Puttur Police Attrocity ಪುತ್ತೂರು: ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಡಿವೈಎಸ್ ಪಿಯವರು ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಈ ಬಗ್ಗೆ ತನಿಖೆಯನ್ನು ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕೆಂದು ಬೆಂಗಳೂರು ಲೋಕಾಯುಕ್ತರಿಗೆ ಸಾಮಜಿಕ ಸಂಘಟನೆಯಾದ ಕಡಬದ ನೀತಿ ತಂಡ ದೂರನ್ನು ನೀಡಿದೆ.
ನೀತಿ ತಂಡ ಲೋಕಾಯುಕ್ತಕ್ಕೆ ಪತ್ರವನ್ನು ನೀಡುವ ಜತೆಗೆ ಪ್ರಪತ್ರ ಸಂಖ್ಯೆ 1ರಲ್ಲಿ ಮಾಹಿತಿಯನ್ನು ಸಲ್ಲಿಕೆ ಮಾಡಿದ್ದು, ದೂರು ನೀಡಲಾಗುತ್ತಿರುವ ಸಾರ್ವಜನಿಕ ನೌಕರರ ಹೆಸರಿನಲ್ಲಿ ಪುತ್ತೂರು ಡಿವೈಎಸ್ ಪಿ ವೀರಯ್ಯ ಹಿರೇಮಠ ಮತ್ತು ಸಂಬಂಧಪಟ್ಟವರು ಎಂದು ನಮೂಧಿಸಿದ್ದಾರೆ. ಏಳು ಮಂದಿ ಅಮಾಯಕ ಯುವಕರ ಪರವಾಗಿ ದೂರನ್ನು ನೀಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ದೂರಿನಲ್ಲಿ ಏನಿದೆ ?
ಬಿಜೆಪಿ ಮುಖಂಡರ ಭಾವಚಿತ್ರ ಹಾಕಿದ ಶ್ರದ್ಧಾಂಜಲಿ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣವನ್ನು ಮಹಾ ಅಪರಾಧವೆಂಬಂತೆ ಪರಿಗಣಿಸಿದ ನಾಯಕರು, ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ದೂರನ್ನು ಸಲ್ಲಿಸಿ ಬ್ಯಾನರ್ ಹಾಕಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ನಾಯಕರು ಪ್ರಭಾವವನ್ನು ಬಳಸಿಕೊಂಡು ಬ್ಯಾನರ್ ಹಾಕಿದವರನ್ನು ದಂಡಿಸಲು ಇಲಾಖೆಗೆ ಒತ್ತಡವನ್ನು ತಂದಿರುವ ಸಾಧ್ಯತೆ ಇದೆ. ಈ ಕಾರಣದಿಂದಲೇ ವಶಕ್ಕೆ ಪಡೆದ ಏಳು ಮಂದಿಯನ್ನು ನಿಯಮ ಉಲ್ಲಂಘಿಸಿ ಅಮಾನುಷವಾಗಿ ಹಲ್ಲೆಗೆ ಒಳಪಡಿಸಿದ್ದಾರೆ. ತೃತೀಯ ದರ್ಜೆಶಿಕ್ಷೆಯನ್ನು ವಿಧಿಸಿ ಯುವಕರ ಅಂಗಾಂಗಕ್ಕೆ ಹಾನಿಯಾಗುವ ರೀತಿಯ ಮೃಗೀಯ ವರ್ತನೆಯನ್ನು ತೋರಿಸಿದ್ದಾರೆ.

ತಕ್ಷಣ ತಪ್ಪಿತಸ್ಥ ಎಲ್ಲಾ ಪೊಲೀಸ್ ಅಧಿಕಾರಿ ಯಾ ಸಿಬ್ಬಂದಿಗಳ ಹಾಗೂ ಇಲಾಖೆಗೆ ಒತ್ತಡ ತಂದ ರಾಜಕೀಯ ಮುಂದಾಳುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ರಾಜ್ಯದಲ್ಲಿ ರಾಜಕೀಯ ಗೂಂಡಾಗಿರಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನೀಡಿ ತಂಡ ದೂರಿನಲ್ಲಿ ಆಗ್ರಹಿಸಿದೆ.
