ಬೆಂಗಳೂರು (ಆ.20) :ಯುವ ಉದ್ಯಮಿಯಾಗಿ ಭವಿಷ್ಯದಲ್ಲಿ ಬೆಟ್ಟದಷ್ಟು ಕನಸು ಹೊತ್ತಿದ್ದ ಯುವಕ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ಆರೋಪವೊಂದು ರಾಜಧಾನಿ ಬೆಂಗಳೂರಿನಲ್ಲಿ ಕೇಳಿ ಬಂದಿದೆ.ಉಡುಪಿ ಮೂಲದ ಯುವಕನೊಬ್ಬ ಜ್ವರಕ್ಕೆಂದು ಬೆಂಗಳೂರಿನ ಖಾಸಗಿ ಆಸ್ಫತ್ರೆಯಲ್ಲಿ ಚುಚ್ಚುಮದ್ದು ಪಡೆದಿದ್ದು ಬಳಿಕ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎನ್ನುವುದು ಕುಟುಂಬಸ್ಥರ ಆರೋಪ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾಗಡಿ ರಸ್ತೆಯ 5ನೇ ಕ್ರಾಸ್ ನಿವಾಸಿ ಅಮರ್ ಶೆಟ್ಟಿ(31) ಮೃತರು. ಅಮರ್ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ದಿವಂಗತ ಚಂದ್ರ ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿಯವರ ಎರಡನೇ ಪುತ್ರ. ಸುಮಾರು ಆರು ವರ್ಷಗಳ ಕಾಲ ದುಬೈನಲ್ಲಿ ಕೆಲಸಮಾಡಿದ ಅಮರ್, ಅಲ್ಲಿ ಸಂಪಾದಿಸಿದ ಒಂದಷ್ಟು ಹಣವನ್ನು ಹೂಡಿಕೆ ಮಾಡಿ ಮುಂದಿನ ಜೀವನವನ್ನು ಬೆಂಗಳೂರಿನಲ್ಲಿ ಕಟ್ಟಿ ಕೊಳ್ಳಬೇಕೆಂಬ ಉದ್ದೇಶದಿಂದ ವರ್ಷದ ಹಿಂದೆ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದರು. ಮಾಗಡಿ ರಸ್ತೆಯ 5ನೇ ಕ್ರಾಸ್‌ನಲ್ಲಿ ನೆಲೆಸಿದ್ದರು.
ಆ.13ರಂದು ಜ್ವರದಿಂದ ಬಳಲುತ್ತಿದ್ದ ಅಮರ್, ಕೆ.ಪಿ.ಅಗ್ರಹಾರ ಭಾಗ್ಯ ಕ್ಲಿನಿಕ್‌ಗೆ ತೆರಳಿದ್ದರು. ಪರೀಕ್ಷೆ ಮಾಡಿದ ವೈದ್ಯರು ಚುಚ್ಚುಮದ್ದು ನೀಡಿ ಕೆಲ ಮಾತ್ರೆ ಕೊಟ್ಟು ಕಳುಹಿಸಿದ್ದರು. ಬಳಿಕ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಊತ ಉಂಟಾಗಿ ನೋವು ಕಾಣಿಸಿಕೊಂಡಿದೆ.
ಆ.16ರಂದು ಅಮರ್, ರಾಜಾಜಿನಗರದ ಚೇತನ್ ಕ್ಲಿನಿಕ್‌ಗೆ ತೆರಳಿದ್ದರು. ಇಲ್ಲಿ ಪರೀಕ್ಷೆ ಮಾಡಿದ ವೈದ್ಯರು ನೋವು ನಿವಾರಕ ಮಾತ್ರೆ ನೀಡಿ, ಗ್ಲುಕೋಸ್ ಹಾಕಿ ಕಳುಹಿಸಿದ್ದರು. ಆದರೂ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಮರ್ ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಚೇತನ್ ಕ್ಲಿನಿಕ್‌ನ ವೈದ್ಯರ ಸಲಹೆ ಮೇರೆಗೆ ಅಮರ್‌ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸಿದೆ ಅಮರ್ ಆ.18ರಂದು ಮೃತಪಟ್ಟಿದ್ದಾರೆ.
ಅಮರ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಭಾಗ್ಯ ಕ್ಲಿನಿಕ್‌ನ ವೈದ್ಯ ರಂಜಿತ್ ಹಾಗೂ ಸಿಬ್ಬಂದಿ ನಿರ್ಲಕ್ಷ್ಯವೇ ಅಮರ್ ಸಾವಿಗೆ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಮರ್‌ಗೆ ಸರಿಯಾದ ಚುಚ್ಚಮದ್ದು ಹಾಗೂ ಮಾತ್ರೆಗಳನ್ನು ನೀಡದೇ ಇರುವುದು ಸಾವಿಗೆ ಕಾರಣವಾಗಿರುವ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : MESCOM Recruitment 2023: ಮಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ ? ಮೆಸ್ಕಾಂನ 200 ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಸದ್ಯ ಅಮರ್ ಶೆಟ್ಟಿ ಮೃತದೇಹವು ಬೆಂಗಳೂರಿನಿಂದ ಹುಟ್ಟೂರಿಗೆ ರವಾನಿಸಲಾಗುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.