ಬೆಂಗಳೂರು (ಮೇ.27): ಮುಖ್ಯಮಂತ್ರಿಗಳ ವಿಶೇಷ ಅಧಿಕಾರದ ಅನ್ವಯ ತಾತ್ಕಾಲಿಕವಾಗಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿದ್ದ ದಕ್ಷಿಣ ಕನ್ನಡದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ದಿ.ಪ್ರವೀಣ್ ನೆಟ್ಟಾರ್ (Praveen Nettar) ಅವರ ಪತ್ನಿ ನೂತನರವರು (Nutana) ನೂತನ ಸರಕಾರ ಅಡಳಿತಕ್ಕೆ ಬರುತ್ತಲೇ ಕೆಲಸ ಕಳೆದು ಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡಿರುವ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ನೂತನ ರವರ ಉದ್ಯೋಗವನ್ನು ಕಸಿದುಕೊಳ್ಳುವ ಮೂಲಕ ಕಾಂಗ್ರೆಸ್ (Congress) ದ್ವೇಷದ ರಾಜಕಾರಣ ಮಾಡಿದೆ ಎಂದು ಬಿಜೆಪಿ (bjp)ಆರೋಪಿಸಿದೆ. ಪಿಎಫ್ಐ (pfi) ಕೈಗೊಂಬೆಯಂತೆ ಸಿದ್ದರಾಮಯ್ಯರವರ ಸರ್ಕಾರ ಕುಣಿಯುತ್ತಿರುವುದು ರಾಜ್ಯದ ದುರಂತ ಎಂದು ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಪಕ್ಷವೇ ಸಾಕಿ ಬೆಳೆಸಿದ ಪಿಎಫ್ಐ ಎಂಬ ಭಯೋತ್ಪಾದಕ ಸಂಘಟನೆಯ ಕೋಮು ದ್ವೇಷಕ್ಕೆ ಒಳಪಟ್ಟು, ಪಿಎಫ್ಐ ಗೂಂಡಾಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಧರ್ಮಪತ್ನಿಗೆ ಜೀವನ ನಿರ್ವಹಣೆಗಾಗಿ ಅನುಕಂಪದ ಆಧಾರದಲ್ಲಿ ನಮ್ಮ ಸರ್ಕಾರ ಮಂಗಳೂರಿನ ಡಿ.ಸಿ. ಕಚೇರಿಯಲ್ಲಿ ಉದ್ಯೋಗ ಕಲ್ಪಿಸಿತ್ತು. ಈಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ದ್ವೇಷದ ರಾಜಕೀಯವನ್ನು ಮುಂದುವರೆಸಿರುವುದು ಖಂಡನೀಯ. ಈ ಕೂಡಲೇ ಸರ್ಕಾರ ಉದ್ಯೋಗದಿಂದ ವಜಾಮಾಡುವ ಅಮಾನವೀಯ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತೇವೆ ಎಂದು ತನ್ನ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದೆ.
2022 ರ ಸೆಪ್ಟಂಬರ್ ತಿಂಗಳ 22 ರಂದು ನೂತನರವರಿಗೆ ಮುಖ್ಯಮಂತ್ರಿಗಳ ಕಛೇರಿಯಲ್ಲಿ ತಾತ್ಕಲಿಕ ನೆಲೆಯಲ್ಲಿ ಅನುಕಂಪದ ಅಧಾರದಲ್ಲಿ ಉದ್ಯೋಗ ಕಲ್ಪಿಸಲಾಗಿತ್ತು. ಆದರೇ ಬೆಂಗಳೂರಲ್ಲಿ ವಾಸಿಸಿ ಉದ್ಯೋಗ ನಡೆಸುವುದು ಕಷ್ಟ ಎಂದು ನೂತನರವರು ಮನವಿ ಮಾಡಿದ ಹಿನ್ನಲೆಯಲ್ಲಿ, ದ.ಕ ಜಿಲ್ಲಾ ಪಾರಕೃತಿಕ ವಿಕೋಪ ವಿಭಾಗದಲ್ಲಿ ಅವರಿಗೆ ಉದ್ಯೋಗ ಕಲ್ಪಿಸಲಾಗಿತ್ತು. ಅವರಿಗೆ ಸರಕಾರ ನೀಡಿದ ಉದ್ಯೋಗ ಅದೇಶ ಪ್ರತಿಯಲ್ಲಿ ಮುಖ್ಯಮಂತ್ರಿ ಪದಾಧಿಕಾರ ಇರುವವರೆಗೆ ಅಥಾವ ಮುಂದಿನ ಅದೇಶದವರೆಗೆ ಮಾತ್ರ ಎಂದು ಉಲ್ಲೇಖ ಮಾಡಲಾಗಿತ್ತು. ಇದೀಗ ಇದೇ ಅದೇಶ ಪ್ರತಿ ನೂತನರವರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.
ಈ ತಾತ್ಕಲಿಕ ಉದ್ಯೋಗಕ್ಕೆ ಸೇರುವ ಮೊದಲು ನೂತನರವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಲೈಬ್ರೆರಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು . ಇದೀಗ ಈ ಎರಡು ಉದ್ಯೋಗವಿಲ್ಲದೆ ಅವರ ಬದುಕು ಅತಂತ್ರವಾಗಿದೆ. ಅಲ್ಲದೇ ಕೇವಲ 8 ತಿಂಗಳಲ್ಲಿ ಅವರಿಗೆ ಸಿಕ್ಕಿದ ಸರಕಾರದ ಉದ್ಯೋಗ ಕೈ ತಪ್ಪಿದಂತಾಗಿದೆ.