರಿಸುತ್ತದೆ. ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ವಿಚಾರಗಳನ್ನು ಸ್ವಯಂ ಸೇವಕರು ಅಳವಡಿಸಿಕೊಳ್ಳುವುದು ಅವಶ್ಯಕ. ವಿದ್ಯಾರ್ಥಿ ಜೀವನದಲ್ಲಿ ಲಭಿಸುವ ಇಂತಹ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಲು ಸಾಧ್ಯ. ಎನ್. ಎಸ್ ಎಸ್ ಮೂಲಕ ಸೇವೆಯೊಂದಿಗೆ ಸ್ವ- ಬೆಳವಣಿಗೆ ಹೊಂದಬಹುದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ರಾಷ್ಟಿçÃಯ ಸೇವಾ ಯೋಜನೆ ವರ್ಷಪೂರ್ತಿ ನಿರಂತರವಾಗಿ ನಡೆಯುವ ಚಟುವಟಿಕೆ. ಶಿಕ್ಷಣ ಸದ್ವಿನಿಯೋಗವಾಗಬೇಕಾದರೆ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು ಅಗತ್ಯ. ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ಕೆ ಎನ್‌ಎಸ್‌ಎಸ್ ಸಹಕಾರಿ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ನಾಯಕರಾದ ದ್ವಿತೀಯ ಪದವಿ ವಿದ್ಯಾರ್ಥಿಗಳಾದ ನವನೀತ್, ದೀಕ್ಷಾ, ಶ್ರೀರಾಮ, ಲೇಖಾ ಹಾಗೂ ಕಾಲೇಜಿನ ಸ್ವಯಂಸೇವಕರು ಪ್ರಮಾಣ ವಚನ ಸ್ವೀಕರಿಸಿದರು. ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿನಿಯರಾದ ಶರಣ್ಯ, ದೀಪಾ ಪ್ರಾರ್ಥಿಸಿದರು. ಕಾಲೇಜಿನ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಹರ್ಷಿತ್ ಪಿಂಡಿವನ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ನವನೀತ್ ವಂದಿಸಿದರು. ವಿದ್ಯಾರ್ಥಿನಿ ಮೇಘಾ ಕಿರಿಮಂಜೇಶ್ವರ ನಿರೂಪಿಸಿದರು.
Uncategorized
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ

ಪುತ್ತೂರು: ಪುತ್ತೂರು ಮುಖ್ಯರಸ್ತೆಯ ಸೋಜಾ ಅಲ್ಯೂಮಿನಿಯಂ ಸಂಸ್ಥೆಯ ಎದುರಿನ ವಾಸ್ತವ್ಯವಿಲ್ಲದ ಹಳೆಯ ಕಟ್ಟಡವೊಂದರಲ್ಲಿ ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿರ್ದೇಶಕ ರವಿಕುಮಾರ್ ರೈ ಕೆದಂಬಾಡಿ ಮಠ ಅವರು ಗಮನಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಅವರು, ಪುತ್ತೂರು ನಗರ ಪೊಲೀಸ್ ಠಾಣೆಗೂ ತೆರಳಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸಮಯಕ್ಕೆ ಸರಿಯಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಕಿ ವ್ಯಾಪಕವಾಗಿ ಹರಡುವುದನ್ನು ತಡೆಯಲು ಸಾಧ್ಯವಾಯಿತು.
Uncategorized
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!

ಬೆಳ್ತಂಗಡಿ: ಸಾಮಾನ್ಯವಾಗಿ ಹಳದಿ ಅಥವಾ ಕಂದು ಬಣ್ಣದ ಮೈಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿರುವ ಚಿರತೆಗಳ ನಡುವೆ, ಸಂಪೂರ್ಣ ಕಪ್ಪು ಬಣ್ಣದಿಂದ ಗಮನ ಸೆಳೆಯುವ ಅಪರೂಪದ ಕರಿ ಚಿರತೆಯೊಂದು ಶಿರ್ಲಾಲು ಗ್ರಾಮದ ಮಣಿಲದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸುಮಾರು ಎರಡು ವರ್ಷ ಪ್ರಾಯದ ಗಂಡು ಚಿರತೆ ಅ. 10ರಂದು ಸೆರೆಸಿಕ್ಕಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಮಣಿಲ ಪರಿಸರದಲ್ಲಿ ಚಿರತೆಯ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವೇಣೂರು ವಲಯದ ಸಿಬ್ಬಂದಿ ಕೆಲವು ದಿನಗಳ ಹಿಂದೆ ಪದ್ಮನಾಭ ಅವರ ಮನೆಯ ಸಮೀಪ ಬೋನು ಇರಿಸಿದ್ದರು. ಶನಿವಾರ ಈ ಬೋನಿಗೆ ಕರಿ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು.
ಚಿರತೆಯು ಆರೋಗ್ಯವಾಗಿದ್ದು, ಅರಣ್ಯ ಇಲಾಖೆಯ ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಸುರಕ್ಷಿತವಾಗಿ ಸಂರಕ್ಷಿತಾರಣ್ಯಕ್ಕೆ ಬಿಡಲಾಗುವುದು ಎಂದು ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ತಿಳಿಸಿದ್ದಾರೆ.
ಅಪರೂಪದ ಕರಿ ಚಿರತೆ; ಕುತೂಹಲಕ್ಕೆ ಕಾರಣ
ಸಾಮಾನ್ಯ ಚಿರತೆಗಳ ಮೈಮೇಲೆ ಹಳದಿ ಅಥವಾ ಕಂದು ಬಣ್ಣದ ಹಿನ್ನೆಲೆಯ ಮೇಲೆ ಕಪ್ಪು ಚುಕ್ಕೆಗಳಿರುತ್ತವೆ. ಆದರೆ, ಕರಿ ಚಿರತೆಗಳ ಮೈಮೇಲೆ ಕಪ್ಪು ಬಣ್ಣವೇ ಪ್ರಧಾನವಾಗಿದ್ದು, ಬೆಳಕಿನ ಕೋನಕ್ಕೆ ಅನುಗುಣವಾಗಿ ಅವುಗಳ ಮೈಮೇಲಿನ ಚುಕ್ಕೆಗಳು ಮಸುಕಾಗಿ ಗೋಚರಿಸುತ್ತವೆ. ದೇಹದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯ ಹೆಚ್ಚಾಗಿ ಉತ್ಪತ್ತಿಯಾಗುವುದರಿಂದ ಈ ಚಿರತೆಗಳು ಕಪ್ಪಾಗಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಮೆಲಾನಿಸ್ಟಿಕ್ ಚಿರತೆಗಳು ಎಂದು ಕರೆಯಲಾಗುತ್ತದೆ.
ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳು ಚಿರತೆ ಸೇರಿದಂತೆ ಹಲವು ವನ್ಯಜೀವಿಗಳ ಆವಾಸಸ್ಥಾನವಾಗಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆಗಳ ಓಡಾಟ ಹೊಸತಲ್ಲವಾದರೂ, ಕರಿ ಚಿರತೆ ಸೆರೆಯಾಗಿರುವುದು ವಿಶೇಷ ಗಮನ ಸೆಳೆದಿದೆ.
ಈ ಹಿಂದೆ ಶಿರ್ಲಾಲು ಪರಿಸರದಲ್ಲೇ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹಳದಿ ಬಣ್ಣದ ಚಿರತೆಯೊಂದು ಸೆರೆಯಾಗಿತ್ತು. ಇದೀಗ ಅಪರೂಪದ ಕರಿ ಚಿರತೆ ಸಿಕ್ಕಿರುವುದು ಸ್ಥಳೀಯರಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅಳದಂಗಡಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಗಸ್ತು ವನಪಾಲಕ ಮಂಜುನಾಥ್ ಬಿ.ಎಸ್., ಅರಣ್ಯ ವೀಕ್ಷಕರಾದ ವೆಂಕಪ್ಪ ನಾಯ್ಕ ಮತ್ತು ಪೂವಪ್ಪ ನಾಯ್ಕ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
Uncategorized
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ

ಪುತ್ತೂರು: ಮಳೆಯಿಂದಾಗಿ ಪುತ್ತೂರು–ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ, ದಾರಂದಕುಕ್ಕು ಸೇರಿದಂತೆ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಶಾಸಕ ಅಶೋಕ್ ರೈ ಅವರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ಸೂಚಿಸಿದ್ದಾರೆ.
ರಸ್ತೆಯ ಕೆಲವು ಭಾಗಗಳಲ್ಲಿ ಹೊಂಡಗಳು ಉಂಟಾಗಿರುವ ಹಿನ್ನೆಲೆಯಲ್ಲಿ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅವುಗಳನ್ನು ಮುಚ್ಚಬೇಕು. ರಸ್ತೆಗಳಲ್ಲಿ ಹೊಂಡಗಳಿರುವ ಕಡೆಗಳಲ್ಲಿ ತುರ್ತಾಗಿ ತೇಪೆ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಸೂಚಿಸಿದ್ದಾರೆ.
ರಸ್ತೆಯಲ್ಲಿನ ಹೊಂಡಗಳಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗುವ ಅಪಾಯವಿದ್ದು, ಅಪಘಾತಗಳ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಎಲ್ಲಿ ಹೊಂಡಗಳಿವೆಯೋ ಅವುಗಳನ್ನು ತಕ್ಷಣ ಮುಚ್ಚಿ, ಹಾನಿಗೊಳಗಾದ ಭಾಗಗಳಿಗೆ ತುರ್ತಾಗಿ ತೇಪೆ ಹಾಕುವಂತೆ ಶಾಸಕರು ನಿರ್ದೇಶನ ನೀಡಿದ್ದಾರೆ.


















