Moral Policing At Sullia : ಸುಳ್ಯ ತಾಲೂಕಿನ ತೋಡಿಕಾನ ಎಂಬಲ್ಲಿ ನಡೆದ ನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದಂತೆ ಒರ್ವನನ್ನು ಪೊಲೀಸರು ಬಂಧಿಸಿದ್ದು , ಐವರ ವಿರುದ್ದ ಪ್ರಕರಣ ದಾಖಲಾಗಿದೆ. ಕಾರು ಮತ್ತು ಸ್ಕೂಟರ್ ನಲ್ಲಿ ಬಂದ ಐವರ ತಂಡ ಪ್ರಸ್ತುತ ಸುಳ್ಯದ ಅರಂತೋಡಿನಲ್ಲಿ ವಾಸಿಸುತ್ತಿರುವ ಮೂಲತ: ಕೇರಳ ನಿವಾಸಿ ಮೇಲೆ ಹಲ್ಲೆ ನಡೆಸಿರುವುದಾಗಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್(39ವರ್ಷ) ಹಲ್ಲೆಗೊಳಗಾದವರು. ಇವರು 3 ತಿಂಗಳ ಹಿಂದೆ ಅರಂತೋಡಿನಲ್ಲಿ ರಬ್ಬರ್ ತೋಟವನ್ನು ಗುತ್ತಿಗೆ ಪಡೆದು ಅಲ್ಲೆ ವಾಸಿಸುತ್ತಿದ್ದಾರೆ. ಹಲ್ಲೆ ಪ್ರಕರಣ ಆಗಷ್ಟ್ 12 ರಂದು ನಡೆದಿದೆ.ಸುಳ್ಯ ಸೊಣಂಗೇರಿ ನಿವಾಸಿ ಪುನೀತ್ ಬಂಧಿತ ಆರೋಪಿ.
ದೂರಿನಲ್ಲಿ ಏನಿದೆ ?
ಆ 12 ರಂದು ಮೊಹಮ್ಮದ್ ಜಲೀಲ್ ರವರ ಪರಿಚಯದ ಯುವತಿ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು ತನಗೆ ವಿಶ್ರಾಂತಿ ಪಡೆಯಲು ರೂಮ್ ಬೇಕೆಂದು ಜಲೀಲ್ ಅವರಲ್ಲಿ ಕೇಳಿಕೊಂಡಿದ್ದಾರೆ. ಹೀಗಾಗಿ ಜಲೀಲ್ ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ಸುಳ್ಯ ತಾಲೂಕು ಕಾರಿನಲ್ಲಿ ತೋಡಿಕಾನಕ್ಕೆ ತೆರಳಿದ್ದಾರೆ.
ಈ ವೇಳೆ ಕಾರು ಮತ್ತು ಸ್ಕೂಟರ್ ನಲ್ಲಿ ಬಂದ ಐವರು ಆರೋಪಿಗಳು ಜಲೀಲು ಚಲಾಯಿಸುತ್ತಿದ್ದ ಕಾರನ್ನು ತಡೆದು, ಅವ್ಯಾಚವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ ತೆರಳಿದ್ದಾರೆ. ಆರೋಪಿಗಳ ಪೈಕಿ ಲತೀಶ್ ಗುಂಡ್ಯ, ವರ್ಷಿತ್ ಹಾಗೂ ಪುನೀತ್ ಎಂಬವರ ಗುರುತು ದೂರುದಾರರಿಗಿದ್ದು ಉಳಿದಿಬ್ಬರ ಆರೋಪಿಗಳ ಪರಿಚಯ ಇರುವುದಿಲ್ಲ.
ಆರೋಪಿಗಳ ವಿರುದ್ದ ಐಪಿಸಿ ಕಲಂ 143, 147, 341, 323, 504, 506, 153(A) ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.