ಉಪ್ಪಿನಂಗಡಿ: ಸಹಕಾರ ಸಂಘಗಳ ಜಂಟಿ ನಿರ್ದೇಶಕರ ಕಚೇರಿ ಮೈಸೂರು ಪ್ರಾಂತ ಇವರ ಜುಲೈ 28 ರ ಆದೇಶದಂತೆ ಮೈಸೂರು ಪ್ರಾಂತದ ದ.ಕ. ಜಿಲ್ಲೆಯನ್ನೂ ಒಳಗೊಂಡಂತೆ 8 ಜಿಲ್ಲೆಗಳ 646 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘಗಳನ್ನು ರಚಿಸುವ ಕುರಿತಾದ ಆದೇಶದ ವಿರುದ್ಧ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು, ನ್ಯಾಯಾಲಯವು ಈ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ಉಪ್ಪಿನ೦ಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ತಿಳಿಸಿದ್ದಾರೆ.
ಸಹಕಾರ ಸಂಘಗಳ ನಿಬಂಧಕರ ಸುತ್ತೋಲೆ ಸಂಖ್ಯೆ ಸಿಅರ್ ಡಿ /ಕೆ ಎಂಸಿ 4/179 16-17 ದಿನಾಂಕ 12-05 -2017 ಹಾಗೂ ತತ್ಸಂಬಂಧಿತ ರಾಜ್ಯ ಸಹಕಾರಿ ಸಂಘದ ಇತರ ಆದೇಶಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತೇ ವಿನಾ: ಕೇಂದ್ರ ಸರಕಾರದ ಸಹಕಾರ ಸಚಿವಾಲಯದ ಆದೇಶವನ್ನು ಪ್ರಶ್ನಿಸಿ ನಾವು ಉಪ್ಪಿನಂಗಡಿ ಸಹಕಾರ ಸಂಘದ ವತಿಯಿಂದ ರಿಟ್ ಅರ್ಜಿ ಸಲ್ಲಿಸಿರುವುದಿಲ್ಲ ಎಂದು ಬಾಜಪದ ಜಿಲ್ಲಾ ಸಹಕಾರಿ ಪ್ರಕೋಷ್ಟದ ಸಹ ಸಂಚಾಲಕರೂ ಆಗಿರುವ ಕೆವಿ ಪ್ರಸಾದ್ ಅವರು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಸಹಕಾರಿ ಸಂಘಗಳೇ ಇಲ್ಲದ ಗ್ರಾಪಂ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚಿಸಲು ಈ ಕಾಲಮಿತಿ ಸೂಕ್ತವಾಗಿದ್ದರೂ, ದ.ಕ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದ್ದು, ಚಿನ್ನಾಭರಣಗಳ ಸಾಲ ಸೌಲಭ್ಯ ಸೇರಿದಂತೆ ಸಮಾನಾಂತರ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದೆ.
ನೂತನ ಆದೇಶದನ್ವಯ ಮುಂದೆ ಪ್ರತಿ ಗ್ರಾಮಗಳಲ್ಲಿಯೂ 13 ಮಂದಿ ಆಡಳಿತ ಸದಸ್ಯರನ್ನು ಒಳಗೊಂಡ ಸ್ವಾಯತ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆಯಾಗಬೇಕಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಘಗಳ ಆಸ್ತಿಯನ್ನು ವಿಂಗಡಿಸುವ ಬಗ್ಗೆ ಬಹಳಷ್ಟು ಗೊಂದಲ ಮೂಡಲಿದೆ. ಕೆಲವೊಂದು ಗ್ರಾಮಗಳು ವ್ಯವಹಾರಾತ್ಮಕವಾಗಿ ದುರ್ಬಲವಾಗಿದ್ದು, ಅಲ್ಲಿ ಸುದೃಢ ಕಟ್ಟಡದ ನಿರ್ಮಾಣವಾಗಬೇಕಾಗಿದ್ದು, ಸುಲಲಿತ ವ್ಯವಹಾರಕ್ಕೆ ಹಾಗೂ ಸುರಕ್ಷತಾ ವ್ಯವಹಾರಕ್ಕೆ ಪೂರಕ ಸಿಬ್ಬಂದಿ ಹೊಂದಬೇಕಾಗಿದೆ. ಪ್ರತ್ಯೇಕ ಸಂಘ ನಿರ್ಮಾಣವಾಗುವುದರಿಂದ ವ್ಯವಹಾರ ಕಿರಿದಾಗಿ ಲಾಭ ಕಡಿತಗೊಳ್ಳುವ ಅಪಾಯ ಎದುರಾಗಲಿದೆ. ಈ ಎಲ್ಲ ಅಂಶ ಆಧರಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ರಿಟ್ ಸಂಖ್ಯೆ: ಡಬ್ಲ್ಯೂಪಿ 17673/ 2023 ರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ಅವರ ಏಕ ಸದಸ್ಯ ಪೀಠ ಸಹಕಾರ ಸಂಘಗಳ ಜಂಟಿ ನಿರ್ದೇಶಕರ ಕಚೇರಿ ಮೈಸೂರು ಪ್ರಾಂತ ಇವರ ಜು.28ರ ಆದೇಶಕ್ಕೆ ಮಂಗಳವಾರ ತಡೆಯಾಜ್ಞೆ ವಿಧಿಸಿದೆ ಎಂದು ಕೆ.ವಿ.ಪ್ರಸಾದ್ ತಿಳಿಸಿದರು