ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ವಂಚಿಸಿದ ಪ್ರಕರಣದಲ್ಲಿ ದಿನ ಕಳೆದಂತೆ ಹಲವು ಸಂಗತಿಗಳು ಹೊರ ಬರಲು ಆರಂಭಿಸಿದೆ . ಪ್ರಕರಣದ A1 ಆರೋಪಿ ಚೈತ್ರಾ ಕುಂದಾಪುರ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಸ್ವಾಮೀಜಿ ಸಿಕ್ಕಿ ಹಾಕಿಕೊಂಡರೆ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತದೆ ಎಂಬ ಸ್ಪೋಟಕ ಮಾಹಿತಿ ಹೊರ ಹಾಕಿದ್ದಾಳೆ.
ಇತ್ತ ಸ್ವಾಮೀಜಿ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದು, ಆತ ಗೋವಿಂದ ಬಾಬು ಪೂಜಾರಿಯಿಂದ 1.5 ಕೋಟಿ ರೂ.ಗಳನ್ನು ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಕ್ರಮವಾಗಿ ಬಂದಿರುವ ಹಣದಿಂದಲೇ ಸ್ವಾಮೀಜಿ ಪೆಟ್ರೋಲ್ ಬಂಕ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸ್ವಾಮೀಜಿ ಇತ್ತೀಚೆಗೆ ನೀರಾವರಿ ಜಮೀನುಗಳನ್ನೂ ಖರೀದಿಸಿರುವ ಮಾಹಿತಿ ಲಭ್ಯವಾಗಿದೆ.ಚೈತ್ರಾ ಕುಂದಾಪುರ ಅವರು ಗೋವಿಂದ ಪೂಜಾರಿಯವರನ್ನು ಮಠಕ್ಕೆ ಕರೆದೊಯ್ದು ಶ್ರೀಗಳಿಗೆ ಪರಿಚಯಿಸಿದರು ಎನ್ನಲಾಗಿದೆ. ಕನ್ನಡದ ಪ್ರತಿಷ್ಟಿತ ವಾಹಿನಿಯೊಂದರ ವರದಿಯ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯ ಜೀವನಶೈಲಿ ಬದಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ವಾಮೀಜಿ 68 ಲಕ್ಷ ಕೊಟ್ಟು ಮಾವನ ಹೆಸರಿನಲ್ಲಿ ಎಂಟು ಎಕರೆ ಜಮೀನು ಖರೀದಿಸಿದ್ದರು ಎನ್ನಲಾಗಿದೆ. ಚಂದ್ರಪ್ಪ ಎಂಬುವವರ ಒಡೆತನದ ಪೆಟ್ರೋಲ್ ಬಂಕ್ ನಲ್ಲಿಯೂ 40 ಲಕ್ಷ ರೂ. ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.
ದೂರುದಾರರು ತಮ್ಮ ಹಣವನ್ನು ವಾಪಾಸ್ಸು ಬೇಕೆಂದು ಕೇಳಿದ ನಂತರ, ಸ್ವಾಮೀಜಿ ಸ್ಥಳೀಯ ಮುಖಂಡರಿಂದ 10 ಲಕ್ಷ ರೂಪಾಯಿ ಸಾಲವನ್ನು ಕೇಳಿದ್ದಾರೆ ಎನ್ನಲಾಗಿದೆ. ಹಣವನ್ನು ದೂರುದಾರರಿಗೆ ಹಿಂತಿರುಗಿಸುವುದಾಗಿ ಸ್ವಾಮೀಜಿ ಹೇಳಿದ್ದರೆಂದು ಗೋವಿಂದ ಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ .
ಹಣ ಹಿಂತಿರುಗಿಸಲು ಸಮಯಬೇಕೆಂದು ಸ್ವಾಮೀಜಿ ಕೇಳಿದ್ದರು. ತಮ್ಮ ಹೆಸರನ್ನು ಬಹಿರಂಗಪಡಿಸಕೂಡದು ಎಂದು ಅವರು ಮನವಿ ಮಾಡಿಕೊಂಡಿದ್ದರು ಎಂದು ದೂರುದಾರ ತಿಳಿಸಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಒಟ್ಟು 7 ಜನ ಆರೋಪಿಗಳಿದ್ದು ಅದರಲ್ಲಿ ಈಗಾಗಲೇ 5 ಜನರ ಬಂಧನವಾಗಿದೆ. ಗಗನ್ ಕಡೂರ್ ಹಾಗೂ ಅಭಿನವ ಹಾಲಶ್ರೀ ಸ್ವಾಮೀಜಿ ಮಾತ್ರ ಪೊಲೀಸರಿಗೆ ಸಿಗದೆ ಪರಾರಿಯಾಗಿರುವುದು.