ಪುತ್ತೂರು ಸರಕಾರಿ ಬಸ್ಸು ನಿಲ್ದಾಣದಲ್ಲಿ ಬಸ್ ನಿಂದ ಜನರು ಇಳಿಯುವ ಸಮಯ ಬಸ್ಸನ್ನು ಏರಲು ಪ್ರಯತ್ನಿಸಿದ ಪ್ರಯಾಣಿಕನನ್ನು ತಡೆದ ಹಿನ್ನಲೆಯಲ್ಲಿ ನಿರ್ವಾಹಕನ ಮೇಲೆ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ಗುರುವಾರ ಪುತ್ತೂರಿನಲ್ಲಿ ನಡೆದಿದೆ.
ಧರ್ಮಸ್ಥಳ ಕೆ.ಎಸ್. ಆರ್. ಟಿ.ಸಿ. ಘಟಕದ ಚಾಲಕ ಕಂ ನಿರ್ವಾಹಕರಾದ ತುಳಸಿಗೇರಿ ಮನಾದಗಿ (39) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಗಾಳಿಮುಖ ಭಾಗದಿಂದ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದ ಬಸ್ ಅನ್ನು ಚಾಲಕ ಕ ಗೌಸ್ ಅವರು ಚಲಾಯಿಸಿಕೊಂಡು ಬಂದಿದ್ದರು.

ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಪ್ರಯಾಣಿಕರು ಇಳಿಯುತ್ತಿದ್ದಾಗ ಒಬ್ಬಾತನು ಏಕಾಏಕಿಯಾಗಿ ಬಸ್ಸನ್ನು ಹತ್ತಲು ಪ್ರಯತ್ನಿಸಿದ್ದು, ಆಗ ನಿರ್ವಾಹಕ ಏರುತ್ತಿದ್ದ ವ್ಯಕ್ತಿಯನ್ನು ತಡೆದು ಪ್ರಯಾಣಿಕರು ಇಳಿದ ಬಳಿಕ ಬಸ್ ಏರುವಂತೆ ತಿಳಿಸಿದ್ದು, ಈ ವೇಳೆ ಕೋಪಗೊಂಡ ಆರೋಪಿ ಮಹಮ್ಮದ್ ಸಲಾಂ ನಿರ್ವಾಹಕನ ಮುಖಕ್ಕೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಸಮವಸ್ತ್ರದ ಕಾಲರ್ ಹಿಡಿದು ತೊಡೆಗಳಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿರುತ್ತಾನೆ.
ಇದರಿಂದ ನಿರ್ವಾಹಕನ ಮೂಗಿಗೆ ತುಟಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ, ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಮಹಮ್ಮದ್ ಸಲಾಂ ವಿರುದ್ಧ ಹಲ್ಲೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕುರಿತು ಪ್ರಕರಣ ದಾಖಲಿಸಿದ್ದಾರೆ.