ಪುತ್ತೂರು : ಮುಂಬರುವ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಕಾಂಗ್ರೆಸ್ ಪಕ್ಷವು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಇದಕ್ಕೆ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಇದರಿಂದ ಕಂಗೆಟ್ಟಿರುವ ಬಿಜೆಪಿಯು ಭಾವನಾತ್ಮಕ ವಿಚಾರಗಳನ್ನು ಮುಂದೆ ಮಾಡಿ ಜನರ ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ ಟೀಕಿಸಿದ್ದಾರೆ.
ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಮಾಸಿಕ ರೂ 2000, ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಹಾಗೂ ಪದವಿಧರರಿಗೆ ತಿಂಗಳಿಗೆ ರೂ. 3000 ಮತ್ತು ಡಿಪ್ಲೋಮದಾರರಿಗೆ ತಿಂಗಳಿಗೆ ರೂ. 1500 ನೀಡುವುದಾಗಿ ಘೋಷಿಸಿದೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರ ಸಹಿಯುಳ್ಳ ಈ ಯೋಜನೆಗಳನ್ನು ಮುದ್ರಿಸಿರುವ ಗ್ಯಾರಂಟಿ ಕಾರ್ಡನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು
ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆರಿರುವ ಬಿಜೆಪಿ ನಿರಂತರ ಭ್ರಷ್ಟಚಾರ ನಡೆಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದು, ಇದೀಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳಿಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಕಂಗಲಾಗಿದ್ದು. ಸಿಎಂ ಬಸವರಾಜ ಬೊಮ್ಮಾಯಿ , ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿಟಿ ರವಿ ಮುಂತಾದವರು ಇದು ಈಡೇರಿಸಲಾಗದ ಯೋಜನೆಯೆಂದು ಟೀಕಿಸುತ್ತಿದ್ದಾರೆ. ಆದರೇ ಇದು ದೇಶದ ಜನರನ್ನು ಜಿಎಸ್ಟಿ ಹೆಸರಲ್ಲಿ ಹಿಂಡಿ ತೆಗೆದಿರುವ ಟ್ಯಾಕ್ಸ್ ಹಣವನ್ನು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಮತ್ತೆ ಮರಳಿ ಜನರಿಗೆ ಹಿಂತಿರುಗಿಸುವ ಕಾರ್ಯ ಎಂದರು
ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯದ್ದು ತಾನು ಕಳ್ಳ ಪರರ ನಂಬ ಎಂಬ ಸ್ಥಿತಿ. ರೈತರಿಗೆ ಕುಮ್ಕಿ ಹಕ್ಕು, ಒಂದು ಲಕ್ಷ ಸಾಲ ಮನ್ನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ತಿಂಗಳೊಳಗೆ ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತ ಜಾರಿಗೆ ತರುವುದು, ವಿದ್ಯಾರ್ಥಿನಿಯರಿಗೆ ನ್ಯಾಪ್ ಕಿನ್, ರಾಜ್ಯದಲ್ಲಿ NIA ಕಛೇರಿ, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಹೀಗೆ ನೂರಾರು ಭರವಸೆಯನ್ನು ಕಳೆದ ಬಾರಿಯ ಚುನಾವಣ ಪ್ರಣಾಳಿಕೆಯಲ್ಲಿ ಘೋಷಿಸಿದ ಬಿಜೆಪಿಯನ್ನು ಇವು ಯಾವುದನ್ನು ಪೂರ್ಣ ಗೊಳಿಸಿಲ್ಲ ಎಂದರು.
ಆದರೇ 2013ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 165 ಅಶ್ವಾಸನೆಗಳನ್ನು ನೀಡಿದ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ನೇತ್ರತ್ವದಲ್ಲಿ ಆ ಪೈಕಿ 159 ಭರವಸೆಗಳನ್ನು ಪೂರ್ಣಗೊಳಿಸಿದೆ. ಅನ್ನಭಾಗ್ಯ, ಕೃಷಿ ಭಾಗ್ಯ, ಪಶು ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ, ಮಾತೃ ಭೂಮಿ, ಮನಸ್ವಿ, ಮೈತ್ರಿ ಅರುಂಧತಿ, ಕ್ಷೀರಧಾರೆ, ವಿದ್ಯಾಸಿರಿ ಹೀಗೆ ಬಹುತೇಕ ಎಲ್ಲ ಭರವಸೆಗಳನ್ನು ಪೂರೈಸಿ ನುಡಿದಂತೆ ನಡೆದಿದೆ. ಇದೆ ರೀತಿ ಈ ಬಾರಿ ಘೋಷಿಸಿರುವ 4 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು 100 ಪ್ರತಿಶತ ಜಾರಿ ಮಾಡಲಿದ್ದೇವೆ ಎಂದರು.
ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಅಭಿವೃದ್ದಿ ಮಾಡದ ಬಿಜೆಪಿ ಅದನ್ನು ಮರೆ ಮಾಚಲು ದೈವ, ದೇವರು ಉರಿ ಗೌಡ ಮತ್ತು ನಂಜೇ ಗೌಡರಂತಹ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನಲೆಗೆ ತರುತ್ತಿದ್ದಾರೆ. ಮೊನ್ನೆ ಪುತ್ತೂರಿಗೆ ಬಂದ ಮಾಜಿ ಸಚಿವ ಈಶ್ವರಪ್ಪ ಪವಿತ್ರವಾದ ದೇವಸ್ಥಾನದ ಗದ್ದೆಯಲ್ಲಿ ಬೇಕಾ ಬಿಟ್ಟಿ ನಾಲಗೆ ಹರಿ ಬಿಟ್ಟು ಅವಾಚ್ಯ ಶಬ್ಧಗಳ ಬಳಕೆ ಮಾಡಿದ್ದಾರೆ. ಅದೇ ರೀತಿ ಮಂಗಳೂರಿನಲ್ಲೂ ಅಜಾನ್ ಕುರಿತಾಗಿ ಹೇಳಿಕೆ ನೀಡಿ ದೇವರನ್ನು ಅವಮಾನಿಸಿದ್ದಾರೆ ಎಂದರು
ಮೆದುಳಿಗೂ ನಾಲಿಗೆಗೂ ಸಂಪರ್ಕವಿಲ್ಲದ ಈಶ್ವರಪ್ಪಗೆ ದೈವ ನಿಂದನೆ ಮಾಡುವುದು ಒಂದು ಚಟವಾಗಿದೆ. ಅವರ ಹೇಳಿಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದು, ಹಲವು ರೂಪದಲ್ಲಿದ್ದರೂ ದೇವರು ಒಬ್ಬನೇ ಆಗಿದ್ದಾನೆ, ಅಲ್ಲಾನನ್ನು ನಿಂದಿಸುವ ಮೂಲಕ ಈಶ್ವರಪ್ಪ ಅವರು ಪರೋಕ್ಷವಾಗಿ ರಾಮ, ಕೃಷ್ಣ, ಏಸುವನ್ನು ನಿಂದಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರನೇಸ್, ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೋಟ್ಯಾನ್, ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮುಖಂಡರಾದ ಶಕೂರು ಹಾಜಿ ಉಪಸ್ಥಿತರಿದ್ದರು.