ಪುತ್ತೂರು : ಸೆ 7 : ಮುಸುಕುಧಾರಿಗಳ ತಂಡವೊಂದು ಮನೆಯ ಬಾಗಿಲನ್ನು ಮುರಿದು, ತಲ್ವಾರು, ಕತ್ತಿ ಚೂರಿ ಝಳಪಿಸಿ ಮನೆ ಮಂದಿಯ ಕೈಕಾಲು ಕಟ್ಟಿ ಹಾಕಿ ಚಿನ್ನಾಭರಣ ಹಾಗೂ ನಗದು ದರೋಡೆಗೈದ ಪ್ರಕರಣ ಪುತ್ತೂರು ನಗರದಿಂದ 30 ಕಿಮೀ ದೂರದ ಸುಳ್ಯಪದವು ಸಮೀಪದ ಕುದ್ಕಾಡಿ ಎಂಬಲ್ಲಿ ಆ 7ರಂದು ನಡೆದಿದೆ.
ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಸ್ಥಳೀಯ ಕಾಂಗ್ರೆಸ್ ಮುಖಂಡ ಪಡವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ ಗುರುಪ್ರಸಾದ್ ರೈ ಯವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿದೆ. ಕೃತ್ಯ ನಡೆದ ಸಂದರ್ಭ ಮನೆಯಲ್ಲಿ ಅವಿವಾಹಿತರಾಗಿರುವ ಗುರುಪ್ರಸಾದ್ ರೈ ಹಾಗೂ ಅವರ ತಾಯಿ ಕಸ್ತೂರಿ ರೈ ಮಾತ್ರ ಇದ್ದರು. ಮನೆಯ ಬೀರುವಿನಲ್ಲಿಟ್ಟಿದ್ದ ಕಸ್ತೂರಿ ರೈಯವರ ಚಿನ್ನದ ಬಳೆ, ಸರ ಸೇರಿದಂತೆ ಸುಮಾರು 15 ಪವನ್ ಚಿನ್ನ ಹಾಗೂ 25 ಸಾವಿರ ರೂಪಾಯಿ ನಗದು ಹಾಗೂ ಗುರುಪ್ರಸಾದ್ ರೈಯವರ ಪರ್ಸಿನಲ್ಲಿದ್ದ 5 ಸಾವಿರ ರೂಪಾಯಿ ದರೋಡೆಯಾಗಿರುವುದಾಗಿ ತಿಳಿದು ಬಂದಿದೆ. ಇದರ ಜತೆಗೆ ಮನೆಯ ಅಟ್ಟದಲ್ಲಿದ್ದ ತಾಮ್ರದ ಪಾತ್ರೆ, ಅಡಕೆಯನ್ನು ತೆಗೆದುಕೊಂಡು ಹೋಗಿರುವುದಾಗಿ ಮನೆಯವರು ತಿಳಿಸಿದ್ದಾರೆ.
ಕಸ್ತೂರಿ ರೈಯವರು ಪ್ರಸ್ತುತ ಕಾಸರಗೋಡಿನ ಬದಿಯಡ್ಕದಲ್ಲಿ ವಾಸಿಸುತ್ತಿದ್ದು ಅಪರೂಪಕ್ಕೊಮ್ಮೆ ಕುದ್ಕಾಡಿಯ ಈ ಮನೆಗೆ ಬರುತ್ತಿದ್ದರು. ಸಾಮಾನ್ಯವಾಗಿ ಇಲ್ಲಿ ಗುರುಪ್ರಸಾದ್ ರೈಯವರು ಹಾಗು ತೋಟದ ಕೆಲಸದಾಳುಗಳು ಮಾತ್ರ ಇರುತ್ತಿದ್ದು, ರಾತ್ರಿ ವೇಳೆ ಓರ್ವ ಕೆಲಸದಾಳು ಹಾಗೂ ಗುರುಪ್ರಸಾದ್ ರೈಯವರು ಮಾತ್ರ ಮನೆಯಲ್ಲಿ ಇರುತ್ತಿದ್ದರು. ಆದರೆ ಕಳೆದ 3 ದಿನಗಳಿಂದ ಅನ್ಯ ಕಾರಣಗಳಿಂದ ಕೆಲಸದಾಳು ಊರಿಗೆ ಹೋಗಿದ್ದರು. ಈ ಹಿನ್ನಲೆಯಲ್ಲಿ ತೋಟದ ಕೆಲಸದಾಳುಗಳಿಗೆ ಅಡುಗೆ ಮಾಡಲು ಹಾಗೂ ಸೆ. 7 ರಂದು ಪುತ್ತೂರಿನಲ್ಲಿ ಸಂಬಂಧಿಕರೊಬ್ಬರ ಶುಭ ಕಾರ್ಯಕ್ರಮವಿದ್ದ ಕಾರಣ ಕಸ್ತೂರಿ ರೈಯವರು 3 ದಿನಗಳ ಹಿಂದೆಯಷ್ಟೆ ಕುದ್ಕಾಡಿಯ ಮನೆಗೆ ಬಂದಿದ್ದರು. ಸಮಾರಂಭದಲ್ಲಿ ಧರಿಸಲೆಂದು ಬಳೆ ಸರ ಸಹಿತ ಅಂದಾಜು 15 ಪವನ್ ಚಿನ್ನಾಭರಣ ಹಾಗೂ 25 ಸಾವಿರ ರೂಪಾಯಿ ನಗದು ಕೂಡ ಬದಿಯಡ್ಕದ ಮನೆಯಿಂದ ತಂದಿದ್ದರು.

ದರೋಡೆಯಾದ ಮನೆ ಇರುವ ಸ್ಥಳ
ದರೋಡೆಯಾದ ಮನೆ ತೀರ ಗ್ರಾಮೀಣ ಪ್ರದೇಶದಲ್ಲಿದ್ದು ಪುತ್ತೂರಿನಿಂದ ಸುಮಾರು 30 ಕಿಮೀ ದೂರದಲ್ಲಿದೆ. ಕೌಡಿಚ್ಚಾರ್ ಸುಳ್ಯಪದವು ರಸ್ತೆಯಲ್ಲಿರುವ ಪದಡ್ಕ (ನಾಟ್ಯ ಗುರು ಕುದ್ಕಾಡಿ ದಿ. ವಿಶ್ವನಾಥ ರೈಯವರ ವಿಶ್ವ ಕಲಾನಿಕೇತನದ ಬಳಿಯಿಂದ )ದಿಂದ ಬಲ ಬದಿಯಲ್ಲಿರುವ ಸಂಪರ್ಕ ರಸ್ತೆಯಲ್ಲಿ ಸುಮಾರು 1.5 ಕಿ. ಮೀ ದೂರದಲ್ಲಿ ಈ ಮನೆಯಿದೆ. ಇದರಲ್ಲಿ 300 ಮೀ ನಷ್ಟು ದೂರ ಕಾಂಕ್ರಿಟ್ ರಸ್ತಯಿದ್ದು ಬಳಿಕ ಮನೆಯವರೆಗೂ ಕಚ್ಚಾ ಮಣ್ಣಿನ ರಸ್ತೆಯಿದೆ. ಈ ರಸ್ತೆಯ ಅಲ್ಲಲ್ಲಿ ಕವಲು ರಸ್ತೆಗಳಿದ್ದು , ಅದು ಬೇರೆ ಬೇರೆ ಮನೆಗಳಿಗೆ ಸಂಪರ್ಕ ರಸ್ತೆಯಾಗಿದೆ. ಕೃತ್ಯ ನಡೆದ ಮನೆ ಆ ರಸ್ತೆಯ ಕೊನೆಯ ಮನೆಯಾಗಿದೆ. ಪದಡ್ಕ ಜಂಕ್ಷನ್ ನಲ್ಲಿ ಮಾತ್ರ ಬೀದಿ ದೀಪವಿದ್ದು, ಅಲ್ಲಿಂದ ಕುದ್ಕಾಡಿ ಸಂಪರ್ಕಿಸುವ 1.5 ಕಿಮೀ ಉದ್ದದ ರಸ್ತೆಯಲ್ಲಿ ಎಲ್ಲಿಯೂ ಬೀದಿ ದೀಪವಿಲ್ಲ.

ಇಂತಹ ಸಂಪರ್ಕಿಸಲು ಕ್ಲಿಷ್ಟಕರವಾಗಿರುವ ರಸ್ತೆಯಲ್ಲಿ, ಅದು ಆ ರಸ್ತೆಯ ಕೊನೆಯ ಮನೆಯನ್ನು ದರೋಡೆಕೋರರು ಆಯ್ಕೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದರೋಡೆಯ ಬಳಿಕ ಪರಾರಿಯಾಗುವ ವೇಳೆ ರಸ್ತೆಯುದ್ದಕ್ಕೂ ಇರುವ ಇತರ ಮನೆಯವರ ಕೈಗೆ ಸಿಕ್ಕಿ ಬೀಳುವ ಸಾದ್ಯತೆಯಿದ್ದು ದರೋಡೆಕೋರರು ಈ ಆಪಾಯವನ್ನು ಮೈಮೇಲೆ ಎಳೆದುಕೊಂಡು ಕೃತ್ಯ ಎಸಗಿರುವುದು ಅಚ್ಚರಿಗೆ ಕಾರಣವಾಗಿದೆ. ಮಾರ್ಗದ ಪರಿಚಯಯಿರುವವರಿಗೂ ಹಗಲು ಹೊತ್ತಿನಲ್ಲೂ ದಾರಿ ತಪ್ಪಬಹುದಾದ ಈ ಮನೆಗೆ ದರೋಡೆಕೋರರು ರಾತ್ರಿ ವೇಳೆ ಬಂದು ಕೃತ್ಯ ಎಸಗಿ ವಾಪಸ್ಸು ಹೋಗಿರುವುದು ನೋಡಿದಾಗ ಇದರ ಹಿಂದೆ ಪರಿಚಿತರ ಕೈವಾಡವಿರುವ ಶಂಕೆ ಮೂಡಿದೆ.
ಸೆ 6 ರಂದು ಏನಾಯಿತು ?
ಸೆ 6 ರಂದು ಸ್ಥಳೀಯವಾಗಿ ಮೊಸರು ಕುಡಿಕೆ ಕಾರ್ಯಕ್ರಮವಿತ್ತು.ಅಲ್ಲಿಗೆ ಹೋಗಿ ಗುರುಪ್ರಸಾದ್ ಅವರು ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾರೆ. ಅಲ್ಲಿಯವರೆಗೆ ತಾಯಿ ಮಾತ್ರ ಮನೆಯಲ್ಲಿದ್ದರು. ಹಳೆಯ ಹಂಚಿನ ಮನೆಯಾಗಿದ್ದು, ಮುಂಭಾಗ ಹಾಗೂ ಬಲ ಬದಿಯಲ್ಲಿ ಅದಕ್ಕೆ ಬಾಗಿಲಿದೆ. ಮನಗೆ ಎಡ ಭಾಗದಿಂದ ರಸ್ತೆ ಸಂಪರ್ಕವಿದೆ. ರಸ್ತೆ ಮುಂಭಾಗದಲ್ಲಿ ಮನೆಯಿಂದ ತುಸು ಎತ್ತರದ ಪ್ರದೇಶದಲ್ಲಿ ಅಡಿಕೆ ಸೋಲಾರ್‌ಯಿದ್ದು ಅದರಲ್ಲಿ ಅಡಿಕೆ ಒಣಗಿಸಲು ಹಾಕಿತ್ತು.

“ ಬಲ ಬಾಗದ ಬಾಗಿಲ ಬಳಿಕ ರೂಂ ನಲ್ಲಿ ಮಲಗಿದ್ದೆ. ರಾತ್ರಿ 2 ಗಂಟೆ ಸುಮಾರಿಗೆ ಬಲ ಭಾಗದ ಬಾಗಿಲ ಬಳಿ ಶಬ್ಧವಾಗಿ ಎಚ್ಚರವಾಯಿತು, ಕೆಲ ಕ್ಷಣಗಳ ಬಳಿಕ ಮತ್ತೊಮ್ಮೆ ದೊಡ್ಡ ಶಬ್ಧವಾಗಿದ್ದು ಎದ್ದು ನೋಡಿದಾಗ, ನಾಲೈದು ಜನ ಮುಸುಕುದಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಜೋರಾಗಿ ಕಿರುಚಿಕೊಂಡಿದ್ದು, ಈ ವೇಳೆ ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಮಗ ಕೂಡ ಬಂದಿದ್ದಾನೆ. ಈ ವೇಳೆ ದುಷ್ಕರ್ಮಿಗಳು ತಮ್ಮ ಕೈಯಲ್ಲಿದ್ದ ತಲ್ವಾರು, ಚೂರಿ, ಕತ್ತಿ ತೋರಿಸಿ ಬೆದರಿಸಿ , ಕೈ ಕಾಲು ಕಟ್ಟಿ ಹಾಕಿ ಮನೆಯೆಲ್ಲ ಜಾಲಾಡಿದ್ದಾರೆ. ಬಳಿಕ ಕಬೋರ್ಡ್ ನ ಮೇಲೆ ಇಟ್ಟಿದ್ದ ಬೀಗದ ಕೈಯ ಮೂಲಕ ಮತ್ತೊಂದು ಕೊಠಡಿಯಲ್ಲಿ ಗೊದ್ರೆಜ್ ನಲ್ಲಿಟ್ಟಿದ್ದ 15 ಪವನ್ ಚಿನ್ನ ಹಾಗು 30 ಸಾವಿರ ರೂಪಾಯಿಯನ್ನು ದೋಚಿದ್ದಾರೆ. ರಾತ್ರಿ 2 ಗಂಟೆಗೆ ಮನೆಯೊಳಗಡೆ ಬಂದವರು ನಸುಕಿನ ವೇಳೆ 4 ರಿಂದ 4.30 ಗಂಟೆಯವರೆಗೆ ಮನೆಯ ಇಂಚಿಂಚು ಜಾಲಾಡಿದ್ದಾರೆ. ಅಟ್ಟಕ್ಕೂ ಹತ್ತಿ ಇಳಿದಿದ್ದಾರೆ.

2-2.5 ಗಂಟೆ ಮನೆಯೊಳಗಿದ್ದರು :
ದರೋಡೆಕೋರರ ಸುಮಾರು 2 ರಿಂದ ಎರಡೂವರೆ ಗಂಟೆಯವರೆಗೆ ಮನೆಯೊಳಗಿದ್ದರು. ಬಳಿಕ ನನ್ನ ಹಾಗೂ ಮಗನ ಬಳಿಯಿದ್ದ ಒಟ್ಟು 4 ಮೊಬೈಲನ್ನು ಪಡೆದುಕೊಂಡು ನಾವು ಅದರಿಂದ ಕರೆ ಮಾಡಬಾರದೆಂಬ ಉದ್ದೇಶದಿಂದ ಅದನ್ನು ನೀರು ತಂಬಿದ ಬಕೆಟ್‌ಗೆ ಹಾಕಿ ಹೋಗಿದ್ದಾರೆ ಎಂದು ಕಸ್ತೂರಿ ರೈಯವರು ಘಟನೆಯನ್ನು ವಿವರಿಸಿದ್ದಾರೆ.

ಗೋಲ್ಡ್ , ಮನಿ :
ದರೋಡೆಕೋರರು ಮಾರಾಕಾಯುದ್ದ ಹಿಡಿದು ಬೆದರಿಸಿದ ಕೂಡಲೇ ಚಿನ್ನ ಹಾಗೂ ನಗದು ಇಟ್ಟಿದ್ದ ಗೋದ್ರೆಜ್ ಹಾಗು ಅದರ ಕೀ ಯನ್ನು ತೋರಿಸಿದ ಕಾರಣ ದುಷ್ಕರ್ಮಿಗಳು ನಮಗೆ ಯಾವುದೇ ಹಲ್ಲೆ ಮಾಡಿಲ್ಲ. ಅವರು ಹೆಚ್ಚು ಮಾತನಾಡುತ್ತಿರಲಿಲ್ಲ, ಗೋಲ್ಡ್ , ಮನಿ ಎಂದು ಮಾತ್ರ ಹೇಳುತ್ತಿದ್ದರು ಎಂದು ಕಸ್ತೂರಿ ರೈಯವರು ತಿಳಿಸಿದ್ದಾರೆ.
ತುಳು ಮತ್ತು ಕನ್ನಡದಲ್ಲಿ ಮಾತನಾಡುತ್ತಿದ್ದರು :
ಹಣ ಮತ್ತು ನಗದು ದೋಚಿದ ಬಳಿಕವು ಇನ್ನಷ್ಟು ದುಡ್ಡು ಕೊಡುವಂತೆ ಒತ್ತಾಯಿಸಿದ್ದು ದರೋಡೆಕೋರರು ತುಳು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು. ನನ್ನ ಬೈಕಿನಲ್ಲಿದ್ದ ಪೆಟ್ರೋಲನ್ನು ಖಾಲಿ ಮಾಡಿ ಕೀಯನ್ನು ಹಿಡಿದುಕೊಂಡು ಹೋಗಿದ್ದಾರೆ. ಎಂದು ಗುರು ಪ್ರಸಾದ್ ರೈ ವಿವರಿಸಿದ್ದಾರೆ. ಮನೆಯೊಳಗೆ ಐದು ಜನ ಮುಸುಕುಧಾರಿಗಳು ನುಗ್ಗಿದ್ದು ಅವರಿಗೆ ಬೆಂಗಾವಲು ಆಗಿ ಹೊರಗಡೆಯೂ ದುಷ್ಕರ್ಮಿಗಳು ಇದ್ದರಿಬಹುದು ಎಂಬ ಅನುಮಾನವನ್ನು ಅವರು ವ್ಯಕ್ತ ಪಡಿಸಿದ್ದಾರೆ. ಮನೆಯೊಳಗಡೆ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮನೆಯಲ್ಲಿದ್ದ ಉಪಕರಣ ಬಳಸಿ ಕೃತ್ಯ

ಮನೆಯ ಎಡಭಾಗದ ರಸ್ತೆಯ ಮೂಲಕವೇ ದರೋಡೆಕೋರರು ಬಂದಿರುವ ಸಾಧ್ಯತೆಯಿದೆ. ಮನೆಯ ಹೊರಗೆ ಮೂಲೆಯಲ್ಲಿ ಇಟ್ಟಿದ್ದ ಕಾಯಿ ಸುಲಿಯುವ ಯಂತ್ರವನ್ನು ಬಳಸಿ ಬಲಭಾಗದ ಬಾಗಿಲನ್ನು ಒಡೆದು ದರೋಡೆಕೋರರು ಮನೆಯೊಳಗೆ ಪ್ರವೇಶಿಸಿರುವುದಾಗಿ ಮನೆಯವರು ತಿಳಿಸಿದ್ದಾರೆ.
ನಡೆದುಕೊಂಡು ಬಂದಿದ್ದರು:
ಸ್ಥಳೀಯರ ಪ್ರಕಾರ ದುಷ್ಕರ್ಮಿಗಳು ಯಾವುದಾದರೂ ವಾಹನದಲ್ಲಿ ಬಂದಿರುವ ಸಾಧ್ಯತೆಯಿದೆ ಕೃತ್ಯ ಎಸಗಿದ ಬಳಿಕ ದರೋಡೆಗೈದ ವಸ್ತುಗಳನ್ನು ಹಿಡಿದುಕೊಂಡು ಮನೆಯ ಎದುರಿನ ಬಾಗಿಲಿನ ಮೂಲಕ ದುಷ್ಕರ್ಮಿಗಳು ನಡೆದುಕೊಂಡೆ ಹೋಗಿದ್ದಾರೆ. ಮನೆಯವರಿಗೆ ಯಾವುದೇ ವಾಹನದ ಶಬ್ಧ ಕೇಳಿಸಿಲ್ಲ. ವಾಹನವನ್ನು ದೂರದಲ್ಲಿ ನಿಲ್ಲಿಸಿ ಬಳಿಕ ನಡೆದುಕೊಂಡು ಇಲ್ಲಿಗೆ ಬಂದಿರಬಹುದೆಂದು ಮನೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲ ಗಂಟೆ ಮೊದಲೇ ಬಂದಿದ್ದರೇ?
ಕೃತ್ಯ ಎಸಗುವ ಕೆಲ ಗಂಟೆಗಳ ಮೊದಲೇ ದುಷ್ಕರ್ಮಿಗಳು ಬಂದಿದ್ದು ಅಡಿಕೆ ಸೋಲಾರ್ ಬಳಿ ಕಾದು ಕುಳಿತು, ಮನೆಯವರು ಗಾಢ ನಿದ್ರೆಗೆ ಜಾರಿದ ವೇಳೆ ಕೃತ್ಯ ಎಸಗಿದ್ದಾರೆ ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.

ಎಲ್ಲ ಸಂಪರ್ಕ ಕಡಿತ
ರಾತ್ರಿ ಕಾರ್ಯಕ್ರಮವೊಂದಕ್ಕೆ ತೆರಳಿ ಬಂದಿದ್ದ ಗುರುಪ್ರಸಾದ್ ಅವರು ಮನೆಯ ಮುಂಭಾಗದಲ್ಲಿ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದರು. ತಾವು ಸುರಕ್ಷಿತ ಸ್ಥಳ ಸೇರುವವರೆಗೆ ಮನೆ ಮಂದಿ ಹತ್ತಿರದ ಮನೆಗೆ ಯಾ ಪೊಲೀಸ್ ಠಾಣೆಗೆ ತಲುಪಬಾರದೆಂಬ ಉದ್ದೇಶದಿಂದ ಬೈಕ್ ನಲ್ಲಿದ್ದ ಪೆಟ್ರೋಲ್ ಅನ್ನು ಖಾಲಿ ಮಾಡಿದ್ದಲ್ಲದೆ ಕೀ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಇದರ ಜತೆಗೆ ಮನೆಯಲ್ಲಿದ್ದ ಮೂರು ನಾಲ್ಕು ಮೊಬೈಲ್ ಗಳನ್ನು ನೀರಿನಲ್ಲಿ ಮುಳುಗಿಸಿ ಕರೆಯನ್ನೂ ಮಾಡದಂತೆ ಮಾಡಿದ್ದಾರೆ. ಮನೆಯಲ್ಲಿದ್ದ ಟಾರ್ಚ್ ಲೈಟ್ ಗಳನ್ನು ಹೊತ್ತೊಯ್ಯುದಿದ್ದು ಈ ಮೂಲಕ ಆ ಕತ್ತಲಲ್ಲಿ ಪಕ್ಕದ ಮನೆಗೂ ಹೋಗದಂತೆ ತಡೆದಿದ್ದಾರೆ. ಹೀಗಾಗಿ ಮನೆಯವರು ಬೆಳಕು ಹರಿಯುವವರೆಗೆ ಕಾದು ಬಳಿಕವಷ್ಟೆ ದರೋಡೆ ಕೃತ್ಯವನ್ನು ಹೊರ ಜಗತ್ತಿಗೆ ತಿಳಿಸಿದ್ದಾರೆ.

ಶ್ವಾನದಳ
ಕೃತ್ಯ ನಡೆದ ಸ್ಥಳಕ್ಕೆ ಶ್ವಾನದಳ ಬಂದಿದ್ದು, ದರೋಡೆಕೋರರು ಹೊರ ಹೋಗಿರುವುದು ಮುಖ್ಯ ದ್ವಾರವಾದ ಕಾರಣ ಈ ಮೂಲಕ ಶ್ವಾನ ಕೂಡ ಹೊರಗೊಡಿದೆ. ಮನೆಗೆ ಸುತ್ತು ಹಾಕುವ ಕಾರ್ಯವನ್ನು ಮಾಡದೆ ಮನೆಯ ಪಕ್ಕದಲ್ಲಿರುವ ಅಡಕೆ ಒಣಗಿಸುವ ಸೋಲಾರ್ ಕೊಠಡಿಯ ಪಕ್ಕ ತಡಕಾಡಿ ರಸ್ತೆಯ ಮೂಲಕ ಗುಡ್ಡದ ಕಡೆಗೆ ಓಡಿದೆ. ಬೆರಳಚ್ಚು ತಜ್ಞರು, ವಿಧಿ ವಿಜ್ಙಾನ ತಜ್ಙರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಅನುಮಾನದ ಹುತ್ತ :

ಕಸ್ತೂರಿ ರೈಯವರು ಬಂಗಾರ ಹಾಗೂ ನಗದು ಸಹಿತ ಮನೆಗೆ ಆಗಮಿಸಿರುವ ವಿಷಯ ದರೋಡೆಕೋರರಿಗೆ ಸಿಕ್ಕಿದ್ದು ಹೇಗೆ ಎನ್ನುವ ಅನುಮಾನ ಸ್ಥಳೀಯವಾಗಿ ಮೂಡಿದೆ. ಮನೆಯ ಬಳಿಯಿಂದ ಸುಮಾರು 100 ಮೀ ನಷ್ಟು ರಸ್ತೆ ಏರು ದಿಬ್ಬದಂತೆ ಇದ್ದು, ಈ ಮಾರ್ಗದಲ್ಲಿ ಚಿನ್ನ ಮತ್ತು ನಗದು ಕದ್ದ ಬಳಿಕ ತಕ್ಷಣ ಪರಾರಿಯಾಗುವ ಕಡೆ ಯೋಚಿಸುವ ದರೋಡೆಕೋರರು ಅಡಿಕೆ ತುಂಬಿದ ಗೋಣಿಯನ್ನು ಹೊತ್ತುಕೊಂಡು ಹೋಗುವ ರಿಸ್ಕನ್ನು ಮೈಮೇಲೆ ಯಾಕೇ ಎಳೆದುಕೊಂಡರು ಎನ್ನುವುದು ಕೂಡ ಸಾರ್ವಜನಿಕರನ್ನು ಕಾಡುತ್ತಿರುವ ಮತ್ತೊಂದು ಅನುಮಾನ. ಮನೆಯನ್ನು ಎರಡು ಗಂಟೆಗೂ ಅಧಿಕ ಕಾಲ ಹುಡುಕಾಡಿದ ದುಷ್ಕರ್ಮಿಗಳು ಸೋಲಾರ್ ನಲ್ಲಿದ್ದ ಅಡಿಕೆಯನ್ನು ಮುಟ್ಟಿಲ್ಲ.
ಐಜಿಪಿ ಭೇಟಿ :
ಕೃತ್ಯ ನಡೆದ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಎಸ್ಪಿ ರಿಷ್ಯಂತ್ ಸಿ ಬಿ, ಡಿವೈಎಸ್ಪಿ ಗಾನ ಪಿ ಕುಮಾರ್ ಬೇಟಿ ನೀಡಿದ್ದು ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿರುವ ದ್ಯೋತಕ.ಎರಡು ವಾರದ ಹಿಂದೆ ಪುತ್ತೂರು ನಗರದಲ್ಲಿ ಯುವತಿಯೊಬ್ಬಳ ಬೀಕರ ಹತ್ಯೆ ನಡೆದಾಗಲೂ ಐಜಿಪಿ ಭೇಟಿ ನೀಡಿರಲಿಲ್ಲ. ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.
ಕೃತ್ಯದ ಬಗ್ಗೆ ಗುರು ಪ್ರಸಾದ್ ರೈ ಹೇಳಿದ್ದೇನು ?