ಕ್ರೀಡೆ
ವನ್ ಡೇ ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರ ಟೀಮ್ ಇಂಡಿಯಾ ನಾಯಕ – ಫೈನಲ್ ಪಂದ್ಯದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು ?
ನಾನು ಈ ಮಾದರಿಯಿಂದ ನಿವೃತ್ತನಾಗಲಾರೆ. ಇಂತಹ ವದಂತಿಗಳು ಮತ್ತೆ ಹರಡದಿರಲೆಂದು ಈ ಮಾತನ್ನು ಹೇಳುತ್ತಿದ್ದೇನೆ. ಕೋಯಿ ಫ್ಯೂಚರ್ ಪ್ಲಾನ್ ನಹೀ ಹೋ, ಜೋ ಚಲ್ ರಹಾ ಹೇ ಚಲೇಗಾ(ಭವಿಷ್ಯದ ಬಗ್ಗೆ ಯಾವುದೇ ಯೋಜನೆಯಿಲ್ಲ. ಈಗ ಏನು ನಡೆಯುತ್ತಿದೆಯೇ ಅದೇ ಮುಂದುವರಿಯಲಿದೆ) ಎಂದು ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ ತಿಳಿಸಿದ್ದಾರೆ. ಈ ಮೂಲಕ ನಿವೃತ್ತಿಯ ಬಗೆಗಿನ ಎಲ್ಲಾ ವದಂತಿಗಳನ್ನು ಅಲ್ಲಗೆಳೆದಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಸವ್ಯಸಾಚಿ ರವೀಂದ್ರ ಜಡೇಜಾ 2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಅದೇ ರೀತಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಇವರಲ್ಲಿ ಯಾರಾದರೊಬ್ಬರು ಅಥವಾ ಮೂವರು ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಬಹುದೇ ಎಂಬ ಕುರಿತಂತೆ ಸಾಕಷ್ಟು ಚರ್ಚೆಗಳಾಗಿದ್ದವು. ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರಿಗೆ ಬಹುತೇಕ ಇದು ವಿದಾಯದ ಟೂರ್ನಿ ಎಂದೇ ಬಹುತೇಕ ಕ್ರಿಕಟ್ ಪಂಡಿತರ ಎಣಿಕೆಯಾಗಿತ್ತು. ಆದರೆ ರೋಹಿತ್ ಶರ್ಮಾ ಅವರು ಈ ಎಲ್ಲಾ ವದಂತಿಗಳನ್ನು ಅಲ್ಲಗೆಳೆದಿದ್ದಾರೆ.
ನಾನು ಈ ಮಾದರಿಯಿಂದ ನಿವೃತ್ತನಾಗಲಾರೆ. ಇಂತಹ ವದಂತಿಗಳು ಮತ್ತೆ ಹರಡದಿರಲೆಂದು ಈ ಮಾತನ್ನು ಹೇಳುತ್ತಿದ್ದೇನೆ. ಕೋಯಿ ಫ್ಯೂಚರ್ ಪ್ಲಾನ್ ನಹೀ ಹೋ, ಜೋ ಚಲ್ ರಹಾ ಹೇ ಚಲೇಗಾ(ಭವಿಷ್ಯದ ಬಗ್ಗೆ ಯಾವುದೇ ಯೋಜನೆಯಿಲ್ಲ. ಈಗ ಏನು ನಡೆಯುತ್ತಿದೆಯೇ ಅದೇ ಮುಂದುವರಿಯಲಿದೆ) ಎಂದು ಪಂದ್ಯದ ಬಳಿಕ ಮಾತನಾಡಿದ ಅವರು ತಿಳಿಸಿದ್ದಾರೆ. ಈ ಮೂಲಕ ನಿವೃತ್ತಿಯ ಬಗೆಗಿನ ಎಲ್ಲಾ ವದಂತಿಗಳನ್ನು ಅಲ್ಲಗೆಳೆದಿದ್ದಾರೆ.
ಬಹಳಷ್ಟು ಕ್ರಿಕೆಟ್ ಆಡಿದವರಲ್ಲಿ ಮತ್ತಷ್ಟು ಕ್ರಿಕೆಟ್ ನ ಹಸಿವು ಇರುತ್ತದೆ. ಅದು ಕಿರಿಯ ಆಟಗಾರರ ಮೇಲೆ ಸತ್ಪರಿಣಾಮ ಬೀರುತ್ತದೆ. ನಮ್ಮಲ್ಲಿ ಆರು ಮಂದಿ ಶ್ರೇಷ್ಠ ಆಟಗಾರರಿದ್ದಾರೆ. ಇದರಿಂದಾಗಿ ನಾವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುತ್ತಿದೆ.
ಗೆಲುವಿನ ರೂವಾರಿ
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 83 ಎಸೆತಗಳಿಂದ 76 ರನ್ ಬಾರಿಸಿ ಗೆಲುವಿನ ರೂವಾರಿಯಾದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು. ಅವರು ಈ ಟೂರ್ನಿಯಲ್ಲಿ ಒಟ್ಟು 5 ಪಂದ್ಯಗಳಿಂದ 36ರ ಸರಾಸರಿಯಲ್ಲಿ 180 ರನ್ ಗಳಿಸಿದ್ದಾರೆ. ಈವರೆಗೆ ಆಡಿರುವ 9 ಐಸಿಸಿ ಟೂರ್ನಿಯ ಫೈನಲ್ ಗಳಲ್ಲಿ ರೋಹಿತ್ ಅವರು 11 ಇನ್ನಿಂಗ್ಸ್ ಗಳಲ್ಲಿ 32.20 ಸರಾಸರಿಯಲ್ಲಿ 322 ರನ್ ಗಳಿಸಿದ್ದಾರೆ. ಅದರಲ್ಲಿ ಭಾನುವಾರ ಗಳಿಸಿದ 76 ರನ್ ಗಳೇ ಅತ್ಯುತ್ತಮ ಪ್ರದರ್ಶನವಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಲ್ಲಿ ಅರ್ಧಶತಕ ಬಾರಿಸಿದ ನಾಯಕರ ಪಟ್ಟಿಗೆ ಕೂಡಾ ರೋಹಿತ್ ಸೇರ್ಪಡೆ ಆದರು. 2000ದ ಐಸಿಸಿ ನಾಕೌಟ್ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೌರವ್ ಗಂಗೂಲಿ ಅವರು ಬಾರಿಸಿದ 117 ರನ್ ನಾಯಕನೊಬ್ಬ ಗಳಿಸಿದ ಅತ್ಯಧಿಕ ರನ್ ಆಗಿದೆ. ಇನ್ನು 2002ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಅವರು ಭಾರತದ ವಿರುದ್ಧ 74 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೆ ಅವರು 1998ರ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 61 ರನ್ ಗಳಿಸಿದ್ದರು.
ನಿವೃತ್ತಿಯ ಬಗ್ಗೆ ವದಂತಿ
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 3-0 ಮತ್ತು ಆಸ್ಟ್ರೇಲಿಯಾದಲ್ಲಿ 3-1 ಅಂತರದಲ್ಲಿ ಟೆಸ್ಟ್ ಸರಣಿಗಳಲ್ಲಿ ಪರಾಭವ ಅನುಭವಿಸಿದ ಬಳಿಕ ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗ್ಗೆ ವದಂತಿಗಳು ಹಬ್ಬಿದ್ದವು. ಬಿಸಿಸಿಐ ಸಹ ರೋಹಿತ್ ಶರ್ಮಾ ಅವರ ಪ್ರದರ್ಶನದ ಬಗ್ಗೆ ಅಸಮಾಧಾನಗೊಂಡಿದ್ದು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ವರದಿಯಾಗಿತ್ತು. ಆದರೆ ಈ ಎಲ್ಲದಕ್ಕೂ ಇದೀಗ ರೋಹಿತ್ ಶರ್ಮಾ ಅವರು ಸ್ಪಷ್ಟನೆ ನೀಡಿದ್ದಾರೆ.
ಕ್ರೀಡೆ
India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ
ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.
ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.
ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.
ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.
ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.
ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.
ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.
ಕ್ರೀಡೆ
Asian Games-ಏಷ್ಯನ್ ಗೇಮ್ಸ್ ನಲ್ಲಿ ಮಿಂಚಿದ ಭಾರತದ ಮಹಿಳೆಯರು; 4×400 ರಿಲೇಯಲ್ಲಿ ಚಿನ್ನ, ಹೈಜಂಪ್-ಮಿಶ್ರ ರಿಲೇಯಲ್ಲಿ ಕಂಚು
ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.
ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.
4×400 ಮೀಟರ್ ರಿಲೇಯಲ್ಲಿ ಬಂಗಾರದ ಓಟ
ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಕಿರಣ್ ಪಹಾಲ್, ಎಂ.ಆರ್. ಪೂವಮ್ಮ, ಪ್ರಾಚಿ ಚೌಧರಿ ಹಾಗೂ ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ತಂಡ 3:29.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಬಹ್ರೇನ್ 3:30.21 ಸಮಯದೊಂದಿಗೆ ಬೆಳ್ಳಿ ಹಾಗೂ ಚೀನಾ 3:31.02 ಸಮಯದೊಂದಿಗೆ ಕಂಚಿನ ಪದಕ ಗೆದ್ದವು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕ ಗೆದ್ದಂತಾಗಿದೆ. ವಿಥ್ಯಾ ರಾಮರಾಜ್ ಅವರಿಗೆ ಇದು ಕೂಟದ ಮೂರನೇ ಪದಕವಾಗಿದೆ. ಅವರು ಈ ಹಿಂದೆ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಹಾಗೂ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಕಂಚು ಗೆದ್ದಿದ್ದರು.
ಹೈಜಂಪ್‌ನಲ್ಲಿ ಪೂಜಾಗೆ ಕಂಚು
ಮಹಿಳೆಯರ ಹೈಜಂಪ್ ಫೈನಲ್‌ನಲ್ಲಿ ಭಾರತದ ಪೂಜಾ ಸಿಂಗ್ 1.84 ಮೀಟರ್ ಎತ್ತರ ಜಿಗಿದು ಕಂಚಿನ ಪದಕ ಗೆದ್ದರು. 1.84 ಮೀಟರ್‌ವರೆಗಿನ ಎತ್ತರವನ್ನು ಅವರು ಯಶಸ್ವಿಯಾಗಿ ದಾಟಿದರೂ, 1.87 ಮೀಟರ್ ಎತ್ತರವನ್ನು ಮೂರು ಪ್ರಯತ್ನಗಳಲ್ಲೂ ದಾಟಲು ಸಾಧ್ಯವಾಗಲಿಲ್ಲ.
ಮಿಶ್ರ 4×100 ಮೀಟರ್ ರಿಲೇಯಲ್ಲಿ ಕಂಚು
ಗುರುಂದರ್‌ವೀರ್ ಸಿಂಗ್, ಸ್ನೇಹಾ ಸತ್ಯನಾರಾಯಣ, ಅನಿಮೇಶ್ ಕುಜುರ್ ಹಾಗೂ ಹರಿತಾ ಭದ್ರಾ ಅವರನ್ನೊಳಗೊಂಡ ಭಾರತ ತಂಡ ಮಿಶ್ರ 4×100 ಮೀಟರ್ ರಿಲೇಯಲ್ಲಿ 41.06 ಸೆಕೆಂಡ್‌ಗಳ ಋತುವಿನ ಅತ್ಯುತ್ತಮ ಸಮಯದೊಂದಿಗೆ ಕಂಚಿನ ಪದಕ ಗೆದ್ದಿತು.
ಚೀನಾ 40.78 ಸೆಕೆಂಡ್‌ಗಳಲ್ಲಿ ಚಿನ್ನ ಹಾಗೂ ಥೈಲ್ಯಾಂಡ್ 40.87 ಸೆಕೆಂಡ್‌ಗಳಲ್ಲಿ ಬೆಳ್ಳಿ ಪದಕ ಗೆದ್ದವು. ಭಾರತ 41.06 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆಯಿತು
ಕ್ರೀಡೆ
Fariba-ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ನಿರ್ಬಂಧ: ಪುರುಷರ ರೀತಿ ವೇಷ ಧರಿಸಿ ತರಬೇತಿ ಪಡೆದು ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಫರೀಬಾ..!
ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಐಚಿ-ನಗೋಯಾ: ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಜಪಾನ್‌ನ ಐಚಿ ಪ್ರಾಂತ್ಯದ ಶಿನ್‌ಶಿರೋ ಸೈಕ್ಲಿಂಗ್ ರೋಡ್ ಕೋರ್ಸ್‌ನಲ್ಲಿ ಸೆ.22ರಂದು ನಡೆದ ಮಹಿಳೆಯರ 90.4 ಕಿ.ಮೀ. ವೈಯಕ್ತಿಕ ರೋಡ್ ರೇಸ್‌ನಲ್ಲಿ 23 ವರ್ಷದ ಫರೀಬಾ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ 2002ರ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ರೋಚಕವಾಗಿ ನಡೆದ ಫೈನಲ್‌ನಲ್ಲಿ ಫರೀಬಾ ಹಾಗೂ ಚಿನ್ನದ ಪದಕ ಗೆದ್ದ ಚೀನಾದ ಗುವೋ ಲಿ ಇಬ್ಬರೂ 2 ಗಂಟೆ 50 ನಿಮಿಷ 05 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೊದಲ ಎರಡು ಲ್ಯಾಪ್‌ಗಳಲ್ಲಿ ಫರೀಬಾ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮ 300–400 ಮೀಟರ್‌ಗಳಲ್ಲಿ ಗುವೋ ಲಿ ಅತ್ಯಲ್ಪ ಅಂತರದಲ್ಲಿ ಮುನ್ನಡೆ ಪಡೆದು ಸ್ವರ್ಣ ಪದಕ ಗೆದ್ದರು. ಹಾಂಗ್‌ಕಾಂಗ್‌ನ ಲಿಯಾಂಗ್ ವಿಂಗ್ ಯೀ ಕಂಚಿನ ಪದಕ ಪಡೆದರು.
ಇದಕ್ಕೂ ಎರಡು ದಿನಗಳ ಮೊದಲು ನಡೆದ 24.2 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಫರೀಬಾ ಏಳನೇ ಸ್ಥಾನ ಪಡೆದಿದ್ದರು.
ವೇಷ ಬದಲಿಸಿ ಸೈಕ್ಲಿಂಗ್ ತರಬೇತಿ
ಉತ್ತರ ಅಫ್ಘಾನಿಸ್ತಾನದ ಫರ್ಯಾಬ್ ಪ್ರಾಂತ್ಯದ ಫರೀಬಾ ತಮ್ಮ 15ನೇ ವಯಸ್ಸಿನಲ್ಲಿ ಅಕ್ಕ ಯುಲ್ದುಜ್ ಹಾಶಿಮಿ ಅವರ ಪ್ರೇರಣೆಯಿಂದ ಸೈಕ್ಲಿಂಗ್ ಆರಂಭಿಸಿದ್ದರು. ಮಹಿಳೆಯರು ಸಾರ್ವಜನಿಕವಾಗಿ ಸೈಕಲ್ ಚಲಾಯಿಸುವುದಕ್ಕೆ ವಿರೋಧವಿದ್ದ ಸಾಂಪ್ರದಾಯಿಕ ವಾತಾವರಣದಲ್ಲಿ ಗುರುತು ಪತ್ತೆಯಾಗದಂತೆ ಪುರುಷರ ವೇಷ ಧರಿಸಿ ಅವರು ತರಬೇತಿ ಪಡೆಯುತ್ತಿದ್ದರು.
ಮುಖಕ್ಕೆ ಎರಡು-ಮೂರು ಮಾಸ್ಕ್‌ಗಳು, ಹೆಡ್‌ಸ್ಕಾರ್ಫ್ ಹಾಗೂ ಸನ್‌ಗ್ಲಾಸ್ ಧರಿಸಿ ಸೈಕ್ಲಿಂಗ್ ಮಾಡುತ್ತಿದ್ದ ಫರೀಬಾ ಮತ್ತು ಅವರ ಸಹೋದರಿಗೆ ತರಬೇತಿ ವೇಳೆ ಜನರು ಕಲ್ಲು, ಬಾಟಲಿ ಎಸೆದು ನಿಂದಿಸುತ್ತಿದ್ದರು. ಇದೇ ವೇಳೆ ನಡೆದ ರಿಕ್ಷಾ ಅಪಘಾತದಲ್ಲಿ ಯುಲ್ದುಜ್ ಅವರ ಮಣಿಕಟ್ಟು ಮುರಿದ ಘಟನೆಯೂ ನಡೆದಿದೆ.
ತಾಲಿಬಾನ್ ಆಡಳಿತದ ಬಳಿಕ ದೇಶತ್ಯಾಗ
2020ರಲ್ಲಿ ಫರೀಬಾ ಮತ್ತು ಯುಲ್ದುಜ್ ಅಫ್ಘಾನಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಕ್ರೀಡೆಗಳ ಮೇಲಿನ ನಿರ್ಬಂಧದಿಂದಾಗಿ ಅವರ ಕ್ರೀಡಾ ಬದುಕಿಗೂ ಸಂಕಷ್ಟ ಎದುರಾಯಿತು.
ಮಾಜಿ ವಿಶ್ವ ಚಾಂಪಿಯನ್ ಅಲೆಸ್ಸಾಂಡ್ರಾ ಕ್ಯಾಪೆಲ್ಲೊಟ್ಟೊ ಅವರ ನೆರವಿನಿಂದ ಸಹೋದರಿಯರು ಇಟಲಿಗೆ ವಲಸೆ ಹೋದರು. ಅಲ್ಲಿ ತರಬೇತಿ ಮುಂದುವರಿಸಿದ ಫರೀಬಾ 2022ರಲ್ಲಿ ಅಫ್ಘಾನ್ ರಾಷ್ಟ್ರೀಯ ಚಾಂಪಿಯನ್ ಆದರು. ಅಲ್ಲದೆ, UCI ರೇಸ್ ಗೆದ್ದ ಮೊದಲ ಅಫ್ಘಾನ್ ಮಹಿಳಾ ಸೈಕ್ಲಿಸ್ಟ್ ಎಂಬ ಸಾಧನೆ ಮಾಡಿದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದರು.
‘ಅಫ್ಘಾನ್ ಮಹಿಳೆಯರ ಶಕ್ತಿಯ ಸಂಕೇತ’
ಬೆಳ್ಳಿ ಪದಕ ಗೆದ್ದ ಬಳಿಕ ಮಾತನಾಡಿದ ಫರೀಬಾ, ಈ ಪದಕ ಅಫ್ಘಾನ್ ಮಹಿಳೆಯರ ಪ್ರತಿರೋಧ ಮತ್ತು ಶಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.
“ನಾವು ಇಂದಿಗೂ ಬದುಕುಳಿದಿದ್ದೇವೆ ಮತ್ತು ಹೋರಾಡುತ್ತಿದ್ದೇವೆ ಎಂಬುದಕ್ಕೆ ಇದು ಸಾಕ್ಷಿ. ನನ್ನ ಮೇಲೆ ಬಿದ್ದ ಪ್ರತಿಯೊಂದು ಕಲ್ಲು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಶಕ್ತಿಯನ್ನು ನೀಡಿತು. ಮುಂದಿನ ಪೀಳಿಗೆಯ ಅಫ್ಘಾನ್ ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಲಿ” ಎಂದು ಅವರು ಆಶಯ ವ್ಯಕ್ತಪಡಿಸಿದರು.
ತಾಲಿಬಾನ್ ಆಡಳಿತದ ಬಳಿಕ ಅಫ್ಘಾನ್ ಮಹಿಳಾ ಕ್ರೀಡಾಪಟುಗಳ ಪರಿಸ್ಥಿತಿ ಜಾಗತಿಕ ಗಮನ ಸೆಳೆದಿದೆ. ನಿರಾಶ್ರಿತರಾಗಿರುವ ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುತ್ತಿರುವ ವರದಿಗಳೂ ಈ ಹಿಂದೆ ಪ್ರಕಟವಾಗಿದ್ದವು.


















