ಮಂಗಳೂರು, ಮಾ 23 : ಭಾರತದ ಸೆಮಿ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರಿಗೆ ಆಗಮಿಸಲಿದೆ. ಈ ರೈಲು ಸಂಚಾರಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ದಕ್ಷಿಣ ರೈಲ್ವೆ ವಿಭಾಗ ಜಂಟಿಯಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ.
ಕರ್ನಾಟಕದ ಕರಾವಳಿಗೆ ಈ ಮೂಲಕ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲು ಸಿದ್ಧತೆಯಲ್ಲಿದೆ. ಶೋರ್ನೂರ್ – ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ.
ಶೋರ್ನೂರ್ ಕಣ್ಣೂರು ಗೆ ಆಗಮಿಸುವ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗುತ್ತದೆ. ಈಗಾಗಲೇ ಈ ಎರಡೂ ಮಾರ್ಗದಲ್ಲಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಓಡಿಸಲು ಬೇಕಾದ ಕೆಲವು ಕಾಮಗಾರಿಗಳನ್ನು ಆರಂಭಿಸಲಾಗಿದೆ.
ಕೇರಳದ ಎರಡು ಮಾರ್ಗದಲ್ಲಿ ಈಗಾಗಲೇ ರೈಲು ಓಡಿಸಲು ಪರಿಶೀಲನೆ ನಡೆದಿದೆ. ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತಿದೆ.
2023ರ ಆಗಸ್ಟ್ ತಿಂಗಳು ಆಗುವರಷ್ಟರಲ್ಲಿ 75 ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಎಲ್ಲವೂ ಸರಿ ಹೊಂದಿದರೆ ಈ ವೇಳೆಗೆ ಮಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ.