Mangalore Bomb Blast ಮಂಗಳೂರು : ಡಿ 1 : ಶಂಕಿತ ಉಗ್ರ ಶಾರೀಕ್ ನ ಕುಕ್ಕರ್ ಬಾಂಬ್ ಹಿಡಿದ ಫೋಟೋದ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದ ಪೊಲೀಸರ ತಂಡಕ್ಕೆ ಸ್ಪೋಟಕ ಮಾಹಿತಿಯೊಂದು ದೊರೆತಿದೆ ಎನ್ನಲಾಗಿದೆ. ಆ ಪೋಟೊವನ್ನು ಬೇರೊಬ್ಬ ವ್ಯಕ್ತಿ ತೆಗೆದಿದ್ದು , ಹೀಗಾಗಿ ಕುಕ್ಕರ್ ಬಾಂಬ್ ಕೃತ್ಯದ ಹಿಂದೆ ಒಂದಕ್ಕಿಂತ ಹೆಚ್ಚಿನ ಮಂದಿಯ ಕೈವಾಡ ಇದೆ ಎಂಬ ಶಂಕೆ ಇನ್ನಷ್ಟು ದೃಢವಾಗಿದೆ.
ಎರಡು ವಾರದ ಹಿಂದೆ ಮಂಗಳೂರಿನ ನಾಗೂರಿ ಬಳಿ ಆಟೋ ರಿಕ್ಷಾದಲ್ಲಿ ಸ್ಪೋಟ ಸಂಭವಿಸಿತ್ತು. ಈ ವೇಳೆ ಆಟೋ ಚಾಲಕ ಪುರುಷೋತ್ತಮ್ ಹಾಗು ಪ್ರಯಾಣಿಕ ತೀರ್ಥಹಳ್ಳಿ ಮೂಲದ ಶಾರೀಕ್ ಗಾಯಗೊಂಡಿದ್ದರು. ಬಳಿಕ ಅದೊಂದು ಬಾಂಬ್ ಸ್ಪೋಟ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು , ಶಾರಿಖ್ ವಿರುದ್ದ ಪ್ರಕರಣ ದಾಖಲಿಸಿದ್ದರು . ಇದೇ ವೇಳೆ ಸ್ಪೋಟಕ್ಕೂ ಮೊದಲು ಶಾರೀಕ್ ಕುಕ್ಕರ್ ಹಿಡಿದಿರುವ ಪೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪೋಟೊ ಹಾಗೂ ಇದನ್ನು ತೆಗೆದವರ ಬಗ್ಗೆ ಹಲವು ಅನುಮಾನಗಳು ಸೃಷ್ಟಿಯಾಗಿದ್ದವು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ತಜ್ಞರ ತಂಡದ ಮೂಲಕ ಟೆಕ್ನಿಕಲ್ ಅನಾಲಿಸಿಸ್ ಗೆ ಒಳಪಡಿಸಿತ್ತು. ಇದು ಸೆಲ್ಫಿ ಮೋಡ್ ಇಟ್ಕೊಂಡು ತೆಗೆದಿರುವ ಫೋಟೋ ಅಲ್ಲ,ಬ್ಯಾಕ್ ಕ್ಯಾಮೆರಾ ಮೂಲಕವೇ ತೆಗೆದಿರುವ ಫೋಟೋ ಅನ್ನೋದು ಫೋಟೋ ಡಿಕೋಡ್ ಮಾಡಿದ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಕ್ ಕ್ಯಾಮೆರಾದಲ್ಲಿ ಟೈಮರ್ ಇಟ್ಟು ಫೋಟೋ ಕ್ಲಿಕ್ ಮಾಡಿರುವ ಸಾಧ್ಯತೆಯೂ ಇದೆ.ಅಥವಾ ಮತ್ತೋರ್ವ ವ್ಯಕ್ತಿ ನಿಂತು ಫೋಟೋ ಕ್ಲಿಕ್ ಮಾಡಿರಬಹುದು ಎಂಬ ಎರಡು ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಫೋಟೋ ಲೈಟಿಂಗ್, ಕುಕ್ಕರ್ ಮೇಲೆ ಇರುವ ಶೇಡ್ ಬಗ್ಗೆ ಟೆಕ್ನಿಕಲ್ ಅನಾಲಿಸಿಸ್ ಮಾಡಿರುವ ತಂಡ ಮತ್ತಿತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿ ಮತ್ತೋರ್ವ ವ್ಯಕ್ತಿ ಇರುವ ಸಂಶಯ ವ್ಯಕ್ತಪಡಿಸಿದೆ ಎನ್ನಲಾಗಿದೆ. ಫೋಟೋದಲ್ಲಿ ಕ್ಯಾಮೆರಾದ ಹಿಂದೆ ವ್ಯಕ್ತಿ ನಿಂತಿರುವ ಶೇಡ್ ಪತ್ತೆಯಾಗಿದ್ದು,ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಈ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಎನ್‌ಐಎ ತನಿಖೆಗೆ ಹಸ್ತಾಂತರಿಸಿದೆ. ಕರ್ನಾಟಕ ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ಮುಂದುವರಿಸಿದ್ದು, ಈಗಾಗಾಲೇ ಆರೋಪಿ ಶಾರಿಕ್‌ನ ಹೇಳಿಕೆಯನ್ನು ವೀಡಿಯೋ ದಾಖಲೀಕರಣ ಮಾಡಿಕೊಂಡಿದ್ದಾರೆ
ಗುರುವಾರದಿಂದ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಳ್ಳಲಿದ್ದು, ಶಾರೀಕ್‌ನಿಂದ ಪ್ರತ್ಯೇಕ ಹೇಳಿಕೆಯನ್ನು ಪಡೆದುಕೊಂಡು ದಾಖಲಿಸಿಕೊಳ್ಳಲಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ತನಿಖೆಯ ಸಲುವಾಗಿ ಎನ್‌ಐಎಯ ಮೂರು ತಂಡಗಳು ಮಂಗಳೂರಿಗೆ ಆಗಮಿಸಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಶಾರೀಕ್ ಚೇತರಿಸಿಕೊಳ್ಳುತ್ತಿದ್ದು, ಬುಧವಾರವೂ ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.