ಸುಳ್ಯ : ಸೆ 19 : ನಿರ್ಜನ ಪ್ರದೇಶವೊಂದರಲ್ಲಿದ್ದ ಮನೆಗೆ ಹೊಕ್ಕ ದರೋಡೆಕೋರರು ನಗ ಮತ್ತು ನಗದು ಕೊಂಡೊಯಿದ್ದ ಘಟನೆ ಕೆಲ ದಿನಗಳ ಹಿಂದೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿತ್ತು. ಆ ಪ್ರಕರಣದ ಆರೋಪಿಗಳ ಪತ್ತೆ ಇನ್ನು ಆಗಿಲ್ಲ . ಇದರ ಬೆನ್ನಲೇ ಮತ್ತೊಂದು ದರೋಡೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ. ಸುಳ್ಯ ನಗರದ ಹಳೇ ಗೇಟು ಎಂಬಲ್ಲಿ ಈ ಕೃತ್ಯ ನಡೆದಿದ್ದು, ಇದು ಮಾಣಿ – ಮೈಸೂರು ಹೆದ್ದಾರಿಯಲ್ಲಿದೆ.
ಬಾಡಿಗೆ ಆಟೋದ ಸೋಗಿನಲ್ಲಿ ದರೋಡೆಕೋರರು ಕೃತ್ಯ ಎಸಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ ದರ್ಶನ್ (27ವರ್ಷ)ಗೊಳಗಾದವರು. ಇವರು ವೈಯಕ್ತಿಕ ಕೆಲಸದ ನಿಮಿತ್ತ ಸೆ 18 ರಂದು ಸುಳ್ಯಕ್ಕೆ ಬಂದಿದ್ದರು. ಅದೇ ದಿನ ರಾತ್ರಿ 11.15ರ ಸುಮಾರಿಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳುವ ಉದ್ದೇಶದಿಂದ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ರಸ್ತೆ ಬದಿ ಬಾಡಿಗೆ ವಾಹನಕ್ಕೆ ಕಾಯುತ್ತಿದ್ದರು. ಈ ವೇಳೆ ಆಟೋರಿಕ್ಷಾ ವೊಂದು ಆಗಮಿಸಿದ್ದು, ಅದರಲ್ಲಿ ಆಗಲೇ ಇಬ್ಬರು ಪ್ರಯಾಣಿಕರು ಹಿಬ್ಬಂದಿ ಸೀಟಿನಲ್ಲಿ ಕೂತಿದ್ದರು.
ದರ್ಶನ್ ಅವರು ಆ ಅಟೋ ರಿಕ್ಷಾ ಹತ್ತಿದ್ದು, ಆಗ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ಅವರ ಕೈಯಲ್ಲಿದ್ದ ಬ್ಯಾಗ್ ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರುತ್ತಾರೆ. ಇದನ್ನು ವಿರೋಧಿಸಿದಾಗ, ದುಷ್ಕರ್ಮಿಗಳು ದರ್ಶನ್‌ಗೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ಅವರನ್ನು ಮೂವರು ಸೇರಿ ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿರುತ್ತಾರೆ.
ಬ್ಯಾಗಿನಲ್ಲಿ ವ್ಯವಹಾರದ ಹಣ ಒಟ್ಟು 3.5 ಲಕ್ಷ ರೂಪಾಯಿ, ಎರಡು ಮೊಬೈಲ್ ಗಳು, ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿದ್ದವು. ಘಟನೆಯ ಸಮಯ ಅಟೋ ರಿಕ್ಷಾದ ನೋಂದಣಿ ಸಂಖ್ಯೆಯನ್ನು ಪಿರ್ಯಾದಿರವರು ಗಮನಿಸಿರುವುದಿಲ್ಲ ಎಂಬುದಾಗಿ ಸುಳ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಕಳೆದ 3 ತಿಂಗಳಿನಿಂದ ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆ. ಕುದ್ಕಾಡಿ ದರೋಡೆ ಪ್ರಕರಣದ ಬಳಿಕ ಮಾಣಿ ಮೈಸೂರು ರಸ್ತೆಯ ಅಮ್ಚಿನಡ್ಕ ಸಮೀಪ ಅಂಗಡಿಯೊಂದರ ಬಳಿ ದರೋಡೆಗೆ ಯತ್ನ ನಡೆದಿತ್ತು ಎಂದು ಸ್ಥಳೀಯರಿಂದ ಮಾಹಿತಿ ಸಿಕ್ಕಿದೆ. ಕುದ್ಕಾಡಿ ದರೋಡೆಯ ಬಳಿಕ ಅಲ್ಲಿಂದ ಕೆಲ ಕಿ ಮೀ ದೂರದಲ್ಲಿರುವ ದೇವಸ್ಥಾನವೊಂದರಲ್ಲಿ ದರೋಡೆಗೆ ಯತ್ನ ನಡೆದಿತ್ತು ಎಂಬ ಕುರಿತು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಆದರೇ ಈ ಎರಡು ಕೃತ್ಯಗಳಲ್ಲೂ ಠಾಣೆಯಲ್ಲಿ ದೂರು ದಾಖಲಾಗಿಲ್ಲ .
ಪುತ್ತೂರು ಗ್ರಾಮಾಂತರ ಠಾಣೆ, ಬೆಳ್ಳಾರೆ ಠಾಣೆ ಹಾಗೂ ಸುಳ್ಯ ಠಾಣೆ ವ್ಯಾಪ್ತಿಯಲ್ಲಿ ಕಳ್ಲರ ಗ್ಯಾಂಗೊಂದು ಸಕ್ರಿಯವಾಗಿದೆ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದ್ದು ಆವರು ಆತಂಕದಲ್ಲಿ ದಿನ ಕಳೆಯುವಂತೆ ಆಗಿದೆ. ಪೊಲೀಸ್ ಇಲಾಖೆ ಈ ವ್ಯಾಪ್ತಿಯಲ್ಲಿ ರಾತ್ರಿ ಗಸ್ತನ್ನು ಹೆಚ್ಚಿಸಿ ಸಾರ್ವಜನಿಕರ ಭಯ ನಿವಾರಣೆ ಮಾಡಬೇಕಿದೆ.