ಬಿಗ್ ನ್ಯೂಸ್
Hindu Religious Education-ಎಳವೆಯಿಂದಲೇ ಮಕ್ಕಳಿಗೆ ಹಿಂದೂ ಧಾರ್ಮಿಕ ಶಿಕ್ಷಣ ಮಹಾ ಯೋಜನೆ ಪುತ್ತೂರಿನಿಂದ ಪ್ರಾರಂಭ : ಶೃಂಗೇರಿ ಶ್ರೀಗಳಿಂದಲೇ ಪಠ್ಯ; ಅಂಬಿಕಾ ವಿದ್ಯಾಸಂಸ್ಥೆಯ ಸುಬ್ರಹ್ಮಣ್ಯ ನಟ್ಟೋಜರ ನೇತೃತ್ವ : ರಾಜಕೀಯ ರಹಿತವಾಗಿ ಎಲ್ಲಾ ಜಾತಿ ಒಗ್ಗೂಡಿಸಿ ಶಿಕ್ಷಣ – ಯುಗಾದಿಯಿಂದ ಚಾಲನೆ – ಕೆದಂಬಾಡಿಯಲ್ಲಿ ಪ್ರಥಮ ಪ್ರಯೋಗ : ವ್ಯಾಪಕ ಮೆಚ್ಚುಗೆ
ಹಿಂದೂ ಧರ್ಮದ ಆಚಾರ, ವಿಚಾರ, ಪದ್ಧತಿ, ಸಂಪ್ರದಾಯ ಮತ್ತು ಸಂಸ್ಕಾರ – ಸಂಸ್ಕೃತಿಗಳ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಂದಿನ ಹಿಂದೂ ಪೀಳಿಗೆಯನ್ನು ಧರ್ಮಜಾಗೃತರನ್ನಾಗಿ ಮಾಡುವ ಮಹಾ ಯೋಜನೆಯೊಂದು ಸದ್ದಿಲ್ಲದೇ ಕಾರ್ಯಗತಗೊಳ್ಳುತ್ತಿದೆ. ಪುತ್ತೂರು ತಾಲೂಕಿನಲ್ಲಿ ಈ ಯೋಜನೆ ಆರಂಭದ ಹಂತದಲ್ಲಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಮುಂದಿನ ದಿನಗಳಲ್ಲಿ ಇತರ ತಾಲೂಕುಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಹಿಂದೂ ಧರ್ಮದ ಆಚಾರ, ವಿಚಾರ, ಪದ್ಧತಿ, ಸಂಪ್ರದಾಯ ಮತ್ತು ಸಂಸ್ಕಾರ – ಸಂಸ್ಕೃತಿಗಳ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಂದಿನ ಹಿಂದೂ ಪೀಳಿಗೆಯನ್ನು ಧರ್ಮಜಾಗೃತರನ್ನಾಗಿ ಮಾಡುವ ಮಹಾ ಯೋಜನೆಯೊಂದು ಸದ್ದಿಲ್ಲದೇ ಕಾರ್ಯಗತಗೊಳ್ಳುತ್ತಿದೆ.
ಪುತ್ತೂರು ತಾಲೂಕಿನಲ್ಲಿ ಈ ಯೋಜನೆ ಆರಂಭದ ಹಂತದಲ್ಲಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಮುಂದಿನ ದಿನಗಳಲ್ಲಿ ಇತರ ತಾಲೂಕುಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಬ್ರಹ್ಮಣ್ಯ ನಟ್ಟೋಜ ಅವರ ಆಸಕ್ತಿಯ ಕಾರಣದಿಂದ ಹುಟ್ಟಿಕೊಂಡ ಯೋಜನೆಗೆ ಪ್ರಸ್ತುತ ಹಿಂದೂ ಸಮಾಜದ ಬಹುತೇಕ ಜಾತಿ ಸಂಘಟನೆ ಗಳು ಕೈಜೋಡಿಸಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತದ ಪ್ರಭಾವದಿಂದ ಹೊರತಾಗಿ ಶುದ್ಧ ಸನಾತನ ಪರಂಪರೆಯ ಮೌಲ್ಯಗಳನ್ನು ಪ್ರತಿಪಾದಿಸುವ ಧಾರ್ಮಿಕ ಶಿಕ್ಷಣ ನೀಡಲು ವೇದಿಕೆ ಸಜ್ಜಾಗಿದೆ.
ಹೇಗಿದೆ ಶಿಕ್ಷಣ ಯೋಜನೆ?:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಈ ಸಂಬಂಧ ಪೂರ್ವಸಿದ್ದತಾ ಸಭೆ ನಡೆದಿದೆ. ಸುಮಾರು 26 ಜಾತಿ ಸಂಘಟನೆಗಳ ಪ್ರಮುಖರು ಪೂರಕ ವಾಗಿ ಸ್ಪಂದಿಸಿದ್ದಾರೆ. ತಾಲೂಕು ಕೇಂದ್ರ ಮತ್ತು ಗ್ರಾಮ ಕೇಂದ್ರಗಳಲ್ಲಿ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ. ಆಯಾ ಸಮಿತಿಗಳೇ ನೇತೃತ್ವ ವಹಿಸಿಕೊಂಡು ಗ್ರಾಮಗಳ ಶ್ರದ್ಧಾ ಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ನಿರ್ದಿಷ್ಟ ಅವಧಿಯ ಧಾರ್ಮಿಕ ಶಿಕ್ಷಣ ತರಗತಿ ನಡೆಸಲಾಗುತ್ತದೆ. ತರಬೇತಿ ಪಡೆದ ಶಿಕ್ಷಕರು ಬಂದು ಪಠ್ಯ ಆಧರಿತವಾಗಿ ಪಾಠ ಮಾಡುತ್ತಾರೆ.
ಈ ತರಗತಿಗಳಲ್ಲಿ ಆಯಾ ಗ್ರಾಮಗಳ ಮಕ್ಕಳು ಭಾಗವಹಿಸುವಂತೆ ಮಾಡುವ ಹೊಣೆ ಸ್ಥಳೀಯ ಸಮಿತಿಗಳದ್ದಾಗಿದೆ. ಶಿಕ್ಷಕರಿಗೆ ನೀಡುವ ಗೌರವ ಧನವನ್ನು ದೇಣಿಗೆ ಮತ್ತಿತರ ಮೂಲಗಳಿಂದ ಸಂಗ್ರಹಿಸುವ ಹೊಣೆಯೂ ಸಮಿತಿಯದ್ದಾಗಿದೆ. ತಾಲೂಕು ಮಟ್ಟದಲ್ಲಿ ಪ್ರಾಜ್ಞರು, ವಿದ್ವಾಂಸರು ಮತ್ತು ಸಮುದಾಯ ಸಂಘಟನೆಗಳ ಮುಖಂಡರನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿ ಇರಲಿದ್ದು, ಒಟ್ಟಾರೆ ಧಾರ್ಮಿಕ ಶಿಕ್ಷಣ ಯೋಜನೆ ಸಾಗುವ ರೀತಿಯಲ್ಲಿ ಕಾಲಕಾಲಕ್ಕೆ ಪರಾಮರ್ಶೆ ಮಾಡುತ್ತದೆ.
ಶೃಂಗೇರಿ ಸ್ವಾಮೀ ಅನುಗ್ರಹ :
ಆದಿ ಶಂಕಾರಾಚಾರ್ಯರಿಂದ ಸ್ಥಾಪನೆಗೊಂಡ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಅವರ ಅನುಗ್ರಹ ಮತ್ತು ಮಾರ್ಗದರ್ಶನ ಹಿಂದೂ ಧಾರ್ಮಿಕ ಶಿಕ್ಷಣಕ್ಕಿದೆ. ಧಾರ್ಮಿಕ ಶಿಕ್ಷಣಕ್ಕೆ ಬೇಕಾದ ಪಠ್ಯವನ್ನು ಶೃಂಗೇರಿಯಿಂದಲೇ ತಯಾರಿಸಿ ಪೂರೈಸಲಾಗುತ್ತದೆ. ಧಾರ್ಮಿಕ ಶಿಕ್ಷಣ ನೀಡುವ ಶಕ್ಷಕರಿಗೆ ಶೃಂಗೇರಿಯಿಂದಲೇ ತರಬೇತಿ ನೀಡಲಾಗುತ್ತದೆ. ಧಾರ್ಮಿಕ ಶಿಕ್ಷಣ ಪೂರ್ತಿ ಚೌಕಟ್ಟು ಶೃಂಗೇರಿ ಪೀಠದ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ.
ಸಮಾಜವೇ ಕೊಂಡೊಯ್ಯಲಿದೆ:
ಇವತ್ತು ಅನೇಕ ಧರ್ಮಗಳಲ್ಲಿ ಧಾರ್ಮಿಕ ಶಿಕ್ಷಣ ಮಕ್ಕಳಿಗೆ ಸಿಗುತ್ತಿದೆ. ಅವರವರ ಧರ್ಮದ ತಿರುಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಆಳವಾದ ಜ್ಞಾನ ಸಂಪತ್ತು, ಶ್ರೇಷ್ಠ ಪರಂಪರೆ, ಉತ್ಕೃಷ್ಟ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳಿದ್ದರೂ ಅದನ್ನು ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸುವ ಕ್ರಮವಿಲ್ಲ. ಈ ಕೊರತೆ ನೀಗಿಸಲು ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಪುತ್ತೂರು ತಾಲೂಕಿನಲ್ಲಿ ಧಾರ್ಮಿಕ ಶಿಕ್ಷಣ ಆರಂಭವಾಗಲಿದೆ. ಇದು ಇಡೀ ಸಮಾಜಕ್ಕಾಗಿರುವ ಯೋಜನೆಯಾದ ಕಾರಣ ಹಿಂದೂ ಸಮಾಜವೇ ಮುಂದಕ್ಕೆ ಕೊಂಡೊಯ್ಯಲಿದೆ. -ಸುಬ್ರಹ್ಮಣ್ಯ ನಟ್ಟೋಜ, ಮುಖ್ಯಸ್ಥರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು.
ಸಂಪೂರ್ಣ ಬೆಂಬಲ:
ಹಿಂದೂ ಧರ್ಮದ ಮಕ್ಕಳಿಗೆ ನಮ್ಮ ಧರ್ಮದ ಉದಾತ್ತ ತಿರುಳನ್ನು ಶಿಕ್ಷಣದ ಮೂಲಕ ತಿಳಿಸುವ ಅಗತ್ಯವಿದೆ. ಈ ಮೂಲಕ ಮಕ್ಕಳು ಸಂಸ್ಕಾರವಂತರಾಗಲು, ಸುಸಂಸ್ಕೃತರಾಗಲು ಸಾಧ್ಯವಿದೆ. ಹಿಂದೂ ಧಾರ್ಮಿಕ ಶಿಕ್ಷಣ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. -ಅಶೋಕ್ ರೈ, ಶಾಸಕರು, ಪುತ್ತೂರು
ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆ: ಕೆದಂಬಾಡಿಯಲ್ಲಿ ಪ್ರಥಮ ಪ್ರಯೋಗ
ತಾಲೂಕಿನಲ್ಲಿ 3 ಹಂತದಲ್ಲಿ ಶಾಲಾ ಮಕ್ಕಳಿಗೆ ನೀಡಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯಲ್ಲಿ ಮೊದಲ ಹಂತವಾಗಿ ಕೆದಂಬಾಡಿ ಗ್ರಾಮದಲ್ಲಿ ಮೊದಲ ಗ್ರಾಮ ಸಮಿತಿ ರಚನೆಗೊಂಡಿದೆ. ಈ ಮೂಲಕ ಇಲ್ಲಿ ಪ್ರಥಮ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ.
ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣಕ್ಕೆ ಶೃಂಗೇರಿ ಮಠದಿಂದಲೇ ಪಠ್ಯ ಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯ ನಡೆಯಲಿದೆ. ಇದನ್ನು ಅನುಷ್ಠಾನಗೊಳಿಸಲು ಪುತ್ತೂರು ತಾಲೂಕು ಮಟ್ಟದ ಮೇಲುಸ್ತುವಾರಿ ಸಮಿತಿ ರಚನೆಯಾಗುತ್ತಿದೆ.
ಕೆದಂಬಾಡಿ ಗ್ರಾಮದಲ್ಲಿ ತಾಲೂಕಿನ ಮೊದಲ ಗ್ರಾಮ ಸಮಿತಿಯನ್ನು ಭಾನುವಾರ ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ರಚಿಸಿ ಹಿಂದೂ ಧಾರ್ಮಿಕ ಶಿಕ್ಷಣವನ್ನು ಗ್ರಾಮದ ಮಕ್ಕಳಿಗೆ ನೀಡಲು ನಿರ್ಧರಿಸಲಾಯಿತು.
ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಹಿಂದೂ ಧರ್ಮದಲ್ಲಿ ಉದಾತ್ತ ಸಂಸ್ಕೃತಿ, ಆಚಾರ ವಿಚಾರ, ನಂಬಿಕೆ, ಪದ್ಧತಿ, ಧಾರ್ಮಿಕ ಅಂಶಗಳಿದ್ದರೂ, ಇವುಗಳನ್ನು ನಮ್ಮ ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸುವ ಮಾಧ್ಯಮವಿಲ್ಲದ ಕಾರಣ ಹಿಂದೂ ಮಕ್ಕಳು ಆಧುನಿಕತೆಯ ಸೆಳೆತಕ್ಕೆ ಸಿಕ್ಕಿ ಧರ್ಮದಿಂದ ದೂರವಾಗುತ್ತಿದ್ದಾರೆ. ಇದರ ಪ್ರಯೋಜನ ಇತರರು ಪಡೆಯುವಂತಾಗಿದೆ. ಇದನ್ನು ತಪ್ಪಿಸಿ ಹಿಂದೂ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವುದೇ ಧಾರ್ಮಿಕ ಶಿಕ್ಷಣದ ಗುರಿ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಪ್ರತೀ ಗ್ರಾಮದಲ್ಲಿ ಅಗತ್ಯ ಶಿಕ್ಷಕರನ್ನು ನೇಮಿಸಿ, ವಾರದಲ್ಲಿ ಕನಿಷ್ಠ ಒಂದು ತರಗತಿ ನೀಡಬೇಕು. ಗ್ರಾಮಸ್ಥರ ದೇಣಿಗೆಯಿಂದಲೇ ಶಿಕ್ಷಕರಿಗೆ ಗೌರವಧನ ನೀಡಬಹುದಾಗಿದೆ. ಭವಿಷ್ಯದ ಹಿಂದೂ ಸಮಾಜವನ್ನು ಸುಸಂಸ್ಕೃತಗೊಳಿಸುವ ಯೋಜನೆ ಇದು ಎಂದರು.
ದೇವತಾ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಬೀಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಸುಜಾತಾ ಮುಳಿಗದ್ದೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಮಠ ಮತ್ತು ಸೂರ್ಯಪ್ರಸನ್ನ ರೈ, ಕೋಶಾಧಿಕಾರಿಯಾಗಿ ವರುಣ್, ಸಂಚಾಲಕರಾಗಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಹ ಸಂಚಾಲಕರಾಗಿ ಮೋಹನ್ ಶೆಟ್ಟಿ ಮಜಲಮೂಲೆ, ಗಂಗಾಧರ ಮುಳಿಗದ್ದೆ, ಗೌರವಾಧ್ಯಕ್ಷರಾಗಿ ಉಂಡೆಮನೆ ಶ್ರೀಕೃಷ್ಣ ಭಟ್ ಆಯ್ಕೆಯಾದರು.
ಈ ವರ್ಷದ ಯುಗಾದಿಯಿಂದಲೇ ತಾಲೂಕಿನ ಎಲ್ಲ ಗ್ರಾಮಗಳ ಶ್ರದ್ಧಾ ಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ಏಕ ಕಾಲದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಆರಂಭಿಸಲಾಗುತ್ತದೆ. 1ರಿಂದ 4ನೇ ತರಗತಿ, 5ರಿಂದ 8ನೇ ತರಗತಿ ಮತ್ತು 9ರಿಂದ ದ್ವಿತೀಯ ಪಿಯುಸಿ – ಹೀಗೆ 3 ಹಂತದಲ್ಲಿ ಧಾರ್ಮಿಕ ಶಿಕ್ಷಣ ನಡೆಯಲಿದ್ದು, ಇದಕ್ಕಾಗಿ 3 ಹಂತದ ಪಠ್ಯ ಪುಸ್ತಕ ಶೃಂಗೇರಿ ಮಠದಿಂದ ಸಿಗಲಿದೆ. ಗ್ರಾಮ ಮಟ್ಟದಲ್ಲಿ ನೇಮಕಗೊಳ್ಳುವ ಶಿಕ್ಷಕರಿಗೆ ಶೃಂಗೇರಿಯಿಂದಲೇ ತರಬೇತಿ ನೀಡಲಾಗುತ್ತದೆ. ತಾಲೂಕಿನ ಗ್ರಾಮಗಳಲ್ಲಿ ಗ್ರಾಮ ಸಮಿತಿ ರಚನೆಯಾಗುತ್ತಿದ್ದು, ಜ.26ರಂದು ತಾಲೂಕು ಮೇಲುಸ್ತುವಾರಿ ಸಮಿತಿ ಸಭೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಬಿಗ್ ನ್ಯೂಸ್
Nagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು: ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಚೌದರಿ , ಎಸ್‌ಐಟಿ ತನಿಖಾ ವರದಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ದಾಖಲಾಗಿರುವ ಸಾವುಗಳ ವಿವರಗಳಲ್ಲಿ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಳವಾಗಿ ತನಿಖೆ ನಡೆಸಲು ಸರ್ಕಾರ ಅವಕಾಶ ನೀಡಬೇಕು ಎಂದು ಎಸ್‌ಐಟಿ ತಿಳಿಸಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಅಸ್ತಿಪಂಜರಗಳು ಪತ್ತೆಯಾಗಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಬಂಗ್ಲೆ ಗುಡ್ಡೆ ಸ್ಮಶಾನವಲ್ಲದಿದ್ದರೂ ಅಲ್ಲಿ ಇಷ್ಟೊಂದು ಎಲುಬುಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿರುವುದು ಹೇಗೆ ಎಂಬುದರ ಕುರಿತು ಉನ್ನತ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ಕೆಲವು ಅಸ್ತಿಪಂಜರಗಳ ಪರೀಕ್ಷೆಯಲ್ಲಿ ಅವು ಪುರುಷರದ್ದು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಒಂದು ಹುಡುಗಿಯ ಅಸ್ತಿಪಂಜರವನ್ನು ಆಸಿಡ್‌ನಿಂದ ಸುಟ್ಟಿರುವ ಸ್ಥಿತಿಯಲ್ಲಿ ಹೂತುಹಾಕಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಆದರೆ, ಆ ವ್ಯಕ್ತಿ ಆಸಿಡ್‌ನಿಂದ ಮೃತಪಟ್ಟಿಲ್ಲ ಎಂಬುದು ಡಿಎನ್‌ಎ ವರದಿಯಲ್ಲಿ ತಿಳಿದುಬಂದಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಈ ರೀತಿಯಾಗಿ ವಿವಿಧ ವರದಿಗಳ ನಡುವೆ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಪೂರಕ ತನಿಖೆ ನಡೆಸಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ರಚನೆಯಾಗಿರುವ ಎಸ್‌ಐಟಿ ವ್ಯಾಪ್ತಿಗೆ ಈ ಹೊಸ ಮಾಹಿತಿಗಳು ಸ್ವಯಂಚಾಲಿತವಾಗಿ ಸೇರುತ್ತವೆಯೇ ಎಂಬ ಬಗ್ಗೆ ಕಾನೂನುಬದ್ಧ ಸ್ಪಷ್ಟತೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಈ ಎಲ್ಲ ವಿಷಯಗಳನ್ನು ಈಗಾಗಲೇ ರಚಿಸಿರುವ ಎಸ್‌ಐಟಿಗೆ ವಹಿಸಬೇಕು. ಅಗತ್ಯವಿದ್ದರೆ ಅದರ ‘ಟರ್ಮ್ಸ್ ಆಫ್ ರೆಫರೆನ್ಸ್’ (ತನಿಖೆಯ ವ್ಯಾಪ್ತಿ) ವಿಸ್ತರಿಸಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಸರ್ಕಾರದ ಪ್ರತಿಕ್ರಿಯೆಗಾಗಿ ಇನ್ನೂ 15 ದಿನ ಕಾಯಲಾಗುವುದು. ಬಳಿಕ ಎರಡು ಬಾರಿ ಸರ್ಕಾರಕ್ಕೆ ನೆನಪಿನ ಪತ್ರ ಕಳುಹಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ.
ಬಿಗ್ ನ್ಯೂಸ್
Arshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
ನವರಾತ್ರಿ ಸಂದರ್ಭ ನಡೆಯಲಿರುವ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಲ್ಲಿ ವಿಟ್ಲದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ರಂಗಸ್ಥಳವೇರಲು ಸಜ್ಜಾಗಿದ್ದಾರೆ.
ಮಂಗಳೂರು: ನವರಾತ್ರಿ ಸಂದರ್ಭ ನಡೆಯಲಿರುವ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಲ್ಲಿ ವಿಟ್ಲದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ರಂಗಸ್ಥಳವೇರಲು ಸಜ್ಜಾಗಿದ್ದಾರೆ.
‘ಯಕ್ಷಪ್ರಿಯೆ ತನು ವಿಟ್ಲ’ ಎಂದೇ ಪರಿಚಿತರಾಗಿರುವ ಅರ್ಷಿಯಾ ಖಾನ್ ಅವರು ಕದ್ರಿಯ ಕದಳಿ ಕಲಾ ಕೇಂದ್ರದ ವಿದ್ಯಾರ್ಥಿನಿ. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕದಳಿ ಕಲಾ ಕೇಂದ್ರ ಆಯೋಜಿಸಿರುವ ‘ಕದಳಿ ದಶಾಹಃ’ ಯಕ್ಷಗಾನ ಹಬ್ಬದ ಅಂಗವಾಗಿ ಅ.20ರಂದು ಸಂಪೂರ್ಣ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದಲ್ಲಿ ಅರ್ಷಿಯಾ ಅವರು ದೇವಿ ಪಾತ್ರ ನಿರ್ವಹಿಸಲಿದ್ದಾರೆ.
ಕಳೆದ 12 ವರ್ಷಗಳಿಂದ ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುವ ಅರ್ಷಿಯಾ, ಆದಿಮಾಯೆ ಸೇರಿದಂತೆ ಹಲವು ಅಸುರ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
“ಉಳ್ಳಾಲ್ತಿ ಅಮ್ಮನ (ಕಟೀಲು ದುರ್ಗಾಪರಮೇಶ್ವರಿ) ಮೇಲಿನ ಭಕ್ತಿಯೇ ನನ್ನಲ್ಲಿ ಯಕ್ಷಗಾನದ ಆಸಕ್ತಿ ಮೂಡಲು ಕಾರಣ. ಈ ಬಾರಿ ನವರಾತ್ರಿಯ ಪರ್ವಕಾಲದಲ್ಲಿ ದೇವಿ ಪಾತ್ರ ನಿರ್ವಹಿಸುವ ಅವಕಾಶ ದೊರೆತಿದೆ. ಅಷ್ಟಭುಜ ಧರಿಸಿ ರಂಗಸ್ಥಳ ಏರುವ ಆ ಪವಿತ್ರ ಕ್ಷಣವನ್ನು ಕಲ್ಪಿಸಿಕೊಂಡಾಗಲೇ ರೋಮಾಂಚನವಾಗುತ್ತದೆ” ಎಂದು ಅರ್ಷಿಯಾ ಹೇಳಿದ್ದಾರೆ.
ಯಕ್ಷಗಾನಕ್ಕೆ ತನ್ನದೇ ಆದ ಪಾವಿತ್ರ್ಯವಿದೆ ಎಂದು ಹೇಳಿದ ಅವರು, ದೇವಿ ಪಾತ್ರ ನಿರ್ವಹಿಸುವ ಸಂದರ್ಭದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕಳೆದ ಆರು ತಿಂಗಳಿಂದ ಮಾಂಸಾಹಾರ ತ್ಯಜಿಸಿ ವ್ರತ ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರತಿದಿನ ದೈವಸ್ಥಾನ ಅಥವಾ ದೇವಸ್ಥಾನಕ್ಕೆ ಭೇಟಿ ನೀಡಿ ಧ್ಯಾನ ಮಾಡುತ್ತಿದ್ದೇನೆ. ನವರಾತ್ರಿ ಆರಂಭವಾದ ಬಳಿಕ ಇನ್ನಷ್ಟು ಕಟ್ಟುನಿಟ್ಟಿನ ವ್ರತ ಆಚರಿಸಲು ಉದ್ದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಯಕ್ಷಗಾನ ಪ್ರೇಮಕ್ಕೆ ಕುಟುಂಬದ ಬೆಂಬಲ
“ಯಕ್ಷಗಾನವು ಪೌರಾಣಿಕ ಕಥಾನಕಗಳನ್ನು ಆಧರಿಸಿದೆ. ನಮ್ಮ ಧರ್ಮ ಬೇರೆಯಾಗಿರುವುದರಿಂದ ಯಕ್ಷಗಾನದ ಕಥಾನಕಗಳಲ್ಲಿನ ಪ್ರತಿಯೊಂದು ಪಾತ್ರವನ್ನೂ ಓದಿ ತಿಳಿದುಕೊಳ್ಳುವುದು ಅಗತ್ಯ. ಇದು ನನಗಿರುವ ದೊಡ್ಡ ಸವಾಲು. ಆದರೆ ಯಕ್ಷಗುರು ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ಎಲ್ಲವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ” ಎಂದು ಅರ್ಷಿಯಾ ತಿಳಿಸಿದ್ದಾರೆ.
ತಮ್ಮ ಯಕ್ಷಗಾನ ಆಸಕ್ತಿಗೆ ಕುಟುಂಬದವರ ಸಂಪೂರ್ಣ ಸಹಕಾರವಿದೆ. ಸಾರ್ವಜನಿಕರಿಂದಲೂ ಸಾಕಷ್ಟು ಬೆಂಬಲ ದೊರೆತಿದೆ. ಕೆಲವರು ಟೀಕಿಸಿದರೂ ಅದನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಪದವೀಧರೆಯಾಗಿರುವ ಅರ್ಷಿಯಾ ಖಾನ್ ಅವರು ಪ್ರಸ್ತುತ ಮಾಧ್ಯಮ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
ರಾಜ್ಯ
Temperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!
ರಾಜ್ಯದಲ್ಲಿ ಮುಂಗಾರು ಹಂಗಾಮು ಅಂತ್ಯಗೊಂಡು ಹಿಂಗಾರು ಆರಂಭವಾಗಿರುವ ಬೆನ್ನಲ್ಲೇ ಮಳೆ ಕೊರತೆಯ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಋತುಮಾನದ ಮುನ್ಸೂಚನೆ ಪ್ರಕಾರ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಬಾರಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮು ಅಂತ್ಯಗೊಂಡು ಹಿಂಗಾರು ಆರಂಭವಾಗಿರುವ ಬೆನ್ನಲ್ಲೇ ಮಳೆ ಕೊರತೆಯ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಋತುಮಾನದ ಮುನ್ಸೂಚನೆ ಪ್ರಕಾರ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಬಾರಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಿಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಈ ಅವಧಿಯ ವಾಡಿಕೆ ಸರಾಸರಿ ಮಳೆ 182.2 ಮಿ.ಮೀ. ಆಗಿದ್ದು, ದಕ್ಷಿಣ ಒಳನಾಡಿನಲ್ಲಿ 201.9 ಮಿ.ಮೀ. ವಾಡಿಕೆ ಮಳೆಯಿದೆ. ಆದರೆ ಈ ಬಾರಿ ಈ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಕೊರತೆಯ ಮುನ್ಸೂಚನೆಯು ಕೃಷಿ ಹಾಗೂ ಜಲಾಶಯಗಳ ನೀರಿನ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ನೀರಿನ ಮಿತವ್ಯಯ ಹಾಗೂ ಪರ್ಯಾಯ ಬೆಳೆ ಯೋಜನೆಗಳತ್ತ ಗಮನಹರಿಸುವ ಅಗತ್ಯವಿದೆ.
ಮಳೆ ಕೊರತೆಗೆ ಕಾರಣವೇನು?
ಎಲ್ ನಿನೋ ಪ್ರಭಾವ: ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪರಿಸ್ಥಿತಿ ಮುಂದುವರಿದಿದ್ದು, ಸಮುದ್ರದ ಮೇಲ್ಮೈ ತಾಪಮಾನ ವಾಡಿಕೆಗಿಂತ ಹೆಚ್ಚಾಗಿದೆ. ಈ ಪರಿಸ್ಥಿತಿ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಹಿಂಗಾರು ಮಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ತಟಸ್ಥ ಐಒಡಿ: ಹಿಂದೂ ಮಹಾಸಾಗರದಲ್ಲಿನ ಇಂಡಿಯನ್ ಓಷನ್ ಡೈಪೋಲ್ (IOD) ಸದ್ಯ ತಟಸ್ಥ ಸ್ಥಿತಿಯಲ್ಲಿದ್ದು, ಹಿಂಗಾರು ಅವಧಿಯಲ್ಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ದಕ್ಷಿಣ ಭಾರತದಲ್ಲಿ ಹೇಗಿರಲಿದೆ ಮಳೆ?
ತಮಿಳುನಾಡು, ಪುದುಚೇರಿ-ಕಾರೈಕಲ್, ಕರಾವಳಿ ಆಂಧ್ರಪ್ರದೇಶ-ಯಾನಾಂ, ರಾಯಲಸೀಮೆ, ಕೇರಳ-ಮಾಹೆ ಸೇರಿದಂತೆ ದಕ್ಷಿಣ ಭಾರತದ ಕೆಲವು ಹವಾಮಾನ ಉಪವಿಭಾಗಗಳಲ್ಲಿ ಹಿಂಗಾರು ಮಳೆ ಸಾಮಾನ್ಯ ಅಥವಾ ವಾಡಿಕೆಯಷ್ಟಿರುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಮಳೆ ವಾಡಿಕೆಯಷ್ಟಿರುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.
ದೇಶದ ಮಟ್ಟದಲ್ಲಿ ಅಕ್ಟೋಬರ್‌ನಲ್ಲಿ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಆದರೆ ವಾಯವ್ಯ ಭಾರತದ ಕೆಲವು ಭಾಗಗಳು, ದಕ್ಷಿಣ ಪರ್ಯಾಯ ದ್ವೀಪ ಹಾಗೂ ಪೂರ್ವ ಭಾರತದ ಕೆಲವೆಡೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಮಳೆಯಷ್ಟೇ ಅಲ್ಲ, ತಾಪಮಾನವೂ ಏರಿಕೆ
ಹಿಂಗಾರು ಮಳೆಯ ಕೊರತೆಯೊಂದಿಗೆ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ.
ಈಶಾನ್ಯ ಮತ್ತು ವಾಯವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಕಡೆ ಹಗಲಿನ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ರೀತಿ ಈಶಾನ್ಯ ಭಾರತ ಹೊರತುಪಡಿಸಿ ಬಹುತೇಕ ಪ್ರದೇಶಗಳಲ್ಲಿ ರಾತ್ರಿಯ ಕನಿಷ್ಠ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದ್ದು, ಸೆಕೆ ಮುಂದುವರಿಯುವ ಮುನ್ಸೂಚನೆ ಇದೆ.


















