ಚಂದ್ರಯಾನ-3 ಇಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಭಾರತವು ತನ್ನ ಚಂದ್ರಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಈ ಐತಿಹಾಸಿಕ ಸಾಧನೆ ಮಾಡಿದ್ದು ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗ ಚಂದ್ರಯಾನದಲ್ಲಿ ಯಶಸ್ವಿಯಾಗಿರುವ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ಸಾಲಿಗೆ ಸೇರಿಕೊಂಡಿದೆ.
ಭಾರತದ ಐತಿಹಾಸಿಕ ಚಂದ್ರನ ಕಾರ್ಯಾಚರಣೆಯು ಲ್ಯಾಂಡಿಂಗ್‌ನ ನೇರಪ್ರಸಾರ ಯೂ ಟ್ಯೂ ಬ್ ನಲ್ಲಿ ಹೊಸ ದಾಖಲೆ ಬರೆಯಿತು. ಸ್ಪ್ಯಾನಿಷ್ ಸ್ಟ್ರೀಮರ್ ಇಬಾಯ್ ಅವರ 3.4 ಮಿಲಿಯನ್ ವೀಕ್ಷಣೆಯ ವಿಶ್ವ ದಾಖಲೆಯನ್ನುಚಂದ್ರಯಾನ-3 ನೇರ ಪ್ರಸಾರ ಮುರಿದಿದೆ.
ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಚಂದ್ರಯಾನ -3 ರ ನೇರ ಪ್ರಸಾರವನ್ನು ತೋರಿಸಲಾಗಿತ್ತು. ಇಂದು ಸಂಜೆ 5:53 PM IST ಸಮಯಕ್ಕೆ 5.6 ಮಿಲಿಯನ್ ವೀಕ್ಷಕರು ಈ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಿದರು. ಇದು ಹೊಸ ವಿಶ್ವದಾಖಲೆಯಾಗಿದೆ. ಇದು 3.4 ಮಿಲಿಯನ್ ವೀಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದ ಇಬೈ ಅವರ ಹಿಂದಿನ ದಾಖಲೆಯನ್ನು ಮುರಿದಿದೆ.
ಚಾನೆಲ್‌ನ ಯೂಟ್ಯೂಬ್ ಲಿಂಕ್‌ನಲ್ಲಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಮುಟ್ಟಿದಾಗ 750,822 ಕ್ಕೂ ಹೆಚ್ಚು ಜನರು ಟ್ಯೂನ್ ಮಾಡಿದ್ದಾರೆ. ಭಾರತ ಈ ಸಾಧನೆ ಮಾಡಿ ಮುಗಿಸಿದಾಗ 80,59,688 ಕ್ಕೂ ಹೆಚ್ಚು ಜನರು ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಚಂದ್ರಯಾನ -3 ರ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದರು. ಇದು ಈ ಹಿಂದಿನ ದಾಖಲೆಯಾದ ಸ್ಪ್ಯಾನಿಷ್ ಸ್ಟ್ರೀಮರ್ ಇಬಾಯ್ ನ ಎರಡೂವರೆ ಪಟ್ಟು ಅಧಿಕ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಂದು ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.
ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಡೀ ಜಗತ್ತು ಕಣ್ಣಿಟ್ಟು ಕೂತಿತ್ತು. ಆದರೆ ಹೀಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಅಧ್ಯಯನ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇಸ್ರೋ ಮಾತ್ರ ಯಾವುದೇ ಭಯವಿಲ್ಲದೆ ಚಂದ್ರನ ದಕ್ಷಿಣ ಧ್ರುವಕ್ಕೆ ನುಗ್ಗಿ ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಬಾಹ್ಯಾಕಾಶ ಲೋಕಕ್ಕೆ ಭಾರತ ದೊರೆ ಎಂಬುದನ್ನ ಇಸ್ರೋ ಸಂಸ್ಥೆ ಮತ್ತೆ ಜಗತ್ತಿಗೇ ಸಾರಿ ಹೇಳಿದೆ.