ಮೆಸ್ಕಾಂ ಕಡಬ ಉಪವಿಭಾಗದ ಕಡಬ ಶಾಖೆಯಲ್ಲಿ ಹಿರಿಯ ಮಾರ್ಗದಾಳು ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ಯಾಮಣ್ಣ ದೊಡಮನಿ (26) ಅವರ ಸಾವಿಗೆ ಸಂಬಂಧಿಸಿದಂತೇ ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಹಾಯಕ ಇಂಜಿನಿಯರ್ ಸತ್ಯನಾರಾಯಣ್ ಸಿ ಕೆ ಮತ್ತು ಮೆಸ್ಕಾಂ ಕಡಬ ಶಾಖೆಯ ಕಿರಿಯ ಇಂಜಿನಿಯರ್ ವಸಂತ ಪ್ರಕರಣದ ಆರೋಪಿಗಳು . ಇವರ ವಿರುದ್ದ ಐ.ಪಿ.ಸಿ ಕಲಂ: 304(A) ಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂ 1 ರಂದು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್ ಕಂಬವೇರಿ ದುರಸ್ತಿ ಕಾರ್ಯದಲ್ಲಿ ಮಗ್ನರಾಗಿದ್ದ ಪವರ್ ಮ್ಯಾನ್ ದ್ಯಾಮಣ್ಣ ಎಂಬವರು ಹಠಾತ್ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು. ವಿದ್ಯುತ್ ಶಾಕ್ ಹೊಡೆದ ಬಳಿಕ ಕೆಲ ಸಮಯದವರೆಗೆ ವಿದಯುತ್ ಕಂಬದಲ್ಲಿದ್ದ ದ್ಯಾಮಣ್ಣ ಅವರನ್ನು ಸ್ಥಳೀಯರು ಕಂಬದಿಂದ ಇಳಿಸಿ ಆಸ್ಫತ್ರೆಗೆ ಕರೆದುಕೊಂಡು ಹೋಗಿದ್ದರು . ಆದರೇ ದಾರಿ ಮಧ್ಯೆ ಅವರು ಮೃತಪಟ್ಟಿದ್ದರು.
ದೂರಿನಲ್ಲಿ ಏನಿದೆ ?
ಕಂಬದ ಮೇಲೆ ವಿದ್ಯುತ್ ದುರಸ್ತಿ ಕಾರ್ಯಕ್ಕೆ ಕಳುಹಿಸುವಾಗ ನಿಯಮದಂತೆ ದ್ಯಾಮಣ್ಣ ಅವರ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಜೊತೆಗೆ ಕಳುಹಿಸಿಲ್ಲ. ಹೆಲ್ಮೇಟ್ ಹ್ಯಾಂಡ್ ಗ್ಲೌಸ್, ಶೂ,ಸೇರಿದಂತೆ ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಿರ್ಲಕ್ಷತನದಿಂದ ವಿದ್ಯುತ್ ಕಂಬ ಹತ್ತಲು ಹೇಳಿ ಕೆಲಸ ಮಾಡಿಸಿದ ಮತ್ತು ತಮ್ಮ ಮಗನ ಸಾವಿಗೆ ಕಾರಣರಾದ ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್ ಆದ ಸತ್ಯನಾರಾಯಣ ಸಿ ಕೆ ಮತ್ತು ಕಿರಿಯ ಇಂಜಿನಿಯರ್ ವಸಂತ ಎಂಬವರ ಮೇಲೆ ಮೊಕದ್ದಮ್ಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ್ಯಾಮಣ್ಣ ಅವರ ತಂದೆ ರೇವಣೆಪ್ಪ ದೊಡಮನಿ ಕಡಬ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಾಗಿದೆ.