Young Woman Snabed and killed At Puttur ಪುತ್ತೂರು : ಆ 25 : ಜನನಿಬಿಡ ಪ್ರದೇಶದಲ್ಲಿ, ಠಾಣೆಯ ಗೋಡೆಯ ಅಂಚಿನಲ್ಲಿ, ತಾಲೂಕಿನ ಪ್ರಸಿದ್ದ ತೀರ್ಥ ಕ್ಷೇತ್ರಕ್ಕೆ ಹೋಗುವ ದ್ವಾರದ ಮುಂಭಾಗ , ರಾಜ ರಸ್ತೆಯ ಫರ್ಲಾಂಗ್ ದೂರದಲ್ಲಿ, ಅಂಗಡಿಗಳ ಪಕ್ಕದಲ್ಲಿ, ಸೂರ್ಯ ನಡು ನೆತ್ತಿಯಲ್ಲಿರುವಾಗ ಕೊಲೆ ಮಾಡಲು ಸಾಧ್ಯವೆ..? ಅದು ಕೂಡ ಠಾಣೆಯ ಗೋಡೆಗೆ ತಲೆಯನ್ನು ಒತ್ತಿ ಹಿಡಿದು ಕತ್ತು ಸೀಳುವಷ್ಟು ದಾರ್ಷ್ಟ್ಯ…! ಅದು ಕೂಡ ಮೂರರಿಂದ ನಾಲ್ಕು ಬಾರಿ…! ಅಷ್ಟು ಹುಚ್ಚು ಧೈರ್ಯ, ಭಂಢತನ, ಹುಂಬತನ ಮನುಷ್ಯನೊಬ್ಬನಲ್ಲಿರಲು ಸಾದ್ಯವೇ..? ಇನ್ನೂ ಕೊಲೆ ನಡೆಸಿ, ಬೈಕ್ ಸ್ಟಾರ್ಟ್ ಮಾಡಿ , ತಿರುಗಿಸಿ , ದ್ವಾರದಿಂದ ಮುಖ್ಯ ರಸ್ತೆಗೆ ಹೋಗುವ ಹೆದ್ದಾರಿಯನ್ನು ಠಾಣೆಯ ಮುಂಭಾಗವೇ ಕ್ರಾಸ್ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ಸಾಧ್ಯವೇ ? ಅದು ಕೂಡ ಪೊಲೀಸರ ಕಣ್ತಪ್ಪಿಸಿ ಬರೋಬ್ಬರಿ 30 ಕಿಮೀ ದೂರ …!
ಇಷ್ಟೇಲ್ಲ ಅಸಾಧ್ಯಗಳು ಸಾಧ್ಯ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿ ದೊಡ್ಡ ನಗರವಾದ ಪುತ್ತೂರಿನಲ್ಲಿ ಗುರುವಾರ ಸಾಬೀತಾಗಿದೆ. ಪ್ರೀತಿಗೆ ಕಣ್ಣಿಲ್ಲ ಅದು ಕುರುಡು ಅನ್ನುತ್ತಾರೆ… ಅತಿಯಾದಾಗ ಅದಕ್ಕೆ ಕಣ್ಣು ಹೃದಯ, ಕಿವಿ ಯಾವುದು ಇರುವುದಿಲ್ಲ ಎನ್ನುವುದು ಪದೇ ಪದೇ ಪ್ರೂವ್ ಆಗುತ್ತಿದೆ. ಅದಕ್ಕೆ ಮತ್ತೊಂದು ಜ್ವಲಂತ ಸಾಕ್ಷಿ ನಿನ್ನೆಯ ಬರ್ಬರ ಘಟನೆ.
ಕೊಲೆಯಾದ ಹುಡುಗಿಗೆ ಕೇವಲ 18 ವರ್ಷ. ಪ್ರಪಂಚವನ್ನು ಜೀವನವನ್ನು ಇನ್ನಷ್ಟೆ ಅರಿತು ಸಾಗಬೇಕಾದ ವಯಸ್ಸು. ಆದರೇ ಅದಕ್ಕೂ ಮೊದಲು ಪ್ರೀತಿಯೆಂಬ ಬಲೆಯಲ್ಲಿ ಸಿಲುಕಿ ಒದ್ದಾಡಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಶ್ರೀ ಮಹಾಲೀಂಗೇಶ್ವರ ದೇಗುಲದ ಪಶ್ಚಿಮ ದ್ವಾರದ ಸಮೀಪ, ಪುತ್ತೂರಿನ ಮಹಿಳಾ ಠಾಣೆ ಹಾಗೂ ಶ್ರೀ ಮಹಾಲೀಂಗೇಶ್ವರ ದೇಗುಲದ ಪುಷ್ಕರಣಿಯ ಮಧ್ಯಭಾಗದಲ್ಲಿ ಯುವಕನೊಬ್ಬ ಚೂರಿಯಂತಹ ಮಾರಾಕಾಯುಧದಿಂದ 3 ರಿಂದ 4 ಬಾರಿ ಕೋಳಿಯ ಕತ್ತು ಸೀಳುವ ರೀತಿ ಅಬಲೆ ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದಾನೆ ಎಂದರೇ ಒಂದಷ್ಟು ಗಳಿಗೆಯವರೆಗೆ ನಂಬುವ ಸ್ಥಿತಿಯಲ್ಲಿ ಪುತ್ತೂರಿನ ಜನತೆ ಇರಲಿಲ್ಲ.
ದೀಪದಡಿ ಕತ್ತಲು
ಯುವತಿ ಕಿರುಚಾಡಿರಲಿಲ್ಲವೇ.. ? ಅದು ಅಲ್ಲಿದ್ದ ಯಾರಿಗೂ ಕೇಳಿಸಲಿಲ್ಲವೇ..? ಜನರನ್ನು ಕಾಡಿದ ಅನುಮಾನ ಇದು. ಠಾಣೆಯ ಗೋಡೆಯ ಬದಿಯಲ್ಲಿ ಕೋಡಿಯಾಗಿ ಹರಿದು ನೆಲ ಸೇರುತ್ತಿದ್ದ ಕೆಂಬಣ್ಣದ ರಕ್ತ ಅಲ್ಲಿದ ನೆರೆದ ಜನರನ್ನು ಕೃತ್ಯ ನಡೆದಿರುವುದನ್ನು ನಂಬುವಂತೆ ಮಾಡಿತ್ತು. ಅಲ್ಲದೇ ಹೃದಯಭಾಗದಲ್ಲೇ ಕೊಲೆ ನಡೆದರೂ ಅಲ್ಲಿ ಸಿಸಿಟಿವಿ ಇರಲಿಲ್ಲ ಎನ್ನುವುದು ಜನರ ನಿಬ್ಬರಗಾಗುವಂತೆ ಮಾಡಿತ್ತು. ನಗರದ ಪ್ರತಿ ಕಟ್ಟಡದಲ್ಲೂ ಸಿಸಿಟಿವಿ ಆಳವಡಿಸಬೇಕೆಂದು ಹೇಳುವ ಪೊಲೀಸ್ ಇಲಾಖೆಯ ಕಟ್ಟಡದಲ್ಲೇ ಸಿಸಿಟಿವಿ ಇರಲಿಲ್ಲ ಎನ್ನುವುದನ್ನು ಜನರಾದರೂ ನಂಬುವುದು ಹೇಗೆ..? ದೀಪದಡಿ ಕತ್ತಲು ಇಲ್ಲಿ ನಿಜವಾಗಿತ್ತು. ಹೀಗಾಗಿ ಕೊಲೆ ಮತ್ತು ಅದು ನಡೆಯುವ ಸ್ವಲ್ಪ ಮುಂಚೆ ಅಲ್ಲಿ ಏನು ನಡೆಯಿತು ಎನ್ನುವುದು ಸಿಟಿಟಾವಿ ಇಲ್ಲದ ಹಿನ್ನಲೆಯಲ್ಲಿ ನಿಗೂಢವಾಗಿಯೇ ಉಳಿದಿದೆ.

ಬಡ ಕುಟುಂಬ
ಹತ್ಯೆಯಾದ ಯುವತಿ 18 ರ ಹರೆಯದ ಯುವತಿ ಗೌರಿ ವಿಟ್ಲ ಸಮೀಪದ ಅಳಿಕೆ ಗ್ರಾಮದ ಕುದ್ದುಪದವು ಆರಾಳ ನಿವಾಸಿ. ರವೀಂದ್ರ ಮಣಿಯಾಣಿ ಹಾಗೂ ಸೀತಾ ದಂಪತಿಗಳ ಇಬ್ಬರು ಪುತ್ರಿಯರಲ್ಲಿ ಹಿರಿಯವಳು. ಇತ್ತೀಚೆಗಷ್ಟೆ ಓದು ಮುಗಿಸಿದ ಅವಳು ಮನೆಯಲ್ಲಿರುವ ಕಿತ್ತು ತಿನ್ನುವ ಬಡತನವನ್ನು ಗಮನಿಸಿ ಪುತ್ತೂರಿನ ಕೆಎಸ್ ಅರ್ ಟಿಸಿ ಬಸ್ ನಿಲ್ದಾಣದಲ್ಲಿರುವ ನೂಲು ಮತ್ತು ಬಟನ್ ಮಾರುವ ಅಂಗಡಿಯೊಂದರಲ್ಲಿ 24 ದಿನಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದಾಳೆ.
ಜೆಸಿಬಿ ಅಪರೇಟರ್
ಆ. 24 ರಂದು ಕೂಡ ಗೌರಿ ಎಂದಿನಂತೆ ಅಂಗಡಿಗೆ ಬಂದಿದ್ದಾಳೆ. ಮೂಲಗಳ ಪ್ರಕಾರ ಕೆಲ ಗಂಟೆಗಳ ಬಳಿಕ ಆರೋಪಿ ಪದ್ಮರಾಜ್ ಕೂಡ ಅಂಗಡಿ ಬಳಿ ಬಂದಿದ್ದಾನೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಪದ್ಮರಾಜ್ ಮೂಲತಃ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೈಬೇಳಿನವ. ಮೂರು ವರ್ಷಗಳ ಹಿಂದೆ ಆತನ ಕುಟುಂಬ ಈ ಜಾಗವನ್ನು ಮಾರಾಟ ಮಾಡಿ ವೇಣೂರಿನ ತಾಯಿಯ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರು. ಈತ ವೃತ್ತಿಯಲ್ಲಿ ಜೆಸಿಬಿ ಅಪರೇಟರ್. ಗೌರಿ ಓದುತ್ತಿದ್ದ ಕಾಲೇಜಿಗೆ ಜೆಸಿಬಿ ಕೆಲಸಕ್ಕೆಂದು ಪದ್ಮರಾಜ್ ಬಂದಿದ್ದು ಈ ವೇಳೆ ಅವರಿಬ್ಬರಿಗೆ ಪರಿಚಯ ಬೆಳೆದಿದೆ ಎನ್ನಲಾಗುತ್ತಿದೆ. ಬಳಿಕ ಇದು ಪ್ರೀತಿಗೂ ತಿರುಗಿತ್ತು ಎಂದು ಹೇಳಲಾಗುತ್ತಿದೆ.

ಆಗಾಗ ಗಲಾಟೆ…!
ಆದರೆ ಇತ್ತೀಚೆಗೆ ಅವರಿಬ್ಬರ ಮಧ್ಯೆ ಪ್ರೀತಿಯ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ. ಗೌರಿ ಇನ್ನೊಬ್ಬ ಯುವಕನ ಜತೆ ಸಲುಗೆಯಿಂದ ಇದ್ದಾಳೆ ಎನ್ನುವುದು ಪದ್ಮರಾಜ್ ತಕರಾರು. ಇದೇ ವಿಚಾರವಾಗಿ ಅವರಿಬ್ಬರ ಮಧ್ಯೆ ಗಲಾಟೆಯು ಆಗಿದ್ದು ಅದು ಠಾಣೆ ಮೆಟ್ಟಿಲು ಏರಿತ್ತು. ಬಳಿಕ ಪೊಲೀಸರು ಅದನ್ನು ರಾಜಿ ಪಂಚಾತಿಕೆ ನಡೆಸಿ ಮುಗಿಸಿದ್ದರು ಎಂದು ಹೇಳಲಾಗಿತಿದೆಯಾದರೂ, ಯುವತಿಯೇ ಕೇಸ್ ವಾಪಸ್ಸು ತೆಗೆದುಕೊಂಡಿದ್ದಳು ಎನ್ನುತ್ತಾರೆ ವಿಟ್ಲದ ಪೊಲೀಸರು. ಸತ್ಯ ಯಾವುದು ಗೊತ್ತಿಲ್ಲ.

ಇದಾದ ಬಳಿಕವು ಯುವತಿ ಹಾಗು ಪದ್ಮರಾಜ್ ಮಧ್ಯೆ ಸಂಪರ್ಕವಿತ್ತು, ಇಬ್ಬರು ಮೊಬೈಲ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದರು, ಜಗಳವಾಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಗೌರಿ ಬಗ್ಗೆ ಸಿಕ್ಕಾಪಟ್ಟೆ ಪೊಸೆಸಿವ್ ಆಗಿದ್ದ ಪದ್ಮರಾಜ್ ಗೆ ಆಕೆ ತನ್ನನ್ನೂ ಬೇಕಂತಲೇ ಅವಾಯ್ಡ್ ಮಾಡುತ್ತಿದ್ದಾಳೆ ಎಂದು ಎನಿಸಿದೆ. ಹೀಗಾಗಿಯೇ ಆ 24 ರಂದು ಸರ್ವಿಸ್ ಮಾಡಿಸಲೆಂದು ಗೆಳೆಯ ಕೊಟ್ಟ ಬೈಕ್ ಹಿಡಿದು ಬಿಸಿರೋಡಿಗೆ ಬಂದಿದ್ದ ಪದ್ಮರಾಜ್ ಸೀದಾ ಪುತ್ತೂರಲ್ಲಿ ಗೌರಿ ಕೆಲಸ ಮಾಡುತ್ತಿರುವ ಅಂಗಡಿ ಬಳಿ ಬಂದಿದ್ದಾನೆ.

ಮೊಬೈಲ್ ಕಸಿದನೇ ?
ಅಲ್ಲಿ ಗೌರಿ ಮತ್ತು ಪದ್ಮರಾಜ್ ಮಧ್ಯೆ ಮೊಬೈಲ್ ವಿಚಾರವಾಗಿ ಗಲಾಟೆಯಾಗಿದೆ. ಈ ವೇಳೆ ಗೌರಿ ತಾಯಿಗೆ ಕರೆ ಮಾಡಿ ಪದ್ಮರಾಜ್ ಪೀಡಿಸುತ್ತಿರುವ ವಿಷಯ ತಿಳಿಸಿದ್ದು ಈ ವೇಳೆ ಗೌರಿ ಬಳಿಯಿದ್ದ ಮೊಬೈಲ್ ಅನ್ನು ಪದ್ಮರಾಜ್ ಕಿತ್ತುಕೊಂಡು ಹೋಗಿದ್ದಾನೆ ಎನ್ನಲಾಗಿದೆ . ಇನ್ನೊಂದು ಮೂಲಗಳ ಪ್ರಕಾರ ಅಂಗಡಿ ಬಳಿ ಬಂದ ಪದ್ಮರಾಜ್ ಗೆ ಗೌರಿ ಬಳಿ ಎರಡು ಮೊಬೈಲ್ ಇರುವ ವಿಷಯ ಗೊತ್ತಾಗಿದೆ. ತನ್ನಗೆ ಗೊತ್ತಿಲ್ಲದೆ ಆಕೆ ಎರಡು ಮೊಬೈಲ್ ಬಳಸುತ್ತಿರುವುದು ಅವನನ್ನು ವ್ಯಗ್ರನಾಗಿಸಿದೆ. ಯುವತಿಯ ಮೇಲೆ ಇನ್ನಷ್ಟು ಅನುಮಾನ ಹುಟ್ಟು ಹಾಕಿದೆ. ಹೀಗಾಗಿಯೇ ಆತ ಜಗಳವಾಡಿ ಮೊಬೈಲ್ ಕಿತ್ತುಕೊಂಡು ಹೋಗಿದ್ದಾನೆಂದು ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ ಪದ್ಮರಾಜ್ ಯುವತಿ ಕೈಯಿಂದ ಮೊಬೈಲ್ ಕಿತ್ತುಕೊಂಡು ಹೋಗಿರುವುದನ್ನು ಬಸ್ಸು ನಿಲ್ದಾಣದಲ್ಲಿ ಕೆಲಸ ಮಾಡುವ ಹಲವರು ನೋಡಿದ್ದಾರೆ ಎನ್ನಲಾಗಿದೆ. ಇದರಿಂದ ಅವಮಾನಿತಳಾದ ಆಕೆ ಮಧ್ಯಾಹ್ನದಿಂದ ಕೆಲಸಕ್ಕೆ ಬರುವುದಿಲ್ಲ, ಕೆಲಸ ಬಿಡುತ್ತೇನೆಂದು ತಾನು ಕೆಲಸ ಮಾಡುತ್ತಿದ್ದ ಅಂಗಡಿಯವರಲ್ಲಿ ಹೇಳಿ ಸಂಬಳ ತೆಗೆದುಕೊಂಡು ಹೋಗಿದ್ದಾಳೆ. ಅಥಾವ ಅಂಗಡಿಯ ಮುಂಭಾಗ ಮುಂದೆ ಕಿರಿಕಿರಿಯಾಗುವುದು ಬೇಡ ಎಂದು ಅಂಗಡಿಯವರೇ ಕೆಲಸದಿಂದ ತೆಗೆದರೇ ಗೊತ್ತಿಲ್ಲ.

ನಿಗೂಢವಾಗಿಯೇ ಉಳಿದ ಹಲವು ಪ್ರಶ್ನೆಗಳು
ಯುವಕನೊಬ್ಬ ಗೌರಿ ಬಳಿಯಿಂದ ಮೊಬೈಲ್ ಕಿತ್ತುಕೊಂಡು ಹೋಗುವುದನ್ನು ನೋಡಿದ ಕೆಲವರು ಠಾಣೆಗೆ ಹೋಗಿ ದೂರು ನೀಡುವಂತೆಯೂ ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಮಧ್ಯಾಹ್ನ 12 ರಿಂದ 1 ಗಂಟೆಯ ನಡುವೆ ಅಂಗಡಿ ಮಾಲಕರಿಂದ ಸಂಬಳ ಪಡೆದು ಗೌರಿ ಬಸ್ಸು ನಿಲ್ದಾಣದಿಂದ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಬಳಿ ಬಂದಿದ್ದಾಳೆ. ಕೆಲಸದಿಂದ ಸ್ಥಳದಿಂದ ಮಹಿಳಾ ಠಾಣೆಯ ಬಳಿ ಆಕೆ ದೂರು ನೀಡಲೆಂದೇ ಆಕೆ ಬಂದಿದ್ದಾಳೆಯೇ ಎನ್ನುವುದು ಗೊತ್ತಿಲ್ಲ. ಆಕೆ ಸೀದಾ ಮಹಿಳಾ ಠಾಣೆಗೆ ಹೋಗಿ ದೂರು ನೀಡುವುದಿದ್ದಾರೆ ಬಸ್ಸು ನಿಲ್ದಾಣದಿಂದ 10 ರಿಂದ 15 ನಿಮಿಷದ ನಡಿಗೆಯ ದಾರಿ. ಆದರೆ ಆಕೆ ಕೊಲೆಯಾದದ್ದು 1.55ನಿಮಿಷಕ್ಕೆ . ನಡುವಿನ 1 ಗಂಟೆಯಷ್ಟು ಸಮಯ ಆಕೆ ಏನು ಮಾಡುತ್ತಿದ್ದಳು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಷ್ಟೆ . ಪದ್ಮರಾಜ್ ಕಿತ್ತುಕೊಂಡು ಹೋಗಿದ್ದ ಮೊಬೈಲ್ ಪಡೆಯಲೆಂದು ಗೌರಿ ಅಲ್ಲಿಗೆ ಬಂದಿದ್ದಾಳೆ ? ಆ ಬಾಗದಲ್ಲಿ ಸಿಸಿಟಿವಿ ಇರುತ್ತಿದ್ದರೇ ಈ ಎಲ್ಲ ಪ್ರಶ್ನೆಗಳಿಗೆ ಸಂಶಯಾತೀತ ಉತ್ತರ ಸಿಗುತಿತ್ತು.

ರಾಜ ರಸ್ತೆಯಿಂದ ದೇಗುಲಕ್ಕೆ ಪಶ್ಚಿಮ ದ್ವಾರದತ್ತ ಮುಖ ಮಾಡಿರುವ ಸಿಸಿಟಿವಿಯೊಂದೆ ಸದ್ಯ ಲಭ್ಯ ವಿಡಿಯೋ ದಾಖಲೆ. ಅದರ ಪ್ರಕಾರ ಆರೋಪಿ ಪದ್ಮರಾಜ್ ಬೈಕ್ ನಲ್ಲಿ ಅದೇ ದ್ವಾರದಲ್ಲಿ ಪುಷ್ಕರಣಿಯತ್ತ ಬಂದಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಬೈಕಿನಲ್ಲಿ ಅದೇ ದ್ವಾರದಲ್ಲಿ ಹಿಂತಿರುಗಿದ್ದಾನೆ . ಯುವತಿ ಆ ಜಾಗಕ್ಕೆ ಬಂದ ಕುರುಹು ಆ ಸಿಸಿಟಿವಿಯಲ್ಲಿ ಕಾಣಿಸಿಲ್ಲ. ಹೀಗಾಗಿ ಗೌರಿ ದೇಗುಲದ ಕಡೆಯಿಂದ ಪುಷ್ಕರಣಿಯ ಬಳಿ ಬಂದಿರಬಹುದು ಎಂದು ಶಂಕಿಸಲಾಗುತ್ತಿದೆ. ಆದರೇ ಠಾಣೆಯ ಗೋಡೆಗೆ ಒತ್ತಿ ಕತ್ತು ಸೀಳಿ ಕಲೆ ನಡೆಸಿರುವುದು ಮಾತ್ರ ಪುತ್ತೂರಿನ ನಾಗರೀಕ ಸಮಾಜವನ್ನು ಬೆಚ್ಚಿ ಬೀಳುವಂತೆ ಮಾಡಿದೆ
ಘಟನೆಯ ಬಗ್ಗೆ ಎಸ್ಪಿ ರಿಷ್ಯಂತ್ ಹೇಳಿದ್ದೇನು ?