13 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಂದ ಸಿದ್ದಗೊಂಡ 5 ಗ್ಯಾರಂಟಿ ಸ್ಕೀಂಗಳ ಎದೆಗಾರಿಕೆಯ ನೀಲನಕ್ಷೆ
ಬೆಂಗಳೂರು, ಜೂನ್ 2 : ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ 5 ಗ್ಯಾರಂಟಿ ಯೋಜನೆಗಳನ್ನು (5 guarantee) ಸಹ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರಿತ್ರಿಕ ಘೋಷಣೆ ಮಾಡಿದರು.
ಅವರು ಇಂದು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತು ಅದಕ್ಕೂ ಮುಂಚಿತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ನಾನು ಮತ್ತು ಪಕ್ಷದ ಅಧ್ಯಕ್ಷರು ರುಜು ಮಾಡಿದ ಗ್ಯಾರಂಟಿ ಕಾರ್ಡುಗಳನ್ನು ಕನ್ನಡ ನಾಡಿನ ಪ್ರತಿ ಮನೆಗೂ ತಲುಪಿಸಿದ್ದೆವು. ಅದರಂತೆಯೇ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದಲ್ಲದೆ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಯೋಜನೆಗಳ ಅನುಷ್ಠಾನ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಾವುದೇ ಜಾತಿ-ಧರ್ಮ-ಲಿಂಗ-ಭಾಷೆಯ ಬೇಲಿ ಇಲ್ಲದೆ ಸಮಸ್ತ ಕನ್ನಡಿಗರಿಗೆ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಸರ್ಕಾರ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ವಿವರ ಹೀಗಿದೆ.
,@nalinkateel ಅವರೇ,
— Karnataka Congress (@INCKarnataka) June 2, 2023
ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!@BSBommai ಅವರೇ, ನಿಮ್ಮ ಮನೆಗೂ ಫ್ರೀ!@ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ!@CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!
ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)!
ಇದು ನಮ್ಮ ಗ್ಯಾರಂಟಿ.
ಗೃಹಜ್ಯೋತಿ:
ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿತು. ಈ ಯೋಜನೆಯಡಿ ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಯ ಮೇಲಿನ ಶೇ. 10 ರಷ್ಟು ಉಚಿತ ವಿದ್ಯುತ್ ಒದಗಿಸಲಾಗುವುದು. ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್ ಗೆ ಈ ಯೋಜನೆ ಅನ್ವಯವಾಗುತ್ತದೆ. ಅಲ್ಲಿಯ ವರೆಗಿನ ವಿದ್ಯುತ್ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು. ಆಗಸ್ಟ್ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ ಎಂದು ಸಿದ್ದರಾಮಯ್ಯ ಅವರು ಘೋಷಿಸಿದರು.

ಗೃಹ ಲಕ್ಷ್ಮಿ :
ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂ. ಮೊತ್ತ ವರ್ಗಾವಣೆ ಮಾಡಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕು. ಇದರಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು; ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮಾಹಿತಿ ಒದಗಿಸಬೇಕು. ಜೂನ್ 15 ರಿಂದ ಜುಲೈ 15 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಜುಲೈ 15 ರಿಂದ ಆಗಸ್ಟ್ 15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಯೋಜನೆಗೆ ಚಾಲನೆ ನೀಡಲಾಗುವುದು.

ಅನ್ನ ಭಾಗ್ಯ :
ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಆಹಾರ ಧಾನ್ಯವನ್ನು ಬಿಜೆಪಿ ಸರ್ಕಾರವು 5 ಕೆಜಿಗೆ ಇಳಿಸಿದೆ. ಇದೀಗ ಆಹಾರಧಾನ್ಯದ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಲಾಗುವುದು. ಜೂನ್ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯ ಖರೀದಿಸಬೇಕಾಗಿರುವುದರಿಂದ ಜುಲೈ 1 ರಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅಂತ್ಯೋದಯ ಕಾರ್ಡುದಾರರು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ.

ಶಕ್ತಿ :
ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು. ಜೂನ್ 11 ರಿಂದ ಈ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯು ಶೇ. 94 ರಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.
ಬಸ್‌ಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು.

ಯುವನಿಧಿ :
2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆ ಅನ್ವಯಿಸುತ್ತದೆ. ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು.
ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಸೌಲಭ್ಯ ಒದಗಿಸಲಾಗುವುದು.

ಬಡವರ ಮತ್ತು ಮಧ್ಯಮ ವರ್ಗದವರ ಅನುಕೂಲ ಮತ್ತು ಅಗತ್ಯಕ್ಕಾಗಿ ಜಾರಿ ಮಾಡಿರುವ ಮಹತ್ವದ ಐದು ಗ್ಯಾರಂಟಿ ಯೋಜನೆಗಳು ದುರುಪಯೋಗ ಮತ್ತು ದುಂದುವೆಚ್ಚ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.
ನನ್ನ ಹೆಂಡ್ತಿಗೂ ಫ್ರೀ :
ಬಸ್ ಪ್ರಯಾಣ “ನನ್ನ ಹೆಂಡ್ತಿಗೂ ಫ್ರೀ”. ಹೀಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದರು.
ಕಿಕ್ಕಿರುದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ರಾಶಿ ರಾಶಿ ಪ್ರಶ್ನೆಗಳನ್ನು ಮುಂದಿಟ್ಟರು. ಎಲ್ಲಾ ಪ್ರಶ್ನೆಗಳಿಗೂ ಲೀಲಾಜಾಲವಾಗಿ, ಹಾಸ್ಯದ ಶೈಲಿಯಲ್ಲಿ ಮುಖ್ಯಮಂತ್ರಿಗಳು ಉತ್ತರಿಸಿದರು. ಪತ್ರಕರ್ತರಿಗೆ ಅರ್ಥ ಆಗುವಂತೆ ತಮ್ಮ ಮಾತುಗಳನ್ನು ಪುನರಾವರ್ತನೆ ಮಾಡಿದರು.
ರಾಜಹಂಸನೂ ಫ್ರೀ ಕೊಟ್ಟುಬಿಡ್ರಿ :
ಉಚಿತ ಬಸ್ ಪ್ರಯಾಣದ ವಿವರ ನೀಡುತ್ತಿದ್ದ ಮುಖ್ಯಮಂತ್ರಿಗಳು ಬಾಯಿತಪ್ಪಿ ” ರಾಜಹಂಸ ಬಸ್ ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು” ಅಂದು ಬಿಟ್ಟರು. ಗಾಭರಿ ಬಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು “ರಾಜಹಂಸ ಉಚಿತ ಅಲ್ಲ” ಎಂದು ನೆನಪಿಸಿದರು. ಈ ವೇಳೆ ಮುಖ್ಯಮಂತ್ರಿಗಳು, “ರಾಜಹಂಸದಲ್ಲೂ ಉಚಿತವಾಗಿ ಓಡಾಡಲಿ ಬಿಡ್ರಿ” ಎಂದರು. ಇದಕ್ಕೆ ಉತ್ತರಿಸಿದ ಸಚಿವರು, “ಎಲ್ಲರೂ ರಾಜಹಂಸಕ್ಕೆ ನುಗ್ತಾರೆ. ಉಳಿದ ಬಸ್ ಗಳನ್ನು ಹತ್ತುವುದಿಲ್ಲ” ಎಂದರು.
ಶೇ 94 ರಷ್ಟು ಉಚಿತ :
ಐಷಾರಾಮಿ ಮತ್ತು ಎಸಿ ಹಾಗೂ ಸ್ಲೀಪಿಂಗ್ ಬಸ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್ ಗಳಲ್ಲೂ ಮಹಿಳೆಯರು ಉಚಿತವಾಗಿ ಓಡಾಡಲು ಅವಕಾಶ ಕೊಟ್ಟಿರುವುದರಿಂದ ಶೇ 94 ರಷ್ಟು ಬಸ್ ಗಳಲ್ಲಿ ಉಚಿತ ಅನುಕೂಲ ಒದಗಿಸಿದಂತಾಗಿದೆ.
ತೃತೀಯ ಲಿಂಗಿಗಳಿಗೂ ಉಚಿತ: ಪ್ರಥಮ
ಉಚಿತ ಬಸ್ ಪ್ರಯಣದ ಸವಲತ್ತನ್ನು ತೃತೀತ ಲಿಂಗಿಗಳಿಗೂ ಒದಗಿಸಲಾಗಿದೆ.