ಬೆಂಗಳೂರು: ಕೊನೆಗೂ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯಕೆ ಮಣಿದ ಸರಕಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯ ಸರಕಾರಿ ರಜೆಯ ದಿನಾಂಕವನ್ನು ಬದಲು ಮಾಡಿದೆ. ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿವೆ. ಹಲವೆಡೆ ಸೋಮವಾರ (ಸೆ.18) ದಂದು ಹಬ್ಬ ಆಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಮಂಗಳವಾರ (ಸೆ.19) ದಂದು ಆಚರಿಸಲಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಕೂಗು ಕೇಳಿಬಂದಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆ.19ರಂದು ರಜೆ ನೀಡಲು ಪತ್ರ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದೆ.
ಆದೇಶದಲ್ಲಿ ಏನಿದೆ ?

ಕರ್ನಾಟಕ ಸರಕಾರವು 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ: 18-09-2023ರಂದು ಗಣೇಶ ಚತುರ್ಥಿ (ವರಸಿದ್ದಿ ವಿನಾಯಕ ವೃತ) ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗುತ್ತದೆ.
ಸರಕಾರದ ಅಧೀನ ಕಾರ್ಯದರ್ಶಿ ಪತ್ರ ಬರೆದು ನಿರ್ದೇಶಿಸಿರುವಂತ ಈ ಬಗ್ಗೆ ಪರಿಶೀಲಿಸಲಾಗಿ, ಗಣೇಶ ಚತುರ್ಥಿ ದಿನ. ಕರಾವಳಿಯಲ್ಲಿ ವಿಶೇಷವಾಗಿ ದೇವಸ್ಥಾನ, ದೈವಸ್ಥಾನ, ತರವಾಡು ಮನೆಗಳಲ್ಲೂ ಚೌತಿ ಹಬ್ಬವಾಗಿ ದಿನಾಂಕ:19.09.2023ರ ಮಂಗಳವಾರದಂದು ರಜೆ ಘೋಷಿಸಲು ಇರುವ ಸಾರ್ವಜನಿಕ ಬೇಡಿಕೆಯ ಹಿನ್ನಲೆಯಲ್ಲಿ 2023ನೇ ಸಾಲಿನ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲಾದ್ಯಂತ ದಿನಾಂಕ; 18.09.2023ರ ಸೋಮವಾರದಂದು ರದ್ದುಗೊಳಿಸಿ ದಿನಾಂಕ:19.09.2023ರ ಮಂಗಳವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ. ದಿನಾಂಕ: 18.09.2023ರ ಸೋಮವಾರದಂದು ಕರ್ತವ್ಯದ ದಿನವೆಂದು ಪರಿಗಣಿಸಲು ಸೂಚಿಸಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.