ಮಂಗಳೂರು, ಮಾರ್ಚ್ 23: ತಾಯಿ ಕಾಲಿಗೆ ಹಾವು ಕಚ್ಚಿದ ಆತಂಕಕಾರಿ ಸಂದರ್ಭ ಅಸೀಮ ಧೈರ್ಯ ಪ್ರದರ್ಶಿಸಿದ ಮಗಳು ವಿಷಪೂರಿತ ರಕ್ತ ಚೀಪಿ ಹೊರ ಹಾಕಿ ಅಮ್ಮನ ರಕ್ಷಣೆ ಮಾಡಿದ ಪ್ರಕರಣ ಸಾರ್ವಜನಿಕ ಹಾಗೂ ವೈದಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಗಳು ತಾಯಿಯ ದೇಹದಿಂದ ವಿಷವನ್ನು ಹೊರ ಹಾಕಲು ಬಳಸಿದ ಪ್ರಥಮ ಚಿಕಿತ್ಸೆ ಸೂಕ್ತ ಹಾಗೂ ಸುರಕ್ಷಿತವೇ ಎನ್ನುವ ವಿಚಾರದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೂ, ಯುವತಿ ಆ ಭಯಗ್ರಸ್ತ ಸನ್ನಿವೇಶದಲ್ಲಿ ತೋರಿದ ಧೈರ್ಯ ಮಾತ್ರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಇನ್ನೊಂದೆಡೆ ಈ ಹಿಂದೆ ವರದಿಯಾದಂತೆ ಮಹಿಳೆಯ ಕಾಲಿಗೆ ಕಚ್ಚಿದ ಹಾವು ನಾಗರ ಹಾವಲ್ಲ . ಅದು ಅದಕ್ಕಿಂತ ಕಡಿಮೆ ವಿಷಪೂರಿತ ಹಾವು ಎನ್ನುವ ವಿಚಾರವನ್ನು ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಬಹಿರಂಗ ಪಡಿಸಿದ್ದಾರೆ.
ಪುತ್ತೂರು ತಾಲೂಕಿನ ಕೆಯ್ಯೂರು ಎಂಬಲ್ಲಿ, ಕೆಯ್ಯೂರು ಗ್ರಾ.ಪಂ. ಸದಸ್ಯೆಯಾಗಿರುವ ಮಮತಾ ರೈ ಎಂಬವರಿಗ ವಾರದ ಹಿಂದೆ ಸಂಜೆ ಹೊತ್ತು ಹಾವೊಂದು ತೋಟದಲ್ಲಿ ಕಚ್ಚಿತ್ತು. ಭಯಭೀತರಾದ ಮಹಿಳೆಗೆ ಮನೆಗೆ ಓಡಿ ಬಂದಿದ್ದು , ಈ ವೇಳೆ ಮನೆಯಲ್ಲಿದ್ದ ವಿವೇಕಾನಂದ ಪದವಿ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ರೇಂಜರ್ ಕೂಡ ಆಗಿರುವ ಶ್ರಮ್ಯಾ ರೈ ಹಾವು ಕಡಿತಕ್ಕೆ ಒಳಗಾದ ಭಾಗಕ್ಕೆ ಬಾಯಿಯಿಟ್ಟು ವಿಷ ಪೂರಿತ ರಕ್ತವನ್ನು ಚೀಪಿ ಹೊರ ತೆಗೆದು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರಿಗೆ ಪುತ್ಥುರಿನ ಆಸ್ಫತ್ರೆಗೆ ದಾಖಲಿಸಲಾಗಿದ್ದು , ಅಲ್ಲಿ ಅವರು ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದರು.
ಮಮತಾ ರೈಯವರಿಗೆ ಚಿಕಿತ್ಸೆ ನೀಡಿದ ವೈದರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ಆಕೆಯ ಕಾಲಿಗೆ ಕಚ್ಚಿದ ಹಾವು ಮಲಬಾರ್ ಪಿಟ್ ವೈಪರ್ ಎನ್ನುವುದುನ್ನು ಸ್ಪಷ್ಟ ಪಡಿಸಿದ್ದಾರೆ. ನಾಗರ ಹಾವಿಗಿಂತ ಕಡಿಮೆ ವಿಷಕಾರಿ ಆಗಿರುವ ಈ ಹಾವು ಬಹಳ ನಂಜುಕಾರಿ. ಈ ಹಾವಿನ ಕಡಿತದಿಂದ ಸಾವು ಸಂಭವ ಕಡಿಮೆಯಾದರೂ ಹಾವು ಕಡಿದ ಜಾಗದಲ್ಲಿ ನಂಜು ಊತ ಏರ್ಪಡುತ್ತದೆ ಎಂಬ ಮಾಹಿತಿ ನೀಡಿದ್ದಾರೆ.
ಮನುಷ್ಯನ ದೇಹದಿಂದ ಬಾಯಿಯ ಮೂಲಕ ವಿಷವನ್ನು ಹೀರಲು ಸಾಧ್ಯವಿಲ್ಲ. ಹಾಗೊಂದು ವೇಳೆ ವಿಷ ಹೀರಲು ಪ್ರಯತ್ನಿಸಿದರೇ ಕಡಿತದ ಗಾಯ ಇನ್ನಷ್ಟು ದೊಡ್ಡದಾಗಿ ವಿಷ ಏರಲು ಸಹಾಯ ಮಾಡುತ್ತದೆ. ಇನ್ನು ವಿಷ ಹೀರಲು ಯತ್ನಿಸದ ವ್ಯಕ್ತಿಯ ಬಾಯಲ್ಲಿ ಗಾಯಗಳಿದ್ದರೇ ಆತನ ಮೇಲೂ ವಿಷ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಬಾಯಿಯ ಮೂಲಕ ವಿಷ ಹೀರಲು ಯತ್ನಿಸದರೇ ಕಡಿತಕ್ಕೊಳಗಾದವನು ಬೇಗ ಸಾಯುವ ಸಾಧ್ಯತೆಯಿದ್ದು, ಇನ್ನು ವಿಷ ಹೀರಿದವನು ಸಾಯುವ ಸಾಧ್ಯತೆಯು ಇದೆ
ಜೆಸಿ ಅಡಿಗ, ವೈದ್ಯರು
ಹಾವು ಕಚ್ಚಿದ ತಕ್ಷಣ ಓಡಬಾರದು. ಎರಡು ನಿಮಿಷದ ಒಳಗಡೆ ಕಡಿತದ ಜಾಗಕ್ಕಿಂತ 2 ಇಂಚು ಮೇಲ್ಗಡೆ ಬಟ್ಟೆಯಿಂದ ಕಟ್ಟಬೇಕು. ಆದರೆ ಬಿಗಿಯಬಾರದು . ಬಳಿಕ ಗಾಯವನ್ನು ನೀರಿನಿಂದ ಸ್ವಚ್ಚಗೊಳಿಸಿ ಹಾವು ಕಡಿತ ಗಾಯಕ್ಕೆ ಬಾಯಿಯಿಟ್ಟು ರಕ್ತವನ್ನು ಚೀಪಬೇಕು. ಚೀಪಿದ ತಕ್ಷಣ ಬಾಯಿಯನ್ನು ನೀರಿನಿಂದ ಮಕ್ಕಳಿಸಿ ಸ್ವಚ್ಚಗೊಳಿಸಬೇಕು. ಈ ಪ್ರಕ್ರಿಯೆಯನ್ನು ಮೂರು ನಾಲ್ಕು ಬಾರಿ ಪರಿವರ್ತಿಸಿ ಬಳಿಕ ವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕು
ಡಾ | ರವೀಂದ್ರನಾಥ ಐತಾಳ, ಉರಗ ತಜ್ಞರು