Savarkar Controversy : ಮಂಗಳೂರು : ಸ್ವಾತಂತ್ರ್ಯೋತ್ಸವ ದಿನ (Independence Day) ಬಂಟ್ವಾಳದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಂದ ಸಾವರ್ಕರ್ ಗೆ ಜೈ ಘೋಷ ಹಾಕಿಸಿದ್ದ ಘಟನೆ ಇದೀಗ ವಿವಾದದ ಸ್ವರೂಪ ಪಡೆದಿದೆ. ಈ ಕುರಿತ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸ್ವಾತಂತ್ರ್ಯೋತ್ಸವ ದಿನ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಹಾಕಿದ್ದರು. ಈ ವೇಳೆ ಶಿಕ್ಷಕಿಯೊಬ್ಬರ ಘೋಷಣೆಯಂತೆ ವೀರ ಸಾವರ್ಕರ್ ಗೂ ಜೈಕಾರದ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಿಯ ವ್ಯಕ್ತಿಯೊಬ್ಬರು ಈ ವಿಡಿಯೋ ತೆಗೆದು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದರು. ಇದಾದ ಬಳಿಕ ಇದು ವಿವಾದದ ಸ್ವರೂಪ ಪಡೆಯಿತು.

ಗುರುವಾರ ಆ 17 ರಂದು ಈ ಕುರಿತು ಶಾಲೆಯಲ್ಲಿ ಚರ್ಚಿಸಲು ಪೋಷಕರು ಮತ್ತು ಶಿಕ್ಷಕರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೆಲ ಪೋಷಕರು ಹಾಗೂ ರಾಜಕೀಯ ಮುಖಂಡರು ಶಿಕ್ಷಕಿಗೆ ತರಾಟೆಗೆತ್ತಿಕೊಂಡು ಗಲಾಟೆ ಮಾಡಿದ್ದರು ಎನ್ನಲಾಗಿದೆ . ಇನ್ನು ಕೆಲ ಪೋಷಕರು ಶಿಕ್ಷಕಿ ಪರವು ಧ್ವನಿ ಎತ್ತಿದ್ದರು ಎನ್ನಲಾಗಿದೆ. ಇದರಿಂದ ಸಭೆಯಲ್ಲಿ ಗದ್ದಲ ಏರ್ಪಟ್ಟಿದೆ.

ಕೊನೆಗೆ ಮನ ನೊಂದ ಶಾಲಾ ಮುಖ್ಯಶಿಕ್ಷಕಿ ಪೋಷಕರ ಬಳಿ ಕ್ಷಮೆ ಯಾಚಿಸಿದ್ದಾರೆ. ಆದರೆ ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ದ ಮುಖ್ಯಶಿಕ್ಷಕಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಮಾಡಿ ಹರಿ ಬಿಟ್ಟವರ ವಿರುದ್ದ ವಿಟ್ಲ ಪೊಲೀಸ್ ಠಾಣೆಗೂ ಶಾಲೆಯ ಮುಖ್ಯ ಶಿಕ್ಷಕಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.