ಮಂಗಳೂರು: ಚಿಕಿತ್ಸೆಗೆಂದು ಆಸ್ಪತ್ರೆಗೆ ಆಗಮಿಸಿದ ಜ್ವರಪೀಡಿತ ವ್ಯಕ್ತಿಯೊಬ್ಬರು ವೈದ್ಯರು ತಪಾಸಣೆಗೂ ಮುಂದಾಗುವ ಮೊದಲೇ ಕುಸಿದು ಮೃತಪಟ್ಟಿರುವ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಬಿಜೆಪಿ ಸ್ಥಳೀಯ ಮುಖಂಡರಾಗಿದ್ದ ಪ್ರಕಾಶ್ ಬೆಳ್ಳೂರು(43) ಮೃತಪಟ್ಟವರು.
ಪ್ರಕಾಶ್ ಅವರು ಸೋಮವಾರ ಬೆಳಗ್ಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಮತ್ತು ಔಷಧಕ್ಕಾಗಿ ಬಂದಿದ್ದರು. ಅವರಿನ್ನೂ ವೈದ್ಯರ ತಪಾಸಣೆಗೂ ತೆರಳುವ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಾವಿಗೆ ಖಚಿತವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಅವರ ಸಾವಿನ ಸುದ್ದಿ ತಲುಪುತ್ತಲೇ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರೂ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಬಂಟ್ವಾಳ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ.
ಗಣ್ಯರಿಂದ ಕಂಬನಿ
ಪ್ರಕಾಶ್ ನಿಧನದ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದಿರುವ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ್ ಬೆಳ್ಳೂರು ನಮ್ಮನ್ನಗಲಿದ್ದು, ಮೃತರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಕಂಬನಿ ಮಿಡಿದಿದ್ದಾರೆ.
ಬಂಟ್ವಾಳ ತಾಲೂಕು ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ಸಹಿತ ಅನೇಕ ಮುಖಂಡರು ಸಂತಾಪ ಸೂಚಿಸಿದ್ದಾರೆ. ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಬೆಳ್ಳೂರು ಅವರು ಸ್ಥಳೀಯ ಮಟ್ಟದಲ್ಲಿ ಅತ್ಯಂತ ಕ್ರಿಯಾಶೀಲ ಮುಖಂಡರಾಗಿ, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಗುರುತಿಸಿಕೊಂಡಿದ್ದರು.