ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳ 4ನೇ ಬ್ಲಾಕ್ ನಲ್ಲಿ ಶನಿವಾರ ರಾತ್ರಿ ನಡೆದ ಅಬ್ದುಲ್ ಜಲೀಲ್ (45) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಕುರಿತಾಗಿ ಉಂಟಾದ ವೈಮನಸ್ಸು ಹತ್ಯೆಗೆ ಕಾರಣ ಎನ್ನುವುದು ಪೊಲೀಸ್ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜಲೀಲ್ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿಯಾಗಿದ್ದು, ಕಾಟಿಪಳ್ಳದಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದರು. ಅಂಗಡಿಗೆ ಬರುವ ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನುವ ಆರೋಪವಿದ್ದು, ಇದೇ ಜಲೀಲ್ ಕೊಲೆಗೆ ಕಾರಣವಾಯಿತೇ ಎಂಬ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾಗ ಈ ಹಿಂದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ ಘಟನೆಯೂ ನಡೆದಿತ್ತು ಎನ್ನಲಾಗುತ್ತಿದೆ. ಈ ವೇಳೆ ಸ್ಥಳೀಯರು ಇನ್ನು ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದರು. ಪುನಾವರ್ತನೆಯಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಸ್ಥಳೀಯ ಯುವಕರು ಒಂದು ತಿಂಗಳ ಹಿಂದೆ ಮತ್ತೆ ಎಚ್ಚರಿಕೆ ನೀಡಿದ್ದರು. ಫ್ಯಾನ್ಸಿ ಅಂಗಡಿಯನ್ನು ತೆರವು ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಹತ್ಯೆ ಹೇಗೆ ನಡೆಯಿತು ?
ಮಹಿಳೆಯೊಬ್ಬರ ಜೊತೆಗೆ ಜಲೀಲ್ ನಿಕಟ ಸಂಪರ್ಕ ಹೊಂದಿದ್ದನ್ನು ಪ್ರಶ್ನಿಸಲು ಇಬ್ಬರ ವ್ಯಕ್ತಿಗಳು ಫ್ಯಾನ್ಸಿ ಸ್ಟೋರ್ ಗೆ ಬಂದಿದ್ದು, ಹಂತಕರು ಹಾಗೂ ಜಲೀಲ್ ಮಧ್ಯೆ ಮಾತಿನ ಚಕಮಕಿಗೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಹಂತಕರು ಜಲೀಲ್ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಜಲೀಲ್ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಾಲು ಜಾರಿ ಬಿದ್ದಿದ್ದಾನೆ. ಬಳಿಕ ಇಬ್ಬರು ಚಾಕುವಿನಿಂದ ಇರಿದು ಜಲೀಲ್ ನನ್ನು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಹಿಳೆಯೊಬ್ಬರ ಜೊತೆಗಿನ ಸಂಬಂಧ ಕುರಿತು ಕೆಲವು ವ್ಯಕ್ತಿಗಳ ನಡುವೆ ಜಲೀಲ್ ಜಗಳ ಮಾಡಿಕೊಂಡಿದ್ದ. ಈ ವೇಳೆ ಎರಡು ಸಮುದಾಯಗಳ ಪ್ರತಿನಿಧಿಗಳು ಮಧ್ಯೆ ಪ್ರವೇಶಿಸಿ ಸಮಸ್ಯೆ ಪರಿಹರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಮಾಹಿತಿ ನೀಡಲು ಕಮೀಷನರ್ ನಿರಾಕರಣೆ :
ಪ್ರಕರಣ ಸಂಬಂಧ ನಾವು ಇದೀಗ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೇ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಹತ್ಯೆಯ ಹಿಂದಿನ ಕಾರಣಗಳಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಹೇಳಿದರು.
ಅಂತ್ಯ ಕ್ರಿಯೆ ವೇಳೆ ಪ್ರತಿಭಟನೆ :
ಈ ನಡುವೆ ಜಲೀಲ್ ಅವರ ಶವವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯಲು ಕುಟುಂಬಸ್ಥರು ನಿರಾಕರಿಸಿದ್ದು, ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವರ ಮನೆಗೆ ಭೇಟಿ ನೀಡಿ ಶೀಘ್ರ ತನಿಖೆಗೆ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ರವಿಕುಮಾರ್ ಅವರು ಸ್ಥಳಕ್ಕೆ ಆಗಮಿಸಿ, ತ್ವರಿತ ತನಿಖೆಯ ಭರವಸೆ ನೀಡಿದರು, ನಂತರ ಆಂಬ್ಯುಲೆನ್ಸ್’ನಲ್ಲಿ ಶವವನ್ನು ಪಂಜಿಮೊಗರು ಮಸೀದಿಗೆ ತೆರಳಲು ಅವಕಾಶ ಮಾಡಿಕೊಟ್ಟರು, ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಘಟನೆ ದುರದೃಷ್ಟಕರ : ಸಿಎಂ
ಶನಿವಾರ ರಾತ್ರಿ ಕೃಷ್ಣಾಪುರದಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ದುರದೃಷ್ಟಕರ ಘಟನೆ. ಈ ಕೃತ್ಯ ನಡೆಸಿದವರ ಪತ್ತೆಗೆ ಪೊಲೀಸರು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದರು.
‘ಕೊಲೆಯ ತನಿಖೆ ಪ್ರಗತಿಯಲ್ಲಿದ್ದು ಪೊಲೀಸರು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ’ ಎಂದರು. ‘ಯಾವ ಕಾರಣಕ್ಕಾಗಿ, ಕೊಲೆ ನಡೆದಿದೆ. ಹಿನ್ನೆಲೆ ಏನು ಎಂಬ ಸಂಗತಿ ವಿಚಾರಣೆ ವೇಳೆ ಹೊರ ಬರುತ್ತದೆ’ ಎಂದರು.
‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಊಹಾಪೋಹಗಳಿಗೆ ಕಿವಿಗೊಡಬಾರದು. ಶಾಂತಿ- ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಯಾರು ಕೂಡ ನಡೆದುಕೊಳ್ಳಬಾರದು. ಶಾಂತಿಯುತವಾಗಿ ಪರಸ್ಪರ ವಿಶ್ವಾಸದಿಂದ ಹೋಗುವುದು ಅವಶ್ಯಕ’ ಎಂದರು.
‘ಪೊಲೀಸರು ಯಾವುದೇ ಒತ್ತಾಯ, ಒತ್ತಡವಿಲ್ಲದೇ ಮುಕ್ತವಾಗಿ ತನಿಖೆ ಮಾಡುತ್ತಾರೆ. ಪ್ರಕರಣದಲ್ಲಿ ಯಾರೇ ಇರಲಿ, ಅವರ ಮೇಲೆ ನೂರಕ್ಕೆ ನೂರು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ. ಸಮಾಜದಲ್ಲಿ ಹಿಂಸೆಗೆ ದಾರಿ ಮಾಡಿಕೊಡುವರನ್ನು ಹತ್ತಿಕ್ಕುವ ಅವಶ್ಯಕತೆ ಇದೆ. ಅದು ನಮ್ಮ ಕರ್ತವ್ಯ, ಸಮಾಜದ ಕರ್ತವ್ಯ. ಕ್ರಿಯೆಗೆ ಪ್ರತಿಕ್ರಿಯೆ ಅಂತ ಅಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ತನಿಖೆ ಮಾಡುತ್ತಾರೆ’ ಎಂದರು.
ನಿಷೇಧಾಜ್ಞೆ
ಹತ್ಯೆಯ ಬೆನ್ನಲ್ಲೇ ಕಾನೂನು ವ್ಯವಸ್ಥೆಗೆ ಧಕ್ಕೆ ತರುವಂತಹ ಅಹಿತಕರ ಘಟನೆ ನಡೆಯುವುದನ್ನು ತಡೆಯುವ ಸಲುವಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಜಪೆ, ಸುರತ್ಕಲ್, ಕಾವೂರು, ಪಣಂಬೂರು ಠಾಣೆಗಳ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144ರ ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಆದೇಶ ಮಾಡಿದ್ದಾರೆ.
ಭಾನುವಾರ ಬೆಳಿಗ್ಗೆ 6ರಿಂದ ಡಿ 27ರಂದು ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಇರುವ ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಕಚೇರಿಗಳ ಕೆಲಸದ ಪಾಳಿಯನ್ನು ಸಂಜೆ 6ಕ್ಕೆ ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ರಾತ್ರಿ 6ರ ನಂತರದ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನಗತ್ಯವಾಗಿ ರಸ್ತೆಗಳಲ್ಲಿ ಅ…