Soujanya Case Re Investigation: ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ನಡೆಸಬೇಕು ಹಾಗು ನೈಜ ಆರೋಪಿಗಳನ್ನು ಬಂಧಿಸಬೇಕು ಎಂಬ ಆಗ್ರಹ ತೀವ್ರತೆ ಪಡೆದುಕೊಂಡಿದೆ. ಒಂದೆಡೆ ಸೌಜನ್ಯ ಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯಳ ತಾಯಿ ಕುಸುಮಾವತಿ ಗೌಡರವರು ನಿರಂತರ ಸಭೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ವಿವಿದ ಸಂಘ ಸಂಸ್ಥೆಗಳು, ಸಾಮಾಜಿಕ ಧುರೀಣರು ಕರಾವಳಿ ಜಿಲ್ಲೆಯ ಅಲ್ಲಲ್ಲಿ ಜನ ಜಾಗೃತಿ ಸಭೆಗಳನ್ನು ಆಯೋಜಿಸಿ ಮರು ತನಿಖೆಗೆ ಒತ್ತಾಯಿಸುತ್ತಿದ್ದಾರೆ.
ಮತ್ತೂಂದೆಡೆ ವಾಟ್ಸಪ್ ಗ್ರೂಪ್ ಗಳನ್ನು ರಚಿಸಿಕೊಂಡು ,ಫೇಸ್ ಬುಕ್ ಪೇಜುಗಳನ್ನು ತೆರೆದುಕೊಂಡು ,ಟ್ವೀಟರ್ ನಲ್ಲಿ #justice4Soujanya ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಚಳುವಳಿ ನಡೆಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಿರಂತರವಾಗಿ ನಡೆಯುತ್ತಿದೆ. ಇವೆಲ್ಲದರ ಪರಿಣಾಮ ಸರಕಾರಗಳ ಮೇಲೂ ಮರುತನಿಖೆಗೆ ಒತ್ತಡ ಹೆಚ್ಚುತ್ತಿದೆ.
ಎರಡು ವಾರದ ಹಿಂದೆ ಈ ಪ್ರಕರಣ ಮುಗಿದ ಅಧ್ಯಾಯ ಎಂದಿದ್ದ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್ ಬಳಿಕದ ದಿನಗಳಲ್ಲಿ ನಡೆದ ಹೋರಾಟದ ತೀವ್ರತೆ ಹಾಗು ತನ್ನ ವಿರುದ್ದಕೇಳಿ ಬಂದ ವಾಗ್ದಳಿಯನ್ನು ಗಮನಿಸಿ ಮಾತಿನ ವರಸೆ ಬದಲಾಯಿಸಿದ್ದಂತೆ ಕಾಣುತ್ತಿದೆ. ತನಿಖೆ ಸಾಧ್ಯವೇ ಇಲ್ಲ ಎಂದಿದ್ದವರು. ಇದರ ಮಧ್ಯೆಯೂ ಕಾನೂನಿನ ಹೋರಾಟದ ಚೆಂಡನ್ನು ಸೌಜನ್ಯ ಕುಟುಂಬದದತ್ತ ಎಸೆದು ಜಾರಿಕೊಳ್ಳುವ ಯತ್ನ ಮಾಡಿದಂತೆ ತೋರುತ್ತಿದೆ
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸರಕಾರದ ನಿಲುವಿನ ಪ್ರಶ್ನೆ ಅಲ್ಲ. ಈಗ ಮರು ತನಿಖೆ ಆಗಬೇಕು ಎನ್ನುತ್ತಿರುವವರು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಕೋರ್ಟ್ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಆಧರಿಸಿ ಸರಕಾರ ಕ್ರಮ ಕೈಗೊಳ್ಳುತ್ತದೆ. ಕೋರ್ಟ್ ಮರು ತನಿಖೆ ಮಾಡಿ ಎಂದು ನಿರ್ದೇಶಿಸಿದರೆ ಸರಕಾರ ಮರು ತನಿಖೆ ಮಾಡಬಹುದು. ಅದನ್ನು ಬಿಟ್ಟು ಈಗ ಸರಕಾರ ಏನೂ ಮಾಡಲಾಗದು ಎಂದು ಹೇಳಿದ್ದಾರೆ. ಸರಕಾರ ನೇರವಾಗಿ ಮರುತನಿಖೆ ಮಾಡುವಂತಿಲ್ಲ. ಆದರೆ ನ್ಯಾಯಾಲಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಿದಲ್ಲಿ ಮರುತನಿಖೆ ಮಾಡಬಹುದು ಎಂದು ಗೃಹ ಸಚಿವರು ಹೇಳುವ ಮೂಲಕ ಇದು ಸಂಪೂರ್ಣವಾಗಿ ಮುಗಿದ ಅಧ್ಯಾಯವಲ್ಲ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಸೌಜನ್ಯಾ ಕೊಲೆ ಪ್ರಕರಣ ದಲ್ಲಿ ಕಾನೂನು ಪ್ರಕಾರ ಏನು ಮಾಡಬೇಕಿತ್ತೋ ಅದನ್ನು ಮಾಡಿ ಆಗಿದೆ. ಮರು ತನಿಖೆ ಮಾಡಬೇಕು ಎನ್ನುವವರು ಕೋರ್ಟ್‌ಗೆ ಹೋಗಿ ನಿರ್ದೇಶನ ತರಲಿ. ಅದನ್ನು ಬಿಟ್ಟು ಎಸ್‌ಐಟಿ ತನಿಖೆ ರಾಜ್ಯ ಸರಕಾರದ ಹಂತದಲ್ಲಿ ಸಾಧ್ಯವಿಲ್ಲ ಎಂದರು. ಸೌಜನ್ಯಾ ಕೊಲೆ ಪ್ರಕರಣ ಸಿಬಿಐ ತನಿಖೆಯಾಗಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ಈ ಹಿಂದೆ ಸಿಬಿಐಗೆ ಪ್ರಕರಣವನ್ನು ವಹಿಸಲಾಗಿತ್ತು. ಸಿಬಿಐನವರು ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ ಎಂದರು.