ಪುತ್ತೂರು : ಬಿಜೆಪಿ ಸಂಘ ಪರಿವಾರದ ಸಂಘಟನೆಯೊಂದರ ತಾಲೂಕು ಅಧ್ಯಕ್ಷ / ಸಂಚಾಲಕ ಜವಬ್ದಾರಿಯನ್ನು 12 ವರ್ಷಕ್ಕೂ ಅಧಿಕ ಕಾಲ ನಿರ್ವಹಿಸಿದ , ಬಿಜೆಪಿ ಬೆಂಬಲಿತ ಮಾಜಿ ಗ್ರಾ. ಪಂ ಸದಸ್ಯ ರಮೇಶ್ ರೈ ಡಿಂಬ್ರಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಪುತ್ತೂರಿನ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ. ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆ ನಿರ್ವಹಿಸಿರುವ ರಮೇಶ್ ರೈಯವರಿಗೆ ಕಾಂಗ್ರೆಸ್ ಸೇರುವಂತೆ ಪಕ್ಷದ ಮುಖಂಡರಿಂದ ಅಹ್ವಾನ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಮೇಶ್ ರೈಯವರು ಬಿಜೆಪಿಯಲ್ಲಿದ್ದಾಗಲೂ ಅಶೋಕ್ ರೈಯವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಕೆಲ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಅವರು ಹೆಚ್ಚು ಸಕ್ರಿಯರಾಗಿರದಿದ್ದರೂ, ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ರಮೇಶ್ ರೈಯವರು ಜಿಲ್ಲೆಯಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದ ತುಳುನಾಡ ಸೇನೆಯ ಪುತ್ತೂರಿನ ಸ್ಥಾಪಕ ಅದ್ಯಕ್ಷರಾಗಿದ್ದವರು, ಸರಿ ಸುಮಾರು 25 ವರ್ಷಕ್ಕೂ ಅಧಿಕ ಕಾಲ ಅದನ್ನು ಪೋಷಿಸಿದ ಹೆಗ್ಗಳಿಕೆ ಅವರದು. ಹಿಂದೂ ಜಾಗರಣೆ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಸಂಚಾಲಕರಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಸಮಿತಿ ಸದಸ್ಯ , ಕುರಿಯ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ, ಆರ್ಯಾಪು ಗ್ರಾ.ಪಂ ಬಿಜೆಪಿ ಬೆಂಬಲಿತ ಸದಸ್ಯ ಹೀಗೆ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅವರು ನಿಭಾಯಿಸಿದ್ದಾರೆ.
ಶ್ರಿ ಮಹಾವಿಷ್ಣು ದೇವಸ್ಥಾನ ಕುರಿಯ ಇದರ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ, ಯುವ ಬಂಟರ ಸಂಘದ ಪುತ್ತೂರು ತಾಲೂಕು ಘಟಕದ ಕೋಶಾಧಿಕಾರಿ, ಉಪಾಧ್ಯಕ್ಷ , ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅವರು ಬಂಟರ ಸಂಘ ಪುತ್ತೂರು ತಾಲೂಕು ಇದರ ನಿರ್ದೇಶಕ, ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಇದರ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ