ಪುತ್ತೂರು: ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಹಾಡುಹಗಲೇ ವಿಟ್ಲ ಮೂಲದ ಯುವತಿಯ ಮೇಲೆ ಚೂರಿಯಿಂದ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡ ಯುವತಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಅಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಗೆ ಸರಪಾಡಿ ಮೂಲದ ಯುವಕ ಚಾಕುವಿನಿಂದ ಮೂರಿಂದ ನಾಲ್ಕು ಬಾರಿ ಕುತ್ತಿಗೆಗೆ ದಾಳಿ ನಡೆಸಿದ್ದಾರೆನ್ನಲಾಗಿದೆ. ವಿಟ್ಲ ಸಮೀಪದ ಅಳಿಕೆಯ ಗೌರಿ (25) ಗಾಯಾಳು ಎನ್ನಲಾಗುತ್ತಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ನಡುವಿನ ಜಾಗದಲ್ಲಿ ಈ ದಾಳಿ ನಡೆದಿದೆ. ಗೋಡೆಗೆ ಯುವತಿಯನ್ನು ಒತ್ತಿ ಹಿಡಿದು ದುಷ್ಕರ್ಮಿ ಕತ್ತು ಸೀಳಿರುವುದಾಗಿ ಹೇಳಲಾಗುತ್ತಿದೆ.
ಬೈಕ್ ನಲ್ಲಿ ಬಂದ ವ್ಯಕ್ತಿ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ. ಚೂರಿಯಿಂದ ಗೌರಿಯ ಹತ್ಯೆಗೆ ಯತ್ನಿಸಿದ ಯುವಕ ಕುತ್ತಿಗೆಗೆ ಚೂರಿ ಇರಿದು ಬಳಿಕ ತಾನು ಬಂದಿದ್ದ ಬೈಕ್ ನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.



