ಬಹು ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಪ್ರಕರಣದ ಕುರಿತು ಮಾಧ್ಯಮಗಳು ವಿಪರೀತ ಆಸ್ಥೆ ವಹಿಸಿ ವರದಿ ಮಾಡುತ್ತಿದ್ದು, ಪ್ರಕರಣದ ಇಂಚಿಂಚು ವಿವರವನ್ನು ಬಹಿರಂಗಗೊಳಿಸಲು ಪೈಪೋಟಿಗಿಳಿದಿವೆ. ರಾಜ್ಯ ಮಟ್ಟದ ದೃಶ್ಯ ವಾಹಿನಿಗಳಂತು ಬೆನ್ನು ಬಿಡದೆ ಪ್ರಕರಣದ ವರದಿ ಮಾಡುತ್ತಿದ್ದು ಇದರ ಹಿಂದಿರುವ ಪ್ರತಿಷ್ಟಿತರ ಹೆಸರು ಬಹಿರಂಗಗೊಳಿಸಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿಸಿದೆ. ಆದರೆ ಇದೆ ವೇಳೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಸಿಸಿಬಿಗೂ ಅಷ್ಟೇ ಆಸಕ್ತಿ ಇದೆಯೇ ? ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಐದು ದಿನದ ಹಿಂದೆ ಆರೋಪಿಗಳಾದ ಚೈತ್ರಾ ಅಂಡ್ ಗ್ಯಾಂಗ್ ನ್ನು ಸಿಸಿಬಿ ಪೊಲೀಸರು ಬಂಧಿಸಿತ್ತು. ಅದಾದ ಬಳಿಕ ತನಿಖೆಯಲ್ಲಿ ಭಾರೀ ಪ್ರಗತಿಯಾದಂತೆ ತೋರುತ್ತಿಲ್ಲ. ಚೈತ್ರಾಳನ್ನು ಬಂಧಿಸಿದ ವೇಳೆ ಅವಳ ಜತೆಗಿದ್ದ ಇತರ ಕೆಲ ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಬೆಂಗಳೂರು ಕೋರ್ಟಿಗೆ ಹಾಜರುಪಡಿಸಿದರು. ಆದರೇ ಆ ಪ್ರಕರಣದ ಮೂರನೇ ಆರೋಪಿ ಹಾಗೂ ಪ್ರಕರಣದ ಕಿಂಗ್ ಪಿನ್ ಗಳಲ್ಲಿ ಒಬ್ಬರಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯ ಬಂಧನವಾಗಿಲ್ಲ. ಬೆಂಗಳೂರಿನ ಬಂಡು ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿ 11 ದಿನ ಕಳೆದರೂ ಇಲ್ಲಿಯವರೆಗೆ ಈತನ ಬಂಧಿಸುವ ಪ್ರಾಮಾಣಿಕ ಪ್ರಯತ್ನ ಸಿಸಿಬಿ ಮಾಡಿದಂತೆ ಗೋಚರಿಸುತ್ತಿಲ್ಲ.
ಅಭಿನವ ಹಾಲಶ್ರೀ ಮೇಲೆ ಒಂದೂವರೆ ಕೋಟಿ ರೂ ಹಣ ಸ್ವೀಕರಿಸಿದ ಆರೋಪವನ್ನು ಸಂತ್ರಸ್ತ ಗೋವಿಂದ ಬಾಬು ಪೂಜಾರಿ ಮಾಡಿದ್ದಾರೆ. ಅಲ್ಲದೇ ತನ್ನ ಬಂಧನವಾದ ಬಳಿಕ ಮಾದ್ಯಮಗಳಿಗೆ ನೀಡಿದ ಮೊದಲ ರಿಯಾಕ್ಷನ್ ನಲ್ಲಿ ಚೈತ್ರಾ ಕುಂದಾಪುರ ಹಾಲಶ್ರೀ ಸ್ವಾಮೀಜಿ ಬಂಧನವಾದರೇ ದೊಡ್ಡ ದೊಡ್ಡ ಹೆಸರು ಹೊರಗೆ ಬರಲಿದೆ ಎಂದು ಹೇಳಿದ್ದಳು. ಹಾಗಾಗಿಯೂ ಸಿಸಿಬಿ ಪೊಲೀಸರು ಹಾಲಶ್ರೀ ಸ್ವಾಮೀಯನ್ನು ಇನ್ನು ಯಾಕೇ ಬಂಧಿಸಿಲ್ಲ ಎನ್ನುವುದು ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆ. ಮೂಲಗಳ ಪ್ರಕಾರ ಸಿಸಿಬಿ ಪೊಲೀಸರಿಗೆ ಇದುವರೆಗೆ ಹಾಲಶ್ರೀ ಸ್ವಾಮೀಜಿ ಸಂಬಂಧ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಇನ್ನೂ ಸ್ವಾಮೀಜಿ ಬಂಧನ ತಡವಾದ ಆತನಿಗೆ ರೆ ನಿರೀಕ್ಷಣ ಜಾಮೀನು ಸಿಗೊ ಸಾಧ್ಯತೆ ಇದೆ. ಆಗ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ದೊಡ್ಡ ದೊಡ್ಡವರ ಹೆಸರು ಹೊರ ಬಾರದೇ ಇರುವ ಸಾಧ್ಯತೆಯೇ ಅದಿಕ.
ಕೇವಲ ಸ್ವಾಮೀಜಿ ವಿಚಾರದಲ್ಲಿ ಮಾತ್ರವಲ್ಲ ಚೈತ್ರಾ, ಚನ್ನಾ ನಾಯ್ಕ್ ವಿಚಾರದಲ್ಲೂ ಸಿಸಿಬಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬಿಜೆಪಿ ಕೆಂದ್ರಿಯ ಚುನಾವಣಾ ಸಮಿತಿಯ ಸದಸ್ಯನ ಪಾತ್ರದಲ್ಲಿ ನಟಿಸಿದ ಚನ್ನಾ ನಾಯ್ಕ್ ಬೆಂಗಳೂರಲ್ಲಿ ಇದ್ದರೂ ಆರಂಭದಲ್ಲಿ ತನಿಖಾಧಿಕಾರಿಗಳು ಆತನನ್ನು ಬಂಧಿಸದೆ ನಿರ್ಲಕ್ಷ್ಯ ತೋರಿದ್ದರು. ಪ್ರಕರಣದ ಐದನೇ ಆರೋಪಿಯಾಗಿರುವ ಚನ್ನಾ ನಾಯ್ಕ್ ಮಾಧ್ಯಮ ಮುಂದೆ ಬಂದು ಹೇಳಿಕೆ ನೀಡಿದ ಬಳಿಕ ತನಿಖಾ ತಂಡ ತರಾತುರಿಯಲ್ಲಿ ಮಾಧ್ಯಮದವರನ್ನ ಫಾಲೊ ಮಾಡಿ ಆತನನ್ನು ಬಂಧಿಸಿದೆ.
ಇನ್ನೂ ಕಚೇರಿಯಲ್ಲಿ ಚೈತ್ರಾ ಮೇಲೆ ಸರಿಯಾದ ನಿಗಾ ಇಡದೆ ಆಕೆ ಕೇಳಿದಾಕ್ಷಣ ಸೋಪ್ ಕೊಟ್ಟು ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ ಎಂಬ ಆರೋಪವು ಸಿಸಿಬಿ ಅಧಿಕಾರಿಗಳ ಮೇಲೆ ಕೇಳಿ ಬಂದಿದೆ . ಆಸ್ಫತ್ರೆ ಸೇರಿದ ಆಕೆಯ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ತಂಡ ಆಕೆಗೆ ಪಿಟ್ಸ್ ಲಕ್ಷಣ ಇಲ್ಲ ಎಂದು ದೃಢ ಪಡಿಸಿದ್ದಾರೆ. ಆಕೆಯ ಬಾಯಲ್ಲಿ ಕಾಣಿಸಿದ ನೊರೆ ಸೋಪುನದು ಎಂದು ಎನ್ನಲಾಗುತ್ತಿದೆ . ಸೋಪು ನೊರೆಯನ್ನು ಬಾಯಿಗೆ ಹಾಕಿ ಚೈತ್ರಾ ಫಿಟ್ಸ್ ಬಂದಂತೆ ನಾಟಕವಾಡಿದ್ದಳು ಎಂದು ಹೇಳಲಾಗುತ್ತಿದೆ. ಸಿಸಿಬಿ ಕಸ್ಟಡಿಯಲ್ಲಿ ಇರುವಾಗಲೂ ಹೀಗೆ ರಾಜರೋಷವಾಗಿ ನಾಟಕವಾಡಲು ಸಾಧ್ಯವೇ ? ಎನ್ನುವ ಪ್ರಶ್ನೆಗಳು ಎದ್ದಿವೆ
ನಾಟಕ ಮೊದಲ ದಿನವೇ ಬಯಲಾದರೂ ಆರೋಪಿ ಚೈತ್ರಾ ಕುಂದಾಪುರ 4 ದಿನ ಆಸ್ಪತ್ರೆಯಲ್ಲೇ ಕಳೆದಿದ್ದೇಕೆ? ವಶಕ್ಕೆ ಪಡೆದು ಬೆಂಗಳೂರು ಕೋರ್ಟಿಗೆ ಹಾಜರು ಪಡಿಸಿದ ಸಂದರ್ಭ ನ್ಯಾಯಾಲಯವು ಚೈತ್ರಾಳನ್ನು 10 ದಿನಗಳ ಸಿಸಿಬಿ ಕಸ್ಟಡಿಗೆ ಒಪ್ಪಿಸಿತ್ತು. ಅದರಲ್ಲಿ ಬೆಳಗ್ಗೆ ಯಿಂದ ಸಂಜೆಯವರೆಗೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸುವಂತೆಯೂ ಬಳಿಕ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸುವಂತೆಯೂ ಸೂಚಿಸಿತ್ತು. ಹಾಗಿದೂ ಆಕೆಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಸಿಸಿಬಿ ಪೊಲೀಸರು ನಾಲ್ಕು ದಿನ ಆಸ್ಫತ್ರೆಯಲ್ಲಿ ಇರಿಸಿದ್ದು ಯಾಕೆ? ಮಹಜರು ಪ್ರಕ್ರಿಯೆಯಲ್ಲಿ ಆಕೆಯನ್ನು ತೊಡಗಿಸಿಕೊಳ್ಳದೆ, ಕುಂದಾಪುರ ಉಡುಪಿ ಭಾಗದಲ್ಲಿ ಆಕೆಯ ಸ್ನೇಹಿತ ಶ್ರೀಕಾಂತ್ ಮೂಲಕ ಮಹಜರು ಮಾಡಿದ್ದು ಯಾಕೇ ? ಎನ್ನುವುದು ಸಿಸಿಬಿ ಬಗ್ಗೆ ಅನುಮಾನ ಬರುವಂತೆ ಮಾಡಿದೆ. ಇನ್ನೂ ಗೋವಿಂದ ಬಾಬು ಪೂಜಾರಿ ತನ್ನ ದೂರಿನಲ್ಲಿ ಎಲ್ಲಿಯೂ ಶ್ರೀಕಾಂತ್ ಹೆಸರು ಪ್ರಸ್ತಾಪಿಸಿಲ್ಲ. ಈಗ ಶ್ರೀಕಾಂತ್ ಮೂಲಕ ಚೈತ್ರಾಳ ಸ್ಥಿರ ಹಾಗೂ ಚಾರಾಸ್ತಿಗಳ ಮಹಜರು ಮಾಡಿಸಿರುವುದು ಮುಂದಿನ ದಿನಗಳಲ್ಲಿ ಕೋರ್ಟ್ ನಲ್ಲಿ ಕೇಸ್ ದುರ್ಬಲವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕಾನೂನು ಪಂಡಿತರು.
ತನ್ನನ್ನೂ ಪೊಲೀಸರು ಬಂಧಿಸಿದ ಬಳಿಕವು ಚೈತ್ರಾ ಕುಂದಾಪುರ ರಾಜಾರೋಷವಾಗಿ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿದ್ದರು. ಪ್ರಕರಣ ಡೈವರ್ಟ್ ಮಾಡಲು ಇಂದಿರಾ ಕ್ಯಾಂಟಿನ್ ಹೆಸರು ಬಳಕೆ ಮಾಡಿದ್ದರು. ಓಡಾಡುವ ಸ್ಥಿತಿಯಲ್ಲಿದ್ರು ಇಲ್ಲಿಯವರೆಗೆ ಆಕೆಯಿಂದ ಸಿಸಿಬಿ ಯಾವುದೇ ಹೇಳಿಕೆ ದಾಖಲು ಮಾಡಿ ಕೊಂಡಿಲ್ಲ. ಚೈತ್ರಾಳಿಂದ ಸಮರ್ಪಕ ಉತ್ತರ ಪಡೆಯುವಲ್ಲಿ ಸಿಸಿಬಿ ವಿಫಲವಾಗಿದೆ? ಪ್ರಕರಣದಲ್ಲಿ ಮತ್ತಷ್ಟು ಪ್ರಭಾವಿಗಳ ಹೆಸರು ಕೇಳಿ ಬಂದಿದೆ. ಆದರು ಅವರಿಂದ ಮಾಹಿತಿ ಪಡೆಯಲು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಚೈತ್ರಾ ಕುಂದಾಪುರ ಪ್ರಕರಣದ ತನಿಖೆಯನ್ನು ಸಿಸಿಬಿ ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ ಎನ್ನಲಾಗುತ್ತಿದೆ.