ಮಂಗಳೂರು ಡಿ 26 : ಶನಿವಾರ ರಾತ್ರಿ ಕೃಷ್ಣಾಪುರದಲ್ಲಿ ನಡೆದ ಅಬ್ದುಲ್ ಜಲೀಲ್ ಬರ್ಭರ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮೂವರನ್ನು ಬಂಧಿಸಿದ್ದಾರೆ. ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ(21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) ಹೆಜಮಾಡಿ ಉಡುಪಿ, ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಬಂಧಿತ ಆರೋಪಿಗಳು ಎಂದು ಮೂಲಗಳು ತಿಳಿಸಿವೆ. .
ಈ ಬಗ್ಗೆ ಇಂದು (ಸೋಮವಾರ) ಮಧ್ಯಾಹ್ನ ಮಾದ್ಯಮ ಪ್ರತಿನಿಧಿಗಳಿಗೆ ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಮಾಹಿತಿ ನೀಡಿದರು. ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದೇವೆ̤ ಸದ್ಯ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ. ಅವರನ್ನು 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಹತ್ಯೆ ಕೃತ್ಯದಲ್ಲಿ ಇಬ್ಬರು ನೇರ ಭಾಗಿಯಾಗಿದ್ದು, ಓರ್ವ ಅವರನ್ನು ಬೈಕ್ ನಲ್ಲಿ ತಂದು ಬಿಟ್ಟಿದ್ದ. ಗುರುತು ಪತ್ತೆ ಆಗೋವರೆಗೂ ಆರೋಪಿಗಳ ಮಾಹಿತಿ ಹೇಳಲು ಆಗಲ್ಲ. ನಿನ್ನೆ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿದೆ, ಹೆಚ್ಚಿನ ವಿಚಾರಣೆ ಮಾಡ್ತೇವೆ. ಕೊಲೆಗೆ ಕಾರಣ ಏನು ಅನ್ನೋದನ್ನ ಪೂರ್ಣ ತನಿಖೆ ಬಳಿಕ ಹೇಳ್ತೀವಿ ಎಂದು ವಿವರಿಸಿದರು.
Jaleel Murder : ಮಂಗಳೂರು : ಜಲೀಲ್ ಹತ್ಯೆ –ಮಹಿಳೆಯರ ಸಹಿತ ಐವರು ಪೊಲೀಸ್ ವಶ ? ಅಸಭ್ಯ ವರ್ತನೆ ಕೊಲೆಗೆ ಹೇತು ?
ಕ್ರಿಮಿನಲ್ ಹಿನ್ನಲೆ :
ಬಂಧಿತ ಮೂವರು ಆರೋಪಿಗಳ ಪೈಕಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳ ಆರೋಪಿಗಳಾಗಿದ್ದರು. 2021ರಲ್ಲಿ ನಡೆದ ಕೊಲೆ ಯತ್ನ ಕೇಸ್ ವೊಂದರಲ್ಲೂ ಅವರು ಇದ್ದರು. ಈ ಪ್ರಕರಣದಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೆವು. ಜಲೀಲ್ ಕುಟುಂಬಸ್ಥರು ಸೇರಿ ಕೆಲವರ ವಿಚಾರಣೆ ನಡೆಸಲಾಗಿದೆ. ಆದರೆ ಸದ್ಯ ಒಟ್ಟು 3 ಜನರನ್ನ ಮಾತ್ರ ಬಂಧನ ಮಾಡಲಾಗಿದೆ ಎಂದಷ್ಟೆ ಅವರು ಮಾಹಿತಿ ನೀಡಿದ್ದಾರೆ.
ಮಹಿಳೆಯೊಂದಿಗಿನ ಅನ್ಯೋನ್ಯ ಸಂಬಂಧ
ಹಿಂದು ಮಹಿಳೆಯ ಜೊತೆಗೆ ಜಲೀಲ್ ಅನ್ಯೂನ್ಯ ಸಂಬಂಧ ಹೊಂದಿದ್ದರು. ಈ ಬಗ್ಗೆ ಎರಡು ವರ್ಷಗಳ ಹಿಂದೆ ಸ್ಥಳೀಯವಾಗಿ ಗಲಾಟೆ ನಡೆದಿತ್ತು . ಇದೇ ವಿಚಾರವಾಗಿ ಈ ಕೊಲೆ ನಡೆದಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ. ಆದರೇ ಪೊಲೀಸ್ ಇಲಾಖೆ ಈ ಬಗ್ಗೆ ತುಟ್ಟಿ ಬಿಚ್ಚಿಲ್ಲ . ಪೂರ್ಣ ತನಿಖೆಯ ಬಳಿಕವಷ್ಟೆ ಮಾಹಿತಿ ನೀಡುವುದಾಗಿ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಜಲೀಲ್ ಅವರು ಕೃಷ್ಣಾಪುರದಲ್ಲಿ ಹೊಂದಿದ್ದ ಅಂಗಡಿಗೆ ನುಗ್ಗಿದ್ದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಶನಿವಾರ ರಾತ್ರಿ ಅವರಿಗೆ ಚೂರಿಯಿಂದ ಇರಿದಿದ್ದರು. ತಕ್ಷಣವೇ ಅಕ್ಕ ಪಕ್ಕದ ಅಂಗಡಿಯವರು ಹಾಗೂ ಸ್ಥಳೀಯರು ಸೇರಿ ಗಾಯಾಳು ಜಲೀಲ್ ಅವರನ್ನು ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅದಾಗಲೇ ಅವರು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದರು.