ಬಿಗ್ ನ್ಯೂಸ್
Arecanut Leaf Spot | ತೂಗುಗತ್ತಿಯಲ್ಲಿ ಅಡಿಕೆ ಕೃಷಿಕನ ಬದುಕು – ದಕ್ಷಿಣ ಕನ್ನಡದ ನಾಲ್ಕು ತಾಲೂಕಿಗೆ ವೇಗವಾಗಿ ಹರಡಿದ ಎಲೆಚುಕ್ಕೆ ರೋಗ : ಅಡಿಕೆ ಸೋಗೆ ಕತ್ತರಿಸಿ ಸುಡುವ ಯೋಜನೆ ಸೂಕ್ತ ಎಂದ ತೋಟಗಾರಿಕ ಸಚಿವ – ಬುಡವೇ ಕತ್ತರಿಸಿ ಎಂದ ಕೃಷಿಕರು..!
ಪುತ್ತೂರು: ಅಡಿಕೆ ಕೃಷಿಕರ ಜೀವನವೇ ಅಪಾಯದಲ್ಲಿದೆ. ಒಂದು ಕಡೆ ಅಡಿಕೆಗೆ ಹಳದಿ ರೋಗ ಇದೀಗ ಬಂದಿರುವ ಮಾರಕ ಎಲೆಚುಕ್ಕಿ ರೋಗ (Arecanut Leaf Spot), ಅದರ ನಡುವೆ ವಿದೇಶಿ ಅಡಿಕೆ ಆಮದು, ಇದೆಲ್ಲದರ ನಡುವೆ ರಾಜ್ಯ ಸಚಿವರು ಎಲೆಚುಕ್ಕಿ ರೋಗಕ್ಕೆ ನೀಡಿರುವ ಸಲಹೆಗೆ ಪ್ರಮುಖ ಅಡಿಕೆ ಕೃಷಿಕರಿಂದಲೇ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವುದು ಇದೆಲ್ಲದರ ನಡುವೆ ಹೋರಾಟ ಮಾಡಿ ಸೂಕ್ತ ಪರಿಹಾರ ತೆಗೆಸಿಕೊಡಬೇಕಾಗಿದ್ದ ವಿಪಕ್ಷ ಕಾಂಗ್ರೇಸ್ ಮೌನಕ್ಕೆ ಇಳಿದಿರುವುದು ಅಡಿಕೆ ಕೃಷಿಕನಿಗೆ ಭವಿಷ್ಯದ ಬಗ್ಗೆ ಭಯ ಕೂತಿದೆ.
ಕರಾವಳಿಯಲ್ಲಿ ಅಡಿಕೆ ಕೃಷಿಯ ಮೂಲಕ ಬದುಕು ಕಟ್ಟಿಕೊಂಡ ಜನತೆಗೆ ಕಳೆದ ಎರಡೂವರೆ ದಶಕಗಳಿಂದ ಅಪ್ಪಳಿಸಿದ ಮಾರಕ ರೋಗಗಳು ಅಡಿಕೆ ಕೃಷಿಯನ್ನು ಆಪೋಷನ ತೆಗೆದುಕೊಳ್ಳುತಿದೆ.ಅಡಿಕೆ ಕೃಷಿಗೆ ಬಾಧಿಸುವ ರೋಗಗಳು ಅಡಿಕೆಯನ್ನೇ ನಂಬಿದ ರೈತನ ಬದುಕನ್ನು ಮೂರಾಬಟ್ಟೆ ಮಾಡುವತ್ತ ಮುನ್ನುಗ್ಗಿದೆ.
ಇದೀಗ ಸುಳ್ಯದಿಂದ ಹಳದಿ ರೋಗದ ಕದಂಬ ಬಾಹುಚಾಚಿದ್ದು ಅಡಿಕೆ ಕೃಷಿಯನ್ನು ನಾಶಪಡಿಸಿದೆ. ಬೇರು ಹುಳ ರೋಗ, ಪ್ರತಿ ವರ್ಷ ಬಾದಿಸುವ ಕೊಳೆ ರೋಗ ಗಳು ನಿತ್ಯ ನಿರಂತರವಾಗಿದೆ. ಇದರ ಜೊತೆಗೆ ಅಪ್ಪಳಿಸಿರುವುದು ಎಲೆ ಚುಕ್ಕಿ ರೋಗ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯ ಹಲವು ಗ್ರಾಮಗಳ ಅಡಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾದೆ ಕಂಡು ಬಂದಿದ್ದು ಇಡೀ ಕೃಷಿಯೇ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.
ಬೆಳ್ತಂಗಡಿ, ಬಂಟ್ವಾಳ ಹಾಗೂ ಸುಳ್ಯದ ವಿವಿಧ ಗ್ರಾಮಗಳಲ್ಲಿ ಎಲೆಚುಕ್ಕಿ ರೋಗ ಅತಿ ಭೀಕರವಾಗಿ ಅಪ್ಪಳಿಸಿದೆ. ಹಲವೆಡೆ ಇಡೀ ತೋಟವೇ ಚುಕ್ಕಿ ಹಾವಳಿಯಿಂದ ಮಕಾಡೆ ಮಲಗಿದೆ.
ಕರ್ನಾಟಕ ರಾಜ್ಯ ತೋಟಗಾರಿಕ ಸಚಿವ ಮುನಿರತ್ನ ಎಲೆಚುಕ್ಕಿ ಬಾಧಿತ ಸುಳ್ಯದ ತೋಟಗಳಿಗೆ ಭೇಟಿ ನೀಡಿದ್ದು ರೋಗಬಾಧಿತ ತೋಟಗಳ ಎಲೆ ಕತ್ತರಿಸಿ ಸುಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವು ಅಡಿಕೆ ಕೃಷಿಕರು ಎಲೆಕಡಿಯುವ ಬದಲು ಬುಡವನ್ನೇ ಕಡಿದು ಸುಡುವ ಯೋಜನೆ ಹಾಕಿ ಎಂದು ಲೇವಡಿ ಮಾಡಿದ್ದಾರೆ.
ಏನಿದು ಎಲೆ ಚುಕ್ಕಿ ಬಾದೆ: ಅಡಿಕೆಯ ಗರಿಗಳ (ಸೋಗೆ) ಮೇಲೆ, ಅಡಿಕೆ ಕಾಯಿಯ ಮೇಲೆ ಕಲಾವಿದರು ಬಿಡಿಸುವ ಬಣ್ಣದ ಚುಕ್ಕಿಯಂತೆ ಚಿತ್ತಾರ ಬಿಡಿಸಿ ಅಡಿಕೆ ಮರವನ್ನು ಕೊಲ್ಲುವ ವಿಶಿಷ್ಟ ರೋಗವೇ ಈ ಎಲೆ ಚುಕ್ಕಿ.
ಅಡಿಕೆ ಎಲೆ ಚುಕ್ಕೆ ರೋಗಕ್ಕೆ ತುತ್ತಾದ ಮರಗಳ ಸೋಗೆಗಳ ಮೇಲ್ಬಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕಿ ಹುಟ್ಟಿಕೊಳ್ಳುತ್ತವೆ. ಈ ಚಿಕ್ಕ ಚಿಕ್ಕ ಚುಕ್ಕಿಗಳು ಒಂದಕ್ಕೊಂದು ಕೂಡಿಕೊಳ್ಳುತ್ತಾ ಇಡೀ ಅಡಕೆ ಮರದ ಸೋಗೆಗಳಿಗೆ ವ್ಯಾಪಿಸುತ್ತವೆ. ಇದೇ ಅಡಕೆ ಮರದ ಅವನತಿಗೆ ಕಾರಣವಾಗುತ್ತದೆ.
‘ಕೊಲೆಟೋಟ್ರೈಕಂ ಗ್ಲಿಯೋಸ್ಪೋಯ್‌ಸ್ (ಕಹಾವಿಯಾ) ಎಂಬ ಶಿಲೀಂದ್ರಗಳು ಈ ರೋಗವನ್ನು ಹರಡುತ್ತದೆ.ಈ ರೋಗಾಣು ಮೊದಲು ಅಡಿಕೆ ಮರದ ಎಲೆಗಳನ್ನು ಆಕ್ರಮಿಸಿ ಚುಕ್ಕಿಯಿಡುತ್ತದೆ. ಕೆಲವೇ ದಿನಗಳಲ್ಲಿ ಬೆಂಕಿ ತಗುಲಿದ ಹಾಗೆ ಅಡಿಕೆ ಮರದ ಸೋಗೆಗಳು ಕರಟಿ ಹೋಗುತ್ತದೆ. ಬಳಿಕ ಮರದಲ್ಲಿರುವ ಅಡಿಕೆ, ಅಡಿಕೆ ಮರದ ಹಿಂಗಾರ, ಚಿಗುರು ಕೊಂಬೆ ಹೀಗೆ ಎಲ್ಲೆಡೆ ದಾಳಿ ಮಾಡಿ ಮರವನ್ನೇ ಕೊಲ್ಲುತ್ತದೆ.
ರೋಗ ಬಾದಿಸಿ ಬಲಹೀನಗೊಂಡ ಮರದಲ್ಲಿದ್ದ ಅಡಿಕೆಗಳು ಸರಿಯಾಗಿ ಬೆಳೆಯುವ ಮುನ್ನವೇ ಉದುರಿ ಬೀಳುತ್ತದೆ. ಕೆಲವೇ ಸಮಯದಲ್ಲಿ ಮರವೇ ಸತ್ತು ಒಣಗಿ ನಿಲ್ಲುತ್ತದೆ.
ಮರ್ಕಂಜ ಗ್ರಾಮದ ಹಲವಾರು ತೋಟಗಳಲ್ಲಿ ಅತಿ ಭೀಕರವಾಗಿ ಎಲೆ ಚುಕ್ಕಿ ರೋಗ ಬಾದಿಸಿದೆ. ಅಡಿಕೆ ಕೃಷಿಕರಾದ ಅಡಿಕೆ ಹಿಷ್ಣುವಿನ ಕೃಷ್ಣ ಕಿಶೋರ್ ಅವರ ತೋಟ, ವೆಂಕಟ್ರಮಣ ಅಂಗಡಿಮಜಲು ಅವರ ತೋಟ ಮಾಪಲತೋಟದ ವಶಿಷ್ಠ, ವಿಶ್ವಾಸ್ ಸಹೋದರರ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಸಂಹಾರ ತಾಂಡವವಾಡಿದೆ. ತೋಟಕ್ಕೆ ತೋಟವೇ ಎಲೆ ಚುಕ್ಕಿಗೆ ತುತ್ತಾಗಿ ಕರಟಿ ನಿಂತಿದೆ. ಸಣ್ಣ ಗಿಡಗಳಿಂದ ಹಿಡಿದು ದೊಡ್ಡ ಮರಗಳವರೆಗೆ ಇಡೀ ತೋಟದಲ್ಲಿ ಎಲ್ಲೆಡೆ ಚುಕ್ಕಿ ಚಿತ್ತಾರ ಬಿಡಿಸಿದೆ.
ಔಷಧಿ ಸಿಂಪಡಿಸಿದರೂ ರೋಗ ಬಾದೆ ಕಡಿಮೆಯಾಗಿಲ್ಲ.ಕೆಲವೊಮ್ಮೆ ರೋಗ ಹರಡುವುದು ಸ್ವಲ್ಪ ಬಂದರೂ ಮೋಡ, ಮಳೆ, ತೇವಾಂಶದ ವಾತಾವರಣದಿಂದ ರೋಗ ಮತ್ತಷ್ಟು ಉಲ್ಬಣಿಸುತ್ತಿದೆ ಎನ್ನುತ್ತಾರೆ ಕೃಷಿಕ ವಿಶ್ವಾಸ್ ಮಾಪಲತೋಟ.
ಹಳದಿಯನ್ನೂ ಬಿಡದ ಎಲೆಚುಕ್ಕಿ: ಮರ್ಕಂಜ ಸೇರಿದಂತೆ ತಾಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಹಳದಿ ರೋಗವೂ ಹಬ್ಬಿದೆ. ಹಳದಿ ರೋಗ ಬಾದಿಸಿದ ಅಡಿಕೆ ಮರಗಳನ್ನು ಎಲೆ ಚುಕ್ಕಿ ಬೇಗನೇ ಅಪ್ಪಿಕೊಳ್ಳುತ್ತದೆ. ಹಳದಿ ಎಲೆ ಬಾದಿಸಿದ ಕಂಗು ಕೆಲವು ವರ್ಷಗಳ ಕಾಲ ಫಸಲು ಕೊಡುತ್ತದೆ. ಆದರೆ ಎಲೆ ಚುಕ್ಕಿ ಬಾದಿಸಿದರೆ ಮರಗಳು ಬಹು ಬೇಗನೇ ಕರಟಿ ಹೋಗುತ್ತದೆ. ಇದ್ದ ಫಸಲೂ ಉದುರಿ ಬೀಳುತ್ತಿದೆ. ಹಳದಿ ಬಾದಿಸಿದ ಪ್ರತಿರೋಧಕ ಶಕ್ತಿ ಕಡಿಮೆ ಇರುವ ಕಂಗಿಗೆ ಹಳದಿ ರೋಗ ಬೇಗನೇ ಬಾದಿಸುತ್ತದೆ ಎನ್ನುತ್ತಾರೆ ಕೃಷಿಕರಾದ ಕೃಷ್ಣ ಕಿಶೋರ್.
ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಕೆ ತೋಟಗಳಲ್ಲಿ ಎಲೆಚುಕ್ಕೆ ರೋಗ ಕಾಣಿಸಿಕೊಂಡಿರುವುದು ಕೃಷಿಕರನ್ನು ಆತಂಕಕ್ಕೆ ತಳ್ಳಿದೆ.
ಬೆಳ್ತಂಗಡಿ ಮಲವಂತಿಗೆ ಗಾಮದ ಎಳನೀರು ಪ್ರದೇಶದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಎಲೆಚುಕ್ಕೆ ರೋಗ ಇಲ್ಲಿನ ಸುಮಾರು 200 ಎಕರೆ ಅಡಕೆ ತೋಟವನ್ನು ಈಗಾಗಲೇ ನಾಶ ಮಾಡಿದೆ.
ಮಲವಂತಿಗೆ ಗ್ರಾಮದ ದಿಡುಪೆ ಪರಿಸರದ ಕೆಲವು ತೋಟಗಳಲ್ಲಿ ಈಗಾಗಲೇ ಎಲೆಚುಕ್ಕೆ ರೋಗ ವ್ಯಾಪಿಸುತ್ತಿದೆ. ಎಳನೀರು, ದಿಡುಪೆ ಪರಿಸರಕ್ಕೆ ಸುಮಾರು 6 ಕಿ.ಮೀ. ಅಂತರವಿದೆ. ದಿಡುಪೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಕಡಿರುದ್ಯಾವರ ಗ್ರಾಮದ ಅಲಂತಡ್ಕ, ಮಲ್ಲಡ್ಕ, ಕುಟ್ಟೂರು ಮೊದಲಾದ ಪರಿಸರಗಳ ವಿವೇಕ್ ಪ್ರಭು, ಶ್ರೀಧರ ಗೌಡ, ನೇಮಣ್ಣ ಗೌಡ, ಮಂಜುನಾಥ ಗೌಡ ಹಾಗೂ ಪರಿಸರದ ಹಲವು ತೋಟಗಳಲ್ಲಿ ಎಲೆಚುಕ್ಕೆ ರೋಗ ಲಕ್ಷಣಗಳು ಕಂಡುಬಂದಿದ್ದು, ಸಾವಿರಾರು ಅಡಕೆ ಮರ ಹಾಗೂ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿದ್ದು ಚುಕ್ಕಿಗಳು ಮೂಡಲಾರಂಭಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಾಳೆಪುಣಿ ಗ್ರಾಮದ ಅಡಿಕೆ ತೋಟಕ್ಕೂ ಎಲೆಚುಕ್ಕಿ ರೋಗ ವಕ್ಕರಿಸಿದೆ.
ಕೋಟಿ ಜಪ ಮಾಡಿದರೂ, ಹೋಮ ನಡೆದರೂ ರೋಗ ನಿಯಂತ್ರಣವಿಲ್ಲ:
ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗದ ನಿವಾರಣೆಗಾಗಿ ದೇವಸ್ಥಾನದಲ್ಲಿ ಓಂ ನಮಃ ಶಿವಾಯ ನಾಮಾಂಕಿತ ಕೋಟಿ ಜಪ ಕಾರ್ಯಕ್ಕೆ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿ ತಿಂಗಳಾದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ.

ಶ್ರೀಕ್ಷೇತ್ರ ಶೃಂಗೇರಿ ಮತ್ತು ಹೊರನಾಡು, ರಾಮಚಂದ್ರಾಪುರ ಮಠ ಹಾಗೂ ಇತರ ದೇವಸ್ಥಾನಗಳಲ್ಲಿ ಈಗಾಗಲೇ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಾವಿರಾರು ಅಡಿಕೆ ಕೃಷಿಕರು ಸೇರಿ ಮಹಾ ಚಂಡಿಕ ಹೋಮ, ಕೋಟಿ ಕುಂಕುಮಾರ್ಚನೆ ನಡೆಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ.
ಮಣ್ಣಿನಲ್ಲಿಯೂ ಗಾಳಿಯಲ್ಲಿಯೂ ಹರಡುತ್ತದೆ:
ಈ ಎಲೆ ಚುಕ್ಕಿ ರೋಗ ತೋಟದಿಂದ ತೋಟಕ್ಕೆ ಬಹು ಬೇಗನೇ ವ್ಯಾಪಿಸುತಿದೆ. ಅಂದರೆ ಮಣ್ಣಿನಲ್ಲಿ, ನೀರಿನಲ್ಲಿ,ಗಾಳಿಯಲ್ಲಿ ಈ ರೋಗಾಣು ಹರಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ತೋಟಗಳಲ್ಲಿ ಅಡಿಕೆ ಮರ, ಗಿಡಗಳನ್ನೇ ಇದು ಬಾದಿಸಿದೆ. ತೋಟದಲ್ಲಿರುವ ಇತರ ಗಿಡಗಳಿಗೆ ಇದು ಅಷ್ಟಾಗಿ ಭಾದಿಸಿಲ್ಲ ಎನ್ನುತ್ತಾರೆ ಕೃಷಿಕರು. ಮಣ್ಣಿನಲ್ಲಿ ಬೆವರು ಸುರಿಸಿ ಬೆಳೆದ ಅಡಿಕೆ ತೋಟಗಳು ಬದುಕಿಗೆ ಆಧಾರವಾಗಬೇಕಾದ ಸಂದರ್ಭದಲ್ಲಿ ಕಣ್ಣ ಮುಂದೆಯೇ ಕರಟಿ ಹೋಗುತ್ತಿರುವುದು ನೋಡಿ ಅಡಿಕೆ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ..!
ಚರ್ಚೆಗೆ ಗ್ರಾಸವಾದ ಸಚಿವರ ಸಲಹೆ: ಎಲೆಚುಕ್ಕಿ ರೋಗ ಬಂದಿರುವ ಎಲ್ಲ ಅಡಿಕೆ ಮರಗಳ ಎಲೆಗಳನ್ನು ಕತ್ತರಿಸುವುದು ಹಾಗೂ ಅವುಗಳಿಗೆ ಕ್ರಿಮಿನಾಶಕ ಸಿಂಪಡಿಸುವುದು, ಕತ್ತರಿಸಿದ ಎಲೆಗಳನ್ನು ಸುಡುವುದು. ಹೀಗೊಂದು ಅಭಿಯಾನ ನಡೆಸಲು ತೋಟಗಾರಿಕ ಸಚಿವ ಮುನಿರತ್ನ ಮುಂದಾಗಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಾನು ರೋಗಬಾಧಿತ ತೋಟಗಳ ಪರಿಶೀಲನೆ ಮಾಡುವಾಗ ಕೃಷಿಕರೊಬ್ಬರು ಇದೇ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿರುವುದು ತಿಳಿಯಿತು. ಅವರ ಸಲಹೆಯಂತೆ ಎಲ್ಲರೂ ಇದನ್ನು ಪಾಲಿಸಿದರೆ ಮಾತ್ರ ಇದು ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
7 ಜಿಲ್ಲೆಗಳ 42,504 ಹೆಕ್ಟೇರ್‌ನಲ್ಲಿ ರೋಗ : ರಾಜ್ಯದ 7 ಜಿಲ್ಲೆಗಳಲ್ಲಿ ಅಂದಾಜು 42,504 ಹೆಕ್ಟೇರ್ ಪ್ರದೇಶದಲ್ಲಿ ರೋಗವಿರುವುದು ಕಂಡುಬಂದಿದೆ. ಶಿಲೀಂಧ್ರದಿಂದ ಬರುವ ರೋಗ, ಇದಾಗಿದೆ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಎಲೆಗಳನ್ನು ಕತ್ತರಿಸಬೇಕು, ಆ ಬಳಿಕ ಅವುಗಳನ್ನು ಸುಡಬೇಕು, ಅನಂತರ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸಬೇಕು. ಕೀಟನಾಶಕಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬೇಕು ಎಂದು ತಿಳಿಸಲಾಗುವುದು, ಅಷ್ಟೇ ಹಾಕಬೇಕು, ಇದಕ್ಕೆ ಬೇಕಾದ ಸಂಸ್ಥೆಯನ್ನೂ ನಾವು ಅಂತಿಮಗೊಳಿಸುತ್ತೇವೆ.
ಎಲ್ಲ ರೈತರಿಗೂ ದೋಟಿ, ಏಣಿ ಉಚಿತ: ಎಲೆ ಕತ್ತರಿಸಲು ಬೇಕಾದ ದೋಟಿ, ಏಣಿಯನ್ನು ಉಚಿತವಾಗಿ ಒದಗಿಸಲಾಗುವುದು. ಪ್ರಸ್ತುತ ಕೀಟನಾಶಕ ಸಿಂಪಡಣೆಗೆ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ, ಇನ್ನೂ 15 ಕೋಟಿ ರೂ.ಗೆ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಮುಂದಿರಿಸಿದ್ದೇನೆ. ಎಂದು ಸಚಿವರು ತಿಳಿಸಿದರು.
ಮುಂದಿನ ತಿಂಗಳು ಇಸ್ರೇಲ್‌ಗೆ ಪ್ರವಾಸಗೈಯುತ್ತಿದ್ದು ಅಲ್ಲಿನ ತಜ್ಞರೊಂದಿಗೆ ಅಡಿಕೆಯ ಎಲೆಚುಕ್ಕಿ ರೋಗದ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದೂ ತಿಳಿಸಿದರು.
ನಾನು ಇಲ್ಲಿಂದ ಚಿಕ್ಕಮಗಳೂರಿನ ರೋಗಬಾಧಿತ ತೋಟಗಳಿಗೆ ಭೇಟಿ ನೀಡುತ್ತೇನೆ. ಬಳಿಕ ಈ ಕುರಿತು ಸಭೆ ನಡೆಸಲಿದ್ದು, ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ
ಅತೀ ಹೆಚ್ಚು ಅಡಿಕೆ ಬೆಳೆಯುವ ಆಂಧ್ರದಲ್ಲಿ ಇಲ್ಲ..! :
ಅತೀ ಹೆಚ್ಚು ಅಡಿಕೆ ಬೆಳೆಯುವ ಅಂಧ್ರ ಪ್ರದೇಶದಲ್ಲಿ ಈ ರೋಗ ಕಂಡು ಎಂದು ಸಚಿವರು ಹೇಳಿದರು. ಆದರೆ ಟಿಎಸ್ಎಸ್ ಸಿರಸಿ ಪ್ರಕಾರ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವೇ ಅತೀ ಹೆಚ್ಚು ಅಡಿಕೆ ಬೆಳೆಯುವ ರಾಜ್ಯವಾಗಿದೆ. ಕೇರಳ ಅಸ್ಸಾಂ, ತಮಿಳುನಾಡು, ಮೇಘಾಲಯ ಅಡಿಕೆ ಬೆಳೆಯುವ ರಾಜ್ಯಗಳಾಗಿವೆ. ಆದರೆ ಕರ್ನಾಟಕದ ಸಚಿವರಿಗೆ ಅಡಿಕೆ ಎಲ್ಲಿ ಹೆಚ್ಚು ಬೆಳೆಯುತ್ತಾರೆ ಎನ್ನುವುದೇ ಮಾಹಿತಿ ಇಲ್ಲದಿರುವುದು ಅಚ್ಚರಿಯ ವಿಷಯವಾಗಿದೆ.
ವಿರೋಧ ಪಕ್ಷ ಕಾಂಗ್ರೇಸ್ ಮೌನ..! : ಕರಾವಳಿ ಕೃಷಿಕರ ಆದಾಯದ ಮೂಲ ಅಡಿಕೆ ಸರ್ವನಾಶ ಆಗುತ್ತಿದ್ದರೆ, ಇತ್ತ ಆಡಳಿತಾರೂಢ ಸರ್ಕಾರದ ಸಚಿವರು ಬಂದು ಅಸಂಬದ್ದ ಹೇಳಿಕೆ ಕೊಡುತಿದ್ದರೂ, ವಿರೋಧ ಪಕ್ಷ ಕಾಂಗ್ರೇಸ್ ಅಡಿಕೆ ಬೆಳೆಗಾರರ ಪರವಾಗಿ ಹೋರಾಟಕ್ಕೆ ಇಳಿಯುವ ಗೋಜಿಗೆ ಹೋಗಿಲ್ಲ.
ಒಂದು ಕಡೆ ಅಡಿಕೆಗೆ ವಿವಿಧ ರೋಗಗಳು ಹರಡುತಿದ್ದವೆ, ಮತ್ತೊಂದು ಕಡೆ ವಿದೇಶದ ಕಳಾಪೆ ಗುಣಮಟ್ಟದ ಅಡಿಕೆ ಆಮದಾಗುತಿದ್ದರೂ ಭೂಸುಧಾರಣೆ, ಅಕ್ರಮ ಸಕ್ರಮ, ಉದ್ಯೋಗ ಖಾತ್ರಿಯಂತಹ ಯೋಜನೆ ಕೊಟ್ಟ ಕಾಂಗ್ರೇಸ್ ಈ ವಿಷಯದಲ್ಲಿ ಮೌನ ತಾಳಿದೆ.
ಇನ್ನಾದರೂ ಕಾಂಗ್ರೇಸ್ ಮೈಕೊಡವಿ ಎಚ್ಚೆತ್ತುಕೊಂಡು ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟದ ಪರವಾಗಿ ಹೋರಾಡಿ ಸೂಕ್ತ ಪರಿಹಾರ ತೆಗೆಸಿಕೊಡುತ್ತದಾ ಕಾದು ನೋಡಬೇಕಾಗಿದೆ.
ಬಿಗ್ ನ್ಯೂಸ್
Nagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು: ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಚೌದರಿ , ಎಸ್‌ಐಟಿ ತನಿಖಾ ವರದಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ದಾಖಲಾಗಿರುವ ಸಾವುಗಳ ವಿವರಗಳಲ್ಲಿ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಳವಾಗಿ ತನಿಖೆ ನಡೆಸಲು ಸರ್ಕಾರ ಅವಕಾಶ ನೀಡಬೇಕು ಎಂದು ಎಸ್‌ಐಟಿ ತಿಳಿಸಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಅಸ್ತಿಪಂಜರಗಳು ಪತ್ತೆಯಾಗಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಬಂಗ್ಲೆ ಗುಡ್ಡೆ ಸ್ಮಶಾನವಲ್ಲದಿದ್ದರೂ ಅಲ್ಲಿ ಇಷ್ಟೊಂದು ಎಲುಬುಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿರುವುದು ಹೇಗೆ ಎಂಬುದರ ಕುರಿತು ಉನ್ನತ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ಕೆಲವು ಅಸ್ತಿಪಂಜರಗಳ ಪರೀಕ್ಷೆಯಲ್ಲಿ ಅವು ಪುರುಷರದ್ದು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಒಂದು ಹುಡುಗಿಯ ಅಸ್ತಿಪಂಜರವನ್ನು ಆಸಿಡ್‌ನಿಂದ ಸುಟ್ಟಿರುವ ಸ್ಥಿತಿಯಲ್ಲಿ ಹೂತುಹಾಕಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಆದರೆ, ಆ ವ್ಯಕ್ತಿ ಆಸಿಡ್‌ನಿಂದ ಮೃತಪಟ್ಟಿಲ್ಲ ಎಂಬುದು ಡಿಎನ್‌ಎ ವರದಿಯಲ್ಲಿ ತಿಳಿದುಬಂದಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಈ ರೀತಿಯಾಗಿ ವಿವಿಧ ವರದಿಗಳ ನಡುವೆ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಪೂರಕ ತನಿಖೆ ನಡೆಸಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ರಚನೆಯಾಗಿರುವ ಎಸ್‌ಐಟಿ ವ್ಯಾಪ್ತಿಗೆ ಈ ಹೊಸ ಮಾಹಿತಿಗಳು ಸ್ವಯಂಚಾಲಿತವಾಗಿ ಸೇರುತ್ತವೆಯೇ ಎಂಬ ಬಗ್ಗೆ ಕಾನೂನುಬದ್ಧ ಸ್ಪಷ್ಟತೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಈ ಎಲ್ಲ ವಿಷಯಗಳನ್ನು ಈಗಾಗಲೇ ರಚಿಸಿರುವ ಎಸ್‌ಐಟಿಗೆ ವಹಿಸಬೇಕು. ಅಗತ್ಯವಿದ್ದರೆ ಅದರ ‘ಟರ್ಮ್ಸ್ ಆಫ್ ರೆಫರೆನ್ಸ್’ (ತನಿಖೆಯ ವ್ಯಾಪ್ತಿ) ವಿಸ್ತರಿಸಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಸರ್ಕಾರದ ಪ್ರತಿಕ್ರಿಯೆಗಾಗಿ ಇನ್ನೂ 15 ದಿನ ಕಾಯಲಾಗುವುದು. ಬಳಿಕ ಎರಡು ಬಾರಿ ಸರ್ಕಾರಕ್ಕೆ ನೆನಪಿನ ಪತ್ರ ಕಳುಹಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ.
ಬಿಗ್ ನ್ಯೂಸ್
Arshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
ನವರಾತ್ರಿ ಸಂದರ್ಭ ನಡೆಯಲಿರುವ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಲ್ಲಿ ವಿಟ್ಲದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ರಂಗಸ್ಥಳವೇರಲು ಸಜ್ಜಾಗಿದ್ದಾರೆ.
ಮಂಗಳೂರು: ನವರಾತ್ರಿ ಸಂದರ್ಭ ನಡೆಯಲಿರುವ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಲ್ಲಿ ವಿಟ್ಲದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ರಂಗಸ್ಥಳವೇರಲು ಸಜ್ಜಾಗಿದ್ದಾರೆ.
‘ಯಕ್ಷಪ್ರಿಯೆ ತನು ವಿಟ್ಲ’ ಎಂದೇ ಪರಿಚಿತರಾಗಿರುವ ಅರ್ಷಿಯಾ ಖಾನ್ ಅವರು ಕದ್ರಿಯ ಕದಳಿ ಕಲಾ ಕೇಂದ್ರದ ವಿದ್ಯಾರ್ಥಿನಿ. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕದಳಿ ಕಲಾ ಕೇಂದ್ರ ಆಯೋಜಿಸಿರುವ ‘ಕದಳಿ ದಶಾಹಃ’ ಯಕ್ಷಗಾನ ಹಬ್ಬದ ಅಂಗವಾಗಿ ಅ.20ರಂದು ಸಂಪೂರ್ಣ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದಲ್ಲಿ ಅರ್ಷಿಯಾ ಅವರು ದೇವಿ ಪಾತ್ರ ನಿರ್ವಹಿಸಲಿದ್ದಾರೆ.
ಕಳೆದ 12 ವರ್ಷಗಳಿಂದ ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುವ ಅರ್ಷಿಯಾ, ಆದಿಮಾಯೆ ಸೇರಿದಂತೆ ಹಲವು ಅಸುರ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
“ಉಳ್ಳಾಲ್ತಿ ಅಮ್ಮನ (ಕಟೀಲು ದುರ್ಗಾಪರಮೇಶ್ವರಿ) ಮೇಲಿನ ಭಕ್ತಿಯೇ ನನ್ನಲ್ಲಿ ಯಕ್ಷಗಾನದ ಆಸಕ್ತಿ ಮೂಡಲು ಕಾರಣ. ಈ ಬಾರಿ ನವರಾತ್ರಿಯ ಪರ್ವಕಾಲದಲ್ಲಿ ದೇವಿ ಪಾತ್ರ ನಿರ್ವಹಿಸುವ ಅವಕಾಶ ದೊರೆತಿದೆ. ಅಷ್ಟಭುಜ ಧರಿಸಿ ರಂಗಸ್ಥಳ ಏರುವ ಆ ಪವಿತ್ರ ಕ್ಷಣವನ್ನು ಕಲ್ಪಿಸಿಕೊಂಡಾಗಲೇ ರೋಮಾಂಚನವಾಗುತ್ತದೆ” ಎಂದು ಅರ್ಷಿಯಾ ಹೇಳಿದ್ದಾರೆ.
ಯಕ್ಷಗಾನಕ್ಕೆ ತನ್ನದೇ ಆದ ಪಾವಿತ್ರ್ಯವಿದೆ ಎಂದು ಹೇಳಿದ ಅವರು, ದೇವಿ ಪಾತ್ರ ನಿರ್ವಹಿಸುವ ಸಂದರ್ಭದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕಳೆದ ಆರು ತಿಂಗಳಿಂದ ಮಾಂಸಾಹಾರ ತ್ಯಜಿಸಿ ವ್ರತ ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರತಿದಿನ ದೈವಸ್ಥಾನ ಅಥವಾ ದೇವಸ್ಥಾನಕ್ಕೆ ಭೇಟಿ ನೀಡಿ ಧ್ಯಾನ ಮಾಡುತ್ತಿದ್ದೇನೆ. ನವರಾತ್ರಿ ಆರಂಭವಾದ ಬಳಿಕ ಇನ್ನಷ್ಟು ಕಟ್ಟುನಿಟ್ಟಿನ ವ್ರತ ಆಚರಿಸಲು ಉದ್ದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಯಕ್ಷಗಾನ ಪ್ರೇಮಕ್ಕೆ ಕುಟುಂಬದ ಬೆಂಬಲ
“ಯಕ್ಷಗಾನವು ಪೌರಾಣಿಕ ಕಥಾನಕಗಳನ್ನು ಆಧರಿಸಿದೆ. ನಮ್ಮ ಧರ್ಮ ಬೇರೆಯಾಗಿರುವುದರಿಂದ ಯಕ್ಷಗಾನದ ಕಥಾನಕಗಳಲ್ಲಿನ ಪ್ರತಿಯೊಂದು ಪಾತ್ರವನ್ನೂ ಓದಿ ತಿಳಿದುಕೊಳ್ಳುವುದು ಅಗತ್ಯ. ಇದು ನನಗಿರುವ ದೊಡ್ಡ ಸವಾಲು. ಆದರೆ ಯಕ್ಷಗುರು ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ಎಲ್ಲವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ” ಎಂದು ಅರ್ಷಿಯಾ ತಿಳಿಸಿದ್ದಾರೆ.
ತಮ್ಮ ಯಕ್ಷಗಾನ ಆಸಕ್ತಿಗೆ ಕುಟುಂಬದವರ ಸಂಪೂರ್ಣ ಸಹಕಾರವಿದೆ. ಸಾರ್ವಜನಿಕರಿಂದಲೂ ಸಾಕಷ್ಟು ಬೆಂಬಲ ದೊರೆತಿದೆ. ಕೆಲವರು ಟೀಕಿಸಿದರೂ ಅದನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಪದವೀಧರೆಯಾಗಿರುವ ಅರ್ಷಿಯಾ ಖಾನ್ ಅವರು ಪ್ರಸ್ತುತ ಮಾಧ್ಯಮ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
ರಾಜ್ಯ
Temperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!
ರಾಜ್ಯದಲ್ಲಿ ಮುಂಗಾರು ಹಂಗಾಮು ಅಂತ್ಯಗೊಂಡು ಹಿಂಗಾರು ಆರಂಭವಾಗಿರುವ ಬೆನ್ನಲ್ಲೇ ಮಳೆ ಕೊರತೆಯ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಋತುಮಾನದ ಮುನ್ಸೂಚನೆ ಪ್ರಕಾರ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಬಾರಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮು ಅಂತ್ಯಗೊಂಡು ಹಿಂಗಾರು ಆರಂಭವಾಗಿರುವ ಬೆನ್ನಲ್ಲೇ ಮಳೆ ಕೊರತೆಯ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಋತುಮಾನದ ಮುನ್ಸೂಚನೆ ಪ್ರಕಾರ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಬಾರಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಿಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಈ ಅವಧಿಯ ವಾಡಿಕೆ ಸರಾಸರಿ ಮಳೆ 182.2 ಮಿ.ಮೀ. ಆಗಿದ್ದು, ದಕ್ಷಿಣ ಒಳನಾಡಿನಲ್ಲಿ 201.9 ಮಿ.ಮೀ. ವಾಡಿಕೆ ಮಳೆಯಿದೆ. ಆದರೆ ಈ ಬಾರಿ ಈ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಕೊರತೆಯ ಮುನ್ಸೂಚನೆಯು ಕೃಷಿ ಹಾಗೂ ಜಲಾಶಯಗಳ ನೀರಿನ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ನೀರಿನ ಮಿತವ್ಯಯ ಹಾಗೂ ಪರ್ಯಾಯ ಬೆಳೆ ಯೋಜನೆಗಳತ್ತ ಗಮನಹರಿಸುವ ಅಗತ್ಯವಿದೆ.
ಮಳೆ ಕೊರತೆಗೆ ಕಾರಣವೇನು?
ಎಲ್ ನಿನೋ ಪ್ರಭಾವ: ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪರಿಸ್ಥಿತಿ ಮುಂದುವರಿದಿದ್ದು, ಸಮುದ್ರದ ಮೇಲ್ಮೈ ತಾಪಮಾನ ವಾಡಿಕೆಗಿಂತ ಹೆಚ್ಚಾಗಿದೆ. ಈ ಪರಿಸ್ಥಿತಿ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಹಿಂಗಾರು ಮಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ತಟಸ್ಥ ಐಒಡಿ: ಹಿಂದೂ ಮಹಾಸಾಗರದಲ್ಲಿನ ಇಂಡಿಯನ್ ಓಷನ್ ಡೈಪೋಲ್ (IOD) ಸದ್ಯ ತಟಸ್ಥ ಸ್ಥಿತಿಯಲ್ಲಿದ್ದು, ಹಿಂಗಾರು ಅವಧಿಯಲ್ಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ದಕ್ಷಿಣ ಭಾರತದಲ್ಲಿ ಹೇಗಿರಲಿದೆ ಮಳೆ?
ತಮಿಳುನಾಡು, ಪುದುಚೇರಿ-ಕಾರೈಕಲ್, ಕರಾವಳಿ ಆಂಧ್ರಪ್ರದೇಶ-ಯಾನಾಂ, ರಾಯಲಸೀಮೆ, ಕೇರಳ-ಮಾಹೆ ಸೇರಿದಂತೆ ದಕ್ಷಿಣ ಭಾರತದ ಕೆಲವು ಹವಾಮಾನ ಉಪವಿಭಾಗಗಳಲ್ಲಿ ಹಿಂಗಾರು ಮಳೆ ಸಾಮಾನ್ಯ ಅಥವಾ ವಾಡಿಕೆಯಷ್ಟಿರುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಮಳೆ ವಾಡಿಕೆಯಷ್ಟಿರುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.
ದೇಶದ ಮಟ್ಟದಲ್ಲಿ ಅಕ್ಟೋಬರ್‌ನಲ್ಲಿ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಆದರೆ ವಾಯವ್ಯ ಭಾರತದ ಕೆಲವು ಭಾಗಗಳು, ದಕ್ಷಿಣ ಪರ್ಯಾಯ ದ್ವೀಪ ಹಾಗೂ ಪೂರ್ವ ಭಾರತದ ಕೆಲವೆಡೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಮಳೆಯಷ್ಟೇ ಅಲ್ಲ, ತಾಪಮಾನವೂ ಏರಿಕೆ
ಹಿಂಗಾರು ಮಳೆಯ ಕೊರತೆಯೊಂದಿಗೆ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ.
ಈಶಾನ್ಯ ಮತ್ತು ವಾಯವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಕಡೆ ಹಗಲಿನ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ರೀತಿ ಈಶಾನ್ಯ ಭಾರತ ಹೊರತುಪಡಿಸಿ ಬಹುತೇಕ ಪ್ರದೇಶಗಳಲ್ಲಿ ರಾತ್ರಿಯ ಕನಿಷ್ಠ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದ್ದು, ಸೆಕೆ ಮುಂದುವರಿಯುವ ಮುನ್ಸೂಚನೆ ಇದೆ.
-
Uncategorized7 hours ago
ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್ ಕುಮಾರ್ ಗೆ ಮಾತೃ ವಿಯೋಗ
-
Uncategorized6 hours ago
ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ
-
ದಕ್ಷಿಣ ಕನ್ನಡ7 minutes ago
Raod Accident : ಮಂತ್ರಾಲಯ ಯಾತ್ರೆ ವೇಳೆ ಬಣಕಲ್ ನಲ್ಲಿ ಭೀಕರ ಅಪಘಾತ: ಗಂಭೀರ ಗಾಯಗೊಂಡಿದ್ದ ಶಿಶಿಲದ ಯುವಕ ಸಾವು


















