ಪುತ್ತೂರು: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಜನರಿಗೆ ಸಂಶಯ ಮತ್ತು ಗೊಂದಲ ಈಗಲೂ ಇದೆ. ಕೊಲೆ ಆರೋಪದಲ್ಲಿ ಬಂಧಿತನಾಗಿರುವ ವ್ಯಕ್ತಿಯನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಪ್ರಕರಣ ಮಗದೊಮ್ಮೆ ಜೀವ ಪಡೆದುಕೊಂಡಿದೆ. ಅತ್ಯಾಚಾರ ನಡೆಸಿ ಸೌಜನ್ಯಾಳನ್ನು (Soujanya Case) ಕೊಲೆ ಮಾಡಿರುವ ಬಗ್ಗೆ ಮರು ತನಿಖೆಯಾಗಬೇಕಿದೆ.
ಈ ನಿಟ್ಟಿನಲ್ಲಿ ಪ್ರಕರಣವನ್ನು ಮರುತನಿಖೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖತ ಭೇಟಿಯಾಗಿ ಮನವಿಯನ್ನು ಮಾಡುತ್ತೇನೆ.ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಮತ್ತು ನೈಜ ಆರೋಪಿಗಳ ಬಂಧನವೂ ಆಗಬೇಕು, ಸೌಜನ್ಯಾ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಎಲ್ಲೂ ಮರುಕಳಿಸಬಾರದು.
ಪ್ರಕರಣದ ಬಗ್ಗೆ ಕೂಲಂಕುಶವಾಗಿ ಮರುತನಿಖೆಯಾಗಲೇಬೇಕಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಆಗ್ರಹಿಸಿದ್ದಾರೆ. ಈ ಪ್ರಕರಣದ ಬಗ್ಗೆ ಜನರಲ್ಲಿ ಇನ್ನೂ ಸಂಶಯ ಹಾಗೇ ಉಳಿದುಕೊಂಡಿದ್ದು ಅದನ್ನು ಕೂಡಾ ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂದು ಹೇಳಿದರು.