ಬಾಡೂರು: ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬ ಶುಕ್ರವಾರ ತನ್ನ ಮನೆಯಿಂದ ನಾಪತ್ತೆಯಾಗಿದ್ದು , ಇದರ ಹಿಂದೆ ಮತಾಂತರದ ಶಂಕೆಯನ್ನು ಕೆಲ ಬಲಪಂಥೀಯ ಸಂಘಟನೆಗಳು ವ್ಯಕ್ತಪಡಿಸಿವೆ.
ಕಾಸರಗೋಡು ಜಿಲ್ಲೆಯ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಬಾಡೂರು ಚಾಕಟೆಚಾಲ್ ರಾಮಣ್ಣ ಪೂಜಾರಿ ಎಂಬವರ ಪುತ್ರ ಪ್ರವೀಣ್ ಕುಮಾರ್ ಸಿ.ಎಚ್ ( 32) ನಾಪತ್ತೆಯಾದ ವ್ಯಕ್ತಿ . ಈತ ಬದಿಯಡ್ಕದ ಸಮೀಪದ ಪೆಟ್ರೋಲ್ ಬಂಕ್ ವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ . ಆದರೇ ಆತನ ತಾಯಿ ಮಗನನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿದೆ ಎಂದು ದೂರು ನೀಡಿದ್ದಾರೆ.
ಅಪಹರಣ ದೂರು :
ಶುಕ್ರವಾರ ರಾತ್ರಿ ಊಟದ ಬಳಿಕ ಮನೆಯಲ್ಲಿ ಕುಳಿತಿದ್ದ ಪ್ರವೀಣ್ ಮಲಗಲು ಅಣಿಯಾಗುತ್ತಿದ್ದಂತೆ ಬಿಳಿ ಬಣ್ಣದ ಕಾರೊಂದು ಬಂದಿದ್ದು, ಕಾರಿನಲ್ಲಿ ಬಂದ ಹಳದಿ ಟಿಶರ್ಟ್ ಧರಿಸಿದ ವ್ಯಕ್ತಿ ಪ್ರವೀಣ್ ರನ್ನು ಕರೆದು ಮಲಯಾಳಂ ನಲ್ಲಿ ಮಾತನಾಡಿಸಿದ್ದಾರೆ. ಬಳಿಕ ಅವರ ಜತೆ ಕಾರನ್ನು ಹತ್ತಿದ ಪ್ರವೀಣ್ ಬಳಿಕ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. ಮಗನನ್ನು ನಾಲ್ವರ ತಂಡ ಅಪಹರಿಸಿರುವುದಾಗಿ ಪ್ರವೀಣ್ ತಾಯಿ ಪ್ರೇಮ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

ಧಾರ್ಮಿಕ ನಡವಳಿಕೆಯಲ್ಲಿ ಮಹತ್ತರ ಬದಲಾವಣೆ ?
ನೆಲ್ಲಿಕಟ್ಟೆಯ ವ್ಯಕ್ತಿಯ ಮಾಲೀಕತ್ವದ ಬದಿಯಡ್ಕ ಮತ್ತು ನೆಲ್ಕಿಕಟ್ಟೆಯ ಪೆಟ್ರೊಲ್ ಬಂಕ್ ವ್ಯವಸ್ಥಾಪಕನಾಗಿ ಕಳೆದ ನಾಲ್ಕು ವರ್ಷಗಳಿಂದ ಪ್ರವೀಣ್ ಕೆಲಸ ಮಾಡುತ್ತಿದ್ದ. ಆದರೇ ಈತನ ನಡವಳಿಕೆಯಲ್ಲಿ ಶಂಕಾಸ್ಪದವಾಗಿದೆ. ಕೆಲವು ತಿಂಗಳಿಂದ ಈ ವ್ಯತ್ಯಾಸ ಕಂಡುಬಂದಿತ್ತು ಎನ್ನಲಾಗಿದೆ. ಅಲ್ಲದೇ, ಈತನ ಧಾರ್ಮಿಕ ಆಚರಣೆಯಲ್ಲಿ ಮಹತ್ತರ ಬದಲಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಇತ್ತಿಚೆಗೆ ಆತನ ಮನ ಪರಿವರ್ತನೆಗೆ ಯತ್ನಿಸಿದ್ದರು ಎಂದು ವರದಿಯಾಗಿದೆ.
ಮನಪರಿವರ್ತನೆಗೆ ಸಂಸ್ಥೆಗೆ ದಾಖಲು -ಅಲ್ಲಿಂದ ಪರಾರಿ
ಈತನನ್ನು ತಿರುವನಂತಪುರದ ಸಂಸ್ಥೆಯೊಂದರಲ್ಲಿ ಸೇರಿಸಿ ಕಳೆದ ಒಂದು ತಿಂಗಳಿನಿಂದ ಧರ್ಮ ಜಾಗೃತಿ ಉಪದೇಶ ನೀಡಲಾಗಿತ್ತು. ಆದರೆ ಆತ ಅಲ್ಲಿಂದ ಪರಾರಿಯಾಗಿ ತಿರುವನಂತಪುರದ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ತಿರುವನಂತಪುರದ ಪೊಲೀಸರು ಈತನನ್ನು ಊರಿಗೆ ಕಳುಹಿಸಿದ್ದು, ಬದಿಯಡ್ಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೆಷಲ್ ಬ್ರಾಂಚ್ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಉಗ್ರ ಹೋರಾಟ:
ನಾಪತ್ತೆ ಪ್ರಕರಣ ಸಂಬಂಧಿಸಿ ಮತಾಂತರದ ಶಂಕೆ ವ್ಯಕ್ತಪಡಿಸಿರುವ ವಿಶ್ವ ಹಿಂದು ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಕಾಸರಗೋಡು ಜಿಲ್ಲಾ ಸಂಘಟನೆ ವೃದ್ಧ ತಂದೆ ತಾಯಿಯರಿಗೆ ಏಕೈಕ ಆಶ್ರಯವಾಗಿದ್ದ ಯುವಕನ್ನು ಶೀಘ್ರ ಪತ್ತೆಹಚ್ಚಿ ಕ್ರಮ ಕೈಗೊಳ್ಳದಿದ್ದರೆ ಬಹಿರಂಗ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೇ. ಆತನ ಮತಾತಂರದ ಹಿಂದೆ ಆತ ಉದ್ಯೋಗ ಮಾಡುವ ಸಂಸ್ಥೆಯ ಕೆಲವರ ಕೈವಾಡವಿದೆಯೆಂಬ ಆರೋಪವನ್ನು ಬಲಪಂಥೀಯ ಸಂಘಟನೆಗಳು ಮಾಡಿವೆ.