ಸಿಂಪಲ್ ಸ್ಟಾರ್ (simple star) ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ (Sapta sagaradache Ello) ಈ ವರ್ಷ ನಿರೀಕ್ಷೆ ಹುಟ್ಟಸಿರುವ ಚಿತ್ರಗಳಲ್ಲಿ ಪ್ರಮುಖವಾದದ್ದು. ಎರಡು ಪಾರ್ಟ್ ಗಳಲ್ಲಿ ತೆರೆ ಕಾಣುವ ಚಿತ್ರದ ಎರಡು ಭಾಗಗಳ ರಿಲೀಸ್ ಡೇಟ್ ರಿವಿಲ್ ಆಗಿದೆ . ಆ 17 ರಂದು ಮೊದಲ ಭಾಗದ ಟ್ರೈಲರ್ ಬಿಡುಗಡೆಯಾಗಿದೆ. 3 ನಿಮಿಷ 14 ಸೆಕೆಂಡ್ ನ ಈ ನೀಲಿ ಬಣ್ಣದ ” ಟ್ರೈಲರ್ ” (Trailer) ಈಗಾಗಲೇ ಜನ ಮೆಚ್ಚುಗೆ ಪಡೆದಿದೆ. ಚಿತ್ರದ ಥೀಮನ್ನು ಹೊರ ಸೂಸುವ ಈ ಟ್ರೈಲರ್ ಬಹಳಷ್ಟನ್ನು ತನ್ನೊಳಗೆ ಹುದುಗಿಸಿಟ್ಟರು, ಇಡೀ ಚಿತ್ರ ಸಾಗುವ ಹಾದಿಯನ್ನು ತರೆದಿಡುತ್ತದೆ. ಅಂತಹದೇನಿದೆ ಆ ಟ್ರೈಲರ್ ನಲ್ಲಿ ? ಇಲ್ಲಿದೆ ಸಂಪೂರ್ಣ ಮಾಹಿತಿ
ಟ್ರೈಲರ್ ಉದ್ದಕ್ಕೂ ಹೃದಯ ಸ್ಪರ್ಷಿ ಸಂಗೀತದೊಂದಿಗೆ ಸಮುದ್ರ ಹಾಗೂ ಅದರ ಅಲೆಗಳನ್ನು ತೋರಿಸಲಾಗಿದೆ. ಢಾಳದ ನೀಲಿ ಕ್ಯಾನ್ ವಾಸ್ ನಲ್ಲಿ ಸಾಗರದಷ್ಟು ಪ್ರೇಮವನ್ನು ಎದೆಯೊಳಗೆ ಬಚ್ಚಿಟ್ಟಿಕೊಂಡಿರುವ ಜೋಡಿಯ ಕಥೆಯೊಂದನ್ನು ತೋರಿಸಲಾಗಿದೆ. ಟ್ರೈಲರ್‌ನಲ್ಲಿ (Trailer) ಪ್ರೇಮದ ನವಿರತೆ, ತೀವ್ರತೆ, ವಿರಹದ ನೋವು, ಹತಾಶೆ, ಆಕ್ರೋಶ ವ್ಯಥೆಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.
ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮನು ಎಂಬ ಪಾತ್ರವನ್ನು, ನಾಯಕಿ ರುಕ್ಮಿಣಿ ವಸಂತ್ ಪ್ರಿಯಾ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಮನುವನ್ನು ಜೈಲಿಗೆ ತಳ್ಳುವ ಟ್ರೈಲರ್ ನಲ್ಲಿ ತೋರಿಸಲಾಗಿದ್ದು, ಈ ಮೂಲಕ ಪ್ರೇಕ್ಷಕರ ಮನಸ್ಸಿನೊಳಗೆ ಕುತೂಹಲ ಬಿತ್ತಲಾಗಿದೆ. ಅಲ್ಲಿಂದ ಪ್ರೇಮಿಗಳಿಬ್ಬರ ಬದುಕು ಮಗ್ಗಲು ಬದಲಾಯಿಸಿದ್ದು ಸ್ಪಷ್ಟವಾಗಿ ಕಾಣುತ್ತದೆ. ರಕ್ಷಿತ್ ಜೈಲಿನ ಜೀವನ, ಆತನ ಹೋರಾಟ, ನಾಯಕಿಯ ಸಂದಿಗ್ಧತೆಯನ್ನು ಚಿತ್ರಿಸಲಾಗಿದ್ದು ನಟರಾದ ಅಚ್ಯುತ್ ಕುಮಾರ್ ಮತ್ತು ಅವಿನಾಶ್ ಕೂಡ ಒಂದು ಫ್ರೆಮ್ ನಲ್ಲಿ ಬಂದು ಹೋಗುತ್ತಾರೆ.

ಮನು ಮತ್ತು ಪ್ರಿಯಾಳ ಪ್ರಪಂಚದ ಸಣ್ಣ ಪರಿಚಯ ನಿಮ್ಮ ಮುಂದೆ. ಪ್ರೀತಿಯಿರಲಿ” ಎಂದು ರಕ್ಷಿತ್ ಶೆಟ್ಟಿ ಟ್ರೇಲರ್ ಹಂಚಿಕೊಂಡಿದ್ದಾರೆ.
ಮನು ಮತ್ತು ಪ್ರಿಯಾಳ ಪ್ರಪಂಚದ ಸಣ್ಣ ಪರಿಚಯ ನಿಮ್ಮ ಮುಂದೆ. ಪ್ರೀತಿಯಿರಲಿ 🤍
— Rakshit Shetty (@rakshitshetty) August 17, 2023
A beautiful strain of love runs through length of this story! Today, as we share a part of Manu and Priya’s world with you, I hope you get a glimpse of the intensity and the beauty that lies in their love and I… pic.twitter.com/0yzbxyZQKd
ಟ್ರೇಲರ್‌ನ ಪ್ರತಿ ಫ್ರೇಮ್‌ನಲ್ಲೂ ಭಾವನೆ, ಪ್ರೀತಿಯನ್ನು ಕಟ್ಟಿಡುವ ಕೆಲಸವನ್ನು ಹೇಮಂತ್ ರಾವ್ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಪ್ರಿಯಾ ಪಾತ್ರದಲ್ಲಿ ನಟಿಸಿರುವ ರುಕ್ಷ್ಮಿಣಿ ವಸಂತ್ ‘ಕತ್ತೆ.. ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ..’ ಎನ್ನುವ ಸಾಲಿನೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ನಾಯಕಿ ಶಂಖವನ್ನು ರಕ್ಷಿತ್ ಶೆಟ್ಟಿ ಕಿವಿಯ ಸಮೀಪ ಇಟ್ಟು ಅವರಿಬ್ಬರ ಪ್ರೇಮವನ್ನು ಸವಿಯುವ ಹೊತ್ತಿಗಾಗಲೇ ಯಾರೋ ಮೈದಬ್ಬಿಸಿ ಏಳಿಸಿದಂತೆ ಭಾಸವಾಗುತ್ತದೆ. ರಕ್ಷಿತ್ ಸ್ವತಃ ಅಕ್ಷರಶಃ ಆ ಭಾವವನ್ನು ಇಲ್ಲಿ ತುಂಬಿದಿದ್ದಾರೆ. ನಾಯಕ ನಾಯಕಿ ನಡುವೆ ವಿಧಿ ಆಡುವ ಆಟಗಳ ಸಣ್ಣ ಪರಿಚಯ ಈ ಹೊತ್ತಿಗಾಗಲೇ ಸಿಗುತ್ತದೆ.

‘ನೀ ನನ್ನ ಕತ್ತೆಯಾಗೋಕು ಮುಂಚೆ ನನ್ನ ಖುಷಿಗೋಸ್ಕರ ಹಾಡುತ್ತಿದ್ದೆ… ಇವಾಗ ನಿಂಗೋಸ್ಕರ ಹಾಡಬೇಕು ಅಂತಾ ಅನಿಸ್ತಾ ಇದೆ..’ ಎನ್ನುವ ಸಾಲುಗಳು ಕೇಳುವಾಗ ಇವರಿಬ್ಬರ ಹಿಂದಿನ ಪರಿಚಯಗಳು ಪ್ರತಿ ಫ್ರೇಮ್‌ನಲ್ಲೂ ಕಾಣುತ್ತದೆ. ರಕ್ಷಿತ್ ಹಾಗೂ ರುಕ್ಷ್ಮಿಣಿ ವಸಂತ್ ಪ್ರತಿ ಫ್ರೇಮ್‌ನಲ್ಲೂ ಆಗತಾನೆ ಚಿಗುರಿದ ಎಲೆಗಳಂತೆ ಕಾಣುತ್ತಾರೆ. ‘ನೀನು ನನ್ನ ಸಮುದ್ರ..’ ಎಂದು ಹೇಳಿ ಮುಗಿಸುವಾಗ ಟ್ರೇಲರ್‌ನ ಇನ್ನೊಂದು ಮಜಲು ಆರಂಭವಾಗುತ್ತದೆ.
ಡೈರೆಕ್ಟರ್ ಹೇಮಂತ್ ರಾವ್ ಅವರ ಎಡಿಟಿಂಗ್ ಜಾಣ್ಮೆಯನ್ನ ಈ ಟ್ರೈಲರ್‌ನಲ್ಲಿ ಕಾಣಬಹುದಾಗಿದೆ. ಚಿತ್ರದ ಮುಖ್ಯ ದೃಶ್ಯಗಳನ್ನು ಕಟ್ ಮಾಡಿ ಜೋಡಿಸದಂತಿರದೆ . ಇಡೀ ಟ್ರೈಲರ್‌ನಲ್ಲಿ ಸಂಕ್ಷಿಪ್ತವಾಗಿಯೇ ತಮ್ಮ ಚಿತ್ರದ ಮೊದಲ ಭಾಗದ ಕಥೆಯನ್ನೆ ತಿಳಿಸುವ ಪ್ರಯತ್ನ ಮಾಡಿದಂತೆ ಕಾಣುತ್ತದೆ. ಹಾಗಾಂತ ಕಥೆಯ ಗುಟ್ಟನ್ನು ಬಚ್ಚಿಟ್ಟಿ ಕೊಂಡಿರುವುದು ಅವರ ಚಾಕಚಕ್ಯತೆಗೆ ಸಾಕ್ಷಿ.

ಪ್ರತಿಮೆಗಳು
ಕೀ ಪ್ಯಾಡ್ ಫೋನು, ಕ್ಯಾಸೆಟ್ ಟೇಪ್ ರೆಕಾರ್ಡರ್ ಧ್ವನಿ, ಗಾರ್ಮೆಂಟ್ಸ್ ಫ್ಯಾಕ್ಟರಿ, ತಿರುಗೋ ರೀಲು, ಕಥೆ ಹೇಳುವ ಕಡಲು ತೀರ, ಪೊಲೀಸು, ಜೈಲು, ಒಂದು ಪ್ರೇಮಕಥೆ, ಅದರ ಜತೆಗೆ ಅಂಟಿಕೊಂಡ ವ್ಯಥೆ.. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟ್ರೇಲರ್‌ನಲ್ಲಿ ಕಾಣಿಸಿದ ವಿಶೇಷತೆಗಳಿವು. ಟ್ರೇಲರ್‌ನಲ್ಲಿ ಪದೇ ಪದೇ ಕಾಣಿಸುವ ನೀಲಿ ಬಣ್ಣದ ನೂಲು, ಅದರ ಬೆನ್ನಿಗೆ ಕಾಣುವ ಅಚ್ಚ ನೀಲಿಯ ಸಮುದ್ರ ಚಿತ್ರದುದ್ದಕ್ಕೂ ಏನನ್ನೋ ಹೇಳಲು ಬಳಸಲಾದ ಪ್ರತಿಮೆಗಳು ಎನ್ನುವ ಅನುಮಾನ ಟ್ರೇಲರ್ ನೋಡಿದ ಬಹು ಹೊತ್ತಿನವರೆಗೂ ನಮ್ಮನ್ನು ಕಾಡುತ್ತದೆ.
ರಿಲೀಸ್ ಡೇಟ್ :
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್-1 ರಂದು ಹಾಗೂ ಎರಡನೇ ಭಾಗ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ.
