ಮಂಗಳೂರು : ನ 17 : ಅವಿಭಜಿತ ದ.ಕ. ಜಿಲ್ಲೆಯ ಸ್ಥಳೀಯಾಡಳಿತದಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಗೆ ಸಹಕಾರಿ ಧುರೀಣ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಕಣಕ್ಕೆ ಇಳಿಯಲು ನಿರ್ಧರಿಸಿರುವುದು ಎರಡು ರಾಷ್ಟ್ರೀಯ ಪಕ್ಷಗಳಲ್ಲೂ ತಳಮಳ ಸೃಷ್ಟಿಸಿದೆ. ಎರಡೂ ಪಕ್ಷಕ್ಕೂ ಅಡ್ಡಮತದಾನದ ಭೀತಿ ಎದುರಾಗಿದ್ದೂ, ಚುನಾವಣೆಗೂ ಸ್ಪರ್ಧಿಸುವ ಬಗ್ಗೆ ಎರಡು ಪಕ್ಷಗಳು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವತ್ತ ಹೆಜ್ಜೆ ಹಾಕಿದೆ.
ಬಿಜೆಪಿ ಬಳಿ ಒಂದು ಸ್ಥಾನ ಗೆಲ್ಲಲು ಬೇಕಾದ ಪ್ರಥಮ ಪ್ರಾಶಸ್ತ್ಯ ಮತಗಳು ಲಭ್ಯವಿದ್ದೂ , ಮತ್ತೂ ಬಹಳಷ್ಟು ಮತಗಳು ಅದರ ಬಳಿ ಮಿಕ್ಕಿ ಉಳಿಯಲಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ದ್ವಿ ಸದಸ್ಯ ವಿಧಾನ ಪರಿಷತ್ ಚುಣಾವಣೆಯಲ್ಲಿ ಒಟ್ಟು 5914 ಮಂದಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಇದರಲ್ಲಿ 3,608 ಬಿಜೆಪಿ 1̧909 ಕಾಂಗ್ರೆಸ್, ಎಸ್ಟಿಪಿಐ 172, ಇತರೆ 219, ಜೆಡಿಎಸ್ 6 ಬೆಂಬಲಿತರ ಅಥಾವ ತನ್ನ ಪಕ್ಷದ ಚಿಹ್ನೆಯಲ್ಲಿ ಗೆದ್ದ ಜನಪ್ರತಿನಿಧಿಗಳ ಮತಗಳನ್ನು ಹೊಂದಿದೆ ಎನ್ನಲಾಗಿದೆ.
ಕನಿಷ್ಟ 1975 ರಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರೆ ಈ ಚುನಾವಣೆ ಗೆಲ್ಲಲು ಸಾಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಈ ಲೆಕ್ಕಚಾರದ ಪ್ರಕಾರ ಬಿಜೆಪಿ ಬಳಿ ಮೊದಲ ಅಭ್ಯರ್ಥಿಗೆ ಮತ ಚಲಾಯಿಸಿದ ಬಳಿಕವೂ ಮತ್ತೂ 1600 ಮತಗಳು ಹೆಚ್ಚುವರಿಯಾಗಿ ಉಳಿಯಲಿದೆ ಹಾಗೂ ಕಾಂಗ್ರೇಸ್ ಗೆ ತನ್ನ ಅಭ್ಯರ್ಥಿಯ ಗೆಲುವಿಗೆ ಅಂದಾಜು 100 ಮತಗಳಷ್ಟು ಕೊರತೆ ಬೀಳಲಿದೆ.
ಹೀಗಾಗಿ ಎರಡನೇ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಪಕ್ಷದ ಮಟ್ಟದಲ್ಲಿ ಚಿಂಥನ – ಮಂಥನ ನಡೆಯುತಿತ್ತು. ಕಾಂಗ್ರೇಸ್ ಪಕ್ಷದಲ್ಲಿ ಸುಮಾರು 11 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಅಕಾಂಕ್ಷಿಗಳಾಗಿರುವುದು,ಈ ಭಿನ್ನಮತದ ಲಾಭ ಪಡೆಯುವ ಹವಣಿಕೆಯೂ ಬಿಜೆಪಿಯ ಲೆಕ್ಕಚಾರದಲ್ಲಿ ಅಡಗಿತ್ತು. ಅದರೇ ಸ್ವತಂತ್ರ ಅಭ್ಯರ್ಥಿಯಾಗಿ ರಾಜೇಂದ್ರ ಕುಮಾರ್ ಸ್ಪರ್ಧೆ ಈ ಹವಣಿಕೆಯನ್ನೂ ಬಹುತೇಕ ಮುಕ್ತಾಯಗೊಳಿಸಿದ್ದು ಹೊಸ ರಾಜಕೀಯ ಸಮೀಕರಣ ಸೃಷ್ಟಿಯಾಗುವಂತೆ ಮಾಡಿದೆ
ಈಗಿನ ಪರಿಸ್ಥಿತಿಯಲ್ಲಿ ಒಂದು ವೇಳೆ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೇ ʼಹಾರುವುದನ್ನು ಹಿಡಿಯಲು ಹೋಗಿ ಕೈಯಲ್ಲಿರುವುದನ್ನು ಕಳಕೊಳ್ಳಬೇಕಾದʼ ಅತಂಕವೂ ಬಿಜೆಪಿಯ ಜಿಲ್ಲಾ ನಾಯಕರನ್ನು ಕಾಡುತ್ತಿದೆ. ಈ ಬಗ್ಗೆ ಪಕ್ಷದ ನಾಯಕರ ಮಧ್ಯೆ ಗಂಭೀರವಾಗಿ ಚರ್ಚೆಗಳು ನಡೆಯುತ್ತಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ಡಿಸಿಸಿ ಚುನಾವಣೆ ಸಂದರ್ಭ ಡಾ. ರಾಜೇಂದ್ರ ಕುಮಾರ್ ಬಣದ ವಿರುದ್ದ ಸಹಕಾರಿ ಭಾರತಿ ಅಭ್ಯರ್ಥಿಯನ್ನು ಇಳಿಸಲು ಹೋಗಿ ಜಿಲ್ಲಾ ಬಿಜೆಪಿಯ ಹುಳುಕು ಬಯಲಾಗಿತ್ತು. ಜಿಲ್ಲೆಯಲ್ಲಿ ಶಿಸ್ತಿನ ಪಕ್ಷ ಎಂಬ ಬಿಜೆಪಿಯ ಹೆಗ್ಗಳಿಕೆ ಆ ಚುನಾವಣೆಯಲ್ಲಿ ಮಣ್ಣುಪಾಲಗಿತ್ತು. ಬಿ ಜೆಪಿ ಬೆಂಬಲದಿಂದಲೆ ಗೆದ್ದವರು ಡಿಸಿಸಿ ಚುನಾವಣೆಯಲ್ಲಿ ರಾಜೇಂದ್ರ ಕುಮಾರ್ ಬಣದ ಪರ ಮತ ಚಲಾಯಿಸಿದ್ದರು. ಈ ಬಾರಿ ಮತ್ತೆ ಅದೇ ಅಡ್ಡ ಮತದಾನದ ಆತಂಕ ಪಕ್ಷದ ವರಿಷ್ಟರನ್ನು ಕಾಡುತ್ತಿದೆ.

ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಂತೂ ಡಿಸಿಸಿ ಬ್ಯಾಂಕ್ ಅಡ್ಡ ಮತದಾನ ಅಣೆ, ಪ್ರಮಾಣ, ರಾಜೀನಾಮೆ ಪರ್ವ , ಬಂಡಾಯ ಕೊನೆಗೆ ಪಕ್ಷ ಒಡೆಯುವ ಅಂಚಿನವರೆಗೂ ಬಂದು ತಲುಪಿತ್ತು. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅನಾಯಸವಾಗಿ ಗೆಲ್ಲಬಹುದಾಗಿದ್ದ ಒಂದಷ್ಟು ಗ್ರಾ. ಪಂ ಗಳನ್ನು ಇದೇ ಅಡ್ಡ ಮತದಾನದ ಬಳಿಕ ಉಧ್ಭವಿಸಿದ ರಾಜಕೀಯ ಪರಿಸ್ಥಿತಿಯಿಂದಾಗಿ ಕಳೆದುಕೊಳ್ಳಬೇಕಾದ ಸ್ಥಿತಿಗೂ ತಲುಪಿತ್ತು. ಬಳಿಕ ಕೆಲ ತಿಂಗಳುಗಳ ಹಿಂದೆಯಷ್ಟೇ ಅದಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ತೇಪೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ದೂ ಅಡ್ಡ ಮತದಾನ ಸೃಷ್ಟಿಸಿದ ಬೇಗುದಿ ಸಂಪೂರ್ಣವಾಗಿ ಶಮನವಾದಂತೆ ಕಾಣುತ್ತಿಲ್ಲ.
ಇದೀಗ ವಿಧಾನ ಪರಿಷತ್ ಚುನಾವಣೆ ಬಂದಿದೆ. ಬಿಜೆಪಿಗೆ ಮತ್ತೆ ಅದೇ ರಾಜೇಂದ್ರ ಕುಮಾರ್ ರವರ ತಂಡ ಠಕ್ಕರ್ ಕೂಡುತ್ತಿದೆ. ಬಿಜೆಪಿ ಹಾಲಿ ಸದಸ್ಯ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸತತ 4ನೇ ಬಾರಿಗೆ ಕಣಕ್ಕೆ ಇಳಿಸಲು ನಿರ್ಧರಿಸಿದೆ. ಅವರು ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿರುವುದರಿಂದ ಹಾಗೂ ವಿಧಾನಪರಿಷತ್ತಿನಲ್ಲಿ ಸದನದ ನಾಯಕರೂ ಆಗಿರುವುದರಿಂದ ಅವರ ಗೆಲುವು ಅನಿವಾರ್ಯವೂ ಹೌದು, ಪ್ರತಿಷ್ಟೆಯೂ ಹೌದು .
ಕೋಟ ಹೈಕಮಾಂಡಿನ ಒಮ್ಮತದ ಅಭ್ಯರ್ಥಿಯಾದರು, ಅವರು ತನ್ನ ತವರು ಜಿಲ್ಲೆಯಲ್ಲಿ ಒಂದಷ್ಟು ಭಿನ್ನಮತ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಬಗ್ಗೆ ಉಡುಪಿ ಬಿಜೆಪಿಯವರಿಗೆ ಅಷ್ಟಕಷ್ಟೆ. ಈ ಹಿಂದೆ ಕೋಟ ಮೊದಲ ಬಾರಿಗೆ ಸಚಿವರಾದಾಗ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಡಿ ಎಂದು ಪಕ್ಷದ ನಾಯಕರಿಗೆ ಪತ್ರ ಬರೆದು ಅಸಮಾಧಾನ ತೋರ್ಪಡಿಸಿದ್ದರು. ಬಳಿಕ ಕೋಟ ಅವರನ್ನು ದ.ಕ. ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಅಲ್ಲದೇ ಈ ಬಾರಿ ಬೊಮ್ಮಾಯಿ ಅಧಿಕಾರ ಸ್ವೀಕರಿಸುವಾಗ ಸಚಿವರಾಗಬೇಕು ಎಂಬ ಅಕಾಂಕ್ಷೆ ಹೊಂದಿದ್ದ ಜಿಲ್ಲೆಯ ಶಾಸಕರು ಒಬ್ಬರಂತು ಕೋಟ ಬಗ್ಗೆ ನಿಗಿ ನಿಗಿ ಕೆಂಡದಂತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ನಿರ್ದೇಶನದಿಂದ ಅವರ ನಿಷ್ಟಾವಂತರು ಉಲ್ಟಾ ಹೊಡೆದರೆ ಅದು ಬಿಜೆಪಿಗೆ ದುಬಾರಿಯಾಗಲಿದೆ.

ದ.ಕದಲ್ಲೂ ಬಿಜೆಪಿಯ ಒಂದು ಪ್ರಭಲ ಬಣದ ಜತೆ ಕೋಟ ಒಡನಾಟ ಅಷ್ಟು ಹಿತಕರವಾಗಿಲ್ಲ ಎನ್ನುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಹಾಗಾಗಿಯೇ ಅವರಿಗೆ ಜಿಲ್ಲೆಯ ಉಸ್ತುವಾರಿ ಕೈ ತಪ್ಪಿದೆ ಎಂಬ ವದಂತಿಗಳು ಹರಡಿದ್ದವು. ಹೀಗಾಗಿ ಬಿಜೆಪಿ ಒಂದು ವೇಳೆ ಎರಡನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದಲ್ಲಿ ಆಗ ಕೆಲ ಬಿಜೆಪಿ ಬೆಂಬಲಿಗ ಮತದಾರರು ಅಡ್ಡ ಮತದಾನ ಮಾಡಿದ್ರೆ ಕೋಟ ಗೆಲುವಿಗೆ ಏದುಸಿರು ಬಿಡಬೇಕಾದ ಪರಿಸ್ಥಿತಿ ಎದುರಾಗಬಹುದು ಎನ್ನುವುದು ರಾಜಕೀಯ ವಿಶ್ಲೇ಼ಷಕರ ಅಭಿಮತ.
ಪ್ರಭಲ ಬಿಲ್ಲವ ಸಮುದಾಯಕ್ಕೆ ಸೇರಿದ ಕೋಟ ಸೋಲು ಅವಿಭಜಿತ ಜಿಲ್ಲೆಯಲ್ಲಿ ಬಿಜೆಪಿಗೆ ಕಲ್ಪಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣ ಮಾಡುವ ಆತಂಕ ಇರುವುದರಿಂದ ಇನ್ನೊಂದು ಅಭ್ಯರ್ಥಿ ನಿಲ್ಲಿಸುವ ರಿಸ್ಕ್ ಗೆ ಬಿಜೆಪಿ ಹೋಗದು ಎನ್ನುವ ಮಾತುಗಳು ಇದೀಗ ರೆಕ್ಕೆ ಪುಕ್ಕ ಪಡೆದುಕೊಂಡು ಹಾರಲು ಸಿದ್ದವಾಗಿದೆ. ಎರಡನೇ ಅಭ್ಯರ್ಥಿಯನ್ನು ನಿಲ್ಲಿಸಿದರೇ ಅಗ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಕ್ಷದ ಮತದಾರರ ನಡುವೆ ಹಂಚುವಾಗ ಭಾರೀ ಲೆಕ್ಕಚಾರ ಹಾಗೂ ತಂತ್ರಗಾರಿಕೆಯ ಅವಶ್ಯಕತೆಯಿರುತ್ತದೆ.
ಸ್ಪರ್ಧೆ ತುರುಸಿನಿಂದ ಕೂಡಿರುವುದರಿಂದ ಒಂದಷ್ಟು ಮತದಾರರು ಪಕ್ಷದ ನಿರ್ದೇಶನವನ್ನು ಮೀರಿ ಮತ ಚಲಾಯಿಸಿದರೇ ಆಗ ಇಡೀ ಲೆಕ್ಕಚಾರ ತಲೆ ಕೆಳಗಾಗಿ ಒಂದನೇ ಅಭ್ಯರ್ಥಿಯೇ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದೆರಗಬಹುದು. ಹಾಗಾಗಿ ಎರಡನೇ ಅಭ್ಯರ್ಥಿಯನ್ನು ನಿಲ್ಲಿಸದೇ ರಕ್ಷಣಾತ್ಮಕ ವ್ಯೂಹ ರಚನೆಯತ್ತ ಜಿಲ್ಲಾ ಬಿಜೆಪಿ ಥಿಂಕ್ ಟ್ಯಾಕ್ ಮನ ಮಾಡಿದೆ ಎಂದು ತಿಳಿದು ಬಂದಿದೆ
ಅದರೆ ಪಕ್ಷವೂ ಎರಡನೇ ಅಭ್ಯರ್ಥಿ ನಿಲ್ಲಿಸದಿದ್ದರೆ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ಆತಂಕವೂ ಬಿಜೆಪಿ ವರಿಷ್ಟರನ್ನು ಕಾಡುತ್ತಿದೆ. ಈ ಚುನಾವಣೆಯಲ್ಲಿ ರಾಜೇಂದ್ರ ಕುಮಾರ್ ಸ್ವತಂತ್ರ ಅಭ್ಯರ್ಥಿಯಾದರೂ ಅವರು ಈ ಹಿಂದೆ ಬಿಜೆಪಿ ವಿರೋಧಿ ಪಾಳಯದಲ್ಲಿಯೇ ಗುರುತಿಸಿಕೊಂಡಿರುವುದು, ಡಿಸಿಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವನ್ನು ಕಸಿದುಕೊಂಡಿರುವುದು, ಈ ಹಿಂದೆ ಕೆಲ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಅವರು ಚುನಾವಣಾ ಉಸ್ತುವರಿ ವಹಿಸಿಕೊಂಡಿರುವ ನಿದರ್ಶನಗಳು ಇವೆಯಾದುದರಿಂದ, ಎರಡನೇ ಅಭ್ಯರ್ಥಿಯನ್ನು ನಿಲ್ಲಿಸದೆ, ಅವರನ್ನು ಸೋಲಿಸಲು ಬಿಜೆಪಿ ಪ್ರಯತ್ನಿಸಿಲ್ಲ ಎಂಬ ಅಪವಾದ ಎದುರಾಗುವ ಬೀತಿಯನ್ನು ಬಿಜೆಪಿ ಎದುರಿಸುತ್ತಿದೆ. ಹೀಗಾಗಿ ಈ ಬಾರಿಯ ಚುಣಾವಣೆ ಮತ್ತೆ ತೀವ್ರ ಕುತೂಹಲದ ಕಣವಾಗಿ ಬದಲಾಗಿದೆ