ವಿಪಕ್ಷಗಳು ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ನಾವು ಈಗಾಗಲೇ ಶಕ್ತಿ ಹಾಗೂ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಆ 20 ರಂದು ಮನೆ ಯಜಮಾನಿಗೆ ಮಾಸಿಕ 2000 ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ. ಅನ್ನ ಭಾಗ್ಯ ಯೋಜನೆಯೂ ಈಗಾಗಲೇ ಬಿಪಿಎಲ್ ಕಾರ್ಡ್ ದಾರರಿಗೆ ಸಿಗಲಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಈ ಉಚಿತ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆಂದು ಸ್ವತ: ಪ್ರಧಾನಿ ನರೇಂದ್ರ ಮೋದಿ ಹುಯಿಲು ಎಬ್ಬಿಸಿದ್ದರು. ಆದರೆ ಒಂದು ರೂಪಾಯಿ ಸಾಲ ಮಾಡದೆ ಗ್ಯಾರಂಟಿ ಯೋಜನೆ ಪೂರೈಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಪುತ್ತೂರು ಪುರಭವನದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಬಡತನ ನಿರ್ಮೂಲನೆ ಮಾಡುವ ಕಾರ್ಯ ಮಾಡುವ ಯೋಜನೆಯಾಗಿದ್ದು ಕುಟುಂಬಕ್ಕೆ ಕನಿಷ್ಠ ಆದಾಯವನ್ನು ನೀಡುವ ಗುರಿ ಹೊಂದಿದೆ. ಜನರಲ್ಲಿ ಭದ್ರತೆ, ಆತ್ಮ ಸ್ಥೈರ್ಯ, ಕುಟುಂಬವನ್ನು ಮುನ್ನಡೆಸುವ ಶಕ್ತಿಯನ್ನು ತುಂಬಲಾಗಿದೆ. ದೇಶದ ಯಾವ ರಾಜ್ಯ ಸರ್ಕಾರವು ಮಾಡದ ಪ್ರತಿಯೊಂದು ಕುಟುಂಬಕ್ಕೆ ಸಹಾಯ ವಾಗುವ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದೆ. ಯಾವುದೇ ಮದ್ಯವರ್ತಿಗಳಿಗೆ ಅವಕಾಶ ಕಲ್ಪಿಸದೆ ನೇರವಾಗಿ ಜನರ ಖಾತೆಗೆ ಹಣ ಜಮಾವಣೆಯಾಗುತ್ತಿದೆ. ಅಲ್ಲದೇ ನೋಂದಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಜನಸ್ನೇಹಿಯಾಗಿಸಿದೆ.

ನೊಂದಾಯಿತ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯ ಲಾಭ ಸಿಗಲು ಪ್ರಾರಂಭವಾಗಿದ್ದು, ಕಾಲ ಮಿತಿ ಇಲ್ಲದ ಯೋಜನೆಯಾದ ಕಾರಣ ಇನ್ನೂ ನೊಂದಾಯಿಸದ ಫಲಾನುಭವಿಗಳಿಗೆ ಇನ್ನೂ ದಾಯಿಸಲಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ೫.೫೮ಲಕ್ಷ ಮಂದಿ ಅರ್ಹ ಕಟುಂಬ ಜಿಲ್ಲೆಯಲ್ಲಿದ್ದು, 4.40 ಲಕ್ಷ ಗ್ರಾಹಕರು ನೊಂದಾಯಿಸಿಕೊಂಡಿದ್ದಾರೆ. ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ ಶೇ. 79, ಉಡುಪಿ ಶೇ.84, ಶಿವಮೊಗ್ಗ ಶೇ.99, ಚಿಕ್ಕಮಗಳೂರಿನಲ್ಲಿ ಶೇ. 92 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಶೇ.90ಕ್ಕಿಂತ ಹೆಚ್ಚು ನೊಂದಾವಣಿಯಾಗಿದೆ. ಇದು ಜನರಿಗೆ ಯೋಜನೆಯನ್ನು ಅಗತ್ಯವಿದೆ ಎಮಬುದನ್ನು ತೋರಿಸುತ್ತದೆ ಎಂದರು.

ಶ್ರೀಮಂತರ ಕೆಲಸಕ್ಕಿಂತ ಮೊದಲು ಬಡವರ ಕೆಲಸವಾಗಬೇಕು. ಜನರು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸುವುದರ ಜತೆಗೆ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳು ಕಡತ ವಿಲೇವಾರಿಯನ್ನು ಕಾಲ ಮಿತಿಯಲ್ಲಿ ಮಾಡಬೇಕು. ಜನಪರ, ಶಿಸ್ತು ಬದ್ಧ ಆಡಳಿತವನ್ನು ಅಧಿಕಾರಿಗಳು ನೀಡಬೇಕು. ಜನರಿಗೆ ಯೋಜನೆಗಳು ಸರಳವಾಗಿ ಮುಟ್ಟುವ ಕಾರ್ಯವಾಗಬೇಕು. ಸಮಾನವಾದ ಸಮಾಜ ಕಟ್ಟುವ ನಿಟ್ಟಿನಲ್ಲಿ ಯೋಜನೆಗಳನ್ನು ನೀಡಲಾಗಿದೆ. ಗ್ಯಾರೆಂಟಿ ಯೋಜನೆಯ ಅನುಷ್ಠಾನದ ಬಗ್ಗೆ ಮಾಡಲಾದ ಟೀಕೆಗಳಿಗೆ ಕೆಲಸ ಮಾಡುವ ಮೂಲಕ ಉತ್ತರ ನೀಡಲಾಗಿದೆ. ಕೆಲವು ವ್ಯಕ್ತಿಗಳು ಉದ್ಯಮವನ್ನು ನಿಯಂತ್ರಿಸುತ್ತಿರುವ ಹಿನ್ನಲೆಯಲ್ಲಿ ಸಣ್ಣ ಉದ್ಯಮ ನಡೆಸುವವರ ಬೆಳವಣಿಗೆ ಕಷ್ಟವಾಗುತ್ತಿದೆ ಎಂದರು.
ವಿರೋಧಿಗಳ ಟೀಕೆಯನ್ನು ಸ್ವೀಕಾರ ಮಾಡಿ ಕೆಲಸ ಮಾಡಲಾಗುವುದು. ಅಪಪ್ರಚಾರಗಳನ್ನು ಯಾವತ್ತೂ ಒಪ್ಪುವುದಕ್ಕೆ ಆಗುವುದಿಲ್ಲ. ಕರಾವಳಿಗೆ ಮಂಡಳಿಯನ್ನು ರಚಿಸುವುದಕ್ಕೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅಂಗನವಾಡಿ ಮಕ್ಕಳಿಗೆ ನೀಡುವ ಎಣ್ಣೆಯಲ್ಲಿ ಗುಣಮಟ್ಟವನ್ನು ನೀಡುವ ಉದ್ದೇಶದಿಂದ ಸೂರ್ಯಕಾಂತಿ ಎಣ್ಣೆಯನ್ನು ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಎಂ. ಆರ್. ಐ. ಹಾಗೂ ಸಿ. ಟಿ ಸ್ಕ್ಯಾನ್ ಉಚಿತವಾಗಿ ನೀಡಲು ತೀರ್ಮಾನ ಮಾಡಲಾಗಿದೆ. ಶಿಕ್ಷಣ, ಆರೋಗ್ಯ, ವಸತಿ, ಮೂಲ ಭೂತ ಸೌಕರ್ಯಗಳಿಗೆ ಆದ್ಯತೆಯನ್ನು ನೀಡುವ ಮೂಲಕ ಮುಂದಿನ ಐದು ವರ್ಷದಲ್ಲಿ ಅಭಿವೃದ್ಧಿಯ ಜತೆಗೆ ಸಾಮರಸ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.
ಮೆಡಿಕಲ್ ಕಾಲೇಜಿಗೆ 900 ಕೋಟಿ ಕೊಡಿ : ಅಶೋಕ್ ರೈ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಜನರು ತಾವಾಗಿಯೇ ಪಡೆಯುತ್ತಿದ್ದಾರೆ. ಐದು ಗ್ಯಾರಂಟಿಗಳಿಗೆ 52 ಸಾವಿರ ಕೋಟಿಯನ್ನು ಸರ್ಕಾರ ತಿಂಗಳಲ್ಲಿ ನೀಡಿದೆ. ಆದರೆ ನಮ್ಮ ಸಿಎಂ ಸಿದ್ದರಾಮಯ್ಯನವರು ಉಳಿದವರ ಹಾಗಲ್ಲ. ಅವರ ಮನಿ ಮ್ಯಾನೇಜ್ಮೆಂಟ್ ನಲ್ಲಿ ನಂಬರ್ ವನ್. ಒಂದು ರೂಪಾಯಿ ಸಾಲ ಮಾಡದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರು ಉಚಿತ ಕೊಡುಗೆಗಳಿಂದ ಹಣದ ಹರಿವು ಹೆಚ್ಚಾಗುತ್ತಿದೆ. ಕೊಯಿಲ ಪಶು ವೈದ್ಯಕೀಯ ಕಾಲೇಜು ಆರಂಭ ಮಾಡುವ ನಿಟ್ಟಿನಲ್ಲಿ 20ಕೋಟಿ ನೀಡಿದ್ದು, ಇನ್ನು 20ಕೋಟಿಯ ಅಗತ್ಯವಿದೆ. ಜಿಲ್ಲೆಯ ಜನರಿಗೆ ಶುದ್ದಕುಡಿಯುವ ನೀರಿಗಾಗಿ 960 ಕೋಟಿಯ ಯೋಜನೆಯನ್ನು ಸರ್ಕಾರ ನೀಡಿದೆ. ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ 900ಕೋಟಿಯನ್ನು ಮುಂದಿನ ವರ್ಷ ನೀಡಬೇಕು ಎಂದು ಹೇಳಿದರು.
ದ. ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ., ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ, ಮೆಸ್ಕಾಂ ಅಧೀಕ್ಷಕ ಇಂಜನಿಯರ್ ಕೃಷ್ಣ ರಾಜ ಕೆ. ಉಪಸ್ಥಿತರಿದ್ದರು. ಮೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್. ಜಿ. ರಮೇಶ್ ಸ್ವಾಗತಿಸಿದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಪ್ರಸ್ತಾವನೆಗೈದರು. ಮುಖ್ಯ ಇಂಜಿನಿಯರ್ ಪುಷ್ಪ ಎಸ್. ಎ. ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.