ಮಂಗಳೂರು: ಠಾಣೆಯಲ್ಲಿ ಅಮಲು ಪದಾರ್ಥ ಸೇವಿಸಿದಂತೆ ವರ್ತಿಸುತಿದ್ದ ಯುವತಿಯೊಬ್ಬಳು ಪೊಲೀಸ್ ಅಧಿಕಾರಿಗೆ ಕಾಲಿನಿಂದ ಮೆಟ್ಟಿದ ವಿಡಿಯೋ ವೈರಲ್ ಪ್ರಕರಣಕ್ಕೆ ಮಂಗಳೂರಿನ ಪೊಲೀಸರು (Mangalore Police) ಸ್ಪಷ್ಟನೆ ನೀಡಿದೆ.
ಸೆ.1 ರಂದು ಬೆಳಿಗ್ಗೆ 06-50 ಗಂಟೆಯ ಸುಮಾರಿಗೆ ಮಂಗಳೂರು ನಗರದ ಪಂಪವೆಲ್ ನಲ್ಲಿರುವ ಗಣೇಶ ಮೆಡಿಕಲ್ ನಲ್ಲಿ ಒಬ್ಬಳು ಯುವತಿಯು ಅಸಾಮಾನ್ಯವಾಗಿ ಹಾಗೂ ಆಕ್ರಮಣಕಾರಿಯಾದ ರೀತಿಯಲ್ಲಿ ವರ್ತಿಸುತ್ತಿದ್ದಳು.ಈ ಬಗ್ಗೆ ಮಾಹಿತಿ ಪಡೆದ ಅಬಕಾರಿ ಇಲಾಖೆಯ ಅಧಿಕಾರಿಗಳು ಆಕೆ ಮಾದಕ ದ್ರವ್ಯ ಸೇವನೆ ಮಾಡಿರಬಹುದೆಂದು ಆಕೆಯನ್ನು ವೈದ್ಯಕೀಯ ತಪಾಸಣೆಯನ್ನು ನಡೆಸುವ ಬಗ್ಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆಯು ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದ್ದಾಳೆ.
ನಂತರ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಅಬಕಾರಿ ಇಲಾಖಾ ವಾಹನದಲ್ಲಿ ಹೆಚ್ಚಿನ ಸಹಾಯ ಕೋರಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಈ ಸಮಯ ಆಕೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಕೂಡಾ ನಿಯಂತ್ರಣ ಮೀರಿ ಆಕ್ರಮಣಕಾರಿಯಾಗಿ ವರ್ತಿಸಿದ್ದು ಕಾಲಿನಿಂದ ಮೆಟ್ಟಿದ್ದಾಳೆ. ನಂತರ ಆಕೆಗೆ ಕಷ್ಟಪಟ್ಟು ಕೈಗೆ ಕೋಳ ಹಾಕಿದ್ದಾರೆ. ಠಾಣೆಯ ಒಳಗಿನ ಈ ಎಲ್ಲಾ ವಿಡಿಯೋ ವೈರಲ್ ಆಗಿದೆ.
ಆಕೆಯನ್ನು ಅಗತ್ಯ ಮಹಿಳಾ ಸಿಬ್ಬಂದಿ ಬಲದೊಂದಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ವೈದ್ಯಕೀಯ ತಪಾಸಣೆ ಬಗ್ಗೆ ಅಬಕಾರಿ ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ತಪಾಸಣೆಯಲ್ಲಿ ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ಪೂರಕ ಫಲಿತಾಂಶ ಬಂದಿರುವುದಿಲ್ಲ. ನಂತರ ಆಕೆಯನ್ನು ಆಕೆಯ ಪೋಷಕರ ವಶಕ್ಕೆ ವಹಿಸಿದ್ದು, ಸದ್ಯ ಉದ್ರೇಕಕಾರಿ ವರ್ತನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ರಿ ಯುವತಿ ಆಕ್ರಮಣಕಾರಿಯಾಗಿ ಮತ್ತು ಉದ್ರೇಕಕಾರಿಯಾಗಿ ಅಬಕಾರಿ ಇಲಾಖಾ ಅಧಿಕಾರಿಗಳೊಂದಿಗೆ ವರ್ತಿಸಿರುವ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಂಗಳೂರು ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.