ಬೆಂಗಳೂರು: ಬೈಂದೂರು ಬಿಜೆಪಿ ಟಿಕೇಟ್ ಆಕಾಂಕ್ಷಿ ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 5 ಕೋಟಿ ರೂ. ವಂಚಿಸಿರುವ ಆರೋಪದ ಮೆರೆಗೆ ಪ್ರಚೋದನಾಕಾರಿ ಹಿಂದೂತ್ವ ಭಾಷಣಕಾರ್ತಿ ಚೈತ್ರಾ ಕುಂದಾಪುರಳನ್ನು (Chaithra Kundapura) ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ ನೀಡಿದ ದೂರಿನ ಅನ್ವಯ ದಾಖಲಾದ ಎಫ್ಐಆರ್ ನಲ್ಲಿ ಐದು ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ದಾಖಲಾಗಿದೆ. ಆದರೆ ಈಗ 10 ಕೋಟಿ ವಂಚನೆಯಾಗಿದೆ ಎಂದು ದೂರುದಾರ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ತಿ ಮೇಲೆ 10 ಕೋಟಿ ಲೋನ್ ಪಡೆದು ಚೈತ್ರಾ & ಗ್ಯಾಂಗ್ ಗೆ ಹಣ ಕೊಟ್ಟಿರುವ ಕುರಿತ ಎಲ್ಲಾ ದಾಖಲೆ ಸಿಸಿಬಿಗೆ ಕೊಟ್ಟಿರೋದಾಗಿ ದೂರುದಾರ ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಚೈತ್ರ ಬಂಧನ ಆಗುತ್ತಿದ್ದಂತೆ ಬಲಪಂಥೀಯ ಹಾಗೂ ಬಿಜೆಪಿ ಪರ ಕೆಲಸ ಮಾಡುವ ಕೆಲವು ಪ್ರಮುಖ ಸಾಮಾಜಿಕ ಜಾಲತಾಣದ ನಾಯಕಿಯರು ಚೈತ್ರ ಹಾಗೂ ಆಕೆಯ ಗೆಳತಿಯಾಗಿದ್ದ ಶ್ರುತಿ ತುಂಬ್ರಿ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೆಲವರು ಚೈತ್ರಳದ್ದು ತಪ್ಪು ಎಂದು ವಾದಿಸಿ ಶ್ರುತಿ ಪರ ನಿಂತರೆ ಇನ್ನು ಕೆಲವರು ಚೈತ್ರಳಿಗೆ ಕೇಸ್ ಆದರೆ ಸಮೀಕ್ಷೆಯಲ್ಲಿ ಮೋಸ ಮಾಡಿದ ಶ್ರುತಿ ತುಂಬ್ರಿಗೆ ಯಾಕೆ ಕೇಸ್ ಆಗಿಲ್ಲ ಎನ್ನುವ ಪ್ರಶ್ನೆ ಎತ್ತುತ್ತಿದ್ದಾರೆ.
ಶ್ರುತಿ ತುಂಬ್ರಿಯವರು ಉಡುಪಿ ಮೂಲದವರಾಗಿದ್ದು, ಕೋಟಾ ಶ್ರೀನಿವಾಸ ಪೂಜಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕೇಂದ್ರ ಸಚಿವರುಗಳೊಂದಿಗೆ ಆಪ್ತರಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ತನಿಖೆ ನಡೆದರೆ ಬಹುದೊಡ್ಡ ತಂಡವೇ ಇದರ ಹಿಂದಿರುವ ಬಗ್ಗೆ ಸಂಶಯವಿದೆ ಎಂದು ಸಾಮಾಜಿಕ ಜಾಲತಾಣದ ಚರ್ಚೆಯಲ್ಲಿ ಹೊರಬರುತಿದ್ದು, ದೇಶದ ರಾಜಕೀಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ.
ಘಟನೆಯ ವಿವರ : ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಒಂದು ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಪ್ರಭಾವಿ ಬಿಜೆಪಿ ನಾಯಕರ ಆಪ್ತೆಯೊಬ್ಬರು ಸಮೀಕ್ಷೆಯಲ್ಲಿ ಹೆಸರು ತರಿಸುತ್ತೇವೆ ಎಂದು ಡೀಲ್ ನಡೆಸಿದ ಬಗ್ಗೆ ವೈರಲ್ ಆಗಿತ್ತು.
ಅದರಲ್ಲಿ ತಾನು ರಾಷ್ಟ್ರೀಯ ಪ್ರಮುಖ ನಾಯಕರ ಆಪ್ತನಾಗಿರುವ ರಾಜ್ಯ ಬಿಜೆಪಿಯ ಸಂಘಟನಾ ಜವಾಬ್ದಾರಿ ಹೊತ್ತಿರುವ ನಾಯಕರೊಬ್ಬರ ಮೂಲಕ ಸಮೀಕ್ಷೆ ನಡೆಸುವ ತಂಡದಲ್ಲಿದ್ದೆನೆ. ನಿಮ್ಮ ನಾಯಕರ ಹೆಸರನ್ನು ಸಮೀಕ್ಷೆಯಲ್ಲಿ ಮೊದಲಿಗೆ ತಂದು ರಾಷ್ಟ್ರೀಯ ನಾಯಕರಿಗೆ ತಲುಪಿಸುತ್ತೇನೆ ಎಂದಿತ್ತು.
ಆಡಿಯೋದಲ್ಲಿ, ಸಮೀಕ್ಷೆಯ ತಂಡದ ಕೆಲವರನ್ನು ಹೈಜೆಕ್ ಮಾಡಿದ್ದೇನೆ. ಆ ತಂಡ ಹೇಳಿದ ಸಮೀಕ್ಷೆಯನ್ನು ದೆಹಲಿ ನಾಯಕರು ನೇರ ಪರಿಗಣಿಸುತ್ತಾರೆ ಎಂದು ಆಡಿಯೋದಲ್ಲಿ ಮಾತುಕತೆ ನಡೆದಿದೆ. 6 ಲಕ್ಷಕ್ಕೆ ನಡೆದ ಡೀಲ್ ನಲ್ಲಿ 3 ಲಕ್ಷ ಬೆಂಗಳೂರಿನ ಕಾಡುಮಲ್ಲೇಶ್ವರ ಬಳಿಯ ಕಾಫಿ ಡೇ ನಲ್ಲಿ ತಂದು ಕೊಡಬೇಕು ಎಂದು ಯುವಕನಿಗೆ ಯುವತಿ ಹೇಳಿರುವುದು ವೈರಲ್ ಆಗಿದೆ.
ಆಡಿಯೋದಲ್ಲಿ ಮಾತನಾಡಿದ ಯುವತಿಯನ್ನು ಶ್ರುತಿ ಎಂದು ಹಾಗೂ ಮಾತನಾಡಿದ ಯುವಕ ಗೋವಿಂದ ಬಾಬು ಪೂಜಾರಿಯ ಆಪ್ತ ಎಂದು ಇದೀಗ ಬಿಜೆಪಿಯ ಸಾಮಾಜಿಕ ಜಾಲತಾಣಗಳ ನಾಯಕಿಯರ ಚರ್ಚೆಗಳಲ್ಲಿ ವೈರಲ್ ಆಗ್ತಿದೆ.
ಸಮೀಕ್ಷೆ ಡೀಲ್ ಬಗ್ಗೆ ಮಾತನಾಡಿದ ಶ್ರುತಿ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕುಳಿತುಕೊಳ್ಳುವುದಾಗಿ ಆಡಿಯೋದಲ್ಲಿ ತಿಳಿಸಿದ್ದಾಳೆ.
ಇದೀಗ ಚೈತ್ರ ಕುಂದಾಪುರ ಪ್ರಕರಣದಲ್ಲಿ ಸಿಸಿಬಿ ಇನ್ನಷ್ಟು ಆಳಕ್ಕೆ ಇಳಿಯುತ್ತಿದ್ದು, ಈಗಾಗಲೇ ಚೈತ್ರ, ಸ್ವಾಮಿಜೀ ಬಂಧನವಾದರೆ ಯಾರೆಲ್ಲ ಇದ್ದರೆ ಎನ್ನುವ ಸತ್ಯ ಹೊರ ಬರಲಿದೆ ಎಂದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಫೇಸ್ಬುಕ್ ನಲ್ಲಿ ಚರ್ಚೆಗೆ ಕಾರಣವಾದ ಪೋಸ್ಟ್ ಗಳು:
ಬಲಪಂಥೀಯ ಕುಸುಮಾ ಆಚಾರ್ಯ ಅವರ ಪೋಸ್ಟ್ :
“I’m not involved in any of these cases. So I am not answerable to anyone”
ಇದು ಶಾರದಕ್ಕನಿಂದ ಅಂತಿಮವಾಗಿ ಬಂದಿರೋ ಹೇಳಿಕೆ!! ಅಂದು ಅವರ ತಂಗಿ ಶೃತಿ ಬಗ್ಗೆ ಯಾರೋ ಪೋಸ್ಟ್ ಹಾಕಿದ್ರು, ಆ ಪೋಸ್ಟಗೆ ನಾನು ಲೈಕ್ ಕೊಟ್ಟಿದ್ದೆ. ಅದನ್ನೇನೊ ಅಪರಾಧ ಎನ್ನುವಂತೆ ಕಾಲ್ ಮಾಡಿ ಶಾರದಕ್ಕ ನನ್ನ ಪ್ರಶ್ನಿಸಿದ್ರು.. “ಅಲ್ಲಾ ಪುಟ್ಟ ಅವ್ಳು ತಪ್ಪೇ ಮಾಡಿಲ್ಲ, ಸಿಕ್ಕಹಾಕಿಸೋಕೆ ಪ್ಪಾನ್ ಮಾಡಿರೋದು, ಟ್ರ್ಯಾಪ್ ಮಾಡಿದಾರೆ. ಈಗ ಅವಳಿಗೆ ಆಳಿಗೊಂದು ಕಲ್ಲು ಅನ್ನೋತರ ಪೋಸ್ಟ್ ಮಾಡ್ತಿದಾರೆ, ನೀನು ಲೈಕ್ ಕೊಟ್ಟಿದ್ಯಲ್ಲ. ಆ ಲೈಕ್‌ನ ತಗ್ಸೋಕೆ ಕಾಲ್ ಮಾಡಿದ್ದೀನಿ” ಅಂದಿದ್ರು.. ಆದಾಗ್ಯೂ, ನಾನು ನನ್ನ ನಿಲುವನ್ನ ಬಿಡದೇ ತಪ್ಪನ್ನ ಪ್ರಶ್ನಿಸಿ ಪೋಸ್ಟ್ ಹಾಕಿದ್ದ ಸುಕಿ ಶೆಟ್ಟಿ ಅವ್ರ ಪೋಸ್ಟ್‌ಗೆ ಲೈಕ್ ನೀಡಿದ್ದೆ … ಇದು ಆಗಿನ ಕಥೆ!
ನನಗೆ ಸಂಬಂಧ ಪಡದ ವಿಚಾರಕ್ಕೆ ಕಾಲ್ ಮಾಡಿ ಪ್ರಶ್ನಿಸಿ ಇರಿಟೇಟ್ ಮಾಡಿ, ಈಗ ಪಲಾಯನ ವಾದ ಮಾಡುತ್ತಾ ನನ್ ವಾಲ್ನಿಂದ ಕಳಚ್ಕೊ ಅನ್ನುವಂಥ ಮಾತಾಡಿರುವ ಸಾಧಕಿಗೆ ಈಗ ನಾನು ಕ್ಲಾರಿಟಿ ಕೊಡೋಕೆ ಬಯಸ್ತೀನಿ… ನನ್ನ ಯೋಚನಾ ಲಹರಿ, ಮರ್ಯಾದೆ, ಯೋಗ್ಯತೆ ಬಗ್ಗೆ ಮಾತಾಡಿರುವ ಮಹಾತಾಯಿಯ ಘನಂದಾರಿ ಹೋರಾಟದ ದ್ವಂದ್ವ ನಿಲುವನ್ನು ಪ್ರಶ್ನಿಸಿದ್ದು ನನ್ನ ತಪ್ಪಾ ? ಖಂಡಿತ ಅಲ್ಲ ಅನ್ನೋ ಸ್ಪಷ್ಟತೆ ನಂಗಿದೆ..
ಈಗ ವಿಚಾರಕ್ಕೆ ಬರ್ತೀನಿ..
ಈ ಶ್ರುತಿ ಪೋಸ್ಟ್‌ನ ನಂತರದ ಇಷ್ಟು ತಿಂಗಳಗಳ ಬಳಿಕ. ನಿನ್ನೆ ಚೈತ್ರಾರ ವಿಚಾರದಲ್ಲಿ ಆರೋಪಗಳು ಕೇಳಿ ಬಂದಾಗ. ಇದೇ ಶಾರದಕ್ಕನ ಪೋಸ್ಟ್ ನೋಡಿದೆ. ಅದರಲ್ಲಿನ ಕಮೆಂಟ್ ಒಂದರಲ್ಲಿ ಇದು ಟ್ರ್ಯಾಪ್ ಇರಬಹುದು ಅಂದಾಗ, ಶಾರದಳ ಉತ್ತರ ” I don’t feel this is planted story” ಎಂದಿತ್ತು!!
ಇಲ್ಲಿ ನಂಗೆ ಮತ್ತೆ ಎದುರಾಗಿದ್ದು ಚೈತ್ರ, ಶ್ರುತಿ ಮೇಲಿನ ಆರೋಪಕ್ಕಿಂತ ಹೆಚ್ಚು, ಅವರಿಬ್ಬರ ವಿಚಾರದಲ್ಲಿ ಶಾರದರ ನಿಲುವು!
ಅಂದು ಆಡಿಯೋ ಸಾಕ್ಷಿ ಸಮೇತ ಸಿಕ್ಕಿ ಬಿದ್ದು, ಅದನ್ನು ಸುಳ್ಳು ಎಂದು ನಿರೂಪಿಸುತ್ತೇನೆ ಅಂತ ಹೋಗಿ, ತಿಂಗಳ ಬಳಿಕ ಬಂದು, ಚೈತ್ರ ಸಿಕ್ಕಿಬಿದ್ದ ನಂತರದಲ್ಲಿ ಕಾಲಾಯ ತಸ್ಮೈನಮಃ ಎಂದು ಪೋಸ್ಟ್ ಹಾಕಿ, ತನ್ನದೇನೂ ತಪ್ಪಿಲ್ಲ ಅಥವಾ ತನ್ನ ಹಿಂದೆ ಬಿದ್ದವರು ಸಿಕ್ಕಿಬಿದ್ದರೆನ್ನುವ ಹಾಗೆ ಬಿಂಬಿಸಿರುವ ಶೃತಿ ವಿಚಾರದಲ್ಲಿ ಸರಾಸಗಾಟಾಗಿ” ಅದು ಟ್ರ್ಯಾಪ್” ಅಂದ ಶಾರದ, ಇಂದು ಚೈತ್ರಳ ವಿಷಯದಲ್ಲಿ ಇದು “ಟ್ರ್ಯಾಪ್” ಅಲ್ಲ ಅಂದಿದ್ದು ಹೇಗೆ ?
ಇಲ್ಲಿಂದ ಶುರುವಾದ ವಾದ-ವಿವಾದದ ಬಳಿಕ ಗೊತ್ತಾದದ್ದು ಶೃತಿ ಮತ್ತು ಚೈತ್ರರ ನಡುವಿನ ಪ್ರಕರಣ ಒಬ್ಬನೇ ವ್ಯಕ್ತಿ” ಗೋವಿಂದ ಬಾಬು ಪೂಜಾರಿ”ಗೆ ಸಂಬಂಧಿಸಿದ್ದು ಎಂಬುದು! ಇದು ಶಾರದಕ್ಕನೇ ಹೇಳಿದ್ದು ಕೂಡ.. ಹಾಗಿದ್ದಾಗ ಶೃತಿ ಪ್ರಕರಣದ ಬಗ್ಗೆಯೂ ಈಗಾಗಲೇ ಕ್ಲಾರಿಟಿ ಸಿಕ್ಕಿರಬೇಕಲ್ಲ ?
ಅವರೇ ಹೇಳಿದಂತೆ ಅದು ಟ್ರ್ಯಾಪ್ ಆಗಿದ್ದರೂ ಈಗಲಾದರೂ ಹೊರಬರಬೇಕಲ್ಲ ?
ಅದನ್ನ್ಯಾಕೆ ಶಾರದರ ತಂಗಿ ಬಾಯಿಬಿಡುತ್ತಿಲ್ಲ..?
ಇಲ್ಲಿ ಶಾರದರ ವಾದ ಶೃತಿ ಮತ್ತು ಚೈತ್ರ ಒಂದೇ ಅಲ್ಲ, ಚೈತ್ರ ಏಕಧಮ್ ವಂಚಕಿ! ಶೃತಿ ತನ್ನ ಮೇಲಿನ ಆರೋಪ ನಿರೂಪಿಸಲಾಗದ ಮುಗ್ದೆ! ಎಂಬುದಾಗಿತ್ತು.
ಅದು ಹೇಗೆ ? ಸಂಘಟನೆಯ ಹೆಸರಲ್ಲಿ ಪಕ್ಷದ ಒಳಗಿನವರನ್ನೂ, ಹೊರಗಿನವರನ್ನೂ ಯಾಮಾರಿಸಲು ಯತ್ನಿಸಿದ ಈ ಇಬ್ಬರೂ ಸಮಾನ ದೂಷಿಗಳಲ್ಲವೇ ?
ಒಬ್ಬನಿಗೆ ಟಿಕೆಟ್ ಕೊಡಿಸುತ್ತೇನೆಂದು ಕೋಟಿ ದೋಚಿರುವ ಆರೋಪ ಎದುರಿಸುತ್ತಿರುವ ಚೈತ್ರ, ಒಂದು ವೇಳೆ ದುಡ್ಡು ಪಡೆದು ಟಿಕೆಟ್ ಕೊಡಿಸಿದಿದ್ದರೂ, ಆ ವ್ಯಕ್ತಿ ಗೆದ್ದಿದ್ದರೂ ಲೂಟಿ ಮಾಡುತ್ತಿದ್ದದ್ದು ಜನರನ್ನೇ ಅಲ್ಲವೇ ?
ಅದಕ್ಕೆ ಸಾತ್ ನೀಡಲು ಆ ವ್ಯಕ್ತಿಯ ಪರವಾಗಿ ಸರ್ವೆ ಮಾಡಿಸಲು ಒಪ್ಪಿಕೊಂಡಿದ್ದಾಕೆ ಶೃತಿ!!!!
ಇದು ಬರೀ ಪಕ್ಷ, ಸಂಘಟನೆಗೆ ಸಂಬಂಧಿಸಿದ್ದಲ್ಲ.. ಜನರ ಪ್ರತಿನಿಧಿಯೊಬ್ಬನ ಆಯ್ಕೆ ವಿಚಾರದ ಪ್ರಕ್ರಿಯೆಯ ವ್ಯವಸ್ಥೆಯನ್ನು ಲಂಚಗೂಳಿತನಕ್ಕೆ ಸಿಲುಕಿಸಲು ಪಕ್ಷ, ಸಂಘಟನೆ ಹೆಸರಲ್ಲಿ ಷಡ್ಯಂತ್ರ ನಡೆಸಿರುವವರ ಅನವಾರಣ ಅಷ್ಟೇ..
ಹೀಗಿರುವಾಗ ಈಗಲೂ ತಮ್ಮ ಮುದ್ದಿನ ತಂಗಿಯ ತಪ್ಪನ್ನು ಮುಚ್ಚಿಹಾಕಿಕೊಂಡು ಅವ್ಳಿಗೆ ಇನ್ನೂ ಸಮಯ ಬೇಕು, ನಿರೂಪಿಸ್ತಾಳೆ ಅಂತ ಹೇಳ್ಕೊಂಡು, ಇತ್ತ ಚೈತ್ರಳ ಬಗ್ಗೆ ಎಲ್ಲಾ ಗೊತ್ತಿದ್ದೂ ಇಬ್ಬರ ತಪ್ಪೂ ಒಂದೇ ಎಂದು ಒಪ್ಪಿಕೊಳ್ಳದೆ ಶಾರದಕ್ಕ ಸಾಧಿಸಲು ಹೊರಟ್ಟಿದ್ದೇನು ??
ಸದಾ ಉದ್ದುದ್ದ ಪೋಸ್ಟ್‌ನಲ್ಲಿ ಸತ್ಯವನ್ನೇ ಕಾರುತ್ತೇನೆ ಎನ್ನುವ ಆಕೆಗೆ, ಶೃತಿ ಮತ್ತು ಚೈತ್ರಳ ಆರೋಪ ಒಂದೇ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ತಿಳಿದ ಬಳಿಕವೂ ತಂಗಿ ಮಾತ್ರ ಸುಬಗಳು ಅನ್ನೋ ನಿಲುವು ಏನನ್ನ ತೋರಿಸುತ್ತೆ ?
ಇದನ್ನ ಪ್ರಶ್ನಿಸಿದ್ದೇ ತಡ, ಅಷ್ಟುದ್ದು ಕಮೆಂಟ್‌ಗಳಾಗಿ
ಕೊನೆಯಲ್ಲಿ
“I’m not involved in any of these cases. So I am not answerable to anyone”
ಈ ಉತ್ತರ ಬಂತು.. ಇದನ್ನ ಅಂದೇ ಹೇಳಿದ್ದಿದ್ದರೆ, ನಿಮ್ಮ ತಂಗಿಯ ಆರೋಪದ ಹಗರಣಕ್ಕೆ ನನ್ನ ಪ್ರಶ್ನಿಸುವ ಹುಂಬತನ ನಿಮಗೆ ಬಾರದಿದ್ದರೆ, ಇಂದು ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ.. !!
ಕಡೆಯದಾಗಿ..
ಸತ್ಯ ಅಂತ ಬಂದಾಗ ತಮ್ಮವರನ್ನೂ ಎದುರು ಹಾಕಿಕೊಳ್ಳೋಕಾದರೆ ಮಾತ್ರ ಅದನ್ನ ಸತ್ಯದ ಪರ ಅಂತಾರೆ.. ಹೀಗೆ ನಸಗುನಿ ತರ ಆಟ ಆಡಿ, ಮರ್ಯಾದೆ ಮಣ್ ಮಸಿ ಅಂತ ಇಲ್ಲದ್ದನ್ನ ಬಡಬಡಾಯಿಸಿ ಕೊಚ್ಚಿಕೊಳ್ಳೋದಲ್ಲ.. ಈ ಪ್ರಕರಣದಲ್ಲಿ ನಿಮ್ಮ ತಂಗಿ ಆರೋಪಿ ಅನ್ನೋದಷ್ಟೇ ಅಲ್ಲ, ಅವಳಿಂದ ತಪ್ಪಾಗಿದೆ ಅನ್ನೋದು ನಿಮ್ಗೂ ಗೊತ್ತು, ನಂಗೂ ಗೊತ್ತು.. ಅದನ್ನ ಒಪ್ಪಿಕೊಂಡು ತನ್ನ ಸುತ್ತ ಹಣೆದ ಜಾಲದ ಬಗ್ಗೆ ಹೇಳಿ ಕ್ಷಮೆ ಕೇಳಿದಿದ್ದರೆ ಅವರ ವ್ಯಕ್ತಿತ್ವ ಹಿರಿಯದಾಗಿರುತ್ತಿತ್ತು. ಎಲ್ಲ ಗೊತ್ತಿದ್ದೂ ಸುಮ್ಮನಿದ್ದಿದ್ದಲ್ಲದೇ ಮತ್ತೆ ಅದನ್ನ ಸಮರ್ಥಿಸುತ್ತಿರೋ ನಿಮ್ಮ ಮರ್ಯಾದೆ ಈಗ ಜನರಿಗೂ ಗೊತ್ತಾಗಿದೆ ಅನ್ನೋದೆ ನೆಮ್ಮದಿ.. ನಿಮ್ಮ double standard ಮನಸ್ಥಿತಿ, ಸತ್ಯದ ಹೆಸರಲ್ಲಿನ favorable ಹೋರಾಟಗಳು ಮುಂದುವರಿಯಲಿ…
ಚೈತ್ರ ಮತ್ತು ಶ್ರುತಿ ಒಂದೇ ಪ್ರಕರಣದ ಆರೋಪಿಗಳು ಎಂಬ ವಾಸ್ತವನ್ನೇ ಒಪ್ಪಿಕೊಳ್ಳದ ನೀವು ನನ‌್ನಂಥ ನೇರವಂತರ ನಿಲುವುಗಳನ್ನ ಪ್ರಶ್ನಿಸೋ ಮೂರ್ಖತನಕ್ಕೆ ಮತ್ಯಾವತ್ತೂ ಕೈ ಹಾಕ್ಬೇಡಿ…
ಇನ್ನು ( unfriend ಮಾಡಿ, ಕಮೆಂಟ್‌ರಿಪ್ಲೆ ಆಪ್ಶನ್ ಇಲ್ಲದ ಕಡೆ ಬಂದು ಪೋಸ್ಟ್ ಮಾಡಿರೋ ಶ್ರುತಿಗೆ ಇಲ್ಲಿಯೇ ಉತ್ತರ ಕೊಡ್ತಿದ್ದೀನಿ..)
=> ಕ್ಲಾರಿಟಿ ಕೊಡ್ಲೆ ಬೇಕು….! ನೀನು ವೈಯಕ್ತಿಕವಾಗಿ ಮಾಡಿದ್ದರೆ ನಿನ್ನ ಹಣೆಬರಹ ಅನುಭವಿಸು ಅಂತಾ ನಾವು ಸುಮ್ಮನಾಗಿ ಬಿಡುತ್ತಿದ್ದೇವು…ನೀನು ಸರ್ವೆ ಡೀಲ್ ಮಾಡೋಕೆ ಹೊರಟಿದ್ದು ನಿನ್ನ ಆಸ್ತಿಯದ್ದಲ್ಲ, ಸಾರ್ವಜನಿಕ ಪ್ರತಿನಿಧಿಯಾಗಬೇಕಿರುವ ವ್ಯಕ್ತಿಯೊಬ್ಬನಿಗೆ ನೀಡಬೇಕಿದ್ದ ಟಿಕೆಟ್‌ಗೆ ಪೂರಕವಾಗಿದ್ದ ಸರ್ವೆ ರಿಪೋರ್ಟ್ ಅನ್ನು ಅದೂ ಪಕ್ಷದೊಳಗಿದ್ದುಕೊಂಡು..
ಈ ನಾಲಾಯಕ್ ಕೆಲಸಕ್ಕೆ ನೀನು ಬಳಸಿಕೊಂಡಿದ್ದು ಸಂಘ ಮತ್ತು ಪಕ್ಷದ ಹೆಸರು ಹಾಗಾಗಿ ನೀನು ಅದನ್ನು ಬಗೆಹರಿಸಲೇಬೇಕು..
ಪಕ್ಷದ ಮತ್ತು ಸಂಘದ ನಿಷ್ಠಾವಂತ ಕಾರ್ಯಕರ್ತರು ನಾವು ಹಾಗಾಗಿ ಅದನ್ನು ಕೇಳುವ ಹಕ್ಕು ಮತ್ತು ಅನಿವಾರ್ಯತೆ ಎರಡು ನಮಗಿದೆ. ಪಕ್ಷ ನಿನ್ನ ಸ್ವಂತದ್ದಲ್ಲ ಹಾಗಾಗಿ ಪಕ್ಷವನ್ನ ನಂಬಿದ್ದವರಿಗೆ ಉತ್ತರ ನೀಡಲು ಹೊಣೆಗಾರಳು!
ಇವತ್ತಿನ ದುರಂಹಕಾರದ ಮಾತನ್ನ ಆರೋಪ ಬಂದಾಗಲೇ ಹೇಳ್ಬಹುದಿತ್ತು. ಅವತ್ಯಾಕೆ ಕ್ಲಾರಿಟಿ ಕೊಡ್ತೀನಿ ಅನ್ನೋ ಸೋಗೆ ಹಾಕಿಕೊಂಡಿದ್ದೆ ? ಇಲ್ಲೀವರೆಗೆ ನಿನ್ನನ್ನ ನೇರವಾಗಿ ಪ್ರಶ್ನಿಸಿರಲಿಲ್ಲ, ಈಗ ನೀನೆ ಪ್ರಶ್ನಿಸಿದ್ದೀ, ಉತ್ತರ ಕೊಟ್ಟಿದ್ದೀನಿ..
ವಿಸೂ: ಅವ್ರ ವಾಲಲ್ಲಿ ನನ್ನನ್ನ unfriend ಮಾಡಿದ್ದಕ್ಕೆ ಸಂಭ್ರಮಾಚರಣೆ ಮಾಡಿದವ್ರಿಗೆ thanks…ಇವತ್ತು ಅಮಾವಾಸ್ಯೆ ನಂಗೂ ಕೆಲ ವಿಚಾರ, ವ್ಯಕ್ತಿಗಳಿಂದ ಮುಕ್ತಿ ದೊರೆತಿದೆ…
ಬಲಪಂಥೀಯ ಶಾರದಾ ಡೈಮಂಡ್ ಪೋಸ್ಟ್:
ಜಗತ್ತಿನಲ್ಲಿ ತುಂಬಾ ದೊಡ್ಡದು “ನಂಬಿಕೆ”.
ನಂಬಿಕೆ ಅಂದ್ರೆ ತಾಯಿ , ಆ ನಂಬಿಕೆಗೆ ಯಾವ ಕಾರಣಕ್ಕೂ ಮೋಸ ಆಗಲೇ ಬಾರದು … !!
ಚೈತ್ರನ ವಿಚಾರ ಹೊರ ಜಗತ್ತಿಗೆ ಗೊತ್ತಾಗಿರೋದು ನಿನ್ನೆ ಆದ್ರೂ ಕುಂದಾಪುರ ಉಡುಪಿ ಭಾಗದಲ್ಲಿ & ಸಂಘಟನೆ ಒಳಗಿರುವ ಕೆಲವರಿಗೆ ಐದಾರು ತಿಂಗಳ ಹಿಂದೆನೇ ಈ ವಿಷಯ ತಿಳಿದಿತ್ತು !
ಇದರ ಮಧ್ಯೆ ಇದೇ ವಿಚಾರವಾಗಿ ವಾಟ್ಸಾಪ್ ಅಲ್ಲಿ ಕಂಪ್ಲೈಂಟ್ ಕಾಪಿ ಹರಿದಾಡಿತ್ತು , ಅದಾದ ಮೇಲೆ ಒಂದು ಮೂರು ಆಡಿಯೋ ಕೂಡ ಅಲ್ಲಿ ಇಲ್ಲಿ ಅಪ್ಲೋಡ್ ಆಗಿತ್ತು. ಆದ್ರೂ ಯಾವ ಹಿಂದೂಗಳೂ ಚೈತ್ರನ ಬಗ್ಗೆ ಆಗಲಿ , ಅಭಿನವ ಹಾಲಶ್ರೀ ಸ್ವಾಮೀಜಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತಾಡಿರಲಿಲ್ಲ.
ಅದೇ ನಂಬಿಕೆ … !!! ಹಿಂದುತ್ವಕ್ಕಾಗಿ ಕೆಲಸ ಮಾಡ್ತಾ ಇದ್ದಾರೆ , ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತವರು ಅನ್ನೋ ನಂಬಿಕೆಯಿಂದ ಇವರಿಬ್ಬರು ಇಂತಾ ಕೆಲಸ ಮಾಡೋಕೆ ಸಾಧ್ಯವೇ ಇಲ್ಲ ಅಂತ ಕೆಲವರು ಸೈಲೆಂಟ್ ಆಗಿದ್ರೆ ಇನ್ನೂ ಕೆಲವರಿಗೆ ಅವರು ಬಗೆಹರಿಸಿಕೊಳ್ತಾರೆ ಇದು ಹೊರಗೆ ಬರಲ್ಲಾ ಅನ್ನೋ ಭಾವನೆ ಇತ್ತು.
ಹಿಂದೂಕಾರ್ಯಕರ್ತರಿಗೆ ತೊಂದರೆ ಆದಾಗ ನಿಲ್ಲೋದು ಧರ್ಮ ಅಂತ ಕೆಲವು ವರ್ಷಗಳ ಕೆಳಗೆ ಗಲಾಟೆ ಆದಾಗ ಇದೇ ಚೈತ್ರನ ಪರವಾಗಿ ನಾನೇ ಮೊದಲು ಅಭಿಯಾನ ಶುರು ಮಾಡಿದ್ದೆ, ಹಾಗೇ ಅವಳನ್ನು ಮಾತನಾಡಿಸಿಕೊಂಡು ಬರೋದಕ್ಕೆ ರಾತ್ರೋರಾತ್ರಿ ಮಂಗಳೂರಿನ ಆಸ್ಪತ್ರೆಗೆ ಹೋಗಿದ್ದೆ 🙂
ಈ ಸಾರಿ ಕೂಡ ಒಂದೂವರೆ ತಿಂಗಳ ಕೆಳಗೆ ಆಡಿಯೋ ಬಂದ ಕೂಡಲೇ ಚೈತ್ರನಿಗೆ ಏನ್ ಸಮಾಚಾರ, ಏನಿದು ಅಂತ ಆಡಿಯೋ ಫಾರ್ವರ್ಡ್ ಮಾಡಿ ನೇರವಾಗಿ ಕೇಳಿದ್ದೆ. case ಹಾಕ್ತೀನಿ ಅಕ್ಕಾ ಅಂತ ಹೇಳಿದಳು. ತುಂಬಾ ಸಾರಿ ನಾನಾಗಿ ನಾನೇ ಮತ್ತೆ ಮತ್ತೆ ಫೋನ್ ಮಾಡಿದ್ದೆ , ಮೆಸ್ಸೇಜ್ ಹಾಕಿದ್ದೆ ಆದರೆ ಅವಳ ರಿಪ್ಲೈ ಸರಿಯಾಗಿ ಬರಲಿಲ್ಲ. ಒಂದಿಷ್ಟು ಮಾತುಕತೆಗಳೂ ಆಗಿದ್ದವು. ಈ ವಿಚಾರವಾಗಿ ಚೈತ್ರ ಯಾವ ರೀತಿ ಮುಂದುವರೆದಿದ್ದಳು ಅನ್ನೋ ಯಾವ ಮಾಹಿತಿ ಕೂಡ ಅವಳು ನನಗೆ ಕೊಡಲಿಲ್ಲ..
ಸ್ವಾಮೀಜಿ ಅವರಿಗೂ ಫೋನ್ ಮಾಡ್ದಾಗ ನೀವೊಂದು ಪ್ರೆಸ್ ರಿಲೀಸ್ ಮಾಡಿ ಏನಾಯ್ತು ಅಂತ ಜನರಿಗೆ ಕ್ಲಾರಿಟಿ ಕೊಡಿ ಅಂತ ನೇರವಾಗಿ ಕೇಳಿದ್ದೆ !
ಅಲ್ಲೀ ತನಕ ಬಂದ ಆಡಿಯೋಗಳು, ಕಂಪ್ಲೇಂಟ್ ಕಾಪಿ ಎಲ್ಲಾ ಚೈತ್ರ & ಸ್ವಾಮೀಜಿ ಆರೋಪಿಗಳು ಅಂತ ಬಲವಾಗಿ ಹೇಳ್ತಾ ಇತ್ತು…. !!
ಸಾಮಾಜಿಕ ಜೀವನದಲ್ಲಿದ್ದಾಗ ಆರೋಪಗಳು ಬಂದಾಗ ಜನರಿಗೊಂದು ಕ್ಲಾರಿಟಿ ಕೊಡೋದು ಜವಾಬ್ದಾರಿ!
ಸಾಕಷ್ಟು ಸಮಯಾವಕಾಶ ಇತ್ತು. ತಿಂಗಳುಗಟ್ಟಲೆ ಟೈಮ್ ಇದ್ರೂ ಈ ಗ್ಯಾಂಗ್ ಒಂದೇ ಒಂದು ಸಣ್ಣ ಪ್ರಯತ್ನ ಕೂಡ. ಯಾಕೆ ಮಾಡಲೇ ಇಲ್ಲ ಅನ್ನೋದೇ ಯಕ್ಷ ಪ್ರಶ್ನೆ !
ಬಹಳಷ್ಟು ರಾಜಕಾರಣಿಗಳ ಮೇಲೆ ಒಂದಲ್ಲಾ ಒಂದು ಆರೋಪ, ಕೇಸುಗಳು ಇವೆ. ಕಳ್ಳ ರಾಜಕಾರಣಿಗಳು
ನಾಯಕರಂತೆ ನಮ್ಮ ಮುಂದೆ ತಿರುಗಾಡ್ತಾ ಇರೋವಾಗ ಕೇವಲ ಒಂದು ಆರೋಪ ಬಂದ ತಕ್ಷಣ ಧರ್ಮದ ಪರ ಕೆಲಸ ಮಾಡಿದವರನ್ನು ಯಾಕೆ ಬಿಟ್ಟುಕೊಡಬೇಕು ಅನ್ನೋ ಗೊಂದಲ ಕೆಲವರಿಗೆ ಇರಬಹುದು.
ತಪ್ಪಿದೆ ಅಂತ ಗೊತ್ತಾದ ಮೇಲೂ ಪ್ರಶ್ನೆ ಕೂಡ ಮಾಡದೇ ಎಲ್ಲದನ್ನೂ ಮೌನವಾಗಿ ಒಪ್ಪಿಕೊಳ್ಳೋದು ಮೂರ್ಖತನ ಆಗುತ್ತೆ !
ಶೃತಿ ತುಂಬ್ರಿ ನನಗೆ ಹತ್ತಿರದವಳಾಗಿದ್ರೂ ಅವಳ ಸಮೀಕ್ಷೆ ಆಡಿಯೋ ಬಂದಾಗ ಎಲ್ಲರಿಗಿಂತ ಜಾಸ್ತಿ ಅವಳನ್ನು ಅವತ್ತು ಪ್ರಶ್ನೆ ಮಾಡಿದ್ದು ನಾನೇ !
ಶೃತಿಗೆ ಫೋನ್ ಮಾಡಿದ್ದು ಯಾರು, ನಿಜವಾಗಲೂ ಅಲ್ಲಿ ಶೃತಿ ಪಾತ್ರ ಎಷ್ಟಿತ್ತು ಅಂತ ಸಾಧ್ಯವಾದಷ್ಟು ಮಾಹಿತಿ ಹುಡುಕಿ ತೆಗೆದಿದ್ದೆ. ಶೃತಿ ಕಂಪ್ಲೇಂಟ್ ಕೊಟ್ಟಿದ್ರೆ ಇನ್ನೊಂದಿಷ್ಟು ಮಾಹಿತಿ ಹೊರಗೆ ಬರ್ತಾ ಇತ್ತೇನೋ ಆದ್ರೆ ಅವರ ಮನೆಯವರು ಒಪ್ಪಲಿಲ್ಲ ಅಂತ ಅವಳು ಸ್ವಲ್ಪ ಟೈಮ್ ಕೊಡು ನಾನೇ ಪ್ರೂವ್ ಮಾಡ್ತೀನಿ ಅಂತ ಎಲ್ಲರ ಹತ್ತಿರ ಒಪ್ಕೊಂಡಿದ್ದಳು, ಆ ದಿನಕ್ಕೋಸ್ಕರ ನಾನೂ ಕಾಯ್ತಾ ಇದ್ದೀನಿ.
ಅವಳು ಮಾಡಿದ್ದು ಸರೀನಾ ಅಂತ ಕೇಳಿದ್ರೆ it’s a clear NO !!!
ಕೋರ್ಟ್’ನಲ್ಲಿ ಈ ಚೈತ್ರನ ಕೇಸ್ ಸ್ಟ್ಯಾಂಡ್ ಆಗುತ್ತಾ ಗೊತ್ತಿಲ್ಲ… ಪಕ್ಷದಲ್ಲಾಗಲಿ, ಸಂಘದಲ್ಲಾಗಲಿ ಏನೂ ಜವಾಬ್ದಾರಿ ಇಲ್ಲದೇ ಇರೋ ಚೈತ್ರಂಗೆ ಕೋಟಿಗಟ್ಟಲೆ ಕೊಟ್ಟು
ಟಿಕೆಟ್ ಕೇಳೋ ಗೋವಿಂದ ಬಾಬು ಪೂಜಾರಿ ಅವರ ದಡ್ಡತನದ ಬಗ್ಗೆ ಜನರಿಗೆಷ್ಟು ಬೇಜಾರಿದ್ಯೋ ಅದಕ್ಕಿಂತ ಹೆಚ್ಚಾಗಿ ಸುಳ್ಳು ಕಥೆ ಹೇಳ್ತಾ ಆ ಕಥೆಯಲ್ಲಿ ಇಲ್ಲದೇ ಇರೋ ಸಂಘದ ಕಾರ್ಯಕರ್ತರನ್ನೊಬ್ಬರನ್ನು ಸಾಯಿಸಿ ಕೊನೆಗೆ ಮೋದಿಯವರನ್ನೂ ಸಾಯಿಸಿರೋ ಚೈತ್ರಳ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟಿದೆ… !!
ಸಾಕಷ್ಟು ಬಡ ಕುಟುಂಬಗಳಿಗೆ ಆಧಾರ ಆಗಿರೋ ಗೋವಿಂದ ಬಾಬು ಪೂಜಾರಿ ಅವರ ಮುಗ್ಧತೆ ಖಂಡಿತಾ ದುರುಪಯೋಗ ಆಗಿದೆ !
ಸಂಘದ ಹೆಸರು ದುರುಪಯೋಗ ಆಗಿದೆ !
ಸಂಫಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡೋ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅದರ ಮಧ್ಯೆ ಸಂಘದ ಹೆಸರು ಹೇಳ್ಕೊಂಡು ಸ್ವಾರ್ಥ ಸಾಧನೆ ಮಾಡೋದು ಅಕ್ಷಮ್ಯ ಅಪರಾಧ!
ಚೈತ್ರ ಹಿಂದೂಪರ ಸಂಘಟನೆಗಳ ಹೆಸರು ಕೆಡಿಸಿಬಿಟ್ಟಳು, ಅವಳ ಚಾರಿತ್ರ್ಯ ಸರಿ ಇರಲಿಲ್ಲ ಅಂತ ಟ್ರೋಲ್ ಮಾಡ್ತಾ ಈಗ ಸಿಕ್ಕಾಪಟ್ಟೆ ಎಗರಾಡ್ತಾ ಇರೋರು ಸ್ವಲ್ಪ ಬಾಯಿ ಮುಚ್ಕೊಂಡಿದ್ರೆ ಒಳ್ಳೇದು !
ಹಾಗೇ ಚೈತ್ರನ ವಿರುದ್ಧ ಪೋಸ್ಟ್ ಹಾಕಿದವರಿಗೆ ನಿಮ್ಮ ಹೆಂಡತಿ ಮಕ್ಕಳನ್ನು ಹೋರಾಟಕ್ಕೆ ಕಳಿಸಿದ್ದೀರಾ, ನಾಚಿಕೆ ಆಗಲ್ವಾ ಅಂತ ಕೇಳೋ ಹಕ್ಕು ಕೂಡ ಯಾರಿಗೂ ಇಲ್ಲ !
ನೀವು ಹೀಗೆ ಪ್ರಶ್ನೆ ಮಾಡಿದ್ರೆ ನಾಳೆ ಧರ್ಮದ ಪರ ಕೆಲಸ ಮಾಡೋಕೆ ಯಾರೂ ಉಳಿಯೋದಿಲ್ಲ….ಹಾಗಾಗಿ ಬಾಯಿ ಮುಚ್ಚಿಕೊಳ್ಳೋದು ಮೊದಲು ಕಲೀರಿ ಅಂತ ಕೆಲವರು ಕಥೆ ಹೊಡೀತಾ ಇದ್ದಾರೆ .
ಹಿಂದುತ್ವಕ್ಕಾಗಿ ಕೆಲಸ ಮಾಡುವವರ ಬಗ್ಗೆ ಗೌರವ ಇದೆ, ಪ್ರೀತಿ ಇದೆ, ಅಂದ ಮಾತ್ರಕ್ಕೆ ಅವರು ಮಾಡಿದ್ದೆಲ್ಲಾ ಸರಿ ಅಂತ ಬೆಂಬಲಿಸೋಕೆ ನಾವು ಗುಲಾಮರಲ್ಲ 😄
ಆದ್ರೂ ಕೋರ್ಟಿನಲ್ಲಿ ತೀರ್ಪು ಬರುವವರೆಗೂ ಎಲ್ರೂ ಸಮಾಧಾನವಾಗಿ ಕಾಯೋಣ. ದುಡ್ಡು ಕಳೆದುಕೊಂಡಿರೋ ಬಾಬು ಪೂಜಾರಿಗೆ ನ್ಯಾಯ ಸಿಗಲಿ !