ಮಂಗಳೂರು: ನಗ್ನ ಅವಸ್ಥೆಯಲ್ಲಿ, ಅನುಮಾನಸ್ಪದ ರೀತಿಯಲ್ಲಿ ಗಂಡಸಿನ ಶವವೊಂದು ಮಂಗಳೂರು ನಗರದ ಪಂಪ್ ವೆಲ್ ಸಮೀಪದ ಲಾಡ್ಜ್ ವೊಂದರಲ್ಲಿ ಡಿ 13 ರಂದು ಪತ್ತೆಯಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಅಬ್ದುಲ್ ಕರೀಂ (52) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತ ದೇಹದ ಜತೆಗೆ ಕೆಲ ಸಂಶಯಾಸ್ಪದ ಮಾತ್ರೆಗಳು ಪತ್ತೆಯಾಗಿದೆ.
ಮೃತ ದೇಹ ಪತ್ತೆಯಾದ ಲಾಡ್ಜ್ ಗೆ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಗರದಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದ ಕರೀಂ ಅವರು ಸೋಮವಾರ ಪಂಪ್ ವೆಲ್ ಬಳಿ ಲಾಡ್ಜ್ ವೊಂದರಲ್ಲಿ ರೂಮ್ ಬಾಡಿಗೆಗೆ ಪಡೆದಿದ್ದರು. ಇಂದು ಬೆಳಗ್ಗೆ ಮನೆಯವರು ನಿರಂತರ ಮೊಬೈಲ್ ಕರೆ ಮಾಡಿದರೂ ಅಬ್ದುಲ್ ಕರೀಂ ಸ್ವೀಕರಿಸಿಲ್ಲ. ಈ ನಡುವೆ ಕರೀಂ ಬಾಡಿಗೆಗೆ ಪಡೆದಿದ್ದ ಕೊಠಡಿಯಿಂದ ನಿರಂತರ ಮೊಬೈಲ್ ರಿಂಗುಣಿಸುತ್ತಿದ್ದರೂ ಕರೆ ಸ್ವೀಕರಿಸುತ್ತಿಲ್ಲವಾದ್ದರಿಂದ ಸಂಶಯಗೊಂಡು ಲಾಡ್ಜ್ ಸಿಬ್ಬಂದಿ 11 ಗಂಟೆ ವೇಳೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಇನ್ನುಪೊಲೀಸ್ ಮೂಲಗಳ ಪ್ರಕಾರ ಲಾಡ್ಜ್ ನ ಇವರಿದ್ದ ರೂಮ್ ನಲ್ಲಿ ಕೆಲ ಸಂಶಯಾಸ್ಪದ ಮಾತ್ರೆಗಳು ಲಭಿಸಿವೆ. ಅದು ʼಕ್ಷೀರ ಬಾಲʼ ಎಂಬ ಆಯುರ್ವೇದ ಮಾತ್ರೆಗಳು ಎಂದು ಹೇಳಲಾಗುತ್ತಿದೆ. ಅಲ್ಲದೇ ಕರೀಂ ಇದ್ದ ಕೊಠಡಿಗೆ ಮಹಿಳೆಯೊಬ್ಬರು ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು ಇದು ಶಂಕೆಗೆ ಕಾರಣವಾಗಿದೆ.

ಅನುಮಾನಾಸ್ಪದ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕಾಯಲಾಗುತ್ತಿದೆ.
