ಪುತ್ತೂರು: ಶ್ರೀ ದೇವತಾ ಸಮಿತಿಯ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ 66ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಸೆ.19ರಿಂದ 25 ರತನಕ ನಡೆಯಲಿದ್ದು, ಮಂಗಳವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಸೆ.24 ರಂದು ಮಧ್ಯಾಹ್ನ12ಕ್ಕೆ ಗಣಪತಿ ದೇವರಿಗೆ ಅತ್ಯಂತ ಪ್ರಿಯವಾದ ಮೂಡಪ್ಪ ಸೇವೆ ನಡೆಯಲಿದೆ.

ಕೋರ್ಟು ರಸ್ತೆಯ ಬಳಿಯ ಸಾಯಿ ಮಂದಿರದಿಂದ ಕಿಲ್ಲೆ ಮೈದಾನದವರೆಗೆ ಆರಾಧಿಸಲ್ಪಡುವ ಶ್ರೀ ಗಣೇಶ ಪೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಕಾಳಿಕಾಂಬ ಭಜನಾ ಮಂಡಳಿ ಮತ್ತು ಶ್ರೀ ಚಾಮುಂಡೇಶ್ವರಿ ಭಜನಾ ಸಂಘದಿಂದ ಭಜನೆ, ನಾಟ್ಯರಂಗ ಪುತ್ತೂರು ವತಿಯಿಂದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಶಿಷ್ಯ ಬಳಗದಿಂದ ಭರತನಾಟ್ಯ ವೈಭವ, ಗಣಪತಿ ಹವನ, ತುಲಾಭಾರ ಸೇವೆ, ಮಹಾ ಪೂಜೆ, ರಂಗಪೂಜೆ ನಡೆಯಿತು.

ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಚಾಲನೆ ನೀಡಿದರು. ಮುಖಂಡರಾದ ಚಂದ್ರಹಾಸ ಶೆಟ್ಟಿ, ಸೂತ್ರಬೆಟ್ಟು ಜಗನ್ನಾಥ ರೈ, ನಿರಂಜನ ರೈ ಮಠಂತಬೆಟ್ಟು, ಡಾ. ರಾಜೇಶ್ ಬೆಜ್ಜಂಗಳ, ಸುದೇಶ್ ನಾಯಕ್, ಸುರೇಶ್ ಆಳ್ವ, ಕೃಷ್ಣ ನಾಯಕ್, ಸಮಿತಿ ಕಾರ್ಯದರ್ಶಿ ದಿನೇಶ್ ಪಿ. ಮತ್ತಿತರರು ಉಪಸ್ಥಿತರಿದ್ದರು.
ಪ್ರತಿದಿನ ತುಲಾಭಾರ ಸೇವೆ:

ಪ್ರತಿ ದಿನ ಬೆಳಿಗ್ಗೆ 7-30ಕ್ಕೆ ಪೂಜೆ 11-30ಕ್ಕೆ ಗಣಪತಿ ಹವನ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ರಾತ್ರಿ 8.30ಕ್ಕೆ ರಂಗಪೂಜೆ, 9-30ಕ್ಕೆ ಮಹಾಪೂಜೆ ನಡೆಯಲಿದೆ. ಬೆಳಿಗ್ಗೆ 10-30ಕ್ಕೆ ತುಲಾಭಾರ ಸೇವೆ ನಡೆಯಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣ (ದೇವರ ನೈವೇದ್ಯ) ನಡೆಯಲಿದೆ. ಸೆ.24ರಂದು ಮಧ್ಯಾಹ್ನ 12ಕ್ಕೆ ದೇವರಿಗೆ ಮೂಡಪ್ಪ ಸೇವೆ ನಡೆಯಲಿದೆ.

ವಿವಿಧ ಕಾರ್ಯಕ್ರಮ:
ಸೆ.20ರಂದು ಮಧ್ಯಾಹ್ನ 12ಕ್ಕೆ ಸ್ಯಾಕ್ಟೋಫೋನ್, 1ರಿಂದ ಯಕ್ಷಗಾನ, ಸಾಯಂಕಾಲ 6ರಿಂದ ಭಜನೆ ರಾತ್ರಿ 7ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಸೆ. 21 ಗುರುವಾರ ಬೆಳಿಗ್ಗೆ 11ರಿಂದ ಸ್ಯಾಕ್ಟೋಫೋನ್, ಮಧ್ಯಾಹ್ನ 12ರಿಂದ ಭಜನೆ, ಸಾಯಂಕಾಲ 6ಕ್ಕೆ ಸ್ಯಾಕ್ರೋಫೋನ್, ರಾತ್ರಿ 7 ನೃತ್ಯ ವೈಭವ, ಸೆ.22ರಂದು ಬೆಳಿಗ್ಗೆ 11ರಿಂದ ಭಜನೆ, ಸಾಯಂಕಾಲ 5ರಿಂದ ಭಜನೆ, 6ರಿಂದ ಸ್ಯಾಕ್ರೋಫೋನ್, ರಾತ್ರಿ 7ರಿಂದ ಬೊಳ್ಳಿಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕ, ಸೆ.23 ರಂದು ಬೆಳಿಗ್ಗೆ 11ರಿಂದ ಭಜನೆ, 12 ಸ್ಯಾಕ್ಟೋಫೋನ್, ಮಧ್ಯಾಹ್ನ 1 ಭಜನೆ ಸಾಯಂಕಾಲ 6ರಿಂದ ಧಾರ್ಮಿಕ ಸಭೆ, ರಾತ್ರಿ 7 ಯಕ್ಷ ಹಾಸ್ಯ ಮಂಜರಿ, ಸೆ.24ರಂದು ಬೆಳಗ್ಗೆ 11ರಿಂದ ಭಜನೆ, 12.30 ರಿಂದ ಸುಗಮ ಸಂಗೀತ, 1.30 : ಯಕ್ಷಗಾನ ತಾಳಮದ್ದಳೆ, ಸಾಯಂಕಾಲ 4.30 ಭಜನೆ, 5.30 ಸ್ಯಾಕ್ಲೋಫೋನ್, ರಾತ್ರಿ 7ರಿಂದ ಅಮ್ಮೆರ್ ತುಳು ಹಾಸ್ಯ ಭರಿತ ನಾಟಕ, ಸೆ.25ರಂದು ಮಧ್ಯಾಹ್ನ 1 ದೇವರ ಉತ್ಸವ, 2 ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಯಂಕಾಲ 6ಕ್ಕೆ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವದ ಭೂತ ಕೋಲ, ರಾತ್ರಿ 7.10ಕ್ಕೆ ಸುಡುಮದ್ದು ಪ್ರದರ್ಶನ, ಶೋಭಾಯಾತ್ರ ನಡೆಯಲಿದೆ.
