ಕೆಲ ತಿಂಗಳ ಹಿಂದೆ ಕಾಡಾನೆ ತುಳಿತಕ್ಕೆ ಒಳಗಾಗಿ ಕಡಬ ತಾಲೂಕಿನ ರೆಂಜಲಾಡಿ ಬಳಿ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಇದಕ್ಕೆ ಕಾರಣಿಭೂತವಾದ ಆನೆ ಎಂದು ಅರಣ್ಯ ಇಲಾಖೆ ಗುರುತಿಸಿದ ಕಾಡಾನೆ ನಾಗರಹೊಳೆ ಉದ್ಯಾನದ ಸಾಕಾನೆ ಶಿಬಿರದಲ್ಲಿ ಮೃತಪಟ್ಟಿದೆ. 50 ರ ಹರೆಯದ ಸುಬ್ರಹ್ಮಣ್ಯ ಮೃತ ಆನೆ. ಹುಣಸೂರು ಬಳಿಯ ನಾಗರಹೊಳೆ ಉದ್ಯಾನದ ಸಾಕಾನೆ ಶಿಬಿರದಲ್ಲಿ ಈ ಆನೆ ತರಭೇತಿ ಪಡೆಯುತ್ತಿದ್ದಾಗ ಘಟನೆ ನಡೆದಿದೆ.
ಮೂರು ತಿಂಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ವಲಯ ಅರಣ್ಯ ಪ್ರದೇಶದಲ್ಲಿ ಒಂದೇ ದಿನ ಇಬ್ಬರನ್ನು ತುಳಿದು ಕಾಡಾನೆ ಕೊಂದಿತ್ತು. ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ(21) ಹಾಗೂ ಆಕೆಯ ರಕ್ಷಣೆಗೆ ಧಾವಿಸಿದ ಸ್ಥಳೀಯ ನಿವಾಸಿ ರಮೇಶ್ ರೈ ಮೃತಪಟ್ಟವರು. ಇದಾದ ಬಳಿಕ ಈ ಪರಿಸರಕ್ಕೆ ದಾಳಿ ಮಾಡುವ ಕಾಡಾನೆಗಳನ್ನು ಬಂಧಿಸಬೇಕೇಂಬ ಕೂಗು ನಾಗರೀಕರಿಂದ ಕೇಳಿ ಬಂದಿತ್ತು ಹಾಗೂ ಶವವಿಟ್ಟು ಪ್ರತಿಭಟನೆಯು ನಡೆದಿತ್ತು.
ಈ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಆನೆಯೊಂದನ್ನು ಸೆರೆ ಹಿಡಿದು, ಇದೇ ಸಾವಿಗೆ ಕಾರಣವಾಗಿದ್ದ ಕಾಡಾನೆ ಎಂದು ತಿಳಿಸಿದ್ದರು . ಬಳಿಕ ಅದನ್ನು ನಾಗರಹೊಳೆ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿ ಕ್ರಾಲ್‌ನಲ್ಲಿಡಲಾಗಿತ್ತು. ಈ ಆನೆಗೆ ಸುಬ್ರಹ್ಮಣ್ಯವಲಯದಲ್ಲಿ ಸೆರೆ ಸಿಕ್ಕಿದ್ದರಿಂದಾಗಿ ಸುಬ್ರಹ್ಮಣ್ಯನೆಂದು ನಾಮಕರಣ ಮಾಡಲಾಗಿತ್ತು.
ಕ್ರಾಲ್‌ನಿಂದ ಬಂಧಮುಕ್ತ
ಹೆಚ್ಚಿನ ತರಬೇತಿಗಾಗಿ ಜು.20 ರಂದು ಕ್ರಾಲ್‌ನಿಂದ ಬಂಧಮುಕ್ತಗೊಳಿಸಿ ಮಾವುತ ಶಿವು, ಕವಾಡಿ ಚಂದ್ರರವರ ಉಸ್ತುವಾರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಆನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸುಬ್ರಹ್ಮಣ್ಯ ಆ.11 ರ ಶುಕ್ರವಾರದಂದು ಮಲಗಿದಲ್ಲೇ ಅಸ್ಪಸ್ಥಗೊಂಡಿದೆ ಎಂದು ಹೇಳಲಾಗುತ್ತಿದೆ. ಆನೆಗೆ ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡಿದರಾದರೂ ಮೇಲೇಳಿಸುವ ಪ್ರಯತ್ನ ಸಫಲವಾಗದೆ ಕ್ರೇನ್ ತರಿಸಿ ಎದ್ದು ನಿಲ್ಲಿಸುವ ಯತ್ನವೂ ವಿಫಲವಾಗಿ ಅಂದೇ ಸಂಜೆ ವೇಳೆಗೆ ಮೃತಪಟ್ಟಿದೆ ಎಂದು ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಇದನ್ನೂ ಓದಿ : Canara Bank Recruitment 2023 : 500 ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ
ಆನೆಯ ಶವ ಪರೀಕ್ಷೆ
ಶನಿವಾರದಂದು ಹುಣಸೂರು ವನ್ಯಜೀವಿ ಉಪ ವಿಭಾಗದ ಪಶುವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ, ದುಬಾರೆ ಶಿಬಿರದ ಪಶುವೈದ್ಯ ಡಾ.ಮದನ್ ಗೋಪಾಲ್, ಮೈಸೂರು ಲೀಲಾಪೆಟ್ ಆಸ್ಪತ್ರೆಯ ಡಾ.ಎಚ್.ರಮೇಶ್‌ರವರು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ, ಆರ್.ಎಫ್.ಓ. ದಿಲೀಪ್‌ಕುಮಾರ್ ಸಮ್ಮುಖದಲ್ಲಿ ಸುಬ್ರಹ್ಮಣ್ಯ ಆನೆಯ ಶವ ಪರೀಕ್ಷೆ ನಡೆಸಿದರು.
ಸಾವಿಗೆ ಕಾರಣ
ಆನೆಯು ಬಹು ಅಂಗಾಂಗ ವೈಫಲ್ಯ ಕಾಯಿಲೆ(ಆರ್ಥಿಟಿಸ್)ಯಿಂದ ಸೆಪ್ಟಿಸೀಮಿಯಾ (ಇನ್‌ಫೆಕ್ಷನ್)ನಿಂದ ಬಳಲಿ ಮೃತಪಟ್ಟಿರುವುದಾಗಿ ಪಶುವೈದ್ಯರ ತಂಡ ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಆನೆಯ ಶವವನ್ನು ಹೂತಿರುವುದಾಗಿ ಡಿಸಿಎಫ್ ಮಾಹಿತಿ ನೀಡಿದರು.
ಇದನ್ನೂ ಓದಿ : India Post GDS Recruitment 2023 : ದೇಶದಾದ್ಯಂತ 30,041 ಹುದ್ದೆಗಳು : ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು