ಬೆಂಗಳೂರು, (ಸೆಪ್ಟೆಂಬರ್ 19): ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದ ಮೂರನೇ ಪ್ರಮುಖ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀಯನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ಎಂದೆ ಬಿಂಬಿತವಾಗಿರುವ ಈ ಸ್ವಾಮೀಜಿಯನ್ನು ಒಡಿಶಾದ ಕಟಕ್ನಲ್ಲಿ ಸೆ 19 ರಂದು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧ್ಗಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಹಿಡಿದಿದ್ದಾರೆ. ಇದಕ್ಕಾಗಿ ಅವರು ಒಡಿಶಾ ಪೊಲೀಸರ ಸಹಕಾರ ಪಡೆದುಕೊಂಡಿದ್ದಾರೆ. 10 ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣ , ನಾಲ್ಕು ತಿಂಗಳಿನಿಂದ ಸಾರ್ವಜನಿಕ ವಲಯದಲ್ಲಿ ವದಂತಿ ರೂಪದಲ್ಲಿತ್ತು. ಸೆ 8 ರಂದು ಸಂತ್ರಸ್ತ ಗೋವಿಂದ ಬಾಬು ಪೂಜಾರಿ ಬೆಂಗಳೂರಿನ ಬಂಡುಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಸ್ವಾಮೀಜಿ ಊರು ಬಿಟ್ಟು ತಲೆ ಮರೆಸಿಕೊಂಡಿದ್ದ.
ಸೆ 10 ರಂದು ರಾತ್ರಿ ಪ್ರಕರಣದ ಎ 1 ಆರೋಪಿ ಚೈತ್ರಾ ಕುಂದಾಪುರ ಹಾಗೂ ಇತರ ಸಹಚರರನ್ನು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದರು. ಮರುದಿನ ಹಾಲಶ್ರೀ ಸ್ವಾಮೀಜಿ ಹೊರತುಪಡಿಸಿ ಉಳಿದ ಎಲ್ಲ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೇ ಹಾಲಶ್ರೀಯ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಇನ್ನು ಸಿಸಿಬಿ ಕಸ್ಟಡಿಯಲ್ಲಿದ್ದ ಚೈತ್ರಾ ಕುಂದಾಪುರ ಸ್ವಾಮೀಜಿ ಬಂಧನವಾದರೇ ದೊಡ್ಡ ದೊಡ್ಡವರ ಹೆಸರು ಬಾಯ್ಬಿಡುತ್ತರೇ ಅಂದಿದ್ದಳು.

ಈ ಹಿನ್ನೆಲೆಯಲ್ಲಿ MLA ಟಿಕೆಟ್ ಡೀಲಿಂಗ್ ಹಿಂದೆ ಇರೋ ಆ ದೊಡ್ಡವರು ಯಾರು ಎನ್ನುವ ಕುತೂಹಲ ಮನೆ ಮಾಡಿತ್ತು. ಇದೀಗ ತಲೆಮರೆಸಿಕೊಂಡಿದ್ದ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠ ಅಭಿನವ ಹಾಲಶ್ರೀ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಆತ ವಿಚಾರಣೆ ಸಂದರ್ಭ ದೊಡ್ಡವರ ಹೆಸರು ಬಾಯಿಬಿಡುವ ಸಾಧ್ಯತೆ ಇದೆ. ಇದರಿಂದ ಸ್ವಾಮೀಜಿಯ ಬಂಧನ ಭಾರೀ ಕುತೂಹಲ ಮೂಡಿಸಿದೆ. ದೂರುದಾರ ಗೋವಿಂದ್ ಪೂಜಾರಿಯಿಂದ ಈ ವಂಚಕ ಸ್ವಾಮೀಜಿ ಒಂದೂವರೆ ಕೋಟಿ ಪಡೆದಿದ್ದ .

ಆರೋಪಿ ಬಂಧನಕ್ಕೆ ಸಿಸಿಬಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದರು. ಹೈದರಾಬಾದ್‌ನಲ್ಲಿ ಅಡಗಿದ್ದ ಮಾಹಿತಿ ಮೇರೆಗೆ ಅಲ್ಲಿಗೂ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿತ್ತು. ಅಲ್ಲದೇ ಸ್ವಾಮೀಜಿ ಆಪ್ತರ ತೀವ್ರ ವಿಚಾರಣೆ ಕೂಡ ನಡೆಸಲಾಗಿತ್ತು. ಇದೀಗ ಒಡಿಸ್ಸಾದ ಹೋಟೆಲ್ ಒಂದರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಹಾಲಶ್ರೀ ಫೋನ್ ಬಳಸದೆ ಪದೇ ಪದೇ ಇರುವ ಸ್ಥಳ ಬದಲಾಯಿಸುತ್ತಿದ್ದು, ಬಂಧನಕ್ಕೆ ಸ್ವಲ್ಪ ಕಷ್ಟವಾಗಿತ್ತು. ಆದರೆ ಇದೀಗ ಆರೋಪಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವುದು ಖಚಿತವಾಗಿದೆ. ಸ್ವಾಮೀಜಿಗಾಗಿ ಪ್ರತ್ಯೇಕವಾಗಿ ಎರಡು ತಂಡಗಳು ಕಾರ್ಯಚರಣೆ ನಡೆಸುತ್ತಿದ್ದವು.