ಲಡಾಖ್: ಭಾರತೀಯ ಸೇನಾ ಸಿಬ್ಬಂದಿ ತೆರಳುತ್ತಿದ್ದ ವಾಹನವು ಲೇಹ್ ಸಮೀಪದಲ್ಲಿ ಅಪಘಾತಕ್ಕೀಡಾಗಿದ್ದು, ಈ ದುರ್ಘಟನೆಯಲ್ಲಿ 9 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದೆ.
ಲೇಹ್‌ನಿಂದ ನ್ಯೋಮಾಗೆ ಬೆಂಗಾವಲು ಪಡೆಯ ಭಾಗವಾಗಿ ಚಲಿಸುತ್ತಿದ್ದ ಎಎಲ್‌ಎಸ್ ವಾಹನವು ಕಿಯಾರಿಯಿಂದ 7 ಕಿಮೀ ದೂರದಲ್ಲಿ ಸುಮಾರು ಸಂಜೆ 5:45-6:00 ಕ್ಕೆ ಕಣಿವೆಗೆ ಸ್ಕಿಡ್ ಆಗಿದೆ. ವಾಹನದಲ್ಲಿ 10 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದು, ಒಂಬತ್ತು ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಂಬನಿ:
ಲಡಾಖ್‌ನ ಲೇಹ್ ಬಳಿ ಅಪಘಾತದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಮೃತ ಸೇನಾ ಸಿಬ್ಬಂದಿಯ ದುಃಖಿತ ಕುಟುಂಬಗಳೊಂದಿಗೆ ನಾವೆಲ್ಲಾ ಇದ್ದೇವೆ. ಗಾಯಗೊಂಡ ಸಿಬ್ಬಂದಿಯನ್ನು ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
ಲಡಾಖ್ ಸಮೀಪ ಸೇನಾ ವಾಹನವೊಂದು ಕಂದಕಕ್ಕೆ ಉರುಳಿದ ಪರಿಣಾಮ 9 ಮಂದಿ ಸೈನಿಕರು ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತ ಸೈನಿಕರ ಆತ್ಮಕ್ಕೆ ಶಾಂತಿ ದೊರಕಲಿ. ದೇಶರಕ್ಷಣೆಯ ಪವಿತ್ರ ಕಾರ್ಯದಲ್ಲಿ ಪ್ರಾಣಾರ್ಪಣೆಗೈದ ವೀರಯೋಧರ ತ್ಯಾಗ, ಬಲಿದಾನ ಚಿರಸ್ಮರಣೀಯ. ಮೃತ ಸೈನಿಕರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಮಯ್ಯ ಟ್ವೀಟ್ ಮಾಡಿದ್ದಾರೆ