ವಿಟ್ಲ : ಜೂ 3 : ಕಂಬಳಬೆಟ್ಟುವಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಮಣಿ ನಾಲ್ಕೂರು ಗ್ರಾಮದ ಅಜಲುಮೊಗೆರು ನಿವಾಸಿ ಮಹಮ್ಮದ್ ಸರ್ವನ್ (27) ಹಾಗೂ ಅವರ ಜತೆ ಕೆಲಸ ಮಾಡುವ ಫಾರೂಕ್ ಹಲ್ಲೆಗೊಳಗಾದ ವ್ಯಕ್ತಿಗಳು. ಕಂಬಳಬೆಟ್ಟು ಉರಿಮಜಲು ನಿವಾಸಿಗಳಾದ ಜಸೀಲ್, ಇಸುಬು, ಜಿಯಾದ್, ಉಸ್ಮಾನ್, ಶರೀಫ್ ಹಾಗೂ ಇತರೆ ಮೂವರು ಆರೋಪಿಗಳು.
ಆರೋಪಿಗಳ ಪಡೆ ಕಂಬಳಬೆಟ್ಟು ಬಳಿ ಮಹಮ್ಮದ್ ಸರ್ವನ್ ಅವರನ್ನು ಕಾರಿನಿಂದ ಕೆಳಗೆ ಎಳೆದು ಕೈಯಿಂದ ಮುಖಕ್ಕೆ, ಬೆನ್ನಿಗೆ ,ಹೊಟ್ಟೆಗೆ ಕೈಯಿಂದ ಹೊಡೆದು ಕಾಲುಗಳಿಂದ ತುಳಿದಿದ್ದಾರೆ. ಸರ್ವನ್ ಜತೆ ಕೆಲಸ ಮಾಡುವ ಫಾರೂಕ್ ತಡೆಯಲು ಬಂದಾಗ ಮರದ ದೊಣ್ಣೆಯಿಂದ ಆತನ ತಲೆಗೆ, ಬೆನ್ನಿಗೆ ಹೊಡೆದಿದ್ದಾರೆ. ಬಳಿಕ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ದೊಣ್ಣೆಯನ್ನು ಅಲ್ಲೇ ಬಿಸಾಡಿ ಹೋಗಿರುವ ಬಗ್ಗೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಾಳು ಮಹಮ್ಮದ್ ಸರ್ವನ್ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೂರ್ವ ದ್ವೇಷದ ಹಿನ್ನಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.