ವಿಟ್ಲ: ಕೇರಳದ ಕಾಸರಗೋಡಿನಿಂದ ಆಸ್ಪತ್ರೆ ತ್ಯಾಜ್ಯವನ್ನು ವಾಹನ ಮೂಲಕ ಕರ್ನಾಟಕಕ್ಕೆ ತಂದು ನಿರ್ಜನ ಪ್ರದೇಶದಲ್ಲಿ ಸುರಿದು ಹೋಗುತ್ತಿರುವ ದಂಧೆಯನ್ನು ಕಲ್ಲಡ್ಕ ಕಾಂಞಂಗಾಡು ಹೆದ್ದಾರಿಯ ಉಕ್ಕುಡದಲ್ಲಿ ಸಾರ್ವಜನಿಕರು ಬುಧವಾರ ಪತ್ತೆ ಹಚ್ಚಿದ್ದಾರೆ.
ಜು.27ರಂದು ಕೇಪು ಗ್ರಾಮದ ಕುದ್ದುಪದವಿನ ಖಾಸಗಿ ಜಾಗವೊಂದರಲ್ಲಿ ತೋಡಿಗೆ ತ್ಯಾಜ್ಯ ನೀರು ಬಿಡುತ್ತಿದ್ದ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯಿತಿಯವರು ದಾಳಿ ನಡೆಸಿ ಪೊಲೀಸ್ ವಶಕ್ಕೆ ನೀಡುವ ಕಾರ್ಯ ಮಾಡಿದ್ದರು. ಗ್ರಾಮ ಪಂಚಾಯಿತಿ ವಿಶೇಷ ಅಧಿಕಾರವನ್ನು ಬಳಸಿ ಸುಮಾರು 50 ಸಾವಿರ ಧಂಡವನ್ನು ವಿಧಿಸಿತ್ತು.

ಕೆಲವೇ ದಿನಗಳನ್ನು ವಾಹನವನ್ನು ಬಿಡಿಸಿಕೊಂಡು ಬಂದು ಈಗ ಮತ್ತೆ ಕಾಸರಗೋಡು ಆಸ್ಪತ್ರೆಯಿಂದ ತ್ಯಾಜ್ಯವನ್ನು ತುಂಬಿ ಕರ್ನಾಟಕ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ವಾಹನವನ್ನು ಬೆನ್ನಟ್ಟಿ ಬಂದಿದ್ದಾರೆನ್ನಲಾಗಿದೆ. ಉಕ್ಕುಡದಲ್ಲಿ ವಾಹನವನ್ನು ಸಾರ್ವಜನಿಕರು ತಡೆಗಟ್ಟಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ವಾರದಿಂದ ಹಲವು ಬಾರಿ ತ್ಯಾಜ್ಯವನ್ನು ತಂದಿರುವುದಾಗಿ ಚಾಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದ್ದಾರೆ.

ಟ್ಯಾಂಕರ್ ನಿಂದ ರಸ್ತೆಯುದ್ದಕ್ಕೂ ಶೌಚಾಲಯ ತ್ಯಾಜ್ಯ ಹಾಗೂ ಆಸ್ಪತ್ರೆ ಆಪರೇಷನ್ ಥೀಯೇಟರ್ ತ್ಯಾಜ್ಯವನ್ನು ಸುರಿದುಕೊಂಡು ಹೋಗಲಾಗುತ್ತಿದೆ. ಕರ್ನಾಟಕದ ಭೂಭಾಗಕ್ಕೆ ಈ ತ್ಯಾಜ್ಯವನ್ನು ತರುತ್ತಿರುವುದರ ಹಿಂದಿನ ಉದ್ದೇಶವೆನೆಂಬುದನ್ನು ಸಂಬಂಧಪಟ್ಟ ಇಲಾಖೆಗಳು ಪತ್ತೆ ಹಚ್ಚದೇ ಹೋದಲ್ಲಿ ಜನರು ಮಾರಕ ಖಾಯಿಲೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚೆಕ್ ಪೋಸ್ಟ್ ಗಳನ್ನು ದಾಟಿ ಈ ಲಾರಿ ಬರುತ್ತಿರುವ ಬಗ್ಗೆ ಅನುಮಾನಗಳು ಮೂಡುತ್ತಿದೆ.
