ಉಡುಪಿ ಜಿಲ್ಲೆ, ಬೈಂದೂರಿನ ಉದ್ಯಮಿ ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ತಿಳಿಸಿ ಸುಮಾರು 5 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ನಾಲ್ವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಂದೂತ್ವವಾದಿ ಸಂಘಟನೆಗಳ ನೆಚ್ಚಿನ ವಾಗ್ಮಿ, ಪ್ರಭಲ ಮೋದಿ ಸಮರ್ಥಕಿ, ಕೋಮು ದ್ವೇಷ ಹರಡುವ ಭಾಷಣಗಳಲ್ಲಿ ಎತ್ತಿದ್ದ ಕೈ ಎನಿಸಿರುವ, ಸಂಘಪರಿವಾರಕ್ಕೆ ಸೇರಿದ ದುರ್ಗಾವಾಹಿನಿಯ ಮುಂಚೂಣಿ ನಾಯಕಿ ಚೈತ್ರಾ ಕುಂದಾಪುರ, ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು, ಬಿಜೆಪಿ ಕಾರ್ಯಕರ್ತರುಗಳಾದ ಶ್ರೀಕಾಂತ ನಾಯಕ್ ಪೆಲತ್ತೂರು, ಪ್ರಸಾದ್ ಬೈಂದೂರು ಬಂಧಿತರು.
ಬಂಧಿತರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿರುವ ಸಿಸಿಬಿ ಪೊಲೀಸರು ಇಂದು ಸಂಜೆ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ತಿಂಗಳ ಹಿಂದೆಯೇ ಬಿಲ್ಲವ ಮುಖಂಡ ಹಾಗೂ ಟಿಕೆಟ್ ಆಕಾಂಕ್ಷಿ ಗೋವಿಂದ ಬಾಬು ಪೂಜಾರಿಯವರು ಪೊಲೀಸ್ ಇಲಾಖೆಯ ಮೊರೆ ಹೋಗಿದ್ದು, ಆ ಬಳಿಕ ಚೈತ್ರ ಕುಂದಾಪುರ ತಲೆ ಮರೆಸಿಕೊಂಡಿದ್ದರು. ಈ ವೇಳೆ ತನ್ನ ಆಪ್ತ ಗೆಳತಿ ಮುಸ್ಲಿಂ ಯುವತಿಯ ಮನೆಯಲ್ಲಿ ಆಕೆ ಆಶ್ರಯಪಡೆದುಕೊಂಡಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೈಡ್ರಾಮ …!
ಸೆ 8 ರಂದು ಚೈತ್ರಾ ಕುಂದಾಪುರ , ಹಿರೇಹಡಗಲಿಯ ಅಭಿನವ ಪಾಲಶ್ರೀ ಸ್ವಾಮೀಜಿ ಸಹಿತ 7 ಮಂದಿಯ ವಿರುದ್ದ ಬೆಂಗಳೂರು ಬಂಡೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅದಾಗಿ ಐದು ದಿನದೊಳಗಡೆ ,ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತನ್ನ ಎಂದಿನ ಚಾಳಿ ತೋರಿಸಿದ ಚೈತ್ರಾ . ಉಂಗುರ ನುಂಗಿ, ಪೊಲೀಸ್ ವಾಹನದ ಗಾಜು ಒಡೆಯಲು ಯತ್ನಿಸಿ ಹೈಡ್ರಾಮ ಮಾಡಿದ್ದಾಳೆ. ಅದರ ಇದಕ್ಕೆ ಸೊಪ್ಪು ಹಾಕದ ಸಿಸಿಬಿ ಪೊಲೀಸರು ಕಾರಿನಲ್ಲಿ ಎತ್ತಾಕಿಕೊಂಡು ಬೆಂಗಳೂರಿನತ್ತ ಕರೆದುಕೊಂಡು ಹೋಗಿದ್ದಾರೆ.
ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಉದ್ಯಮಿ ಗೋವಿಂದ ಬಾಬುರವರ ಮುಗ್ಧತೆ ಯನ್ನು ಬಳಸಿಕೊಂಡು ರಾಷ್ಟ್ರಮಟ್ಟದ ಅರ್ ಎಸ್ ಎಸ್ ನಾಯಕರು, ಸುಪ್ರೀಂ ಕೋರ್ಟು ಜಡ್ಜ್ ತನಗೆ ಆಪ್ತರೆಂದು ಬಿಂಬಿಸಿ ಪ್ರಧಾನಿ ಮೋದಿಗೆ ಶಿಫಾರಸ್ಸು ಮಾಡಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಲಾಗಿದೆ. ಇದಕ್ಕಾಗಿ ವಿಶ್ವನಾಥ್ ಜೀ ಹೆಸರಿನಲ್ಲಿ ಅರ್ ಎಸ್ ಎಸ್ ಪ್ರಮುಖರೊಬ್ಬರ ಹಾಗು ನಾಯ್ಕ್ ಹೆಸರಿನಲ್ಲಿ ಬಿಜೆಪಿಯ ಕೇಂದ್ರಿಯ ಸಮಿತಿಯ ಸದಸ್ಯರೊಬ್ಬರ ನಕಲಿ ಪಾತ್ರವನ್ನು ಸೃಷ್ಟಿಸಿ ವಂಚನೆ ಮಾಡಲಾಗಿದೆ. ಇದಕ್ಕಾಗಿ ಸೆಲೂನ್ ವೊಂದರಲ್ಲಿ ಅವರಿಗೆ ಮೆಕಪ್ ಮಾಡಿಸಿ, ಆರೋಪಿಯ ಮನೆಯಲ್ಲಿ ತರಭೇತಿಯನ್ನು ನೀಡಲಾಗಿದೆ.